ತುಮಕೂರಿನಲ್ಲಿ ಮನೆಗೆ ನುಗ್ಗಿದ ಚಿರತೆ, ಡ್ರೋನ್ ಕ್ಯಾಮೆರಾ ಬಳಸಿ ಚಿರತೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ…!

0
659

ಬೆಳಿಯುತ್ತಿರುವ ನಗರದಿಂದ ಕಾಡು ಪ್ರಾಣಿಗಳಿಗೆ ಜಾಗವೇ ಇಲ್ಲದಂತಾಗಿದೆ. ಅದಕ್ಕೆ ಅವು ಕೆಲವೊಮ್ಮೆ ಆಹಾರ ಅರಸಿ ಅಥವಾ ಆಶ್ರಯಕ್ಕಾಗಿ ನಗರಗಳೆಡೆಗೆ ಬರುತ್ತವೆ. ಆದರೆ, ಈ ಬಾರಿ ತುಮಕೂರಿನಲ್ಲಿ, ಚಿರತೆಯೊಂದು ಒಬ್ಬರ ಮನೆಗೆ ನುಗ್ಗಿಬಿಟ್ಟಿದೆ.

ಹೌದು, ಚಿರತೆ ಮನೆಗೆ ನುಗ್ಗಿಬಿಟ್ಟಿದೆ. ತುಮಕೂರಿನ, ಜಯನಗರ ನಿವಾಸಿಯಾದ ಗೋಪಾಲ್ ಎಂಬುವವರ ಮನೆಯ ಕೊಟ್ಟಡಿಯೊಳಗೆ ಬೆಳ್ಳಂಬೆಳ್ಳಗೆ ಚಿರತೆಯೊಂದು ನುಗ್ಗಿಬಿಟ್ಟಿದೆ. ಚಿರತೆ ಕಂಡು ಹೆದರಿ, ಮನೆಯಲ್ಲಿದ್ದ ಇಬ್ಬರು ಮಹಿಳೆಯರು ಒಳಗೆ ಇದ್ದ ಶೌಚಾಲಯದಲ್ಲಿ ಅಡಗಿಕೊಂಡಿದ್ದಾರೆ. ಇನ್ನು ಚಿರತೆ ಕಂಡು ಅಕ್ಕ-ಪಕ್ಕದ ಮನೆಯವರು ಹೆದರಿ ಓಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ತುರ್ತು ಸೇವೆ ಅಧಿಕಾರಿಗಳು, ಹಾಸನದಿಂದ ಅರವಳಿಕೆ ತಜ್ಞರನ್ನು ಕರೆಸಿ ಮನೆಯ ಬಾಗಿಲ ಮುಂದೆ ಬೋನ್ ಹಾಕಿ ಚಿರತೆ ಸೆರೆಗಾಗಿ ಕಾದು ಕುಳಿತಿದ್ದಾರೆ.

ಇನ್ನು ಶೌಚಾಲಯದಲ್ಲಿ ಸಿಲುಕಿಕೊಂಡಿರುವ ಇಬ್ಬರು ಮಹಿಳೆಯರ ರಕ್ಷಣೆಗಾಗಿ ತುರ್ತು ಸೇವೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ಚಿರತೆಯನ್ನು ಹಿಡಿಯಲು ವಿಶೇಷ ಡ್ರೋನ್ ಕ್ಯಾಮೆರಾವನ್ನು ಕೂಡ ಕಾರ್ಯಾಚರಣೆಯಲ್ಲಿ ಬಳಸುತ್ತಿದ್ದಾರೆ. ಇದರ ಮದ್ಯೆ ಚಿರತೆಯನ್ನು ನೋಡುವ ಕುತೂಹಲದಿಂದ ಮನೆಯ ಸುತ್ತಲೂ ನೂರಾರು ಜನರು ಜಮಾಯಿಸಿದ್ದಾರೆ.