ಕನ್ನಡಿಗರಿಗೆ ಕನ್ನಡಿಗರೇ ಮಿತ್ರರು ಎಂಬ ಮಾತು ಸಿ.ಎಂ ವಿಚಾರದಲ್ಲೂ ನಿಜವಾಗಿದೆ…

0
5816

ಹೌದು, ರಾಕೇಶ್ ಸಿದ್ದರಾಮಯ್ಯ ಬೆಲ್ಜಿಯಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಆಯಂಟ್’ವೆರ್ಪ್’ನಲ್ಲಿ ಅಪರಿಚಿತ ಯುವ ಕನ್ನಡಿಗನೊಬ್ಬ ಸಿಎಂ ಕುಟುಂಬಕ್ಕೆ ನೆರವು ನೀಡಿ, ಮಾನವೀಯತೆ ಮೆರೆದಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪುತ್ರ ರಾಕೇಶ್ ಅವರನ್ನು ನೋಡಲೆಂದು ಬೆಲ್ಜಿಯಂಗೆ ತೆರಳಿದ್ದಾಗ ಅಲ್ಲಿನ ಕನ್ನಡಿಗರೊಬ್ಬರು ಸಿಎಂ ಕುಟುಂಬಕ್ಕೆ ಮೂರು ದಿನಗಳ ಕಾಲ ಉಪಚಾರ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಶುಕ್ರವಾರ ಸಿಎಂ ಸಿದ್ದರಾಮಯ್ಯ ಆಯಂಟ್ವೆರ್ಪ್ನಲ್ಲಿ ಇರುವುದನ್ನು ಸ್ನೇಹಿತರೊಬ್ಬರ ಮೂಲಕ ತಿಳಿದುಕೊಂಡ ಐಟಿ ಉದ್ಯೋಗಿ ವಿಜೇಂದ್ರ ಎಂಬವರು ಕೂಡಲೇ ಯೂನಿವರ್ಸಿಟಿ ಆಸ್ಪತ್ರೆಗೆ ಧಾವಿಸಿ, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.ಆ ಕನ್ನಡಿಗನ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ತಮ್ಮಲ್ಲಿ ಮಡುಗಟ್ಟಿದ ದುಃಖದ ನಡುವೆಯೂ ಹೃದಯಾಂತರಾಳದ ಕೃತಜ್ಞತೆ ಸಮರ್ಪಣೆಯೊಂದಿಗೆ ವಾಪಸಾಗಿದ್ದಾರೆ.

ಸಿಎಂ ಅವರು ಪುತ್ರ ರಾಕೇಶ್ ಅವರ ಚಿಕಿತ್ಸೆಗೆ ಬಂದಿರುವುದಾಗಿ ಗೊತ್ತಾಗುತ್ತಲೇ ತಾವು ಕೆಲಸ ಮಾಡುತ್ತಿದ್ದ ‘ಅಮಿಸ್ಟಾ’ ಎಂಬ ಐಟಿ ಕಂಪನಿಯ ಕೆಲಸಕ್ಕೆ ರಜೆ ಹಾಕಿ ನೆರವಿಗೆ ನಿಂತಿದ್ದಾರೆ. ಬಳಿಕ ಮೂರು ದಿನಗಳ ಕಾಲ ಸತತ ಸಿಎಂ ಹಾಗೂ ಅವರ ಕುಟುಂಬದ ಜತೆಗೇ ಆಸ್ಪತ್ರೆಯಲ್ಲಿ ತಂಗಿದ್ದರು. ವಿಶೇಷವೆಂದರೆ, ಯುವಕ ವಿಜೇಂದ್ರ ತಮ್ಮ ಮನೆಯಿಂದಲೇ ಅಡುಗೆ ಮಾಡಿ ತಂದು ಸಿಎಂ ಹಾಗೂ ಅವರ ಕುಟುಂಬದ ಸದಸ್ಯರಿಗೆ ಉಣಬಡಿಸಿದ್ದಾರೆ.

