ಈ ವರ್ಷದ ದೀಪಾವಳಿ ಹಬ್ಬದಂದು ಯಾವ ದಿನ ಯಾವ ಪೂಜೆ ಮಾಡಿದರೆ ಶ್ರೇಯಸ್ಸು ದೊರೆಯುತ್ತದೆ ಅಂತ ತಿಳಿದುಕೊಳ್ಳಿ!!

0
487

ನಮ್ಮದೇಶದ ಅತೀ ದೊಡ್ಡ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಕತ್ತಲನ್ನೋಡಿಸಿ ಬೆಳಕನ್ನು ತರುವ ಬೆಳಕಿನ ಹಬ್ಬದೀಪಾವಳಿ. ಶುಕ್ರವಾರ ಧನತ್ರಯೋದಶಿ (25-10-2019) ಹಬ್ಬದಿಂದ ಆರಂಭಿಸಿ ಮಂಗಳವಾರ (29-10-2019)ದವರೆಗೆ “ದೀಪಾವಳೀ ಹಬ್ಬದ” ಸಂಭ್ರಮ.

ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ನೀರು ತುಂಬುವ ಹಬ್ಬ, ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ಐದು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿ ಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ 3 ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ.

ಶನಿವಾರ (26-10-2019) ಸಂಜೆ “ನೀರುತುಂಬುವ ಹಬ್ಬ”. ಮನೆಯ ಸ್ನಾನಗೃಹದಲ್ಲಿರುವ ಹಂಡೆ (ಈಗ ಬಾಯ್ಲರ್, ಗೀಸರ್)ಯನ್ನು ಸ್ವಚ್ಛಶುಭ್ರಗೊಳಿಸಿ ರಂಗೋಲಿ ಕೆಮ್ಮಣ್ಣುಗಳಿಂದ ಅಲಂಕರಿಸಿ ಶುದ್ಧವಾದ ನೀರನ್ನು ತುಂಬುವ ಸಂಭ್ರಮ. ಈ ದಿನ ಹಾಗೂ ಮಾರನೇ ದಿನ ಪ್ರತಿಯೊಂದು ನೀರಿನಾಸರೆಯಲ್ಲಿರುವ ನೀರಿನಲ್ಲಿ ಗಂಗೆಯ ಧರ್ಮವಿರುವುದನ್ನು ಗುರುತಿಸಿದ ನಮ್ಮ ಮಹರ್ಷಿಗಳು ಗಂಗಾಸ್ನಾನದ ಫಲವನ್ನು ಪ್ರತಿಯೊಬ್ಬರೂ ಅನುಭವಿಸಿ ಆನಂದಿಸಲಿ ಎಂಬ ಅಪಾರ ಕರುಣೆಯಿಂದ ಈ ಸಂಪ್ರದಾಯವನ್ನು ತಂದಿದ್ದಾರೆ.

ರವಿವಾರ (27-10-2019) ರಂದು ದೀಪಾವಳಿ ನರಕ ಚತುರ್ದಶಿಯ ಆಚರಣೆಯನ್ನು ಮಾಡಲಾಗುತ್ತದೆ. ಶ್ರೀಕೃಷ್ಣನು ಈ ದಿನದಂದು ನರಕಾಸುರನನ್ನು ವಧಿಸಿದನು; ಆದುದರಿಂದ ಈ ದಿನವನ್ನು ನರಕಚತುರ್ದಶಿ ಎಂದು ಕರೆಯುತ್ತಾರೆ. ಇದರ ಅರ್ಥವು `ದುರ್ಜನ ಶಕ್ತಿಯ ಮೇಲೆ ಸಜ್ಜನ ಶಕ್ತಿಯ ವಿಜಯ’ ಎಂದಾಗುತ್ತದೆ. ಯಾವಾಗ ಸಜ್ಜನಶಕ್ತಿಯು ಜಾಗೃತಗೊಂಡು ಸಂಘಟಿತವಾಗಿ ಕಾರ್ಯ ಮಾಡುತ್ತದೆಯೋ ಆಗ ದುರ್ಜನ ಶಕ್ತಿಯ ಪ್ರಭಾವವು ಕಡಿಮೆಯಾಗುತ್ತದೆ. `ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿಯ ಅಸುರೀ ಪ್ರವೃತ್ತಿ ಹಾಗೂ ವಿಧ್ವಂಸಕ ಪ್ರವೃತ್ತಿಯನ್ನು ಕಡಿಮೆ ಮಾಡಿ ದೈವೀಪ್ರವೃತ್ತಿಯನ್ನು ಸ್ಥಾಪಿಸಬೇಕು. ಇದರಿಂದ ಮುಂದೆ ಸಮಾಜ ಹಾಗೂ ರಾಷ್ಟ್ರದ ಮೇಲೆ ಪರಿಣಾಮವಾಗುತ್ತದೆ.’ ಸಜ್ಜನವ್ಯಕ್ತಿಗಳು ಸಂಘಟಿತರಾಗಿ ತಮ್ಮ ಜ್ಞಾನದ ಲಾಭವನ್ನು ಸಮಾಜಕ್ಕೆ ನೀಡಬೇಕು. ಈ ವಿಷಯವೇ ನರಕ ಚರ್ತುದಶಿಯಿಂದ ಕಂಡುಬರುತ್ತದೆ.

