ಬಿಗ್ ಬ್ರೇಕಿಂಗ್: ಅನರ್ಹ ಶಾಸಕರಿಗೆ ಬಿಗ್ ರಿಲೀಫ್, ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ಸುಪ್ರಿಂಕೋರ್ಟ್ ಹೇಳಿದ್ದೇನು??

0
182

ಮೈತ್ರಿ ಸರ್ಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಸರ್ಕಾರ ಬಿಳಿಸಲು ಕಾರಣರಾಗಿದ್ದಕ್ಕೆ ಅಂದಿನ ಸ್ಪೀಕರ್-ರವರು ಅನರ್ಹಗೊಳಿಸಿ ಮುಂದಿನ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಆದೇಶ ನೀಡಿದ್ದರು, ಇಂದು ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ತೀರ್ಪು ನೀಡಿದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಿಗೆ ಅವಕಾಶ?

ಹೌದು ಕರ್ನಾಟಕದ ಜನತೆ ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದ 17 ಮಂದಿ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್ , ಡಿ.5ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಿಗೆ ಅವಕಾಶ ನೀಡಿ ಸಮತೋಲನದ ತೀರ್ಪು ಪ್ರಕಟಿಸಿದೆ. ಒಂದು ರೀತಿ ಹಾವು ಸಾಯಲಿಲ್ಲ, ಕೋಲೂ ಮುರಿಯಲಿಲ್ಲ ಎಂಬಂತೆ ರಾಜ್ಯ ವಿಧಾನಸಭೆ ಸ್ಪೀಕರ್ ಅವರು ಶಾಸಕರನ್ನು ಅನರ್ಹಗೊಳಿಸಿರುವ ಕ್ರಮವನ್ನು ಊರ್ಜಿತಗೊಳಿಸಿದೆ. ಆದರೆ ಈ ವಿಧಾನಸಭೆ ಚುನಾವಣೆ ಅವಧಿ ಮುಗಿಯುವವರೆಗೂ ಯಾವುದೇ ಚುನಾವಣೆಗೆ ಸ್ಪರ್ಧಿಸಬಾರದೆಂದು ಹಾಕಿದ್ದ ನಿರ್ಬಂಧಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

ಅದರ ಜತೆಜತೆಗೆ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನೂ ಸುಪ್ರೀಂ ಕೋರ್ಟ್​​ ನೀಡಿದೆ. ಈ ಮೂಲಕ ಸ್ಪೀಕರ್​ ಆದೇಶಕ್ಕೂ ಕೋರ್ಟ್​ ಮನ್ನಣೆ ನೀಡುತ್ತಲೇ, ಅನರ್ಹ ಶಾಸಕರ ಮನವಿಗೂ ಸ್ಪಂದಿಸಿದೆ. ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಅವರಿರುವ ತ್ರಿಸದಸ್ಯ ಪೀಠ ಪ್ರಕರಣದ ವಿಚಾರಣೆಯನ್ನು ಆಲಿಸಿ ಆದೇಶವನ್ನು ಕಾಯ್ದಿರಿಸಿತ್ತು. ಅದರಂತೆ ಇಂದು ಮುಂಜಾನೆ ಸರಿಯಾಗಿ 10.30ಕ್ಕೆ ತೀರ್ಪನ್ನು ನೀಡಿದೆ. “17 ಶಾಸಕರ ಅನರ್ಹತೆ ಎತ್ತಿ ಹಿಡಿದಿದ್ದೇವೆ. ಆದರೆ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಿದ್ದೇವೆ. 2023ರವರೆಗೂ ಚುನಾವಣೆಗೆ ಸ್ಪರ್ಧಿಸಲು ನಿರ್ಬಂಧ ಹೇರುವುದು ಸರಿಯಲ್ಲ,” ಎಂದು ಕೋರ್ಟ್​ ಹೇಳಿದೆ.

ಅನರ್ಹ ಶಾಸಕರು ಯಾರ್ಯಾರು?

ಮೊದಲ ಹಂತದಲ್ಲಿ ಕಾಂಗ್ರೆಸ್​ನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮಠಹಳ್ಳಿ, ರಾಣೇಬೆನ್ನೂರು ಶಾಸಕ ಆರ್. ಶಂಕರ್ ಇದಾದ ಬೆನ್ನಲ್ಲೇ ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ್, ಯಶವಂತಪುರದ ಎಸ್.ಟಿ. ಸೋಮಶೇಖರ್, ಕೆ.ಆರ್​.ಪುರದ ಭೈರತಿ ಬಸವರಾಜು, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್, ಆರ್​.ಆರ್​. ನಗರ ಶಾಸಕ ಮುನಿರತ್ನ, ಶಿವಾಜಿನಗರ ಶಾಸಕ ರೋಷನ್ ಬೇಗ್, ಚಿಕ್ಕಬಳ್ಳಾಪುರದ ಡಾ. ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಮಹಾಲಕ್ಷ್ಮೀ ಲೇಔಟ್​ನ ಕೆ. ಗೋಪಾಲಯ್ಯ, ಕೆ.ಆರ್​. ಪೇಟೆಯ ನಾರಾಯಣಗೌಡ, ವಿಜಯನಗರದ ಆನಂದ್ ಸಿಂಗ್, ಹುಣಸೂರಿನ ಹೆಚ್. ವಿಶ್ವನಾಥ್, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಅನರ್ಹಗೊಳಿಸಿದ್ದರು.

ಇದರಿಂದ ವಿಚಲಿತರಾದ ಅನರ್ಹ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಆಗಸ್ಟ್​ 1ರಂದು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್​​ನಲ್ಲಿ ಜಯ ಸಿಗಬಹುದು ಎನ್ನುವ ಆಸೆ ಹೊತ್ತಿದ್ದ ಅನರ್ಹ ಶಾಸಕರಿಗೆ ಪ್ರತಿ ಬಾರಿಯೂ ಹಿನ್ನಡೆ ಆಗುತ್ತಲೇ ಇತ್ತು. ಸ್ಪೀಕರ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿ ಎರಡು ತಿಂಗಳಾದರೂ ಪ್ರಕರಣ ವಿಚಾರಣೆಗೆ ಬಂದಿರಲಿಲ್ಲ. ಈಗ ಕೊನೆಗೂ ತೀರ್ಪು ಹೊರ ಬಿದ್ದಿದೆ, ಅನರ್ಹರಿಗೆ ಸ್ವಲ್ಪ ರಿಲೀಫ್​ ಸಿಕ್ಕಿದೆ.

Also read: ಇದೇ ವಾರದಲ್ಲಿ ನಾಲ್ಕು ದಿನ ಮೆಟ್ರೋ ಸಂಚಾರ ಸ್ಥಗಿತ; ಮೆಟ್ರೋ ಪ್ರಯಾಣಿಕರೆ ಇಗಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ.!