ದೃಢ ಸಂಕಲ್ಪವೇ ಮನುಷ್ಯನನ್ನು ದೇವನನ್ನಾಗಿ ಮಾಡುತ್ತದೆ ಎಂದ ಬುದ್ಧ

0
834

ದೃಢ ಸಂಕಲ್ಪ
ಮುದ್ದು ಮಕ್ಕಳೇ! ನೀವೆಲ್ಲ ಭಗವಾನ್ ಬುದ್ಧ ದೇವನ ಹೆಸರನ್ನು ಬಲ್ಲಿರಿ. ಎರಡು ಸಾವಿರದ ಐದುನೂರು ವರ್ಷಗಳ ಹಿಂದೆ ಆಗಿಹೋದ ಆತ ಕರುಣೆಯ ಆಧಾರದ ಮೇಲೆ ಹೊಸ ಮತವನ್ನು ಸ್ಥಾಪಿಸಿದ. ಬುದ್ಧದೇವ ಸ್ಥಾಪಿಸಿದ ಧರ್ಮ ಬೌದ್ಧ ಧರ್ಮವೆಂದು ಲೋಕ ಪ್ರಸಿದ್ಧಿ ಪಡೆಯಿತು.
ಇಂಥ ಧರ್ಮ ಪುರುಷ ಬುದ್ಧದೇವ ಬಿಹಾರದ ರಾಜಗೃಹದ ಹೊರವಲಯದ ಬೆಟ್ಟವೊಂದರ ಮೇಲೆ ತನ್ನ ಶಿಷ್ಯರೊಂದಿಗೆ ಆಸೀನನಾಗಿದ್ದ. ಆಗ ಜಿಜ್ಞಾಸೆ ನಡೆಯಿತು. ಚರ್ಚೆ ನಡೆಯಿತು.
ಓರ್ವ ಶಿಷ್ಯ ಗುರು ಬುದ್ಧನನ್ನು ಪ್ರಶ್ನಿಸಿದ. “ಭಗವಾನ್, ಈ ಬೆಟ್ಟಕ್ಕಿಂತ ಕಠಿಣವಾದ, ಶಕ್ತಿಶಾಲಿಯಾದ ಬೇರೆ ವಸ್ತು ಉಂಟೆ?’’ ಅದಕ್ಕೆ ಬುದ್ಧ ಹೇಳಿದ-
“ಹೌದು ವತ್ಸ ಇದೆ. ಇದಕ್ಕಿಂತ ಶಕ್ತಿಶಾಲಿಯಾದುದು ಕಬ್ಬಿಣ. ಈ ಬಂಡೆಗಳನ್ನು ತುಂಡು ತುಂಡು ಮಾಡಿ ಚೆಲ್ಲುವಂಥ ಶಕ್ತಿ ಕಬ್ಬಿಣಕ್ಕಿದೆ.’’ ಈ ಮಾತು ಕೇಳಿದ ಶಿಷ್ಯನಲ್ಲಿ ಜಿಜ್ಞಾಸೆ ಇನ್ನೂ ಹೆಚ್ಚಿತು. ಮತ್ತೆ ಕೇಳಿದ-
“ಭಗವಾನ್, ಹಾಗಾದರೆ ಕಬ್ಬಿಣಕ್ಕಿಂತ ಶಕ್ತಿಶಾಲಿಯಾದುದು ಇನ್ನಾವುದಿದೆ? ಕಬ್ಬಿಣವನ್ನೂ ಮಣಿಸುವಂಥದು ಯಾವುದಿದೆ ಭಗವಾನ್?’’
ಆಗ ಭಗವಾನ್ ಬುದ್ಧ ಉತ್ತರಿಸುತ್ತಾನೆ- “ವತ್ಸ ಕಬ್ಬಿಣಕ್ಕಿಂತಲೂ ಶಕ್ತಿಶಾಲಿಯಾದುದು ಅಗ್ನಿ. ಅದು ಕಬ್ಬಿಣದ ಶಕ್ತಿಯನ್ನು, ಸೊಕ್ಕನ್ನು ಕರಗಿಸಿಬಿಡುತ್ತದೆ. ಅದನ್ನು ನೀರಾಗಿ ಹರಿಸಬಲ್ಲದು. ಅದರ ಅಹಂಕಾರವನ್ನು ನಿರ್ನಾಮ ಮಾಡಬಲ್ಲದು ಈ ಅಗ್ನಿ.’’
ಈ ಉತ್ತರ ಕೇಳಿದ ಶಿಷ್ಯನಲ್ಲಿ ಇನ್ನೂ ಇದಕ್ಕಿಂತ ಶಕ್ತಿಶಾಲಿಯಾದುದು ಯಾವುದು ಎಂಬುದನ್ನು ಅರಿಯುವ ಜಿಜ್ಞಾಸೆ ಉಂಟಾಗುತ್ತದೆ. ಅಂತೆಯೇ ಶಿಷ್ಯ ಭಗವಾನ್ ಬುದ್ಧನನ್ನು ಕೇಳುತ್ತಾನೆ.
