ವಕ್ರದಂತ ಚಿಕಿತ್ಸೆ- ಈಗ ಮತ್ತಷ್ಟು ಸಲೀಸು!!

0
842

ದೇಶ ಭಾಷೆಯನ್ನು ಹೇಳುವ ಮುಖಚರ್ಯೆ ಸದಾ ಸುಂದರವಾಗಿ ಬೇಕೆಂಬುದೇ ಪ್ರತಿಯೊಬ್ಬರ ಆಸೆ. ಆದರೆ ಮುಖದ ಅಂದವನ್ನೇ ಕೆಡಿಸುವ ವಕ್ರಹಲ್ಲು ನಿಜಕ್ಕೂ ಕೆಲವೊಮ್ಮೆ ಆತ್ಮಸ್ಥೈರ್ಯವನ್ನೇ ಕುಗ್ಗಿಸಿಬಿಡುತ್ತದೆ. ಅಂಕುಡೊಂಕಾದ, ಸೊಟ್ಟ ಹಲ್ಲು ಕೇವಲ ತೋರಿಕೆಗೆ ಅಷ್ಟೇ ಹಾನಿ ಮಾಡದೆ ಆರೋಗ್ಯಕ್ಕೂ ಸಂಚಕಾರ ತಂದೊಡ್ಡುತ್ತದೆ. ಅತೀ ಮೂಳೆ ಸವೆತ, ಸಡಿಲ ಹಲ್ಲು… ಮುಂತಾದ ಹಲವಾರು ಸಮಸ್ಯೆಗಳಿಗೆ ದಾರಿ ಮಾಡಿಕೊಡುವ ಈ ವಕ್ರದಂತ ಸಮಸ್ಯೆ ಸರಿಪಡಿಸಿಕೊಳ್ಳಲು ಎಲ್ಲರೂ ಇಚ್ಛಿಸುತ್ತಾರೆ ಮತ್ತು ಮುಂದಾಗುತ್ತಾರೆ. ಆದರೆ ಬಾಯಿ ತುಂಬ ಕಟ್ಟುವ ವಕ್ರದಂತ ಗುಂಡಿ (ಬಟನ್), ತಂತಿ, ಎಲೆಸ್ಟಿಕ್ ಬ್ಯಾಂಡ್, ಬ್ರಾಕೆಟ್‍ಗಳು…ತಿಂಗಳುಗಟ್ಟಲೇ ಅದನ್ನು ಧರಿಸುವ ಪಾಲಿಸುವ, ಮುರಿಯದಂತೆ ಕಾಪಾಡಿಕೊಳ್ಳುವ ಅನಿವಾರ್ಯತೆ ಇರುತ್ತದೆ.
ಈ ಎಲ್ಲಾ ರಗಳೆಗಳಿಂದ ಬಹಳಷ್ಟು ಜನರು ಇಷ್ಟಪಟ್ಟರೂ ಚಿಕಿತ್ಸೆಗೆ ಮುಂದಾಗದೇ ಹಿಂಜರಿಯುತ್ತಾರೆ ಮತ್ತು ಸಮಸ್ಯೆಗಳಿಂದ ತೊಳಲಾಡುತ್ತಾರೆ. ಇಂತಹ ಸನ್ನಿವೇಶದಲ್ಲಿ ಈ ವಿಧಾನ ಬಿಟ್ಟು ಬೇರೆ ಆಯ್ಕೆಗಳ ಬಗ್ಗೆ ಸಹಜವಾಗಿ ಯೋಚಿಸುತ್ತಾರೆ. ಅಂತಹವುಗಳಿಗೆ ಪರಿಹಾರವಾಗಿ ಬಂದಿರುವ ಇಸ್ವಿಸಾಲ್ಜಿನ್, ಚಿಕಿತ್ಸೆ ನಿಜಕ್ಕೂ ವರದಾನವಾಗಿದೆ. ದಂತ ನ್ಯೂನತೆಗಳು, ವಕ್ರದಂತ ಸಮಸ್ಯೆ, ದಂತ ಪುನರ್ರಚನೆಯನ್ನು ಪರಿಣಾಮಕಾರಿಯಾಗಿ ಮಾಡುತ್ತದೆ. ಸಾಂಪ್ರದಾಯಿಕ ಲೋಹದ ಪಟ್ಟಿ (ಮೆಟಾಲಿಕ್ ಬ್ರೇಸಿಂಗ್)ಗೆ ಪರ್ಯಾಯವಾಗಿ ಮತ್ತು