ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿರನ್ನೇ ಆರೋಪಿಗಳನ್ನಾಗಿಸಿ ರಿಟ್ ಅರ್ಜಿ ಸಲ್ಲಿಸಿದ ಮಂಡ್ಯದ ಗಂಡು….!

0
3126

ಮಂಡ್ಯ ನಿವಾಸಿ 54 ವರ್ಷದ ಎಂ.ಡಿ.ರಾಜಣ್ಣ ಎಂಬುವವರು ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ‘ಅಧಿಕಾರ ವ್ಯಾಪ್ತಿಯನ್ನು ಮೀರಿ ಆದೇಶ ಹೊರಡಿಸಿದ್ದಾರೆ’ ಎಂದು ಆರೋಪಿಸಿ ಸುಪ್ರೀಂಕೋರ್ಟ್ ನ ಮೂವರು ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಎಂ.ಡಿ.ರಾಜಣ್ಣ ರವರ ರಿಟ್ ಅರ್ಜಿಯನ್ನು ಅಂಗೀಕರಿಸಿದ ನಗರದ ಜೆಎಂಎಫ್ ಸಿ ನ್ಯಾಯಾಲಯದ ವಿಚಾರಣೆಯನ್ನು ಸೆ.14 ಕ್ಕೆ ಮುಂದೂಡಿದೆ.

ಭಾರತೀಯ ಸಂವಿಧಾನದ ಪ್ರಕಾರ ಆರ್ಟಿಕಲ್ 262 ಅನ್ವಯ ಅಂತರಾಜ್ಯ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮೂಗು ತೂರಿಸುವ ಅಧಿಕಾರವಿಲ್ಲದಿದ್ದರೂ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ವಿಚಾರಣೆ ನಡೆಸಿ ಆದೇಶ ಹೊರಡಿಸಿದ್ದಾರೆ ಎಂದು ಅರ್ಜಿದಾರರಾದ ರಾಜಣ್ಣ,ರವರು ಆರೋಪಿಸಿದ್ದಾರೆ.

ರಿಟ್ ಅರ್ಜಿಯಲ್ಲಿ ಉಲ್ಲೇಖ ಮಾಡಲಾದ ವಿವರಣೆ:

ಈ ಸಂಬಂಧ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಟಿ.ಎಸ್.ಠಾಕೂರ್, 1 ನೇ ಆರೋಪಿಯನ್ನಾಗಿ, ದೀಪಕ್ ಮಿಶ್ರ 2 ನೇ ಆರೋಪಿಯನ್ನಾಗಿ ಹಾಗೂ ಉದಯ ಉಮೇಶ್ ಲಲಿತ್ ಅವರನ್ನು 3 ನೇ ಆರೋಪಿಯನ್ನಾಗಿ ಹಾಗೂ ಇದೇ ಪ್ರಕರಣದಲ್ಲಿ ತಮಿಳುನಾಡು ಸಿಎಂ ಜಯಲಲಿತ ಅವರನ್ನು 4 ನೇ ಆರೋಪಿಯನ್ನಾಗಿ, ತಮಿಳುನಾಡು ಸರಕಾರದ ಮುಖ್ಯಕಾರ್ಯದರ್ಶಿಯನ್ನು 5 ನೇ ಆರೋಪಿ, ಕರ್ನಾಟಕ ಸರಕಾರದ ಮುಖ್ಯಕಾರ್ಯದರ್ಶಿಯನ್ನು 6 ನೇ ಆರೋಪಿಯನ್ನಾಗಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 7 ನೇ ಆರೋಪಿಯನ್ನಾಗಿ ರಿಟ್ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.