“ಭಗವಾನ್, ಅಗ್ನಿಯ ಶಕ್ತಿಯನ್ನೂ ಪರಾಸ್ತಗೊಳಿಸುವಂಥ ಶಕ್ತಿಶಾಲಿ ವಸ್ತು ಯಾವುದಿದೆ? ಕೃಪೆಯಿಟ್ಟು ಅರುಹಬೇಕು’’ ಎಂದಾಗ ಭಗವಾನ್ ಬುದ್ಧ ಹೇಳುತ್ತಾನೆ-
“ಅಗ್ನಿಗಿಂತ ಶಕ್ತಿಶಾಲಿ ನೀರು ವತ್ಸ, ಅದು ಅಗ್ನಿಯನ್ನು ಜ್ಯೋತಿಹೀನವಾಗಿ ಮಾರ್ಪಡಿಸುತ್ತದೆ. ಅದನ್ನು ಆರಿಸಿ ತಣ್ಣಗಾಗಿಸುತ್ತದೆ.’’
ಈ ಉತ್ತರ ಕೇಳಿದ ಶಿಷ್ಯ ದ್ವಂದ್ವದಲ್ಲಿ ಸಿಲುಕಿಕೊಂಡ. ಏನು ಕೇಳಿದರೂ ಅದಕ್ಕಿಂತ ಬಲಿಷ್ಟವಾದ ಮತ್ತೊಂದು ಇದ್ದೇ ಇದೆಯಲ್ಲ ಅನ್ನಿಸಿ ಮತ್ತೂ ತಿಳಿಯಬೇಕೆನ್ನುವ ಕುತೂಹಲ ಹೆಚ್ಚಿತು. ಅಂತೆಯೇ ಮತ್ತೆ ಕೇಳಿದ-
“ಭಗವಾನ್, ನೀರಿಗಿಂತ ಶಕ್ತಿಶಾಲಿಯಾದ ವಸ್ತು ಯಾವುದಾದರೂ ಇದೆಯೆ?’’ ಎಂದಾಗ ಭಗವಾನ್ ಬುದ್ಧದೇವ ಸಹಜ ರೀತಿಯಲ್ಲಿ ಮುಗುಳ್ನಗುತ್ತ ಹೇಳಿದ-
“ಜಿಜ್ಞಾಸು ವತ್ಸ. ನೀರಿಗಿಂತ ಬಲಿಷ್ಟವಾದ ವಸ್ತು ಕೂಡ ಇದೆ. ಅದು ಗಾಳಿ. ಗಾಳಿ ತನ್ನ ಪ್ರಬಲ ವೇಗದಿಂದ ನೀರಿನ ಪ್ರವಾಹದ ದಿಕ್ಕನ್ನೇ ಬದಲಿಸಬಲ್ಲದು. ಅಂಥ ಶಕ್ತಿ ಗಾಳಿಗಿದೆ.’’
ಶಿಷ್ಯನ ಕುತೂಹಲಕ್ಕೆ ಮೇರೆ ಇಲ್ಲದಾಯಿತು. ಕೊನೆಯ ಪ್ರಶ್ನೆಯೆಂದು ಮತ್ತೆ ಕೇಳಿದ-
“ಭಗವಾನ್ ಗಾಳಿಯ ಮೇಲೂ ವಿಜಯ ಸಂಪಾದಿಸಬಲ್ಲ ಶಕ್ತಿ ಯಾವುದಕ್ಕಾದರೂ ಇದೆಯೆ? ಇದ್ದಲ್ಲಿ ಅದು ಯಾವುದೆಂದು ತಿಳಿಯಪಡಿಸುವ ಕೃಪೆಯಾಗಬೇಕು’’ ಎಂದು ಶಿಷ್ಯ ಕೇಳಿದಾಗ ಭಗವಾನ್ ಬುದ್ಧ ದೇವ, ತನ್ನ ಆ ಕುತೂಹಲ ಹಾಗೂ ಅಪಾರ ಜಿಜ್ಞಾಸೆಯುಳ್ಳ ಶಿಷ್ಯನಿಗೆ ಹೇಳುತ್ತಾನೆ-
“ನನ್ನ ಪ್ರಿಯ ವತ್ಸ, ಎಲ್ಲಕ್ಕಿಂತ ಮಿಗಿಲಾದುದು ಮಾನವ ಸಂಕಲ್ಪವಾಗಿದೆ. ಈ ಸಂಕಲ್ಪ ಶಕ್ತಿ ಎಲ್ಲದರ ಮೇಲೂ ಅಧಿಕಾರ ಸ್ಥಾಪಿಸುವಂಥದು. ಮಾನವ ತನ್ನ ಸಂಕಲ್ಪ ಶಕ್ತಿಯಿಂದ ನೀರಿನ ಮೇಲೆ ನಡೆಯಬಲ್ಲ, ಗಾಳಿಯಲ್ಲಿ -ಆಕಾಶದಲ್ಲಿ ನೆಗೆಯಬಲ್ಲ. ಅಷ್ಟೇ ಅಲ್ಲ ತನ್ನ ಮನೋಬಲದಿಂದ ಎಂತಹ ಸಮಸ್ಯೆಗಳಿಗೂ ಪರಿಹಾರ ಹುಡುಕಬಲ್ಲ. ಅವನ್ನು ಮೆಟ್ಟಿ ನಿಲ್ಲಬಲ್ಲ. ವ್ಯಕ್ತಿಯ ಈ ದೃಢ ಸಂಕಲ್ಪವೇ ಅವನನ್ನು ಮನುಷ್ಯನಿಂದ ದೇವನನ್ನಾಗಿ ಮಾಡುತ್ತದೆ’’ ಎಂದು ಹೇಳಿದ ಬುದ್ಧ ಧ್ಯಾನದಲ್ಲಿ ಲೀನವಾಗುತ್ತಾನೆ.