ತಾನು ಕರಗುತ್ತಿದ್ದರು ಇತರರಿಗೆ ಬೆಳಕು ನೀಡುವ ಅದ್ಭುತ ವಸ್ತು ಮೇಣದ ಬತ್ತಿ

0
1575

Kannada News | Karnataka Achiecers

ಬೆಳಕಿನ ಮೂಲವಾಗಿರುವ ಮತ್ತು ಭರವಸೆಯ ಜ್ಯೋತಿಯಾಗಿರುವ ಸಾಮಾನ್ಯ ಮೋಂಬತ್ತಿಯು ಪ್ರಪಂಚದಾದ್ಯಂತ ಹಲವು ಜನರಿಗೆ ಹಲವು ವಿಷಯಗಳ ವಾಹಕವಾಗಿದೆ. ಒಂದು ಮೋಂಬತ್ತಿಯು ಕತ್ತಲೆಯನ್ನು ನೀಗಿಸಿ, ಬೆಳಕನ್ನು ನೀಡಿ, ಬದುಕಿನ ಆಶಾಕಿರಣವನ್ನು ಬೆಳಗಿಸುವುದಷ್ಟೇ ಅಲ್ಲದೆ, ಅದು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸುವ ಒಂದು ಸಾಧನವಾಗಿದೆ ಮತ್ತು ಭಗವಂತನ ದಯೆ ಹಾಗೂ ಅನುಗ್ರಹವನ್ನು ಕೋರುವ ಒಂದು ಆರಾಧನಾ ಸಾಮಗ್ರಿಯೂ ಕೂಡ ಆಗಿದೆ.

ಮೋಂಬತ್ತಿಯು ಕೇವಲ ಒಂದು ಬಳಕೆಯ ವಸ್ತುವಲ್ಲ, ಬದಲಾಗಿ ಅದು ನಾವು ಸಾಮಾನ್ಯವಾಗಿ ಲಕ್ಷ್ಯ ವಹಿಸಿರದ ಹಲವಾರು ವಿಶಿಷ್ಟ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಒಂದು ಸೃಜನಾತ್ಮಕ ತುಣುಕಾಗಿದೆ. ಇದನ್ನು ಹಚ್ಚಿ ಬಳಸುವವರು ತಮ್ಮ ಅತ್ಯಂತ ಆಪ್ತರನ್ನು ಆರೈಕೆ ಮಾಡುವಷ್ಟು ಮಟ್ಟಿಗೆ ಇದನ್ನು ಆಪ್ತತೆಯಿಂದ ಬಳಸುತ್ತಾರೆ. ಇದರ ತೊನೆದಾಡುವ ಜ್ವಾಲೆಯು ಗಾಳಿ ಬೀಸುವುದರಿಂದ ಆರಿ ಹೋಗದಂತೆ, ಮಳೆಯಲ್ಲಿ ನಂದಿಹೋಗದಂತೆ ರಕ್ಷಿಸುವುದು ಹೇಗೆಂಬುದನ್ನು ನಾವು ಕಲಿಯುತ್ತಿರುತ್ತೇವೆ.

ಮೋಂಬತ್ತಿಗಳು ವಿಶ್ವವ್ಯಾಪಿಯಾದವುಗಳಾಗಿವೆ. ಅವು ಭರವಸೆ ಮತ್ತು ನಂಬಿಕೆಯನ್ನು ಸಂಕೇತಿಸುತ್ತಿದ್ದು, ಭಯ, ಹತಾಶೆ ಮತ್ತು ದುಃಖವನ್ನು ತನ್ನ ನೆರಳಿನ ಹಿಂದೆ ಬಿಟ್ಟು ಕತ್ತಲೆಯಿಂದ ಬೆಳಕಿನೆಡೆಗೆ ಅವು ಮನುಷ್ಯನನ್ನು ಕರೆದೊಯ್ಯುತ್ತವೆ. ಅವು ಆರ್ಥಿಕವಾಗಿ ಹಿಂದುಳಿದವರಿಗೆ ಜೀವನೋಪಾಯದ ಆದಾಯ ಮೂಲವಾಗಿದ್ದು, ದೇಶದಾದ್ಯಂತ ಗುಡಿಕೈಗಾರಿಕೆಯಾಗಿ ದೇಶದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆಯನ್ನೂ ಕೂಡ ಸಲ್ಲಿಸುತ್ತಿವೆ.

