ನಮ್ಮಿಂದ ಭೂಮಿಯಲ್ಲ, ಭೂಮಿಯಿಂದ ನಾವು!!

0
598

ನಮ್ಮಿಂದ ಭೂಮಿಯಲ್ಲ, ಭೂಮಿಯಿಂದ ನಾವು

ಮಹಾಭಾರತದಲ್ಲಿ ಯುಧಿಷ್ಠಿರ ಹೇಳುವ ಒಂದು ಮಾತು ಈ ರೀತಿಯ ಅರ್ಥ ಕೊಡುತ್ತದೆ: `ಈ ಜಗತ್ತಿನಲ್ಲಿ ಮನುಷ್ಯನ ನಡವಳಿಕೆಗಿಂತಲೂ ವಿಚಿತ್ರ ಇನ್ನೊಂದಿಲ್ಲ. ನಿತ್ಯವೂ ಅವನ ಕಣ್ಣೆದುರಿಗೆ ಜನರು ಸಾಯುತ್ತಲೇ ಇದ್ದರೂ ತಾನು ಮಾತ್ರ ಚಿರಂಜೀವಿಯೇನೋ ಎಂಬಂತೆ ಅವನು ವರ್ತಿಸುವುದೇ, ಮೆರೆಯುವುದೇ ಮಹಾನ್ ಸೋಜಿಗ’.

ನಮ್ಮ ಅನೇಕ ರಾಜಕಾರಣಿಗಳಿಗೆ, ಜೀವಪೋಷಕ ಪ್ರಾಕೃತಿಕ ಮೂಲಾಂಶದ ಕೊರತೆಯಿರುವ ಜನರಿಗೆ, ತಾವು ನಿಂತ ಮರದ ಕೊಂಬೆಯನ್ನೇ ಕಡಿದುಹಾಕುವ ಹುಂಬರಿಗೆ ಈ ಮಾತು ಅನ್ವಯಿಸಬಹುದು.
ಪ್ರತಿವರ್ಷ ಏಪ್ರಿಲ್ 22 ರಂದು `ಭೂ-ದಿವಸ’ವನ್ನು ಆಚರಿಸುತ್ತೇವೆ. ಅದಾದ ನಂತರ, `ನಾವಿರುವುದು ಭೂಮಿಯಲ್ಲಿ; ಅದು ಚೆನ್ನಾಗಿದ್ದರೆ ಮಾತ್ರ ನಾವೂ ಚೆನ್ನಾಗಿರಬಹುದು; ಅದರ ಸ್ವರೂಪವನ್ನು ಕೆಡಿಸದಿರುವ ಹೊಣೆ ನಮ್ಮದು’- ಎಂಬುದೆಲ್ಲ ಮರೆತುಹೋಗುತ್ತದೆ! ಭೂಮಿ, ಭೂ-ಪರಿಸರ ಹೇಗಿದ್ದರೆ ನಮಗೇನು ಎಂಬಂತೆ ಇದ್ದೇವೆ. ಈಗ ಧರ್ಮರಾಯ ಏನು ಹೇಳುತ್ತಿದ್ದನೋ.
ನಮ್ಮ ಭೂಮಿಯಂತೆ ಜೀವರಾಶಿಯಿಂದ ತುಂಬಿರುವ ಇನ್ನೊಂದು ಗ್ರಹ ಎಲ್ಲಿದೆಯೋ ಗೊತ್ತಿಲ್ಲ. ಇದ್ದರೂ ಈ ಭೂಮಿಯನ್ನು ತೊರೆದು ಇನ್ನೊಂದು ಲೋಕಕ್ಕೆ ಎಲ್ಲ ಮನುಷ್ಯರನ್ನೂ ಕಟ್ಟಿಕೊಂಡು ಹೋಗುವುದು ಅಸಾಧ್ಯ. ಹೋದರೂ ಈಗಿನ ಸ್ವಭಾವ ಬಿಡದಿದ್ದರೆ, ಒಂದು ಊರನ್ನು ಹಾಳುಮಾಡಿ, ಇನ್ನೊಂದು ಊರನ್ನು ಸೇರಿಕೊಂಡು ಅದನ್ನೂ ಹಾಳುಮಾಡಿದಂತಾಗುತ್ತದೆ! ನಮ್ಮ ಅನೇಕ ರಾಜಕಾರಣಿಗಳು ರಾಜ್ಯದ ರಾಜಧಾನಿಗಳನ್ನು ಕೆಡಿಸಿದ ನಂತರ ದೆಹಲಿಗೆ ತೆರಳಿ ಅದನ್ನೂ ಗಬ್ಬೆಬ್ಬಿಸುವುದಿಲ್ಲವೇ? – ಹಾಗಾಗುತ್ತದೆ! ಮೂಲ ಸಮಸ್ಯೆ ಇರುವುದು ನಮ್ಮ ಸ್ವಭಾವದಲ್ಲಿ, ಪ್ರಕೃತಿಯನ್ನು ಪೋಷಿಸುವ ನಮ್ಮ ಜೀವನ ಕ್ರಮದಲ್ಲಿ. ದಿನವೂ ಹೊಸ ಹೊಸ ರೀತಿಯ ಮಾಲಿನ್ಯಗಳನ್ನು ಸೃಷ್ಟಿಸುತ್ತಿರುವ ನಾವು ಮುಂದಿನ ಪೀಳಿಗೆಗಳಿಗೆ, ಇತರ ಜೀವರಾಶಿಗಳಿಗೆ ಭೂಮಿಯನ್ನು ಉಳಿಸುತ್ತೇವೆಯೆ? `ನಮ್ಮ ಭೂಮಿ’ ಎನ್ನುತ್ತೇವೆ. ಆದರೆ, ಅದರ ಬಗ್ಗೆ ನಮಗೆಷ್ಟು ಗೊತ್ತು? ಅದರ ಇತರ ಜೀವರಾಶಿಗಳ ಬಗ್ಗೆ ಎಷ್ಟು ಗೊತ್ತು?

