ವೀಕೆಂಡ್ ಗೆ ಹೇಳಿ ಮಾಡಿಸಿದ ಜಾಗ ದೇವರಾಯನ ದುರ್ಗಾ ಮತ್ತು ನಾಮದ ಚಿಲುಮೆ…

0
2004

Kannada News | kannada Useful Tips

ವೀಕೆಂಡ್ ಬಂತೆಂದರೆ ಬೆಂಗಳೂರಿಗರಿಗೆ ಹರ್ಷವೋ ಹರ್ಷ, ಬೆಂಗಳೂರಿನ ಕಾರ್ಬನ್ ತುಂಬಿದ ಗಾಳಿ ಕುಡಿದು ಶ್ವಾಸಕೋಶಗಳು ಬತ್ತಿ ಹೋಗುವುದಂತೂ ಗ್ಯಾರಂಟಿ, ಇಲ್ಲಿನ ಕಾಂಕ್ರೀಟ್ ಕಟ್ಟಡಗಳು, ಕೆಟ್ಟ ಟ್ರಾಫಿಕ್, ಕೊಳಚೆ ಚರಂಡಿ ನೋಡಿ ಕಣ್ಣು ಕೆಂಪಾಗುವುದಂತೂ ಖಂಡಿತ, ವಾಹನಗಳ ಕರ್ಕಶ ಶಬ್ದದಿಂದ ಕಿವಿ ನೋವಾಗದೆ ಇರುತ್ತಾವೆಯೇ…?

ಇದೆಲ್ಲದರಿಂದ ಬಿಡುಗಡೆ ಬೇಕೆಂದರೆ ನೀವು ದಾಬಸ್ ಪೇಟೆ ಮತ್ತು ತುಮಕೂರಿಗೆ ಹತ್ತಿರವಾಗಿರುವ ನಾಮದ ಚಿಲುಮೆಗೆ ಬೇಟಿ ಕೊಡಲೇ ಬೇಕು. ಇಲ್ಲಿನ ಹಸಿರು ಕಣ್ಣು ತಣಿಸುತ್ತದೆ. ಶುದ್ದಗಾಳಿ, ಕಾಡಿನ ಮೌನ ಮನತಣಿಸುತ್ತದೆ.ನಾಮದ ಚಿಲುಮೆ ಎಂಬ ಈ ಪುಟ್ಟ ಊರು ಬೆಂಗಳೂರಿನಿಂದ ಕೇವಲ ೭೦ ಕಿಲೋಮೀಟರ್ ದೂರವಿದೆ. ತುಮಕೂರಿನಿಂದ ೧೪ ಕಿಲೋಮೀಟರ್ ದೂರದಲ್ಲಿರುವ ನಾಮದ ಚಿಲುಮೆ ಮತ್ತು ಅದರ ಸನಿಹದಲ್ಲೇ ಇರುವ ದೇವರಾಯನ ದುರ್ಗ, ಬೆಂಗಳೂರಿಗರಿಗೆ ಐಡಿಯಲ್ ಪಿಕ್ನಿಕ್ ಸ್ಪಾಟ್.

ಅಂತೆಯೆ ಈ ಪ್ರದೇಶಕ್ಕೂ ಒಂದು ಕಥೆಯಿದೆ. ಇಲ್ಲಿ ಬಂಡೆಯೊಂದರಿಂದ ಹೊರಬರುವ ನೀರಿನ ಚಿಲುಮೆಯಿದೆ. ಹಿಂದೆ ರಾಮ ತನ್ನ ವನವಾಸದ ಕಾಲದಲ್ಲಿ ಇಲ್ಲಿ ಕೆಲಕಾಲ ತಂಗಿದ್ದನಂತೆ. ಒಂದು ದಿನ ಹಣೆಗೆ ತಿಲಕವನ್ನಿಡಲು ಸನಿಹದಲ್ಲೆಲ್ಲೂ ನೀರು ಸಿಗದಿರಲು ಕುಳಿತಿದ್ದ ಬಂಡೆಗೆ ಬಾಣ ಬಿಟ್ಟನಂತೆ . ಆಗ ಆ ಕಲ್ಲುಬಂಡೆಯಿಂದ ನೀರಿನ ಚಿಲುಮೆ ಚಿಮ್ಮಿತಂತೆ . ಆದ್ದರಿಂದಲೇ ಈ ಸ್ಥಳ ನಾಮದ ಚಿಲುಮೆ ಎಂದೇ ಪ್ರಖ್ಯಾತವಾಯಿತಂತೆ. ಎಂತಹ ಬೇಸಗೆಯಲ್ಲೂ ಇದು ಬತ್ತುವುದಿಲ್ಲವೆನ್ನುತ್ತಾರೆ ಸ್ಥಳೀಯರು. ಇಂತಹ ಯಾವುದೇ ಪ್ರಕೃತಿವಿಸ್ಮಯವನ್ನೂ ರಾಮಾಯಣ , ಮಹಾಭಾರತದ ಜೊತೆ ತಳಕುಹಾಕುವ ಅಭ್ಯಾಸ ನಮ್ಮ ದೇಶದ ಎಲ್ಲಾ ಪ್ರದೇಶಗಳಲ್ಲೂ ಕಂಡುಬರುತ್ತದೆ.