ಮಗುವಿನ ತೊಟ್ಟಿಲಿನಿಂದ ಹಿಡಿದು ಸ್ಮಶಾನದ ಗೋರಿಯವರೆಗೂ ಹಲವಾರು ರೂಪಗಳಲ್ಲಿ ಎಲ್ಲರೂ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಬಳಸುವ ಒಂದು ಸಾಮಾನ್ಯ ಮೋಂಬತ್ತಿಯು ಶಾಂತಿ, ಸಂತೋಷ ಮತ್ತು ಸಮೃದ್ಧಿ ನೀಡುವಂತೆ ಸರ್ವಶಕ್ತನಾದ ಭಗವಂತನನ್ನು ಪ್ರಾರ್ಥಿಸುವ ಭಕ್ತರಿಗೆ ಸ್ಫೂರ್ತಿ ಮತ್ತು ಶಕ್ತಿಯ ಸೆಲೆಯಾಗಿದೆ.

ಮೋಂಬತ್ತಿಗಳು ಪ್ರಪಂಚದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿವೆ. ಹುಟ್ಟು ಹಬ್ಬಗಳು, ಮದುವೆ ಮತ್ತಿತರ ಸಂತೋಷದ ಸಮಾರಂಭಗಳು ಅಥವಾ ಶೋಕತಪ್ತ ಆಚರಣೆಗಳು ಇಂತಹ ವೈಯಕ್ತಿಕ ಸಂದರ್ಭಗಳಲ್ಲಿಯೂ ಕೂಡ ಅವುಗಳನ್ನು ದೈವೀ ಪ್ರಾರ್ಥನೆಗೆ ಬಳಸಲಾಗುತ್ತದೆ. ಆತ್ಮವು ಈ ಪ್ರಪಂಚವನ್ನು ಬಿಟ್ಟು ಹೋಗುವ ಸಂದರ್ಭದಲ್ಲಿಯೂ ಕೂಡ! ಪತಂಗಗಳು ಮತ್ತು ಇತರ ಕೀಟಗಳು ಅವುಗಳ ಜ್ವಾಲೆಯ ಆಕಾರಗಳು ಮತ್ತು ಬಣ್ಣಗಳ ಆಕರ್ಷಣೆಗೆ ಮತ್ತು ಮೋಹಕ್ಕೆ ಒಳಗಾಗಿ ಆತ್ಮಾಹುತಿಯಾಗುತ್ತವೆ.