ವಿಜ್ಞಾನಿಗಳ ಪ್ರಕಾರ, ಸೌರವ್ಯೂಹ ರೂಪುಗೊಂಡಿದ್ದು 456,70,00,000 ವರ್ಷಗಳ ಹಿಂದೆ. ಅಂದರೆ, ಸುಮಾರು 460 ಕೋಟಿ ವರ್ಷಗಳ ಹಿಂದೆ. ಧೂಳು ಮತ್ತು ಅನಿಲಗಳ ದಟ್ಟವಾದ ಮೋಡ ಕ್ರಮೇಣ ಸೌರವ್ಯೂಹವಾಗಿ ಹೊಸ ಸ್ವರೂಪ ಪಡೆಯಿತು. ಧೂಳು ಮತ್ತು ಅನಿಲಗಳ ಈ ಮೋಡ ತನ್ನದೇ ಅಪಾರವಾದ ಆಂತರಿಕ ಗುರುತ್ವಾಕರ್ಷಣಾ ಶಕ್ತಿಯ ಕಾರಣದಿಂದಾಗಿ ಗಿರ್ರೆಂದು ನೀರಿನ ಸುಳಿಯ ಹಾಗೆ ತಿರುಗತೊಡಗಿತು; ಕ್ರಮೇಣ ಈ ಸುಳಿಯ ಮಧ್ಯದಲ್ಲಿ ಪ್ರಜ್ವಲಿಸುವ ನಕ್ಷತ್ರ ಮೂಡತೊಡಗಿತು; ಈ ನಕ್ಷತ್ರ ತನ್ನ ಸುತ್ತಲಿನ ಧೂಳು ಮತ್ತು ಅನಿಲಗಳನ್ನು ಹೆಚ್ಚಾಗಿ ತೆಗೆದುಕೊಂಡು ದೊಡ್ಡದಾಗಿ ಬೆಳೆಯತೊಡಗಿತು, ಅದೇ ಸೂರ್ಯ. ಅದರ ಕೇಂದ್ರ ಭಾಗದಿಂದ ದೂರದಲ್ಲಿಯೂ ಧೂಳು ಹಾಗೂ ಅನಿಲಗಳು ಅಲ್ಲಲ್ಲಿ ಸಂಗ್ರಹವಾಗಿ ಗ್ರಹ, ಉಪಗ್ರಹಗಳಾಗಿ ರೂಪುಗೊಂಡವು- ಎನ್ನುವುದು ವಿಜ್ಞಾನಿಗಳ ನಂಬಿಕೆ.

