ಡಿಎಲ್’ಗೆ ‘ಆಧಾರ್’ ಕಡ್ಡಾಯ

0
738

ನವದೆಹಲಿ: ಒಬ್ಬನೇ ವ್ಯಕ್ತಿ ಏಕಕಾಲದಲ್ಲಿ ಎರಡು ವಾಹನ ಚಾಲನಾ ಪರವಾನಗಿ ಪಡೆಯುವುದನ್ನು ತಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ.

ಸಾರಿಗೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿ ಸೂಚಿಸಿದ್ದ ಮಾರ್ಪಾಡುಗಳನ್ನು ಅಳವಡಿಸಿಕೊಂಡು, ಮೋಟಾರು ವಾಹನ (ತಿದ್ದುಪಡಿ) ಮಸೂದೆ – 2016ಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಈ ವ್ಯವಸ್ಥೆಯ ಅಡಿ ವಾಹನಗಳ ಮಾಲೀಕತ್ವದ ವರ್ಗಾವಣೆ ಕೂಡ ಸುಲಭವಾಗಿ ಆಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ದೇಶದಲ್ಲಿನ ಶೇಕಡ 30ರಷ್ಟು ವಾಹನ ಚಾಲನಾ ಪರವಾನಗಿಗಳು ನಕಲಿ, ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪರವಾನಗಿ ಹೊಂದಿರುವ ಪ್ರಕರಣಗಳು ಸಾಕಷ್ಟಿವೆ ಎಂದು ಗಡ್ಕರಿ ತಿಳಿಸಿದರು.

ಆನ್ಲೈನ್ ಮೂಲಕ ಎಲ್ಎಲ್: ವಾಹನ ಕಲಿಕಾ ಪರವಾನಗಿಯನ್ನು (ಎಲ್ಎಲ್) ಆನ್ಲೈನ್ ಮೂಲಕ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂಬ ಪ್ರಸ್ತಾವ ಸರ್ಕಾರದ ಮುಂದಿದೆ. ಎಲ್ಎಲ್ ಬಯಸುವವರು ಈ ವ್ಯವಸ್ಥೆಯಡಿ ಪ್ರಾದೇಶಿಕ ಸಾರಿಗೆ ಅಧಿಕಾರಿಯ (ಆರ್ಟಿಒ) ಕಚೇರಿಗೆ ಹೋಗುವ ಅಗತ್ಯವಿಲ್ಲ.

ಬದಲಿಗೆ, ಆಧಾರ್ ಸಂಖ್ಯೆ ನಮೂದಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಆನ್ಲೈನ್ ಮೂಲಕವೇ ಎಲ್ಎಲ್ ಪಡೆಯಬಹುದು. ಇದರಿಂದ ಒಂದು ಹಂತದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ ಎಂದು ಈ ಅಧಿಕಾರಿ ವಿವರಿಸಿದರು.

 

ಆಧಾರ್ ಸಂಖ್ಯೆ ಇರುವ ವ್ಯಕ್ತಿ ತನ್ನ ಗುರುತಿನ ಚೀಟಿ ಎಂದು ಬೇರೆ ಯಾವ ದಾಖಲೆಯನ್ನೂ ನೀಡಬೇಕಿಲ್ಲ. ಆಧಾರ್ಗೆ ನೋಂದಣಿ ಮಾಡಿಸಿದ ನಂತರವೇ ಚಾಲನಾ ಪರವಾನಗಿ ಪತ್ರ ಪಡೆಯುವಂತೆ ಸೂಚಿಸಲಾಗುವುದು. ಚಾಲನಾ ಪರವಾನಗಿಯನ್ನು ಆಧಾರ್ ಸಂಖ್ಯೆಯ ಜೊತೆ ಜೋಡಿಸಿದ ನಂತರ, ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪರವಾನಗಿ ಪಡೆಯಲು ಅವಕಾಶವೇ ಇರುವುದಿಲ್ಲ ಎಂದು ಅಧಿಕಾರಿ ಹೇಳಿದರು.