ಮಂಡ್ಯದಲ್ಲಿ ನಡೆಯುತ್ತಿರುವ ಅಂಬರೀಶ್ ಅವರ 67ನೇ ಹುಟ್ಟುಹಬ್ಬ, ಹಾಗೂ ಸ್ವಾಭಿಮಾನಿ ಸಮಾವೇಶದಲ್ಲಿ ಐದು ಕ್ವಿಂಟಾಲ್ ಧಾರವಾಡ ಪೇಡಾ ಹಂಚಿದ ಅಭಿಮಾನಿ..

0
218

ದೇಶ ವಿದೇಶದಲ್ಲಿ ಸುದ್ದಿ ಮಾಡಿದ ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ ಸಂಭ್ರಮದಲ್ಲಿರುವ ಮಂಡ್ಯಕ್ಕೆ ಈಗ ಹಬ್ಬದ ವಾತಾವರಣ ಮೂಡಿದ್ದು. ರೆಬಲ್ ಸ್ಟಾರ್ ಅಂಬಿ ಜನ್ಮದಿನದ ಜೊತೆಗೆ, ‘ಸ್ವಾಭಿಮಾನಿ ವಿಜಯೋತ್ಸವ’ ದ ಮೂಲಕ ಇಂದು ಮತದಾರರಿಗೆ ಕೃತಜ್ಞತೆ ಅರ್ಪಿಸಲು ಸುಮಲತಾ ಅಂಬರೀಶ್ ಮುಂದಾಗಿದ್ದಾರೆ. ಈ ಸಂಭ್ರಮದಲ್ಲಿ ಜನರಿಗೆ ಹಂಚಲು ಉದ್ಯಮಿಯೊಬ್ಬರು ಐದು ಕ್ವಿಂಟಾಲ್ ಧಾರವಾಡ ಪೇಡಾವನ್ನು ತರಿಸಿದ್ದಾರೆ.

ಇಂದು ಅಂಬರೀಶ್ ಅವರ 67ನೇ ಹುಟ್ಟುಹಬ್ಬ. ಅವರಿಲ್ಲದ ಮೊದಲ ಹುಟ್ಟುಹಬ್ಬ. ಪ್ರತಿ ವರ್ಷ ಅಂಬರೀಶ್ ಹುಟ್ಟುಹಬ್ಬ ಎಂದರೆ ಅವರ ಮನೆಯ ಮುಂದೆ ಅಭಿಮಾನಿಗಳ ದೊಡ್ಡ ದಂಡೆ ನೆರೆದಿರುತ್ತಿತ್ತು. ಎಲ್ಲರೂ ಕೇಕ್​ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಆದರೆ, ಅವರಿಂದು ನಮ್ಮ ಜೊತೆ ಇಲ್ಲ. ಅದೇ ನೋವಿನಲ್ಲಿ ಅಭಿಮಾನಿಗಳು ಅವರ ಸಮಾಧಿಯತ್ತ ತೆರಳಿ ತಮ್ಮ ನೆಚ್ಚಿನ ನಟನಿಗೆ ಶುಭಕೋರುತ್ತಿದ್ದಾರೆ. ಹಾಗೆಯೇ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಪುತ್ರ ವಿರುದ್ದ ಬಾರಿ ಅಂತರದಲ್ಲಿ ಗೆಲುವು ಸಾಧಿಸಿರುವ ಸುಮಲತಾ ಅಂಬರೀಶ್ ಇಂದು ಮಂಡ್ಯದಲ್ಲಿ ಸ್ವಾಭಿಮಾನ ಸಮಾವೇಶ ಮತ್ತು ಅಂಬಿ ಹುಟ್ಟುಹಬ್ಬವನ್ನು ಹಮ್ಮಿಕೊಂಡಿದ್ದಾರೆ.