ಮೋಂಬತ್ತಿಗಳನ್ನು ತಯಾರಿಸಲು ಬಳಸುವ ಪದಾರ್ಥವು (ಪ್ಯಾರಾಪಿನ್) ತುಂಬಾ ನಯವಾಗಿದ್ದು ಹಾಗೂ ಬಳುಕುವಂತಹದ್ದಾಗಿರುವುದರಿಂದ, ಅದನ್ನು ತಯಾರಿಸುವವರಿಗೆ ಹಲವಾರು ಆಕಾರ, ಬಣ್ಣ ಮತ್ತು ಗಾತ್ರದಲ್ಲಿ ಸೃಜನಾತ್ಮಕವಾಗಿ, ವಿಶಿಷವಾಗಿ ಮತ್ತು ಕಲ್ಪನಾತ್ಮಕವಾಗಿ ವಿನ್ಯಾಸ ಮತ್ತು ರಚನೆ ಮಾಡುವುದಕ್ಕೆ ಅಗಾಧವಾದ ಅವಕಾಶವನ್ನು ಕಲ್ಪಿಸಿದೆ. ಅದರ ಬತ್ತಿಯು ಉರಿಯುತ್ತಿದ್ದಾಗಲೂ ಅದರ ಮೇಣವು ನಿಧಾನವಾಗಿ, ನಿಶ್ಯಬ್ಧವಾಗಿ ಕರಗುತ್ತಾ, ಕತ್ತಲೆಯನ್ನು ದೂರವಿರಿಸಿ ಬೆಳಕನ್ನು ಚೆಲ್ಲುವುದಕ್ಕೆ ತಾನು ಮಾಡುತ್ತಿರುವ ಅತ್ಯುನ್ನತ ತ್ಯಾಗವನ್ನು ಸಂಕೇತರೂಪದಲ್ಲಿ ವ್ಯಕ್ತಪಡಿಸುತ್ತದೆ! ಮಣ್ಣಿನ ದೀಪಗಳು ಮತ್ತು ಇತರ ಬಗೆಯ ದೀಪಗಳಂತೆ ಮೋಂಬತ್ತಿಗಳನ್ನು ಸಾಮಾನ್ಯವಾಗಿ ಹೂ ಮತ್ತು ಅಗರಬತ್ತಿಗಳ ಜೊತೆಗೆ ದೇವ – ದೇವತೆಯರನ್ನು ಪ್ರಾರ್ಥಿಸಲು ಬಳಸಲಾಗುತ್ತದೆ.

source: 24heures2012.info

ಏಕೆಂದರೆ ಅವು ಭಕ್ತರ ಹೃದಯಗಳನ್ನು ದೇದೀಪ್ಯಮಾನಗೊಳಿಸುತ್ತವೆ ಮತ್ತು ಮೋಂಬತ್ತಿಗಳು ಭಕ್ತಿ ಭಾವಗಳನ್ನು, ಭಾವೋದ್ವೇಗಗಳನ್ನು ಮತ್ತು ಸಂತೋಷವನ್ನು ಮೌನವಾಗಿ ವ್ಯಕ್ತಪಡಿಸುವ ಹಾಗೂ ನೋವು, ದುಃಖ ಮತ್ತು ಸಂಕಟಗಳನ್ನು ಮೌನವಾಗಿ ಹಗುರವಾಗಿಸುವ ಸಾಧನವಾಗಿವೆ. ಮೋಂಬತ್ತಿಗಳು ಜನರಿಗೆ ಅತ್ಯಂತ ಆಪ್ತವಾದವುಗ ಳೆಂಬುದು ನನ್ನ ಗಮನಕ್ಕೆ ಬಂದಿದೆ. ಅದರಲ್ಲೂ ವಿಶೇಷವಾಗಿ ದೇವ-ದೇವತೆಯರನ್ನು ತಮ್ಮನ್ನು ಆಶೀರ್ವದಿಸುವಂತೆ ಕೋರುವ ಅಥವಾ ತಮ್ಮ ಬದುಕಿನ ಹೊರೆಯಿಂದ ತಮ್ಮನ್ನು ಮುಕ್ತರನ್ನಾಗಿಸುವಂತೆ ಪ್ರಾರ್ಥಿಸುವ ಪವಿತ್ರ ಸಂದರ್ಭಗಳಲ್ಲಿ ಮೋಂಬತ್ತಿಗಳು ಜನರಿಗೆ ಅತ್ಯಂತ ಪ್ರಿಯವಾದವುಗಳಾಗಿರುತ್ತವೆ. ಅವು ಸರ್ವರೊಂದಿಗೆ ಅದರಲ್ಲೂ ವಿಶೇಷವಾಗಿ ಪ್ರಕೃತಿ ಹಾಗೂ ಅದರ ಮೂರ್ತ ರೂಪಗಳೊಂದಿಗೆ ಸೌಹಾರ್ದಯುತವಾಗಿ ಒಂದಾಗಿ ಬಾಳಲು ಪರಸ್ಪರ ಹೃದಯಗಳನ್ನು ಮತ್ತು ಮನಸ್ಸುಗಳನ್ನು ಬೆಸೆಯುತ್ತವೆ.