ವಿಚ್ಛೇದಿತ ಪತ್ನಿಗೆ ತನ್ನ ಮಾಜಿ ಪತಿಯ ವೇತನದಲ್ಲಿ ಶೇ.25 ರಷ್ಟು ಭಾಗ ಜೀವನಾಂಶ: ಸುಪ್ರೀಂಕೋರ್ಟ್..!

0
470

ನವದೆಹಲಿ: ವಿಚ್ಧೇದಿತ ಅಥವಾ ಪರಿತ್ಯಕ್ತ ಪತ್ನಿಯ ನಿರ್ವಹಣೆಗಾಗಿ ಮಾಜಿ ಪತಿ ನೀಡಬೇಕಾದ ಜೀವನಾಂಶ ಮಾನದಂಡವನ್ನು ನಿಗದಿಗೊಳಿಸಿರುವ ಸುಪ್ರೀಂಕೋರ್ಟ್, ಈ ಸಂಬಂಧ ತಲೆದೋರಿರುವ ಜೀವನಾಧಾರ ಮೊತ್ತ ಗೊಂದಲ ನಿವಾರಣೆಗೆ ಮುಂದಾಗಿದೆ. ಪತಿಯನ್ನು ತೊರೆದ ಮಹಿಳೆಗೆ ಆತನ ನಿವ್ವಳ ವೇತನದಲ್ಲಿ ಶೇ.25ರಷ್ಟು ಮೊತ್ತವು ಸೂಕ್ತ ಮತ್ತು ಸಮಂಜಸ ಜೀವನಾಂಶವಾಗುತ್ತದೆ ಎಂದು ಮಾನದಂಡವನ್ನು ಗೊತ್ತುಪಡಿಸಿದೆ.  ನ್ಯಾಯಮೂರ್ತಿಗಳಾದ ಆರ್. ಬಾನುಮತಿ ಮತ್ತು ಎಂ.ಎಂ. ಶಾಂತನಗೌಡರ್ ಅವರನ್ನು ಒಳಗೊಂಡ ನ್ಯಾಯಪೀಠ, ಒಂದು ನಿರ್ದಿಷ್ಟ ಪ್ರಕರಣವನ್ನು ಉಲ್ಲಂಘಿಸಿ ಈ ತೀರ್ಪು ಪ್ರಕಟಿಸಿದೆ.

ಪಶ್ಚಿಮ ಬಂಗಾಳದ ಹೂಗ್ಲಿ ಪ್ರದೇಶದ ದಂಪತಿಯ ವಿಚ್ಛೇದನ ಹಾಗೂ ಜೀವನಾಂಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ತೀರ್ಪು ಕೊಟ್ಟಿದೆ. ಜೀವನಾಂಶಕ್ಕೆ ಸಂಬಂಧಿಸಿದಂತೆ ಈ ಮಾಜಿ ದಂಪತಿಗಳು 2003 ರಿಂದಲೂ ಕಾನೂನಿ ಹೋರಾಟ ಮಾಡುತ್ತಿದ್ದಾರೆ. ಆರಂಭದಲ್ಲಿ ಜಿಲ್ಲಾ ನ್ಯಾಯಾಲಯವು, ಪ್ರತಿ ತಿಂಗಳು ₹ 4,500 ಜೀವನಾಂಶ ನೀಡುವಂತೆ ಆದೇಶ ಹೊರಡಿಸಿತ್ತು. ನಂತರ ಈ ಕುರಿತು ಹೈಕೋರ್ಟ್ ನಲ್ಲಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆದ ನಂತರ 2016ರಲ್ಲಿ ಪ್ರತಿ ತಿಂಗಳು ₹ 16 ಸಾವಿರ ನೀಡಬೇಕು ಎಂದು ತೀರ್ಪು ನೀಡಿತು. ಆದರೆ, 2016 ರಲ್ಲಿ ಪತಿಯ ತಿಂಗಳ ಸಂಬಳ ₹ 63,842 ರಿಂದ ₹ 95,527 ಸಾವಿರಕ್ಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಹೈ ಕೋರ್ಟ್ ಜೀವನಾಂಶವನ್ನು ₹ 23 ಸಾವಿರಕ್ಕೆ ಏರಿಸಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಆ ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಈ ಅರ್ಜಿ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ವಿಚ್ಛೇದನ ಪಡೆದ ಪತ್ನಿಯು ಸಮಾಜದಲ್ಲಿ ಬೇರೆಯವರ ಮೇಲೆ ಅವಲಂಬಿತವಾಗಿ ಬದುಕಲು ತನ್ನ ಮಾಜಿ ಪತಿಯ ವೇತನದಲ್ಲಿ ಶೇ.25 ರಷ್ಟು ಹಣವನ್ನು ಜೀವನಾಂಶ ಪಡೆಯಬಹುದು. ಇದು ಎಲ್ಲ ರೀತಿಯಲ್ಲೂ ಸೂಕ್ತ ಪರಿಹಾರ ಮೊತ್ತ. ಹೀಗಾಗಿ ಕೊಲ್ಕತಾ ಹೈ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಯಾವುದೇ ತಪ್ಪು ಇಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೆ ಈ ವ್ಯಕ್ತಿ ಮತ್ತೊಂದು ಮದುವೆಯಾಗಿದ್ದು, ಹೊಸ ಕುಟುಂಬದ ಜವಾಬ್ದಾರಿ ಹೊತ್ತಿದ್ದಾನೆ. ಹೀಗಾಗಿ ಹೈಕೋರ್ಟ್ ನೀಡಿದ್ದ ಜೀವನಾಂಶ ಪ್ರಮಾಣದಲ್ಲಿ ₹ 3 ಸಾವಿರ ಕಡಿಮೆ ಮಾಡಿ, ಆ ವ್ಯಕ್ತಿ ತನ್ನ ಮಾಜಿ ಪತ್ನಿಗೆ ಪ್ರತಿ ತಿಂಗಳು ₹ 20 ಸಾವಿರ ಜೀವನಾಂಶ ನೀಡಬೇಕು ಎಂದು ಆದೇಶ ಹೊರಡಿಸಿದೆ.