ಚಿಂತಾಮಣಿಯಲ್ಲಿ 900 ಸಿಲಿಂಡರ್ ಬಾಂಬ್ ರೀತಿಯಲ್ಲಿ ಸ್ಪೋಟಗೊಂಡಿದೆ!

0
959

ಚಿಕ್ಕಬಳ್ಳಾಪುರ: ಚಿಂತಾಮಣಿ ಸಮೀಪ ಮಹಾಸ್ಪೋಟ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ.
2 ಲಾರಿಗಳಲ್ಲಿದ್ದ 900 ಗ್ಯಾಸ್ ಸಿಲಿಂಡರ್ ಗಳು ಸ್ಪೋಟಗೊಂಡಿದ್ದು, ಬಾಂಬ್ ರೀತಿಯಲ್ಲಿ ಬ್ಲಾಸ್ಟ್ ಆಗಿವೆ. ಸಮೀಪದಲ್ಲೇ ಸಿಲಿಂಡರ್ ಗೋದಾಮು, ವಸತಿ ಶಾಲೆ ಇದ್ದು ಅಲ್ಲಿಗೇನಾದರೂ ಬೆಂಕಿ ತಗುಲಿದ್ದರೆ ಭಾರೀ ಅನಾಹುತವಾಗುವ ಸಾಧ್ಯತೆ ಇತ್ತು. ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ವರದಿ ತಿಳಿಸಿದೆ.

ಏಕಾಏಕಿ 900 ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಎಷ್ಟಿತ್ತೆಂದರೆ ಸುತ್ತಮುತ್ತಲಿನ 10 ಕಿಲೋ ಮೀಟರ್ ದೂರದವರೆಗೂ ಬಾಂಬ್ ಸ್ಫೋಟದಂತಹ ಶಬ್ದ ಕೇಳಿಸಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

ಬೆಂಕಿಹೊತ್ತಿಕೊಂಡ ಪರಿಣಾಮ ಸಿಲಿಂಡರ್ ತುಂಬಿದ್ದ 2 ಲಾರಿ ಹಾಗೂ ಒಂದು ಬೊಲೆರೊ ವಾಹನ ಕೂಡಾ ಭಸ್ಮವಾಗಿ ಹೋಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವರದಿಯ ಪ್ರಕಾರ, ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಸಿಲಿಂಡರ್ ಸಿಡಿದ ರಭಸಕ್ಕೆ ಸುಮಾರು ಅರ್ಧ ಕಿಲೋ ಮೀಟರ್ ವರೆಗೂ ಸಿಲಿಂಡರ್ ತುಂಡು, ತುಂಡಾಗಿ ಬಿದ್ದಿರುವುದಾಗಿ ತಿಳಿದು ಬಂದಿದೆ.

ಸಮೀಪದಲ್ಲೇ ವಸತಿ ಶಾಲೆ ಇದ್ದು, ಅಲ್ಲಿದ್ದ ಮಕ್ಕಳು ಮತ್ತು ಸಿಬ್ಬಂದಿಯನ್ನು ಸ್ಥಳಾಂತರ ಮಾಡಲಾಗಿದೆ. 8 ಅಗ್ನಿಶಾಮಕ ವಾಹನಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿವೆ. ರಸ್ತೆ ಹೊಲಗಳಲ್ಲಿಯೂ ಸಿಲಿಂಡರ್ ಗಳು ಬಿದ್ದಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.