ಸೋಮವಾರ (28-10-2019) ಅಮಾವಾಸ್ಯೆಯಂದು ಹೊರಗೆ ಕತ್ತಲು ಇರುವುದಾದರೂ ಅಂದು ಪ್ರಕೃತಿಮಾತೆಯಾದ ಶ್ರೀಮಹಾಲಕ್ಷ್ಮೀಯು ತನ್ನ ಪೂರ್ಣಾನುಗ್ರಹವನ್ನು ಹರಿಸಿ ಹರಸುವ ಶುಭದಿನ. ಅಂದು ಈಕೆಯನ್ನು ಪೂಜಿಸಿ ಸಂತುಷ್ಟಗೊಳಿಸುವುದರಿಂದ ಶರೀರಸಂಪತ್ತು, ದೈವೀಕಸಂಪತ್ತು, ಆಧ್ಯಾತ್ಮಿಕ ಸಂಪತ್ತು, ಧನಧಾನ್ಯಸಂಪತ್ತು ಸುಖ ಶಾಂತಿ ನೆಮ್ಮದಿಯ ಸಂಪತ್ತನ್ನಿತ್ತು ಹರಸುವ ಸುದಿನ.

ಕೆಲವರು ಅಮಾವಾಸ್ಯೆಯ ಇಡೀ ರಾತ್ರಿ ಜಾಗರಣೆ ಮಾಡಿ ಲಕ್ಷ್ಮೀ ದೇವಿಯ ಮುಂದಿನ ದೀಪ ನಂದದಂತೆ ನೋಡಿ ಕೊಳ್ಳುವುದು ಸಾಮಾನ್ಯ. ಗ್ರಾಮೀಣ ಪ್ರದೇಶದ ಅಲ್ಲಲ್ಲಿ ಪಗಡೆ ಆಟ ಸೇರಿದಂತೆ ವಿವಿಧ ಗ್ರಾಮೀಣ ಸೊಗಡಿನ ಆಟಗಳನ್ನು ಇಡೀ ರಾತ್ರಿ ಆಡುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ.

ಮಾರನೆಯ ದಿನ ಮಂಗಳವಾರ (29-10-2019) “ಬಲಿಪಾಡ್ಯಮಿ”. ಈ ದಿನದಂದು ಈಶ್ವರೀ ಕಾರ್ಯವೆಂದು ಜನತೆಯ ಸೇವೆಯನ್ನು ಮಾಡುತ್ತಾ ದೇವತ್ವವನ್ನು ತಲುಪಿದ ಬಲಿಯ ಸ್ಮರಣೆಯನ್ನು ಮಾಡಬೇಕು. ಬಲಿಪಾಡ್ಯದಂದು ಬಲಿಯ ಪೂಜೆಯನ್ನು ಮಾಡುತ್ತಾರೆ. ಬಲಿಯು ರಾಕ್ಷಸ ಕುಲದಲ್ಲಿ ಜನ್ಮವೆತ್ತಿದರೂ ಅವನ ಪುಣ್ಯದಿಂದಾಗಿ ವಾಮನ ರೂಪದಲ್ಲಿ ಅವತರಿಸಿದ ಭಗವಂತನ ಕೃಪೆಯು ಅವನ ಮೇಲಾಯಿತು. ಅವನು ಸಾತ್ತ್ವಿಕ ಪ್ರವೃತ್ತಿಯುಳ್ಳ ದಾನಿರಾಜನಾಗಿದ್ದನು. ಪ್ರತಿಯೊಬ್ಬ ಮನುಷ್ಯನು ಪ್ರಾರಂಭದಲ್ಲಿ ಅಜ್ಞಾನಿಯಾಗಿರುವುದರಿಂದ ಅವನಿಂದ ಕುಕರ್ಮಗಳು ಘಟಿಸುತ್ತಿರುತ್ತವೆ; ಆದರೆ ಜ್ಞಾನ ಹಾಗೂ ಈಶ್ವರೀಕೃಪೆಯಿಂದ ದೇವತ್ವವನ್ನು ತಲುಪಬಹುದು ಎಂಬುದು ಈ ಉದಾಹರಣೆಯಿಂದ ಕಂಡುಬರುತ್ತದೆ.