ಬೆಂಗಳೂರು-ಚೆನ್ನೈ ಇಂಡಸ್ಟ್ರಿಯಲ್ Corridor ಮಾಸ್ಟರ್ ಪ್ಲ್ಯಾನ್ ಸಿದ್ಧ. 2 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿ.

0
785

ಚೆನ್ನೈ: ಪದೇ ಪದೇ ಬಜೆಟ್ನಲ್ಲಿ ಪ್ರಸ್ತಾಪವಾಗುತ್ತಿದ್ದ ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ನ ನೀಲನಕ್ಷೆ ಸಿದ್ಧವಾಗಿದೆ. ಇದರ ಪ್ರಕಾರವೇ ಹೇಳುವುದಾದರೆ ಇನ್ನು ಮುಂದೆ ಬೆಂಗಳೂರಿನಿಂದ ಚೆನ್ನೈಗೆ ನೀವು ಪ್ರಯಾಣಿಸುವಾಗ ದೊಡ್ಡ ದೊಡ್ಡ ಕೈಗಾರಿಕಾ ಕಂಪೆನಿಗಳನ್ನು ನೋಡಬಹುದು. ಅವಕಾಶ ಸಿಕ್ಕಿದರೆ ನೀವು ಈ ಕಂಪೆನಿಯಲ್ಲೇ ಉದ್ಯೋಗವನ್ನು ಪಡೆಯಬಹುದು. ಯಾಕೆಂದರೆ ಮುಂದಿನ 20 ವರ್ಷದಲ್ಲಿ 2 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗಾವಕಾಶವೂ ಇದರಿಂದ ಲಭ್ಯವಾಗಲಿದೆ.

ಹೌದು, ಆಯಾ ರಾಜ್ಯದ ಆಯಾ ಪ್ರದೇಶಗಳ ಭೌಗೋಳಿಕತೆಗೆ ಅನುಗುಣವಾಗಿ ಬೆಂಗಳೂರು-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ನ ಮಾಸ್ಟರ್ ಪ್ಲ್ಯಾನ್ ಸಿದ್ಧಗೊಂಡಿದೆ. ಜಪಾನೀಸ್ ಇಂಟರ್ನ್ಯಾಷನಲ್ ಕಾರ್ಪೋರೇಷನ್ ಏಜೆನ್ಸಿ(ಜೆಐಸಿಎ) ಮಾಸ್ಟರ್ ಪ್ಲ್ಯಾನ್ ಸಿದ್ಧ ಪಡಿಸಿದೆ. ಕೇಂದ್ರ ಸರ್ಕಾರದ ಮನವಿಯ ಮೇರೆಗೆ ಮಾಸ್ಟರ್ ಪ್ಲ್ಯಾನ್ ಸಿದ್ಧಗೊಂಡಿದ್ದು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಒಟ್ಟು 30 ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕೈಗಾರಿಕೆಗಳು ತಲೆ ಎತ್ತಲಿದೆ.

ರಾಜ್ಯದ 4 ಜಿಲ್ಲೆಗಳು ಈ ಕಾರಿಡಾರ್ನಲ್ಲಿ ಸ್ಥಾನ ಪಡೆಯಲಿವೆ. ಬೆಂಗಳೂರು ನಗರ, ರಾಮನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ಮೂಲಕ ಕಾರಿಡಾರ್ ಹರಿದುಹೋಗಲಿದೆ. ಮುಂದಿನ 20 ವರ್ಷದಲ್ಲಿ 2.2 ಕೋಟಿ ಜನರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವವಾಗಿದೆ. ತಮಿಳುನಾಡು ಈ ಕಾರಿಡಾರ್ಗಾಗಿ 1,558 ಕೋಟಿ ರೂ. ಬಂಡವಾಳ ಹೂಡಲಿದೆ.

ನೀರಿನದ್ದೇ ಸಮಸ್ಯೆ: ಮಾಸ್ಟರ್ ಪ್ಲಾನ್ ಸಿದ್ಧ ಪಡಿಸಿದ ಸಂಸ್ಥೆ ನೀರಿನ ಅಭಾವವನ್ನು ತೋರಿಸಿದ್ದು, 2018ಕ್ಕೆ 2013ರಲ್ಲಿ ಇದ್ದ ನೀರಿನ ಬೇಡಿಕೆ ಶೇ.119ರಷ್ಟು ಬೇಕಾಗುತ್ತದೆ ಎಂದು ಅಂದಾಜಿಸಿದೆ. 2023ಕ್ಕೆ ಶೇ.133ರಷ್ಟು ಬೇಕು, 2033ಕ್ಕೆ 2013ರಲ್ಲಿ ಇದ್ದ ಶೇ.160ರಷ್ಟು ನೀರಿನ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಯಾವ ರಾಜ್ಯದಲ್ಲಿ ಏನು?

 • ಕರ್ನಾಟಕ
 • ಬೆಂಗಳೂರು ನಗರ: ಮಾಹಿತಿ ತಂತ್ರಜನ, ಫಾರ್ಮಾ
 • ರಾಮನಗರ: ಆಟೋಮೊಬೈಲ್ಸ್, ಮೆಡಿಕಲ್ ಸಾಧನಗಳು
 • ಚಿತ್ರದುರ್ಗ: ಲೋಹ
 • ತುಮಕೂರು: ಲೋಹ
 • ಆಂಧ್ರಪ್ರದೇಶ
 • ಅನಂತಪುರ: ಲೋಹ
 • ನೆಲ್ಲೂರು: ಲೋಹ, ಆಹಾರ ಸಂಸ್ಕರಣೆ
 • ಚಿತ್ತೂರು: ಆಟೋಮೊಬೈಲ್, ಲೋಹ, ಆಹಾರ ಸಂಸ್ಕರಣೆ, ಎಲೆಕ್ಟ್ರಿಕಲ್ ಯಂತ್ರ
 • ತಮಿಳುನಾಡು:
 • ತಿರುವಳ್ಳೂರು: ಆಟೋಮೊಬೈಲ್, ಲೋಹ, ಕೆಮಿಕಲ್ ಮತ್ತು ಪೆಟ್ರೋಲಿಯಂ, ಟೆಕ್ಸ್ ಟೈಲ್ಸ್
 • ಚೆನ್ನೈ: ಆಟೋಮೊಬೈಲ್, ಕಂಪ್ಯೂಟರ್ ಎಲೆಕ್ಟ್ರಾನಿಕ್ಸ್
 • ಕಾಂಚೀಪುರಂ: ಫಾರ್ಮಾ, ಆಟೋಮೊಬೈಲ್ಸ್, ಎಲೆಕ್ಟ್ರಿಕಲ್ ಯಂತ್ರೋಪಕರಣ, ಆಟೋಮೊಬೈಲ್, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್
 • ಕೃಷ್ಣಾಗಿರಿ: ಎಲೆಕ್ಟ್ರಿಕಲ್ ಯಂತ್ರ, ಮೆಡಿಕಲ್ ಸಾಧನ
 • ಧರ್ಮಪುರಿ: ಟೆಕ್ಸ್ ಟೈಲ್ಸ್
 • ತಿರುವಣ್ಣಾಮಲೈ: ಆಹಾರ ಸಂಸ್ಕರಣೆ