ಬೆಳ್ಳಿತಾರೆ ಪಿ.ವಿ. ಸಿಂಧುಗೆ CRPF ‘ಕಮಾಂಡೆಂಟ್’ ಗೌರವ!

0
661

ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುವನ್ನು ದೇಶದ ಅತಿದೊಡ್ಡ ಪ್ಯಾರಾಮಿಲಿಟರಿ ದಳವಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಗೌರವ ಕಮಾಂಡೆಂಟ್ ಆಗಿ ನೇಮಿಸಲು ನಿರ್ಧರಿಸಿದೆ.

ಜೊತೆಗೆ ಸಿ.ಆರ್.ಪಿ.ಎಫ್ ಕಮಾಂಡೆಂಟ್ ರ್ಯಾಂಕ್ ಅನ್ನು ಕೂಡ ನೀಡಿ ಗೌರವಿಸುತ್ತಿದೆ. ಈಗಾಗ್ಲೇ ಸಿಂಧುಗೆ ಕಮಾಂಡೆಂಟ್ ಹುದ್ದೆ ನೀಡುವ ಅಧಿಕೃತ ಪ್ರಸ್ತಾವನೆಯನ್ನು ಕೇಂದ್ರ ಗೃಹ ಇಲಾಖೆಗೆ ಸಿ.ಆರ್.ಪಿ.ಎಫ್ ಕಳಿಸಿಕೊಟ್ಟಿದೆ. ಗೃಹ ಸಚಿವಾಲಯದ ಸಮ್ಮತಿ ಬಳಿಕ ಸಿಂಧು ಅವರಿಗೆ ಕಮಾಂಡೆಂಟ್ ಸಮವಸ್ತ್ರ ಮತ್ತು ಬ್ಯಾಡ್ಜ್ ಗಳನ್ನು ನೀಡಿ ಸನ್ಮಾನಿಸಲಾಗುತ್ತದೆ.

ಕಮಾಂಡೆಂಟ್ ಹುದ್ದೆ ಎಸ್ಪಿ ಹುದ್ದೆಗೆ ಸರಿಸಮನಾದದ್ದು, ಅವರು 1000 ಬೆಟಾಲಿಯನ್ ಗಳ ಮುಖ್ಯಸ್ಥರಾಗಿರುತ್ತಾರೆ. ದೇಶದ ವಿವಿಧ ಭದ್ರತಾ ಪಡೆಗಳು ಸಿಂಧು ಅವರನ್ನು ಈ ಹುದ್ದೆಗಾಗಿ ಆಯ್ಕೆ ಮಾಡಿವೆ, ಕಾರಣ ಅವರು ಸೈನಿಕರಿಗೆ ಪ್ರೇರಣೆಯಾಗಬಲ್ಲರು ಮತ್ತು ಮಹಿಳಾ ಸಬಲೀಕರಣದ ಸಂದೇಶವನ್ನೂ ಸಾರಿದಂತಾಗುತ್ತದೆ ಅನ್ನೋದು.

ಬ್ರಾಂಡ್ ಅಂಬಾಸಿಡರ್ ಕೂಡ ಆಗಿರೋದ್ರಿಂದ ಸಿಂಧು, ಆಗಾಗ ಯೋಧರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೆಲ ವರ್ಷಗಳ ಹಿಂದಷ್ಟೆ ಬಿ.ಎಸ್.ಎಫ್, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿತ್ತು.

ಈ ಶಿಫಾರಸ್ಸಿಗೂ ಮುನ್ನ ಸಿಂಧು ಅವರ ಅಭಿಪ್ರಾಯ ಪಡೆಯಲಾಗಿತ್ತು ಎಂದು ಸಿಆರ್ಪಿಎಫ್ ಹೇಳಿದೆ.

ಸಿಆರ್ಪಿಎಫ್ ನ ಕಮಾಂಡೆಂಟ್ ರ್ಯಾಂಕ್, ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಮಟ್ಟದ ಸ್ಧಾನವಾಗಿದ್ದು ಫೀಲ್ಡ್ ಆಪರೇಷನ್ ವೇಳೆ 1 ಸಾವಿರ ಸದಸ್ಯರ ಬೆಟಾಲಿಯನ್ ಅನ್ನು ಮುನ್ನಡೆಸುವ ಕಮಾಂಡ್ ಅಧಿಕಾರಿಯಾಗಲಿದ್ದಾರೆ.

 BMW ಕಾರ್ ಗಿಫ್ಟ್ :

ಮೊನ್ನೆಯಷ್ಟೆ ರಿಯೋ ಒಲಿಂಪಿಕ್ಸ್ ನಲ್ಲಿ ಸಾಧನೆ ಮಾಡಿದ ಭಾರತದ ಕ್ರೀಡಾಪಟುಗಳು ಹಾಗೂ ಕೋಚ್ ಪುಲ್ಲೇಲಾ ಗೋಪಿಚಂದ್ ಅವರಿಗೆ BMW ಕಾರು ಕೊಟ್ಟು ಗೌರವಿಸಲಾಯ್ತು.

ಕ್ರೀಡಾ ಸಾಧಕರಿಗೆಲ್ಲ ಕಾರಿನ ಕೀಲಿ ಕೊಟ್ಟು ಸನ್ಮಾನಿಸಿದವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಹಾಗಾಗಿ ಈ ಕೊಡುಗೆ ಸಚಿನ್ ಅವರದ್ದು ಅಂತಾನೇ ಬಹುತೇಕರ ಭಾವನೆ. ಆದ್ರೆ ಈ BMW ಕಾರ್ ಗಳಿಗೆ ಹಣ ಕೊಟ್ಟವರು ಸಚಿನ್ ಅಲ್ಲ. ಹೈದ್ರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಅಧ್ಯಕ್ಷ ಚಾಮುಂಡೇಶ್ವರಿನಾಥ್.

ಇವರು ಕೂಡ ಮಾಜಿ ಕ್ರಿಕೆಟ್ ಆಟಗಾರ, ಸಚಿನ್ ಅವರ ಖಾಸಾ ದೋಸ್ತ್. ಹಾಗಾಗಿ ತೆಂಡೂಲ್ಕರ್ ಅವರ ಕೈಯ್ಯಲ್ಲೇ ಉಡುಗೊರೆಯನ್ನು ಆಟಗಾರರಿಗೆ ಕೊಡಮಾಡಿಸಿದ್ದಾರೆ. 2012 ರಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ ನೆಹ್ವಾಲ್ ಗೆ ಕೂಡ BMW ಕಾರ್ ಗಿಫ್ಟ್ ಕೊಟ್ಟಿದ್ದರು. ಆಗ ಕೂಡ ಸಚಿನ್ ತಮ್ಮ ಸ್ವಂತ ಹಣದಿಂದ ಕಾರು ಖರೀದಿಸಿ ಕೊಟ್ಟಿದ್ದಾರೆಂದೇ ಎಲ್ಲರೂ ನಂಬಿದ್ದರು. ಆದ್ರೆ ಅದಕ್ಕೂ ಹಣ ಕೊಟ್ಟವರು ಚಾಮುಂಡೇಶ್ವರಿನಾಥ್ ಅವರೇ. ಇದುವರೆಗೆ 13 ಕ್ರೀಡಾಪಟುಗಳಿಗೆ ಚಾಮುಂಡೇಶ್ವರಿನಾಥ್ BMW ಕಾರ್ ಕೊಟ್ಟು ಸನ್ಮಾನಿಸಿದ್ದಾರೆ.