ಮತ್ತೆ ಉತ್ತರ ಕರ್ನಾಟಕದಲ್ಲಿ ಮೋಡಬಿತ್ತನೆ ಮಾಡುತ್ತಿರುವ ಹುಚ್ಚು ಸರ್ಕಾರ; ಹಣದ ಆಸೆಗೆ ನೆರೆ ಸಂತ್ರಸ್ತ ಜೀವನದ ಜೊತೆಗೆ ಆಟವಾಡುತ್ತಿರುವ ಸರ್ಕಾರದ ನಡೆ ಸರಿಯಾ??

0
157

ರಾಜ್ಯ ಸರ್ಕಾರ ಯಾಕೋ ಟ್ಯಾಬ್ಲೆಟ್ ಕಾಲಿ ಆದ ರೀತಿಯಲ್ಲಿ ವರ್ತನೆ ಮಾಡುತ್ತಿದೆ. ಏಕೆಂದರೆ ಪ್ರವಾಹದಿಂದ ಇಡಿ ಉತ್ತರ ಕರ್ನಾಟಕದ ಜನರು ಇನ್ನೂ ಮನೆ, ಊಟ ನೆಲೆ ಇಲ್ಲದೆ ಸಾಯುತ್ತಿದ್ದಾರೆ, ಇದೆಲ್ಲವೂ ತಿಳಿದಿದ್ದರೂ ಉತ್ತರ ಕರ್ನಾಟಕದಲ್ಲಿ ಮತ್ತೆ ಮೋಡ ಬಿತ್ತನೆ ಮಾಡುತ್ತಿರುವುದು ಜನರಿಗೆ ಮತ್ತಷ್ಟು ನೆಮ್ಮದಿ ಕೆಡಸಿದೆ, ಇದೆಲ್ಲವನ್ನು ನೋಡಿದರೆ ಜನರು ಸತ್ತು ಹೋದರು ಪರವಾಗಿಲ್ಲ ಆದರೆ ಯೋಜನೆ ಹೆಸರಿನಲ್ಲಿರುವ ಹಣವನ್ನು ತೆಗೆಯುವುದು ಮಾತ್ರ ಸರ್ಕಾರ ಆಲೋಚನೆ ಆಗಿದೆ ಎನ್ನುವ ಅನುಮಾನ ಜನರಲ್ಲಿ ಮೂಡಿದೆ.

ಉತ್ತರ ಕರ್ನಾಟಕದಲ್ಲಿ ಮತ್ತೆ ಮೋಡಬಿತ್ತನೆ?

ಹೌದು ಭೀಕರ ಮಳೆಯ ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದ್ದು, ಇಂದಿಗೂ ಮಳೆರಾಯನ ಆರ್ಭಟ ನಿಂತಿಲ್ಲ. ಉತ್ತರದಲ್ಲಿ ಮಳೆಗೆ ಜನರು ತತ್ತರಿಸಿ ಹೋದರೂ ಮತ್ತಷ್ಟೂ ಮಳೆ ತರಿಸಲು ಸರ್ಕಾರ ಮುಂದಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಮೋಡ ಬಿತ್ತನೆ ನಿಲ್ಲಿಸುವಂತೆ ಸ್ವತ: ಸಿಎಂ ಬಿಎಸ್‍ವೈ ಆದೇಶಿಸಿದರೂ ಮೋಡ ಬಿತ್ತನೆ ಮುಂದುವರಿದಿದೆ. ಮಳೆಗಾಲದಲ್ಲಿ ಮೋಡ ಬಿತ್ತನೆ ಹೆಸರಿನಲ್ಲಿ 45 ಕೋಟಿ ರೂ. ಮಹಾವಂಚನೆ ನಡೆಯುತ್ತಿದೆ ಎಂಬ ಆರೋಪವೊಂದು ಕೇಳಿಬಂದಿದೆ.

ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಮಾಡಲು `ಕ್ಯಾತಿ ಕ್ಲೈಮೇಟ್ ಮಾಡಿಫಿಕೇಷನ್ ಕನ್ಸಲ್ಟೆಂಟ್’ ಸಂಸ್ಥೆಯು ಮೋಡ ಬಿತ್ತನೆಯ ಗುತ್ತಿಗೆ ಪಡೆದಿದೆ. ಮಾಜಿ ಸ್ಪೀಕರ್ ಕೆಬಿ ಕೋಳಿವಾಡರ ಪುತ್ರ ಪ್ರಕಾಶ್ ಕೋಳಿವಾಡರ ಈ ಕಂಪನಿ 45 ಕೋಟಿ ರೂ. ವೆಚ್ಚದಲ್ಲಿ 90 ದಿನಗಳಲ್ಲಿ 400 ಗಂಟೆ ಮೋಡ ಬಿತ್ತನೆ ಮಾಡಲು ಗುತ್ತಿಗೆ ಪಡೆದಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಇನ್ನೂ ಭಾರೀ ಮಳೆ ಮುಂದುವರಿದಿರುವುದರಿಂದ ಮೋಡ ಬಿತ್ತನೆ ನಿಲ್ಲಿಸುವಂತೆ ಸಚಿವ ಜಗದೀಶ್ ಶೆಟ್ಟರ್, ಸಿಎಂ ಬಿಎಸ್‍ವೈಗೆ ಮನವಿ ಮಾಡಿದ್ದಾರೆ. ಶೆಟ್ಟರ್ ಮನವಿಯಂತೆ ಸಿಎಂ ಬಿಎಸ್‍ವೈ ಸಹ ಮೋಡಬಿತ್ತನೆ ನಿಲ್ಲಿಸುವಂತೆ ಆದೇಶಿಸಿದ್ದರು. ಆದರೂ ಮೋಡ ಬಿತ್ತನೆ ಮಾತ್ರ ನಿಂತಿಲ್ಲ.

ಉತ್ತರ ಕರ್ನಾಟಕದ ವಿವಿಧೆಡೆ ಇನ್ನೂ ಮೋಡಬಿತ್ತನೆ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಸೆಪ್ಟೆಂಬರ್ 19 ರಂದು ಜಮಖಂಡಿ, ಬೀಳಗಿ, ವಿಜಯಪುರ, ಇಂಡಿ ಭಾಗದಲ್ಲಿ ಮೋಡ ಬಿತ್ತನೆ ನಡೆಸಲಾಗಿದೆ. ಅಕ್ಟೋಬರ್ 28ರವರೆಗೆ ಮೋಡಬಿತ್ತನೆ ಕಾರ್ಯ ಮುಂದುವರಿಯಲಿದೆ ಎಂಬ ಮಾಹಿತಿ ಇದೆ. ಈಗಾಗಲೇ 194 ಗಂಟೆಗಳ ಕಾಲ ಮೋಡ ಬಿತ್ತನೆ ಮಾಡಲಾಗಿದ್ರೂ, ಇದೀಗ ಮಳೆಗಾಲದಲ್ಲೂ ಮೋಡಬಿತ್ತನೆ ಮುಂದುವರಿದಿರುದನ್ನ ನೋಡಿದರೆ 90 ದಿನಗಳ ಅವಧಿಯಲ್ಲಿ 400 ಗಂಟೆ ಮೋಡಬಿತ್ತನೆಯ ಕೋಟಾ ಮುಗಿಸಿ 45 ಕೋಟಿ ರೂಪಾಯಿ ಬಾಚಿಕೊಳ್ಳಲು ಗುತ್ತಿಗೆ ಪಡೆದ ಸಂಸ್ಥೆ ಹವಣಿಸುತ್ತಿದೆ ಎನ್ನಲಾಗಿದೆ. ಜೊತೆಗೆ ಮೋಡಬಿತ್ತನೆಯಿಂದಲೇ ಮಳೆಯಾಯ್ತು ಅನ್ನೋ ಬಿರುದನ್ನ ಪಡೆಯಲು ಗುತ್ತಿಗೆ ಸಂಸ್ಥೆ ಮುಂದಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಒಟ್ಟಾರೆಯಾಗಿ ಪ್ರವಾಹ ಸಂತ್ರಸ್ತರಿಗೆ ಸರಿಯಾದ ಪರಿಹಾರ ಕೊಡಲು ಆಗದ ಸರ್ಕಾರಕ್ಕೆ ಮೋಡ ಬಿತ್ತನೆ ನಿಲ್ಲಿಸುವಷ್ಟು ದೈರ್ಯವಿಲ್ಲ ಎನ್ನುವುದು ಉತ್ತರ ಕರ್ನಾಟಕದ ಜನರ ಅಭಿಪ್ರಾಯವಾಗಿದೆ.