ಜೀವನ ಕಥೆ: ಹಿಂದಿನ ಜನ್ಮದ ಪಾಪ ಪುಣ್ಯಗಳು ನಿಮ್ಮನ್ನು ಕಾಪಾಡಲಿದೆಯೇ ಅಥವಾ ಕಾಡಲಿದೆಯೇ!!

0
1437

ಕರ್ಮ ಬಂಧನವನ್ನು ಮೀರುವುದುಂಟೇ!?

ಏಕೆ ಹೀಗೆ? ನಾವು ನಿತ್ಯ ನೋಡುತ್ತೇವೆ, ಕೆಲವರಿಗೆ ಜೀವನದ ಎಲ್ಲಾ ಸೌಕರ್ಯಗಳೂ ಇರುತ್ತವೆ, ಕೆಲವರು ದಿನನಿತ್ಯದ ಮೂಲಭೂತ ಅವಶ್ಯಗಳಿಗೂ ಪರದಾಡುತ್ತಾರೆ. ಹಲವರಿಗೆ ಆಗರ್ಭ ಶ್ರೀಮಂತಿಕೆ,  ಇನ್ನು ಹಲವರಿಗೆ ತಿನ್ನಲು ತುತ್ತು ಅನ್ನಕ್ಕೂ ಗತಿಯಿಲ್ಲ. ಇದು ಜೀರ್ಣಿಸಿಕೊಳ್ಳಲು ಅಸಾಧ್ಯವಾದ ಪ್ರಶ್ನೆ.

ಹೋಗಲಿ ಇದನ್ನು ಹೀಗೇ ಆಗಬೇಕು, ಇಂತಹವರು ಹೀಗೇ ಬದುಕಬೇಕು ಎಂಬುದನ್ನು ಯಾರು ನಿರ್ಧೆರಿಸುತ್ತಾರೆ?? ಇದೆಲ್ಲದುದರ ವಿಧಾತ ಯಾರು? ಆದಿ ಶಂಕರರಿಗೆ ಕಾಡಿದ ಪ್ರಶ್ನೆ ಕೋ ಹಂಅಂದರೆ ನಾನು ಯಾರು?, ಎಲ್ಲಿಂದ ಬಂದೆ ಎಂಬುದು.

ಸಿದ್ಧಾರ್ಥನಿಗೆ ಒಬ್ಬ ವೃದ್ಧ, ರೋಗಿ ಹಾಗೂ ಮೃತದೇಹ ನೋಡಿದಾಗಿನಿಂದ ಈ ಪ್ರಶ್ನೆ ಕಾಡಿ, ಮೋಕ್ಷಮಾರ್ಗ ಹಿಡಿದು ಬುದ್ಧನಾದನು. ಕರ್ಮ ಎನ್ನುವ ಒಂದು ಅತೀಂದ್ರಿಯ ಪದ, ನಮ್ಮ ಇಂದ್ರಿಯಗಳಿಗೆ ನಿಲುಕದ್ದು. ನಮ್ಮ ಕ್ರಿಯೆಯು(ಕರ್ಮ) ಅದಕ್ಕೆ ತಕ್ಕಂತೆ ಫಲ ಪಡೆಯುತ್ತದೆ.

ಭೀಷ್ಮ ನು ಶರಶಯ್ಯೆಯಲ್ಲಿ ಮಲಗಿ ಅಪಾರ ನೋವನ್ನು ಅನುಭವಿಸುತ್ತಿರುತ್ತಾನೆ. ಆ ಸಮಯದಲ್ಲಿ ಕೃಷ್ಣ ನನ್ನು ಕೇಳುತ್ತಾನೆ: “ ನಾನು ನನ್ನ ಹಿಂದಿನ 72 ಜನ್ಮಗಳನ್ನು ಅವಲೋಕಿಸಿದೆ. ಯಾವ ಜನ್ಮದಲ್ಲೂ ನಾನು ಇಂತಹ ನೋವು ಅನುಭವಿಸುವಂತಹ ಯಾವ ಪಾಪವನ್ನು ಸಹ ಮಾಡಿಲ್ಲ. ಆದರೂ ನನಗೇಕೆ ಇಂತಹ ಘೋರ ಶಿಕ್ಷೆ ?” ಎಂದು. ಆಗ ಕೃಷ್ಣ ಉತ್ತರಿಸುತ್ತಾನೆ: “ನೀನು 73ನೇ ಜನ್ಮದಲ್ಲಿ ಬಾಲಕನಾಗಿದ್ದಾಗ ಆಟವಾಡುತ್ತ ತಿಳಿಯದೆ ಒಂದು ಕೀಟಕ್ಕೆ ಮುಳ್ಳಿನಿಂದ ಚುಚ್ಚಿದ್ದೆ. ಆ ಕ್ರಿಯೆಯ (ಕರ್ಮ) ಫಲವನ್ನು ನೀನು ಈಗ ಅನುಭವಿಸುತ್ತಿರುವೆ ಎಂದು.