ಈ ಸಮಾರಂಭಕ್ಕೆ ಉದ್ಯಮಿ ನಾರಾಯಣ ಕಲಾಲ್ ಎನ್ನುವರು ಬಾಬುಸಿಂಗ್ ಠಾಕೂರ್ ಪೇಡಾ ಫ್ಯಾಕ್ಟರಿಯಲ್ಲಿ ತಯಾರಾಗಿರುವ ಪೇಡಾವನ್ನು ವಿಶೇಷ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿದ್ದು, ಈಗಾಗಲೇ ಮಂಡ್ಯ ತಲುಪಿವೆ. ಕಲಾಲ್ ಅವರು ಅಂಬರೀಶ್ ಜೊತೆ ಅತ್ಯಂತ ಸಮೀಪದ ಗೆಳತನವಿರುವ ಕಾರಣ ಅಂಬಿ ಮೇಲಿನ ಪ್ರೀತಿಗಾಗಿ ಈ ಪೇಡಾ ಮಾಡಿಸಿದ್ದು ವಿಶೇಷವಾಗಿದೆ. ಮಧ್ಯಾಹ್ನ ಸಮಾವೇಶದಲ್ಲಿ ಪೇಡಾವನ್ನು ಜನತೆಗೆ ಹಂಚಿಕೆ ಮಾಡಲಾಗುತ್ತದೆ. ಅಷ್ಟೇಅಲ್ಲದೆ ಮಂಡ್ಯದ ಹನಕೆರೆ ಶಶಿಕುಮಾರ್ ಎಂಬವರಿಂದ 20 ಸಾವಿರ ಲಡ್ಡು ತಯಾರಾಗಿದ್ದು, ಸಮಾವೇಶದಲ್ಲಿ ಭಾಗವಹಿಸುವವರಿಗೆ ಲಡ್ಡು ಹಾಗೂ ಪೇಡಾ ಹಂಚಲಾಗುತ್ತದೆ.

ಅಂಬರೀಶ್ ಅವರು ಯಶ್, ರಾಧಿಕಾ ದಂಪತಿಯ ಮಗುವಿಗೆ ಕಲಘಟಗಿ ತೊಟ್ಟಿಲು ನೀಡುವ ಸಂಬಂಧ ನಾರಾಯಣ ಕಲಾಲ್ ಅವರಿಗೆ ಫೋನ್ ಮಾಡಿದ್ದರು. ತನ್ನ ಬೇಡಿಕೆಗೆ ಅನುಗುಣವಾಗಿ ತೊಟ್ಟಿಲು ತಯಾರಿಸಿ ಕೊಡುವಂತೆ ಅಂಬಿ ಕಲಾಲ್ ಅವರಲ್ಲಿ ಕೇಳಿಕೊಂಡಿದ್ದರು. ಬಳಿಕ ನಾರಾಯಣ್ ಕಲಾಲ್ ಅವರು ಕಲಘಟಗಿಯ ಮೂಲದ ಶ್ರೀಧರ್ ಸಾವುಕಾರ್ ಅವರಲ್ಲಿ ತೊಟ್ಟಿಲಿಗೆ ಆರ್ಡರ್ ಮಾಡಿದ್ದರು. ಎನ್ನಲಾಗಿದೆ. ಬೆಂಗಳೂರಿನಲ್ಲಿ ಕೂಡ ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಮುಂಜಾನೆಯಿಂದಲೂ ಅವರ ಸಮಾಧಿಯತ್ತ ಆಗಮಿಸುತ್ತಿರುವ ಅಭಿಮಾನಿಗಳು ಸಮಾಧಿಗೆ ತರಹೇವಾರಿ ಹೂವಿನ ಅಲಂಕಾರ ಮಾಡಿದ್ದಾರೆ. ಅಲ್ಲಿಗೆ ಬರುವವರಿಗೆ ಊಟ ಹಾಗೂ ಸಿಹಿ ಹಂಚುವ ಕಾರ್ಯಕ್ರಮವೂ ಜೋರಾಗಿಯೇ ನಡೆದಿದೆ.

ಅಲ್ಲದೆ ಅಂಬಿ ನೆನಪಿನಲ್ಲಿ ರಕ್ತದಾನ, ನೇತ್ರದಾನ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ನೂತನ ಸಂಸದೆ ನಟಿ ಸುಮಲತಾ ಹಾಗೂ ನಟ ಅಭಿಷೇಕ್ ಸಮಾಧಿ ಬಳಿ ಆಗಮಿಸಿ. ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅಭಿಮಾನಿಗಳು ಸುಮಲತಾ ಅವರು ಚುನಾವಣೆಯಲ್ಲಿ ಗೆದ್ದು ಇಡಿ ಮಂಡ್ಯವೆ ಸಿಹಿಯಾಗಿದೆ. ಇನ್ನೂ ಐದು ವರ್ಷಗಳು ಜಿಲ್ಲೆಯ ತುಂಬಾ ಸಿಹಿಯೇ ಇರಲಿದೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.