ಧರ್ಮಸ್ಥಳಕ್ಕೆ ಹೋಗಬೇಕಾದವರು ಮಸಣ ಸೇರಿದರು; ಭೀಕರ ಅಪಘಾತದಲ್ಲಿ 8 ಮಂದಿ ದಾರುಣ ಸಾವು..!

0
969

ನಸುಕಿನ ಜಾವ 3.30ರ ಸುಮಾರಿಗೆ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಬಳಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ 8 ಮಂದಿ ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದಾರೆ. 10 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಾಲಕ ಲಕ್ಷ್ಮಣ್(38), ಕಂಡಕ್ಟರ್ ಶಿವಪ್ಪ ಛಲವಾದಿ(36), ವೈದ್ಯಕೀಯ ವಿದ್ಯಾರ್ಥಿನಿ ಡಯಾನ(20), ಬೆಂಗಳೂರು ನಿವಾಸಿ ಗಂಗಾಧರ್(58) ಸೇರಿದಂತೆ ಇಬ್ಬರು ಮಹಿಳೆಯರು ಮತ್ತು 4 ಪುರುಷರು ಮೃತ ದುರ್ದೈವಿಗಳು. ಗಾಯಗೊಂಡವರನ್ನು ಹಾಸನ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃಷಿ ಕಾಲೇಜು ಬಳಿ ದುರ್ಘಟನೆ ಸಂಭವಿಸಿದೆ..ಪ್ರಯಾಣಿಕರೆಲ್ಲರು ನಿದ್ದೆಯಲ್ಲಿದ್ದರು. ಬಸ್ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿತ್ತು. ಬಸ್ಸಿನಲ್ಲಿ ಸುಮಾರು 40 ಪ್ರಯಾಣಿಕರಿದ್ದರು. ಅಪಘಾತವಾದ ಬಸ್ ಕಾಲೇಜ್ ಬಳಿ ಇರುವ ಪಕ್ಕದ ಹಳ್ಳಕ್ಕೆ ಬಿದ್ದಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಐರಾವತ ಬಸ್ ಅಪಘಾತಕ್ಕೀಡಾಗಿದೆ. ಜಿಲ್ಲಾಸ್ಪತ್ರೆಗೆ ಎಸ್ಪಿ ರಾಹುಲ್ ಕುಮಾರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ರು. ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.