ಅಷ್ಟೇ ಸಮರ್ಥವಾಗಿ ಈ ಚಿಕಿತ್ಸಾ ವಿಧಾನ ಕಾರ್ಯ ನಿರ್ವಹಿಸುತ್ತದೆ. ಈ ಹೊಸ ನೂತನ ಸುಧಾರಿತ ತಂತ್ರಜ್ಞಾನದಿಂದ ಹಳೆ ಚಿಕಿತ್ಸಾ ವಿಧಾನಗಳಿಂದ ಆಗುತ್ತಿದ್ದ ತೊಂದರೆಗಳಿಗೆ ವಿದಾಯ ಹೇಳಬಹುದಾಗಿದೆ. “ಇನ್‍ವಿಸಾಲ್ಜಿನ್’’ ಚಿಕಿತ್ಸಾ ವಿಧಾನದಲ್ಲಿ ನೀವು ಚಿಕಿತ್ಸೆ ಪಡೆಯುತ್ತಿದ್ದರೂ ಯಾರಿಗೂ ತಿಳಿಯುವುದೇ ಇಲ್ಲ.

ಚಿಕಿತ್ಸಾ ವಿಧಾನ: ಮೆಟಾಲಿಕ್ ಬ್ರೇಸಸ್‍ನಲ್ಲಿ ಹಲ್ಲಿನ ಮೇಲೆ ಬೇಸ್ (ಬಟನ್) ಅಳವಡಿಸಿ ತಂತಿ ಬಿಗಿಯಬೇಕಾಗಿತ್ತು. ಆದರೆ ಈ ಚಿಕಿತ್ಸಾ ವಿಧಾನದಲ್ಲಿ ಹಲ್ಲುಗಳನ್ನು ಚಿಕಿತ್ಸಾ ಕ್ರಮದ ಮೂಲಕವೇ ನೇರಗೊಳಿಸಲಾಗುತ್ತದೆ. ಕಂಪ್ಯೂಟರ್‍ನ ಮೂಲಕ ಮೊದಲಿಗೆ ದವಡೆ, ವಸಡು, ಹಲ್ಲು, ಮುಖದ ಆಕಾರ, ರಚನೆಯನ್ನು ದಾಖಲಿಸಿಕೊಂಡು ಅದಕ್ಕೆ ತಕ್ಕಂತೆ ಚಿಕಿತ್ಸಾ ಪಟ್ಟಿಯ ವಿನ್ಯಾಸ, ಚಿಕಿತ್ಸಾ ವಿಧಾನ, ಸಂರಚನೆಯನ್ನು ದಂತ ವೈದ್ಯರು ರೂಪಿಸುತ್ತಾರೆ. ಅದಕ್ಕೆ ತಕ್ಕಂತೆ ಸಾಲು ಪಂಕ್ತಿ ಜೋಡಣೆಯನ್ನು ಪ್ಲಾಸ್ಟಿಕ್/ತೆಳು ಆಕ್ರಾಲಿಕ್, ರಬ್ಬರ್ ಆಧಾರಿತವಾಗಿ ಮಾಡಲಾದ ಅಲೈನರ್ (ಸರಿಪಡಿಸುವ ಪ್ಲಾಸ್ಟಿಕ್ ಪಾರದರ್ಶಕ ಪ್ಲೇಟ್‍ನ ಮೂಲಕ ಹಲ್ಲುಗಳನ್ನು ನಿರ್ದಿಷ್ಟ ದಿಕ್ಕು, ಸ್ಥಳದಲ್ಲಿ ಅಳವಡಿಸಲಾಗುತ್ತದೆ. ಸಾಂಪ್ರದಾಯಿಕ ಲೋಹದ ಪಟ್ಟಿ, ತಂತಿಯ ಬಳಕೆ ಇದರಲ್ಲಿ ಇರುವುದಿಲ್ಲ. ಈ ಇನ್‍ವಿಸಾಲ್ಜಿನ್ ಚಿಕಿತ್ಸಾ ಕ್ರಮದಿಂದ ನಮಗೆ ಬೇಕಾದ ವಿಧಾನದಲ್ಲಿ ಚಿಕಿತ್ಸೆಯನ್ನು ಮಾಡಬಹುದಾಗಿದ್ದು ಈ ಕ್ರಮದ ಬಳಕೆಯಿಂದ ವಕ್ರದಂತ ಪಂಕ್ತಿಗಳನ್ನು ಸೂಕ್ತ ಸ್ಥಳದಲ್ಲಿ ಜೋಡಿಸಬಹುದು.
