ಸೌಂದರ್ಯವೃದ್ಧಿಗೆ ಸೌತೆಕಾಯಿ

0
1789

ಜಗತ್ತಿನ ಎಲ್ಲ ಭಾಗಗಳಲ್ಲೂ ಬೆಳೆಯುವ ಸೌತೆಕಾಯಿ, ಆರೋಗ್ಯಪೂರ್ಣ ಜೀವನಕ್ಕೆ ಅತ್ಯಂತ ಸಮೃದ್ಧ ತರಕಾರಿ. ಸಂಪೂರ್ಣ ಆರೋಗ್ಯಕ್ಕೆ ಅದರ ಸೇವನೆ ತುಂಬ ಸಹಕಾರಿ. ಹೇರಳ ನಾರಿನಾಂಶ ಹೊಂದಿರುವುದರ ಜೊತೆಗೆ ಕಡಿಮೆ ಕ್ಯಾಲೋರಿ ಇರುವ ಸೌತೆಕಾಯಿಯನ್ನು ಹಸಿಯಾಗಿ ಅಥವಾ ಸಲಾಡ್ ರೂಪದಲ್ಲಿ ಸೇವಿಸುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ.

ಆದರೆ ಸೌತೆಕಾಯಿ ಬಳಸಿ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು ಎಂಬುದು ಗೊತ್ತೇ?

ಹಾಗಿದ್ದರೆ ಮಾಡಿ ನೋಡಿ ಸೌತೆ ಮೋಡಿ. ನೈಸರ್ಗಿಕ ಟೋನರ್‍ಸೌತೆಕಾಯಿ ಹೋಳುಗಳೊಂದಿಗೆ ಪುದಿನಾ ಮತ್ತು ನೀರು ಬೆರೆಸಿ ರುಬ್ಬಿ ಸೋಸಿ ಒಂದು ದಿನ ಫ್ರಿಜ್‍ನಲ್ಲಿಡಿ. ನಂತರ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಮುಖಕ್ಕೆ ಲೇಪಿಸಿ ಒಣಗಿದ ನಂತರ ಮುಖ ತೊಳೆಯುತ್ತಾ ಬಂದಲ್ಲಿ ಮುಖದ ಜಿಡ್ಡಿನಂಶ ಕಡಿಮೆಯಾಗುತ್ತದೆ. ಸೌತೆ ಪ್ಯಾಕ್‍ಸೌತೆಕಾಯಿ ಹೋಳಿನ ಜೊತೆ ನಿಂಬೆ ರಸ ಮತ್ತು ಶ್ರೀಗಂಧದ ಪುಡಿ ಸೇರಿಸಿ ರುಬ್ಬಿ. ಇದಕ್ಕೆ ಹಾಲಿನ ಪುಡಿ ಸೇರಿಸಿ ಮಿಶ್ರಣ ತಯಾರಿಸಿ. ಮುಖಕ್ಕೆ ತೆಳುವಾಗಿ ಲೇಪಿಸಿ. ಒಣಗಿದ ನಂತರ ಮುಖ ತೊಳೆಯುತ್ತ ಬಂದಲ್ಲಿ ಒಣಗಿದ ತ್ವಚೆಗೆ ಆದ್ರ್ರತೆ ದೊರೆಯುತ್ತದೆ. ಮುಖದ ಸುಕ್ಕೂ ನಿವಾರಣೆಯಾಗುತ್ತದೆ. ಚರ್ಮ ಉರಿ ಹಾಗು ಸನ್‌ಬರ್ನ್ಸಗಳಲ್ಲಿಯೂ ಸೌತೆಕಾಯಿ ರಸ ತುಂಬ ಪ್ರಯೋಜನಕ್ಕೆ ಬರುತ್ತದೆ.

