ಪಂಪ್ಸೆಟ್ಗಳಿಗೆ ಹಗಲಲ್ಲೇ ತ್ರಿಫೇಸ್ ವಿದ್ಯುತ್ ಡಿ.ಕೆ. ಶಿವಕುಮಾರ್: ಚುನಾವಣೆ ನಂತರಾನೂ ಹೀಗೆ ವಿದ್ಯುತ್ ಕೊಡ್ತಾರ?

0
470

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ದಿನದಲ್ಲಿ 6 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದೆ. ಹಗಲು ವೇಳೆಯೇ ಆರು ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡುವ ಉದ್ದೇಶವಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಳೆಯ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಇನ್ನೊಂದೆಡೆ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಆದರೆ ಇಂತಹ ಬರಗಾಲದಲ್ಲೂ ಜನರಿಗೆ ತೊಂದರೆಯಾಗದಂತೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 25 ಲಕ್ಷ ಕೃಷಿ ಪಂಪ್‌ ಸೆಟ್‌ಗಳಿದ್ದು, ಇದರಲ್ಲಿ 5 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ-ಸಕ್ರಮದಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡಲ್ಲಿ ಬೃಹತ್ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದು ಇಲ್ಲಿ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಈಗಾಗಲೇ 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಏನನ್ನು ಬೆಳೆಯಲಾಗದಂತಹ ರೈತರ ಜಮೀನಿನಲ್ಲಿ ವಾರ್ಷಿಕವಾಗಿ ಎಕರೆಗೆ 21 ಸಾವಿರ ಬಾಡಿಗೆಯಂತೆ ರೈತರಿಗೆ ನೆರವು ಕೊಡಿಸಲಾಗುತ್ತಿದೆ. ಯಾವುದೇ ಭೂ ಸ್ವಾಧೀನ ಮಾಡಿಸದೇ ರೈತರಿಗೆ ಆದಾಯ ಬರುವಂತೆ ಮಾಡಿದ್ದು, ಇದನ್ನು ಪ್ರಧಾನಿಯವರ ಬಳಿ ಹೇಳಿದಾಗ ಅಚ್ಚರಿಯನ್ನು ವ್ಯಕ್ತಪಡಿಸಿದ್ದರು. ಇಲ್ಲಿ ಸುಮಾರು 15 ಕಿಲೋಮೀಟರ್‌ನಷ್ಟು ದೂರದವರೆಗೆ ಸೋಲಾರ್ ಪ್ಯಾನಲ್ ಅಳವಡಿಸಲಾಗಿದ್ದು 16 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿರುವುದಾಗಿ ತಿಳಿಸಿದರು.

ರಾತ್ರಿ ಸಮಯದಲ್ಲಿ ತ್ರೀಫೇಸ್ ವಿದ್ಯುತ್ ನೀಡುವುದರಿಂದ ಗುಡ್ಡಗಾಡು ಪ್ರದೇಶ, ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಭಯಕ್ಕೆ ಒಳಗಾಗುತ್ತವೆ. ಆದ್ದರಿಂದ ರಾತ್ರಿ ಬದಲು ಹಗಲಿನಲ್ಲಿಯೇ ನಿರಂತರವಾಗಿ 6 ಗಂಟೆ ವಿದ್ಯುತ್ ನೀಡಬೇಕೆಂಬ ಬೇಡಿಕೆ ಇದೆ. ಈ ವ್ಯವಸ್ಥೆಗೆ ಸೋಲಾರ್ ವಿದ್ಯುತ್ ಹೆಚ್ಚು ಬಳಕೆ ಮಾಡಬೇಕೆಂದು ಉದ್ದೇಶಿಸಲಾಗಿದೆ. ಆದ್ದರಿಂದ ಪ್ರತಿ ತಾಲೂಕಿನಲ್ಲಿ 60 ಮೆಗಾವ್ಯಾಟ್‌ನಷ್ಟು ಸೋಲಾರ್ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ. ಇದು ಸಾಕಾರವಾದಲ್ಲಿ ಹಗಲು ವೇಳೆಯೇ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಗೆ ಸಾಧ್ಯವಾಗಲಿದ್ದು ಪರಿಶೀಲನೆಯಲ್ಲಿದೆ ಎಂದರು.

ಇಲಾಖೆಯಿಂದ ಲೈನ್‌ಮ್ಯಾನ್ ಹುದ್ದೆಗಳಲ್ಲಿ ಅತ್ಯಂತ ಪಾರದರ್ಶಕವಾಗಿ 23 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈ ಹಿಂದೆ ಬ್ರಿಟೀಷರ ಕಾಲದಲ್ಲಿ ಇದ್ದ ಲೈನ್‌ಮ್ಯಾನ್ ಹುದ್ದೆಯ ಹೆಸರನ್ನು ಬದಲಾಯಿಸಿ ಪವರ್‌ಮ್ಯಾನ್ ಎಂದು ಮರುನಾಮಕರಣ ಮಾಡಲಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ವಿದ್ಯುತ್ ಪಂಪ್‌ಸೆಟ್ ಬಳಕೆದಾರರು ತಾಲೂಕಿನಲ್ಲಿದ್ದು,, ರೈತರ ಹಿತದೃಷ್ಟಿಯಿಂದ ಇಲ್ಲಿ ಟಿ.ಸಿ.ಬ್ಯಾಂಕ್ ಮತ್ತು ರಿಪೇರಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ತಾಲೂಕಿ 33,855 ಅಕ್ರಮ ವಿದ್ಯುತ್ ಪಂಪ್‌ಸೆಟ್‌ದಾರರನ್ನು ಸಕ್ರಮ ಮಾಡಲಾಗುತ್ತಿದ್ದು, ಒಟ್ಟು 92,830 ಗ್ರಾಹಕರು ಹೊಸದುರ್ಗ ತಾಲ್ಲೂಕಿನಲ್ಲಿದ್ದಾರೆ. ಮತ್ತು 24 ಸಾವಿರ ಜನರು ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಗ್ರಾಹಕರಿದ್ದಾರೆ. ಭಾಗ್ಯಜ್ಯೋತಿ, ಕುಟೀರಜ್ಯೋತಿ ಗ್ರಾಹಕರಿಗೆ 18 ಯುನಿಟ್‌ವರೆಗೆ ಉಚಿತವಾಗಿ ನೀಡಲಾಗುತ್ತಿದ್ದು, ಇದನ್ನು 40 ಯುನಿಟ್‌ಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.