ಈ ನವೀನ ಚಿಕಿತ್ಸಾ ವಿಧಾನ ಹೆಚ್ಚು ಅನುಕೂಲಕರ ಹಾಗೂ ಚಿಕಿತ್ಸೆಯ ಸಮಯದಲ್ಲಿ ಯಾರಿಗೂ ಗೋಚರಿಸದಿರುವುದು ಇದರ ಹೆಗ್ಗಳಿಕೆ, ಅಷ್ಟೇ ಅಲ್ಲದೆ ಪ್ರತಿನಿತ್ಯದ ದಂತ ಕಾಳಜಿ, ನಿರ್ವಹಣೆ, ಮುಕ್ತ ಮಾತುಕತೆಗೆ ಯಾವುದೇ ಅಡ್ಡಿಯಿಲ್ಲ.

ಇನ್‍ವಿಸಾಲ್ಜಿನ್ ಚಿಕಿತ್ಸೆ ವೈಶಿಷ್ಟ್ಯಗಳು-
ಹಲ್ಲುಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸುವ ಚಿಕಿತ್ಸಾ ವಿಧಾನ, ಬಾಯಲ್ಲಿ ದಂತ ದಟ್ಟಣೆ, ಹಲ್ಲುಗಳ ನಡುವೆ ಜಾಗ, ಹಲ್ಲಿನ ಮೇಲೆ ಹಲ್ಲು, ಸೊಟ್ಟ, ಅಂಕು ಡೊಂಕಾದ, ಮುಂಚಾಚಿದ, ಉಬ್ಬು ಹಲ್ಲು… ದವಡೆಯಲ್ಲಿ ಹಲ್ಲಿನ ಅಸಮರ್ಪಕ ಬೆಳವಣಿಗೆ… ಹೀಗೆ ವಕ್ರದಂತಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಸರಿಪಡಿಸಬಹುದು.
ಈ ಚಿಕಿತ್ಸೆಯನ್ನು ಕೇವಲ ಪರಿಣಿತ ವಕ್ರದಂತ ಚಿಕಿತ್ಸಕರು ಅಷ್ಟೇ ಮಾಡುತ್ತಾರೆ. ರೋಗಿಯ ಹಲ್ಲಿನ ಸಮಸ್ಯೆ ಮೊದಲಿಗೆ ವೈದ್ಯರು ವಿಶ್ಲೇಷಿಸಿ ಅದಕ್ಕೆ ತಕ್ಕಂತೆ ಅಲೈನರ್ (ಜೋಡಣಾ ಪಟ್ಟಿ) ತಯಾರಿಸಿ ಹಲ್ಲಿನ ಮೇಲೆ ಅಳವಡಿಸುತ್ತಾರೆ. ಇದು ಪ್ರತಿ ದಿನ ಹಾಕಿ-ತೆಗೆಯುವ ಪಾರದರ್ಶಕ ಪಟ್ಟಿಯಾಗಿದ್ದು ಧರಿಸಿದಾಗ ಯಾರಿಗೂ ಕಾಣಿಸುವುದಿಲ್ಲ. ದಿನದಿನವೂ ಸ್ವಲ್ಪವೇ ಹಲ್ಲನ್ನು ನಿಧಾನವಾಗಿ ಜರುಗಿಸುತ್ತದೆ. ಬೇಕಾದ ಜಾಗಕ್ಕೆ ತಳ್ಳುತ್ತದೆ. ಪ್ರತಿ 2-3 ವಾರಕ್ಕೊಮ್ಮೆ ಈ ಪಟ್ಟಿಯನ್ನು ವೈದ್ಯರು ಬದಲಾಯಿಸುತ್ತಾರೆ.