ಅಧ್ಯಾತ್ಮ ಕ್ಷೇತ್ರದ ಮಹಾನ್ ಮೇಧಾವಿ ಸ್ವಾಮೀ ಚಿನ್ಮಯಾನಂದ ಸರಸ್ವತೀ!!

0
604

ಕೇರಳದ ಎರ್ನಾಕುಲಂನಲ್ಲಿ ೧೯೧೬ರ ಮೇ ತಿಂಗಳ ೮ರಂದು ಚಿನ್ಮಯಾನಂದರ ಜನನ. ಅವರ ಪೂರ್ವಾಶ್ರಮದ ಹೆಸರು ಬಾಲಕೃಷ್ಣನ್ ಮೆನನ್.  ಕೊಚ್ಚಿ, ತ್ರಿಶೂರ್‌ಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ಅವರು ಎರ್ನಾಕುಲಂನ ಮಹಾರಾಜಾ ಕಾಲೇಜಿನಲ್ಲಿ ಪದವೀಧರರಾದರು. ಲಕ್ನೋ ವಿಶ್ವವಿದ್ಯಾನಿಲಯದಿಂದ ಕಾನೂನು ಮತ್ತುಸಾಹಿತ್ಯದ ಸ್ನಾತಕೋತ್ತರ ಪದವಿ ಗಳಿಸಿದರು. ಜತೆಗೆ ಪತ್ರಿಕೋದ್ಯಮದ ಪದವಿಯನ್ನೂ ಸಂಪಾದಿಸಿದರು.

೧೯೪೯ರ ಫೆಬ್ರ ವರಿ ೨೯ರಂದು ಸ್ವಾಮೀ ಶಿವಾನಂದರಿಂದ ಸನ್ಯಾಸ ದೀಕ್ಷೆ ಪಡೆದು ಸ್ವಾಮೀ ಚಿನ್ಮಯಾನಂದ ಸರಸ್ವತಿಯಾದರು. ಸನಾತನ ಧರ್ಮಗ್ರಂಥಗಳ ನಿರಂತರ ಓದು, ಪರಾಮರ್ಶೆಯಲ್ಲಿ ಲೀನವಾದರು. ಶಿವಾನಂದರು, ವಿವೇಕಾನಂದರು, ರಾಮತೀರ್ಥರು, ರಮಣ ಮಹರ್ಷಿಗಳು, ಅರಬಿಂದೊ ಮೊದಲಾದವರ ಬೋಧನೆಗಳು ಅವರನ್ನು ಪಕ್ವಗೊಳಿಸಿದವು. ಮುಂದೆ ಗುರುಗಳ ಅನುಜ್ಞೆ ಪಡೆದು ಉತ್ತರ ಕಾಶಿಯ ತಪೋವನದಲ್ಲಿ ವೇದಾಂತದ ಕಠಿಣ ಅಭ್ಯಾಸ ನಿರತರಾದರು. ಸನಾತನ ತತ್ವಗಳ ಪರಿಪೂರ್ಣ ಫಲ ಕೈಗೆಟಕುತ್ತಲೇ ಜನ ಸಾಮಾನ್ಯರಿಗೆ ಅದನ್ನು ಉಣಬಡಿಸಲು ಮುಂದಾದರು ೧೯೫೧ರಿಂದ ಸಾಮಾನ್ಯರು ಪ್ರಾಚೀನ ಗ್ರಂಥಗಳನ್ನು ತಿಳಿದುಕೊಳ್ಳುವ ಬಗೆಯನ್ನು ಬೋಧಿಸಲಾರಂಭಿಸಿದರು.

