51 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದ 14 ವರ್ಷದ ಬಾಲಕಿ ಶಾಲೆಗೆ ವಾಪಸ್‍!

0
677

ಅವಳಿಗೆ ಇನ್ನು 14 ವರ್ಷ. ಮದುವೆ ವಯಸ್ಸೂ ಅಲ್ಲ. ಆದರೆ ತನಗಿಂತ ನಾಲ್ಕು ಪಟ್ಟು ಹೆಚ್ಚು ವಯಸ್ಸಾದ ವ್ಯಕ್ತಿಯನ್ನು ಮದುವೆ ಆಗಿಬಿಟ್ಟಿದ್ದಾಳೆ. ಸಂತೋಷದ ವಿಷಯ ಏನು ಅಂದರೆ ನಾಲ್ಕೇ ತಿಂಗಳಲ್ಲಿ ಆಕೆ ವಿವಾಹ ಬಂಧನದಿಂದ ಬಿಡುಗಡೆಯಾಗಿ ಮತ್ತೆ ಶಾಲೆ ಕಡೆ ಹೆಜ್ಜೆ ಹಾಕಿದ್ದಾಳೆ.

ಕೆಲವು ವರ್ಷಗಳ ಹಿಂದೆಯೆಷ್ಟೇ ಹೊಸ ರಾಜ್ಯವಾಗಿ ಉದಯವಾದ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಕಳೆದ ವರ್ಷ ಅಕ್ಟೋಬರ್‍ ನಲ್ಲಿ ಗಿರಿಜನ ಮಕ್ಕಳಿಗಾಗಿ ಕಟ್ಟಿಸಿದ ಹಾಸ್ಟೆಲ್‍ನಲ್ಲಿ ತಂಗಿದ್ದ ಈ ಬಾಲಕಿ ಸರಕಾರ ನಡೆಸುವ ಕಸ್ತೂರ್ಬಾ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು.
ದಸರಾ ರಜೆ ಕಳೆಯಲು ಊರಿಗೆ ತೆರಳಿದ್ದಳು. ಆದರೆ ಹೆತ್ತವರು ಸೇರಿದಂತೆ ಎಲ್ಲರ ಒತ್ತಾಯಕ್ಕೆ ಮಣಿದ ಈಕೆ 51 ವರ್ಷದ ವ್ಯಕ್ತಿಯನ್ನು ವಿವಾಹ ಆಗಬೇಕಾಯಿತು. ಅದಾಗಲೇ ಮದುವೆಯಾಗಿ ಒಬ್ಬ ಮಗ ಮತ್ತು ಮಗಳನ್ನು ಹೊಂದಿದ್ದ ರಾಮವತ್‍ ಎಂಬಾತ ವಧು ದಕ್ಷಿಣೆ ನೀಡುವುದಾಗಿ ಆಮೀಷ ಒಡ್ಡಿದ್ದ.

ನಾಲ್ಕು ತಿಂಗಳು ಕಳೆದಾಗ ಆ ಬಾಲಕಿ ಹೇಗೋ ತಾನು ಓದುತ್ತಿದ್ದ ಶಾಲೆಯ ಟೀಚರ್‍ನ ನಂಬರ್‍ ಸಂಗ್ರಹಿಸಿ ದೂರವಾಣಿ ಕರೆ ಮಾಡಿ ತನ್ನ ಕಷ್ಟ ಹೇಳಿಕೊಂಡಳು. ಟೀಚರ್‍ ಸಹಾಯದಿಂದ ಇದೀಗ ಶಾಲೆಗೆ ಮರಳಿದ ಬಾಲಕಿ, ಹಾಸ್ಟೆಲ್‍ನಲ್ಲಿ ತಂಗಿದ್ದಾಳೆ.

ಬಲವಂತದ ಮದುವೆ ಮಾಡಿದ ಹೆತ್ತವರು ಹಾಗೂ ಮದುವೆಯಾದ ರಾಮವತ್‍ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ವರ್ಷದಲ್ಲಿ ತೆಲಂಗಾಣದಲ್ಲಿ ಪತ್ತೆಯಾದ 5ನೇ ಬಾಲ್ಯ ವಿವಾಹ ಪ್ರಕರಣ ಇದಾಗಿದೆ.