ಅಪ್ಪನನ್ನೇ ಮೀರಿಸಿದ ಮಗ: ಉಚ್ಛಾಟನೆ ವಾಪಸ್ ಪಡೆದು `ಮುಲಾಮ್‍’ ಹಚ್ಚಿದ ಯಾದವ್‍

0
729

ಮಗ ತನ್ನನ್ನು ಮೀರಿದಾಗಲೇ ಅಪ್ಪನಿಗೆ ಸಂತೋಷ. ಶಿಷ್ಯ ಗುರುವನ್ನು ಮೀರಿಸಿದಾಗಲೇ ಗುರುವಿಗೆ ಸಾರ್ಥಕತೆ. ಆದರೆ ರಾಜಕೀಯದಲ್ಲಿ ಇದು ಅರಗಿಸಿಕೊಳ್ಳಲಾಗದ ಸತ್ಯ. ಆದರೆ ಪರಿಸ್ತಿತಿಗೆ ತಕ್ಕಂತೆ ವರ್ತಿಸಬೇಕಾದ ಅನಿವಾರ್ಯತೆ.

ಹೌದು, ಇದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಲ್ಲಿ ಒಂದೇ ದಿನದಲ್ಲಿ ಆದ ನಾಟಕೀಯ ತಿರುವುಗಳು ಈ ಮಾತನ್ನು ಅಕ್ಷರಶಃ ನಿಜವಾಗಿಸುತ್ತಿದೆ.

ತನಗೇ ಸೆಡ್ಡು ಹೊಡೆಯುತ್ತಿದ್ದಾನೆ ಎಂಬ ಕಾರಣಕ್ಕೆ ಮುಲಾಯಂ ಸಿಂಗ್‍ ಯಾದವ್‍, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್‍ ಯಾದವ್‍ ತನ್ನ ಪುತ್ರ ಎಂಬುದನ್ನೂ ಮರೆತು ಪಕ್ಷದಿಂದಲೇ ಏಕಾಏಕಿ ಉಚ್ಚಾಟನೆ ಮಾಡುವ ನಿರ್ಧಾರ ಕೈಗೊಂಡರು. ಆದರೆ 24 ಗಂಟೆ ಕಳೆಯುವ ಮುನ್ನವೇ ಅಖಿಲೇಶ್‍ ಮತ್ತು ಅವರ ಬೆಂಬಲಕ್ಕೆ ನಿಂತಿದ್ದ ರಾಮ್‍ಗೋಪಾಲ್‍ ಯಾದವ್‍ ಅವರನ್ನು ಪಕ್ಷಕ್ಕೆ ವಾಪಸ್‍ ಕರೆಸಿಕೊಳ್ಳಲಾಯಿತು.

ಮುಲಾಯಂ ಸಿಂಗ್‍ ಅವರ ಈ ಅನಿರೀಕ್ಷಿತ ನಿರ್ಧಾರಕ್ಕೆ ಅಖಿಲೇಶ್‍ ಪರೋಕ್ಷವಾಗಿ ನೀಡಿದ ತಿರುಗೇಟು ಕಾರಣ. ತಮ್ಮನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ತಿಳಿದ ಕೆಲವೇ ಗಂಟೆಗಳಲ್ಲಿ ಅಖಿಲೇಶ್‍, 229 ಶಾಸಕರ ಪೈಕಿ 200ಕ್ಕೂ ಅಧಿಕ ಶಾಸಕರನ್ನು ಒಟ್ಟುಗೂಡಿಸಿದರು. ಇದಲ್ಲದೇ ಸಾಕಷ್ಟು ಸಂಖ್ಯೆಯ ಎಂಎಲ್‍ಸಿಗಳು ಹಾಗೂ ಪಕ್ಷದ ಹಿರಿಯ ನಿಷ್ಠಾವಂತರೂ ಈ ಗುಂಪಿನಲ್ಲಿ ಗುರುತಿಸಿಕೊಂಡಿದ್ದು ಮುಲಾಯಂಗೆ ಜೀರ್ಣಿಸಿಕೊಳ್ಳಲು ಆಗಲೇ ಇಲ್ಲ.

ಅಲ್ಲದೇ ಅಖಿಲೇಶ್‍ ಉಚ್ಛಾಟನೆ ವಿರುದ್ಧ ಯುವಪಡೆ ಸೆಟೆದು ನಿಂತಿತ್ತು. ರಾತ್ರಿಯೀಡಿ ಮುಲಾಯಂ ಅವರ ನಿವಾಸದ ಎದುರು ನಿಂತು ಪ್ರತಿಭಟನೆ ನಡೆಸಿತು.

ತನ್ನ ವಿರುದ್ಧ ನಿಂತ ಮಗನ ಬೆಂಬಲಕ್ಕೆ ಇಷ್ಟು ದೊಡ್ಡ ಸಂಖ್ಯೆಯ ದೊಡ್ಡ ಪಡೆಯನ್ನೇ ನೋಡಿ ಮುಲಾಯಂ ಸಿಂಗ್‍ ಕೂಡಲೇ ಉಚ್ಛಾಟನೆಯ ನಿರ್ಧಾರವನ್ನು ಅನಿವಾರ್ಯವಾಗಿ ವಾಪಸ್‍ ಪಡೆಯಲೇಬೇಕಾಯಿತು. ಇದರೊಂದಿಗೆ ವಿಕೋಪಕ್ಕೆ ಹೋಗಬೇಕಿದ್ದ ಅಪ್ಪ-ಮಗನ ರಾಜಕೀಯ ಜಿದ್ದಾಜಿದ್ದಿ ಉಪಶಮನವಾಗಿದೆ.