ಇಷ್ಟೆಲ್ಲ ಶತಪ್ರಯತ್ನಗಳ ನಡುವೆಯೂ ರಾಕೇಶ್ ಚಿಕಿತ್ಸೆ ಫಲಿಸದಿದ್ದಾಗ ಪಾರ್ಥಿವ ಶರೀರವನ್ನು ಭಾರತಕ್ಕೆ ಸ್ಥಳಾಂತರಿಸಲು ಮತ್ತೊಂದು ದಿನ ಬೇಕಾಯಿತು. ಈ ಸಂದರ್ಭದಲ್ಲೂ ಬೆಲ್ಜಿಯಂನಲ್ಲಿದ್ದ ಯುವಕ ವಿಜೇಂದ್ರ ಅವರು ಸಿಎಂ ಕುಟುಂಬದ ಉಪಚಾರ ನೋಡಿಕೊಂಡರು. ಕೊನೆಗೆ ಭಾರತಕ್ಕೆ ರಾಕೇಶ್ ಕುಟುಂಬ ವಾಪಸಾಗುವಾಗ ಸಿಎಂ ಸಿದ್ದರಾಮಯ್ಯ ಬೆಲ್ಜಿಯಂನ ಕನ್ನಡಿಗ ವಿಜೇಂದ್ರ ಮತ್ತು ಅವರ ಪತ್ನಿಗೆ ಮನಪೂರ್ವಕ ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮಡುಗಟ್ಟಿದ ದುಃಖವನ್ನು ತೋರಗೊಡದೇ ಒಬ್ಬ ಪತಿಯಾಗಿ, ತಂದೆಯಾಗಿ, ಬಂಧುವಾಗಿ, ಮುಖ್ಯಮಂತ್ರಿಯಾಗಿ ಕೊನೆ ಕ್ಷಣದವರೆಗೂ ತಮ್ಮ ಮಗನನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಜೀವಂತವಾಗಿಟ್ಟುಕೊಂಡಿದ್ದರು. ಚಿಕಿತ್ಸೆ ಕೊಡುತ್ತಿದ್ದ ವೈದ್ಯರೊಂದಿಗೆ ವಿನಮ್ರರಾಗಿ ಅವರೊಂದಿಗೆ ಬೆರೆತು ತಮ್ಮ ಭಾವನೆಗಳನ್ನು ಹಂಚಿಕೊಂಡು ವೈದ್ಯರು ಕೊಡುವ ಸಲಹೆಗಳನ್ನು ಗಮನವಿಟ್ಟು ಆಲಿಸುತ್ತಿದ್ದರು.

ವಿಜೇಂದ್ರ ಹೇಳುವುದೇನು?
ಬೆಲ್ಜಿಯಂನಿಂದ ಕನ್ನಡಪ್ರಭ ಜೊತೆ ಮಾತನಾಡಿದ ಕನ್ನಡಿಗ ವಿಜೇಂದ್ರ, ”ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲ್ಲಿಗೆ ಬಂದ ವೇಳೆ ಬಹುತೇಕ ಸಮಯ ಮೌನದಿಂದಲೇ ಇರುತ್ತಿದ್ದರು. ಆಗೀಗ ಕುಟುಂಬದ ಸದಸ್ಯರನ್ನು ಸಂತೈಸಿ, ಧೈರ್ಯ ಹೇಳುತ್ತಿದ್ದರು. ಯಾರ ಮುಂದೆಯೂ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿರಲಿಲ್ಲ. ಎಲ್ಲವೂ ಸರಿ ಹೋಗುತ್ತದೆ ಎಂದೇ ಅವರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದರು” ಎಂದರು.

”ರಾಕೇಶ್ ಅವರ ಚಿಕಿತ್ಸೆ ಬಗೆಗೆ ವೈದ್ಯರೊಂದಿಗೆ ಸಿದ್ದರಾಮಯ್ಯ ಅವರು ನಿರಂತರ ಚರ್ಚಿಸುತ್ತಿದ್ದರು. ವೈದ್ಯರ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸುತ್ತಿದ್ದರು. ಅಂತಿಮವಾಗಿ ವೈದ್ಯರ ಸಲಹೆಯಂತೆಯೇ ಸಿಂಗಪೂರ್ ಅಥವಾ ಇನ್ನೆಲ್ಲಿಗೂ ಸ್ಥಳಾಂತರ ಮಾಡುವುದು ಬೇಡ ಎಂಬ ನಿರ್ಧಾರ ತೆಗೆದುಕೊಂಡರು. ಕೊನೆ ಘಳಿಗೆವರೆಗೂ ಭರವಸೆಯಿಂದಲೇ ಇದ್ದರು” ಎಂದು ವಿಜೇಂದ್ರ ತಮ್ಮ ಅನುಭವ ಹಂಚಿಕೊಂಡರು.

”ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಹಾಗೂ ರಾಕೇಶ್ ಸ್ನೇಹಿತ ನೈಋತ್ಯ ಅವರೊಂದಿಗೆ ಸಿದ್ದರಾಮಯ್ಯನವರು ಸುದೀರ್ಘವಾಗಿ ಚರ್ಚಿಸುತ್ತಿದ್ದರು. ಎಷ್ಟೋ ಸಂದರ್ಭಗಳಲ್ಲಿ ಅತೀಕ್ ಅವರೊಂದಿಗೆ ತುಂಬಾ ಆತ್ಮೀಯವಾಗಿ ತಮ್ಮ ಭಾವನೆಗಳನ್ನು ತೆರೆದಿಡುತ್ತಿದ್ದರು. ಅತೀಕ್ ಅವರು ಕೂಡ ಸಿದ್ದರಾಮಯ್ಯ ಅವರಿಗೆ ಧೈರ್ಯ ತುಂಬುತ್ತಿದ್ದರು. ಅತಿಕ್ ಅವರ ಕೆಲ ಸ್ನೇಹಿತರು ಕೂಡ ನೆರವಿಗೆ ಬಂದಿದ್ದರು” ಎಂದು ಅವರು ಸ್ಮರಿಸಿದರು.
ಸಿದ್ದರಾಮಯ್ಯರನ್ನು ಪ್ರತ್ಯಕ್ಷ ನೋಡಿದ್ದು ಇದೇ ಮೊದಲು:

”ನಾವು ಮೂಲತಃ ಬೆಂಗಳೂರಿನವರು. ನನ್ನ ತಾಯಿ ಗುಂಡ್ಲುಪೇಟೆಯವರು. ನನ್ನ ತಂದೆ ಬೆಂಗಳೂರಿನವರು. ನನ್ನ ಪತ್ನಿ ಕೂಡ ಬೆಂಗಳೂರಿನವರು. ಮೂರು ವರ್ಷದ ಹಿಂದೆ ನಾನು ಬೆಲ್ಜಿಯಂಗೆ ಪತ್ನಿ ಸಮೇತ ಬಂದು ಸೆಟ್ಲ್ ಆಗಿದ್ದೇನೆ. ನಾನು ಸಿದ್ದರಾಮಯ್ಯನವರನ್ನು ಈ ಮೊದಲು ನೋಡಿರಲೇ ಇಲ್ಲ. ಹಿಂದೆ ಸಿದ್ದರಾಮಯ್ಯನವರು ಬಳ್ಳಾರಿ ಪಾದಯಾತ್ರೆ ಮಾಡಿದ್ದಾಗ ನಾನು ಪತ್ರಿಕೆಯಲ್ಲಿ ಅವರ ಫೋಟೊ ನೋಡಿದ್ದೆ. ಅಷ್ಟು ಬಿಟ್ಟರೆ ಅವರ ಪರಿಚಯ ಇರಲಿಲ್ಲ. ಆದರೆ ಮೂರು ದಿನಗಳ ಕಾಲ ಅವರ ಕಾರ್ಯವೈಖರಿ, ಸ್ವಭಾವ, ಎಲ್ಲರ ಬಗೆಗೆ ಕಾಳಜಿ ನೋಡಿ ನಿಜಕ್ಕೂ ನನಗೆ ರಾಜಕಾರಣಿಗಳ ಬಗೆಗಿನ ಕಲ್ಪನೆಯೇ ಬದಲಾಯಿತು” ಎಂದು ವಿಜಯೇಂದ್ರ ಅಭಿಪ್ರಾಯಪಟ್ಟರು.