ಇಲ್ಲಿನ ಕಾಡನ್ನು ಅರಣ್ಯ ಇಲಾಖೆ ಜೈವಿಕವನವೆಂದು ಘೋಷಿಸಿದೆ. ಇಲ್ಲಿ ಜಿಂಕೆವನ ಕೂಡ ಇದೆ. ತಲೆಮೇಲೆ ಕಿರೀಟದಂತಹ ಕೊಂಬನ್ನು ಹೊತ್ತಿರುವ, ಕಂದು ಬಣ್ಣದ ಮೇಲೆ ಬಿಳಿ ಚುಕ್ಕಿಗಳಿಂದಲಕೃತವಾದ ಮೈಬಣ್ಣದ ಈ ಜಿಂಕೆಗಳನ್ನು ನೋಡುವುದೇ ಸೊಗಸು. ಸನಿಹದಲ್ಲೇ ಇರುವ ದೇವರಾಯನ ದುರ್ಗ ಕೂಡ ತುಂಬ ಸುಂದರವಾಗಿದೆ. ಬೆಟ್ಟದ ಮೇಲಿನಿಂದ ಕಾಣುವ ವಿಹಂಗಮ ನೋಟ ಪ್ರಪಂಚವನ್ನೇ ಮರೆಸುತ್ತದೆ.

ಅಲ್ಲಿನ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಮಂಗಗಳು ನಿಮ್ಮನ್ನು ಬರಮಾಡಿಕೊಳ್ಳುತ್ತವೆ, ಯಾರ ಕೈಯಲ್ಲಾದರೂ ಹಣ್ಣುಕಾಯಿಯ ಕವರ್ ಅಥವಾ ತಿಂಡಿ , ಸೌತೆಕಾಯಿ , ಹೀಗೆ ಏನೇ ಕಂಡರೂ ಅಡ್ಡಗಟ್ಟಿ ಹಲ್ಲುಕಿರಿದು ಹೆದರಿಸಿ ದೋಚಿಬಿಡುತ್ತವೆ. ಒಟ್ಟಿನಲ್ಲಿ ಬೆಂಗಳೂರಿನ ಜಂಜಡಗಳಿಂದ ಬೇಸರವಾಗಿದ್ದರೆ ಒಮ್ಮ ರಿಫ್ರೆಶ್ ಆಗಿಬರಲು ಮಲೆನಾಡಿನ ಅನುಭವ ನೀಡುವ ನಾಮದಚಿಲುಮೆ, ದೇವರಾಯನದುರ್ಗಕ್ಕೆ ಭೇಟಿ ನೀಡಬಹುದು.

ಇಲ್ಲಿ ಫಾರೆಸ್ಟ್ ಗೆಸ್ಟ್ ಹೌಸ್ ಒಂದಿದೆ. ಅದು ಬಿಟ್ಟರೆ ಬೇರಾವುದೇ ಹೋಟೆಲ್ ಗಳಾಗಲಿ ಅಂಗಡಿಗಳಾಗಲೀ ಇಲ್ಲ. ಆದ್ದರಿಂದ ಹೋಗುವವರು ಆಹಾರ, ನೀರು ತೆಗೆದುಕೊಂಡು ಹೋಗುವುದು ಉತ್ತಮ.

Also read: ಸುಂದರವಾದ ತ್ವಚೆ ಪಡೆಯಲು ಹಣ್ಣಿನ ಫೇಸ್ ಪ್ಯಾಕ್ ಬಳಸಿ