ಪರಮಹಂಸ ಯೋಗಾನಂದರು ಹೇಳುವಂತೆ ಕರ್ಮ ಮಾಡುವ ಮುಂಚೆ ನಾವು ಸ್ವತಂತ್ರರು. ಆದರೆ ಅದನ್ನು ಮಾಡಿದ ಮೇಲೆ ನಾವು ಕರ್ಮ ಬಂಧನಕ್ಕೆ ಒಳಗಾಗುತ್ತೇವೆ. ಪಾಪ ಕರ್ಮವಾದರೆ ಪಾಪದ ಫಲ, ಪುಣ್ಯದ ಕಾರ್ಯವಾಗಿದ್ದರೆ ಪುಣ್ಯಫಲ. ಬಿಟ್ಟ ಬಾಣದಂತೆ ನಾವು ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ನಮಗೆ ಬೇಕಿದ್ದರೂ ಬೇಡದಿದ್ದರೂ ನಾವು  ಮಾಡಿದ ಕರ್ಮದ ಬಂಧನಕ್ಕೆ ಒಳಗಾಗಲೇಬೇಕು.

ಹಾಗಾದರೆ ಕರ್ಮ ಬಂಧನವನ್ನು ಮೀರುವುದು ಸಾಧ್ಯವಿಲ್ಲವೇ??

ಈ ಪ್ರಶ್ನೆಯ ಉತ್ತರ ನಮ್ಮಲ್ಲೇ ಇದೆ. ಸಕಾರಾತ್ಮಕ ಆಲೋಚನೆಗಳನ್ನು ಮಾಡಿ. “ಇದು ನನ್ನ ಕರ್ಮ “ ಎಂದುಕೊಳ್ಳುವ ಬದಲು ಸತ್ಪ್ರಯತ್ನವನ್ನು ಮಾಡಿ. ಸದ್ಬುದ್ಧಿ ನಿಮಗೆ ಯಾವಾಗಲೂ ಸನ್ಮಾರ್ಗವನ್ನು ತೋರುತ್ತದೆ. ನಮ್ಮ ಒಳ್ಳೆಯ ಆಲೋಚನೆಗಳು ಸದಾಶಯಗಳಾವುವು ಎಂದು ತಿಳಿಸಿ, ಸತ್ಕರ್ಮದ ದಾರಿಯನ್ನು ತೋರುತ್ತದೆ. ಹಿಂದಿನ ಕ್ರಿಯೆಯ ಬಗ್ಗೆ ಚಿಂತಿಸುವುದು ಬಿಟ್ಟು ಆತ್ಮಾವಲೋಕನ ಮಾಡಿಕೊಳ್ಳಿ. ಜೀವನವನ್ನು ಜಟಿಲಗೊಳಿಸುವ ಬದಲು ಬದುಕನ್ನು ಪ್ರೀತಿಸಿ. ಸದ್ಬುದ್ಧಿ, ಸದಾಚಾರಗಳನ್ನು ಬೆಳೆಸಿಕೊಳ್ಳಿ. ಬಾಳಿಗೊಂದು ನಂಬಿಕೆಯಿರಲಿ. ಇದರಿಂದ ಕಷ್ಟಗಳನ್ನು ಎದುರಿಸುವ ಮಾರ್ಗ ತಿಳಿದು, ಆತ್ಮಶಕ್ತಿ ಜಾಗೃತವಾಗುತ್ತದೆ.