”ಬೆಂಗಳೂರಿನಲ್ಲಿ ಮಳೆ ಬಂದು ಕೆಲ ಪ್ರದೇಶ ನೀರಿನಲ್ಲಿ ಮುಳುಗಿವೆ ಎಂದು ಅವರ ಜತೆಗಿದ್ದ ಪ್ರಧಾನ ಕಾರ್ಯದರ್ಶಿ ಅತೀಕ್ ಅವರಿಗೆ ಕರೆ ಬಂತು. ಆಗ ಸುಮಾರು ಎರಡು ತಾಸುಗಳ ಕಾಲ ಸಿದ್ದರಾಮಯ್ಯ ಅವರ ಚಡಪಡಿಕೆ ಕಂಡು ನನಗೆ ವಿಚಿತ್ರ ಎನಿಸಿತು. ಬೆಂಗಳೂರಿನಲ್ಲಿರುವ ಅನೇಕರಿಗೆ ದೂರವಾಣಿ ಕರೆ ಮಾಡುತ್ತಲೇ ಇದ್ದರು. ಏನೇನೋ ಸೂಚನೆಗಳನ್ನು ಕೊಡುತ್ತಿದ್ದರು. ಅವರ ನಿರ್ದೇಶನ ಅನುಸರಿಸಿ ಅತೀಕ್ ಅವರೂ ಕೂಡ ಯಾರ್ಯಾರಿಗೋ ಸೂಚನೆ ಕೊಡುತ್ತಿದ್ದರು. ಜತೆಯಲ್ಲಿದ್ದ ಗೋವಿಂದರಾಜು ಅವರಿಗೂ ಸೂಚನೆ ನೀಡಿ ಮಾಹಿತಿ ಕೇಳು ಎಂದು ಹೇಳುತ್ತಿದ್ದರು. ತಮ್ಮ ಕಷ್ಟದ ಸಂದರ್ಭದಲ್ಲೂ ಒಬ್ಬ ಚೀಫ್ ಮಿನಿಸ್ಟರ್ ಹೀಗೆ ಮಾಡುತ್ತಾರೆಂದು ನನಗೆ ಗೊತ್ತಿರಲಿಲ್ಲ. ನಮ್ಮ ಜೀವನದಲ್ಲೂ ಕಷ್ಟ ಬಂದರೆ ನಾವು ಬೇರೆಯವರ ಕಷ್ಟದ ಬಗ್ಗೆ ಯೋಚಿಸಬೇಕೆಂಬ ಪಾಠವನ್ನು ಅವರಿಂದ ಕಲಿತೆ” ಎಂದು ಭಾವುಕರಾದರು.

”ನಾವು ಮನುಷ್ಯರು, ಅದರಲ್ಲೂ ಕನ್ನಡಿಗರು. ಯಾರೇ ಕಷ್ಟದಲ್ಲಿದ್ದರೂ ಅವರೊಂದಿಗೆ ಇರುವುದು ನಮ್ಮ ಕರ್ತವ್ಯ. ನಾವು ಅವರೊಂದಿಗೆ ಇದ್ದೆವು ಅಷ್ಟೇ. ಅದು ನಮ್ಮಿಂದ ಆದ ಸಹಾಯವೆಂದೇನೂ ನಾನು ಭಾವಿಸುವುದಿಲ್ಲ. ಅದು ನನ್ನ ಕರ್ತವ್ಯವಾಗಿತ್ತು. ಆದರೆ ರಾಕೇಶ್ ಅವರು ಬದುಕುಳಿಯಲಿಲ್ಲ ಎಂಬ ಕೊರಗು ನಮ್ಮನ್ನು ಸದಾ ಕಾಡುತ್ತಿರುತ್ತದೆ. ಭಗವಂತ ನೋವನ್ನು ಸಹಿಸುವ ಶಕ್ತಿಯನ್ನು ಸಿದ್ದರಾಮಯ್ಯ ಅವರ ಕುಟುಂಬಕ್ಕೆ ನೀಡಲಿ”.

source : ಶಿವಕುಮಾರ ಮೆಣಸಿನಕಾಯಿ, ಕನ್ನಡಪ್ರಭ