ಕಣ್ಣುಗಳಿಗೆ ಟಾನಿಕ್‍

ಅತೀಯಾಗಿ ಟಿವಿ ಅಥವಾ ಕಂಪ್ಯೂಟರ್ ಬಳಕೆಯಿಂದ ಕಣ್ಣುಗಳು ಉಬ್ಬಿದಂತೆ ಕಾಣುತ್ತಿವೆಯೇ? ಹಾಗಿದ್ದರೆ ಸೌತೆಕಾಯಿ ಹೋಳು ನೀರು ಹಾಕಿ ರುಬ್ಬಿ ಸೋಸಿ. ಈ ರಸದಲ್ಲಿ ಕಾಟನ್ ಅದ್ದಿ ಕಣ್ಣಿನ ಮೇಲೆ ಇಟ್ಟು ಅರ್ಧ ಗಂಟೆ ವಿರಮಿಸಿ. ಇದರಿಂದ ಉಬ್ಬಿದ ಕಣ್ಣುಗಳಿಗೆ ವಿಶ್ರಾಂತಿ ದೊರೆಯುತ್ತದೆ. ಕಣ್ಣುಗಳ ಸ್ನಾಯುಗಳಿಗೂ ಬಲ ಬರುತ್ತದೆ.

ಬಹೂಪಯೋಗಿ ಸೌತೆಕಾಯಿ

ಪ್ರತಿಶತ ೯೦ರಷ್ಟು ನೀರಿನ ಅಂಶ ಹೊಂದಿದ ಸೌತೆಕಾಯಿ ನಿಮ್ಮ ದೇಹದ ನಿರ್ಜಲೀಕರಣವನ್ನು ಯಶಸ್ವಿಯಾಗಿ ನೀಗಿಸುತ್ತದೆ. ಶರೀರವನ್ನು ತಂಪುಗೊಳಿಸಿ ಮನಸ್ಸಿಗೆ ಉತ್ಸಾಹವನ್ನು ತುಂಬುತ್ತದೆ. ಹೊಟ್ಟೆಯುರಿ, ಎದೆಯುರಿಗಳನ್ನು ಶಮನಗೊಳಿಸುತ್ತದೆ. ನೀವು ಸ್ಥೂಲ ಕಾಯದವರಾಗಿದ್ದರೆ ಸೌತೆಕಾಯಿ ಸೇವನೆ ತುಂಬ ಪರಿಣಾಮಕಾರಿ. ನಿತ್ಯ ಸೇವನೆಯಿಂದ ನಿಮ್ಮ ತೂಕವನ್ನು ತಕ್ಕ ಮಟ್ಟಿಗೆ ಕಡಿಮೆಗೊಳಿಸಿಕೊಳ್ಳಬಹುದು.

ಬರೀ ಆರೋಗ್ಯದ ವಿಷಯದಲ್ಲಿ ಮಾತ್ರ ಅಲ್ಲ ಬೇರೆ ವಿಷಯದಲ್ಲೂ ಸೌತೆಕಾಯಿಂದ ಪ್ರಯೋಜನ ಪಡೆಯಬಹುದು. ನಿಮ್ಮ ಮನೆಯ ಕನ್ನಡಿ ಕಲೆಗಳಿಂದ ಮಂಕಾಗಿದ್ದರೆ, ಅದನ್ನು ಸೌತೆಕಾಯಿ ಹೋಳುಗಳಿಂದ ತಿಕ್ಕಿ ಸ್ವಚ್ಛಗೊಳಿಸಬಹುದು. ನಿಮ್ಮ ಮನೆಯ ಬಾಗಿಲು-ಕಿಡಕಿಗಳ ಹಿಂಜಿಸ್‌ಗಳು, ಮುಚ್ಚುವಾಗ ತೆರೆಯುವಾಗ ಕರ್ಣಕಠೋರವಾದ ಕೀಜಲು ಸ್ವರವನ್ನು ಹೊರಡಿಸುತ್ತಿದ್ದರೆ; ಸೌತೆಕಾಯಿ ಅದಕ್ಕೂ ಪರಿಹಾರ ನೀಡಬಲ್ಲದು. ಹಿಂಜಿಸ್ಸುಗಳಿಗೆ ಸೌತೆಕಾಯಿ ರಸವನ್ನು ಸವರಿ. ಬಾಗಿಲುಗಳು ಸದ್ದಿಲ್ಲದೇ ಮುಚ್ಚಿ ತೆರೆಯುತ್ತವೆ.