೧೯೫೩ರಲ್ಲಿ ಚೆನ್ನೈಯಲ್ಲಿ ಚಿನ್ಮಯಾನಂದರ ಜ್ಞಾನಸತ್ರ ಏರ್ಪಟ್ಟಿತ್ತು. ಆ ಸಂದರ್ಭ ಕೆಲವರು ಅವರ ಹೆಸರಿನಲ್ಲಿ ಆಧ್ಯಾತ್ಮಿಕ ಪ್ರಸಾರಕ್ಕೆ ಶ್ರಮಿಸುವ ಸಂಸ್ಥೆಯೊಂದನ್ನು ಕಾರ್ಯಾರಂಭಗೊಳಿಸಲು ಆಸಕ್ತರಾದರು. ಆದರೆ ಸ್ವಾಮೀಜಿ ಅದಕ್ಕೆ ಒಪ್ಪದೆ, ನಾನು ಕೇವಲ ಪ್ರಾಚೀನ ಋಷಿಗಳ ಸಂದೇಶವನ್ನು ನೀಡಲಷ್ಟೇ ಬಂದಿದ್ದೇನೆ. ಸಂಸ್ಥೆಗಳಲ್ಲಿ ನನಗೆ ಆಸಕ್ತಿಯಿಲ್ಲ” ಎಂದರು. ಅದನ್ನು ಅವರ ಅಭಿಮಾನಿಗಳು ನಿರಾಕರಿಸುತ್ತ, ಚಿನ್ಮಯ ಎಂಬುದು ಶುದ್ಧ ಜ್ಞಾನದ ಸಂಕೇತ. ನಿಮ್ಮ ಹೆಸರಿನಲ್ಲಿ ಚಿನ್ಮಯಾನಂದ ಮಿಷನ್ ಸ್ಥಾಪಿಸಿ ಜ್ಞಾನ ಪ್ರಸಾರದ ಉದ್ಧೇಶಕ್ಕೆ ಆಶೀರ್ವದಿಸಿ ಎಂದಾಗ ಅವರು ಒಪ್ಪಿಕೊಂಡರು. ಅದೇ ವರ್ಷ ಆಗಸ್ಟ್ ೮ರಂದು ಮಿಷನ್ ಕಾರ್ಯಾರಂಭಗೊಂಡಿತು. ಅದರ ಸಾಧನೆ ಅದ್ವಿತೀಯವಾಗಿ ಜಗದಗಲ ಹರಡಿದೆ. ನೂರಾರು ದೇಶಗಳಲ್ಲಿ ಮುನ್ನೂರಕ್ಕಿಂತ ಅಧಿಕ ಶಾಖೆಗಳನ್ನು ಹೊಂದಿದೆ.

೧೯೯೨ರಲ್ಲಿ ಚಿನ್ಮಯ ಅಂತಾರಾಷ್ಟ್ರೀಯ ಪ್ರತಿಷ್ಠಾನವು ಹಲವೆಡೆ ಸಂಶೋಧನಾ ಕೇಂದ್ರ ಮತ್ತು ಗ್ರಂಥಾಲಯಗಳನ್ನು ಆರಂಭಿಸಿತು. ಚಿನ್ಮಯಾನಂದರು ೧೯೬೫ರಲ್ಲಿ ೧೮ ದೇಶಗಳ ೩೯ ನಗರಗಳಲ್ಲಿ ಮೊದಲ ಆಧ್ಯಾತ್ಮಿಕ ಪ್ರವಾಸ ಕೈಗೊಂಡರು. ೧೯೭೫ರಲ್ಲಿ ಅಮೆರಿಕದಲ್ಲಿ ಚಿನ್ಮಯ ಮಿಷನ್ ಶಾಖೆ ಸ್ಥಾಪನೆಗೊಂಡು ಈಗ ಅದರ ೩೦ ಶಾಖೆಗಳು ವೇದಾಂತ ಅಧ್ಯಯನದ ತರಗತಿಗಳು,  ೧೯೫೩ರಲ್ಲಿ ಅವರ ೨೩ನೆಯ ಜ್ಞಾನಸತ್ರವನ್ನು ದೆಹಲಿಯಲ್ಲಿ ಅಂದಿನ ರಾಷ್ಟ್ರಪತಿಗಳಾದ ಬಾಬೂ ರಾಜೇಂದ್ರ ಪ್ರಸಾದರು ಉದ್ಘಾಟಿಸಿದ್ದರು.

ನಿರಂತರ ಸಂಚಾರದಿಂದಾಗಿ ಚಿನ್ಮಯಾನಂದರಿಗೆ ೧೯೬೦ರಲ್ಲಿ ಹೃದಯಾಘಾತವಾಗಿತ್ತು. ಕೆಲವು ವರ್ಷಗಳ ಬಳಿಕ ಬೈಪಾಸ್ ಶಸ್ತ್ರಚಿಕಿತ್ಸೆಯೂ ನಡೆಯಿತು. ಅನಾರೋಗ್ಯವನ್ನು ಲೆಕ್ಕಿಸದೆ ಧರ್ಮ ಜಾಗೃತಿಗಾಗಿ ಅವರು ಶ್ರಮಿಸಿದರು. ೧೯೯೩ರ ಆಗಸ್ಟ್ ೩ರಂದು ಅಮೆರಿಕದ ಸ್ಯಾನ್‌ಡಿಯಾಗೋದಲ್ಲಿ ಅವರ ಜೀವನಯಾತ್ರೆ ಮುಕ್ತಾಯಗೊಂಡಿತು. ಹಿಮಾಚಲ ಪ್ರದೇಶದಲ್ಲಿ ಅವರ ಮಹಾಸಮಾಧಿ ನಿರ್ಮಾಣವಾಗಿದೆ.