ಒಂದು ಕಾಲದಲ್ಲಿ ಈ ಭೂಮಿ ಕಾದ ದ್ರವವಾಗಿತ್ತು. ಕೋಟಿಗಟ್ಟಲೆ ವರ್ಷಗಳ ಕಾಲ ಬರೀ ಕಾದ ರಸದಂತೆ ಧಗಧಗಿಸುತ್ತಿತ್ತು. ಅದರಲ್ಲಿ ಜೀವಿಗಳು ಇರುವುದು ಸಾಧ್ಯವೇ ಇರಲಿಲ್ಲ. ಅದು ರೂಪುತಳೆದು ಕೋಟ್ಯಂತರ ವರ್ಷಗಳು ಕಳೆದ ನಂತರ ಜೀವಿಗಳು ಆವಿರ್ಭವಿಸಿದವು. ಸಸ್ಯಗಳು ಬೆಳೆದವು. ಈಗಿನ ತಿಳಿವಳಿಕೆಯ ಪ್ರಕಾರ, ಭೂಮಿಯ ಪ್ರಥಮ ಜೀವಿಗಳೆಂದರೆ ಏಕ ಜೀವಕೋಶದ ಜೀವಿಗಳು. ಅವು ಸುಮಾರು 300 ಕೋಟಿ ವರ್ಷಗಳ ಹಿಂದೆ ಆವಿರ್ಭವಿಸಿದವು. ಅವು ಭೂಮಿಯ ಮೇಲೆ ತಮ್ಮ ಜೀವನ ಆರಂಭಿಸಿದ ನಂತರ ಮುಂದಿನ 200 ಕೋಟಿ ವರ್ಷಗಳ ಕಾಲ ಬೇರಾವುದೇ ಜೀವಿಗಳು ಇರಲಿಲ್ಲ! ಅಂದರೆ ಸುಮಾರು 200 ಕೋಟಿ ವರ್ಷಗಳ ಕಾಲ ಭೂಮಿಯಲ್ಲಿ ಬರೀ ಏಕಕೋಶ ಜೀವಿಗಳು ಮಾತ್ರವೇ ಇದ್ದವು! ಅನಂತರ ಈ ಏಕಕೋಶ ಜೀವಿಗಳು ಬಹುಕೋಶ ಜೀವಿಗಳಾಗಿ ಮಾರ್ಪಡತೊಡಗಿದವು. ಮುಂದೆ ಸಮುದ್ರಗಳಲ್ಲಿ ನಾನಾ ತರಹದ ಜೀವರಾಶಿಗಳು ಮೊಳೆಯತೊಡಗಿದವು. ಇವೆಲ್ಲ ಆಗಲು ಲಕ್ಷಾಂತರ, ಕೋಟ್ಯಂತರ ವರ್ಷಗಳು ಬೇಕಾದವು. ಈ ಪೈಕಿ ಕೆಲವು ಪ್ರಾಣಿಗಳು ಸಮುದ್ರತೀರಕ್ಕೆ ತೆವಳಿಕೊಂಡು ಬಂದು ನೆಲದ ಮೇಲೆ ನೆಲೆಸಿದವು. ಅನಂತರ ನೆಲದ ಮೇಲೆ ಜೀವಿಗಳ ವಿಕಾಸಕ್ರಿಯೆ ಆರಂಭವಾಯಿತು. ಕೆಲವು ಕೋಟಿ ವರ್ಷಗಳಲ್ಲಿ ನೆಲದ ಮೇಲೆ ವೈವಿಧ್ಯಮಯವಾದ ಪ್ರಾಣಿ ಸಂಕುಲ ಬೆಳೆಯಿತು. ಅನಂತರ ಅನೇಕ ಪ್ರಾಣಿಗಳು ಸಾಮೂಹಿಕವಾಗಿ ನಾಶವಾದವು. ಮತ್ತೆ ಜೀವಸಂಕುಲ ಬೆಳೆಯಿತು. ಹೀಗೆ ಭೂಮಿಯ ಮೇಲೆ ಜೀವಸಂಕುಲ ಹಲವಾರು ಬಾರಿ ಸಾಮೂಹಿಕವಾಗಿ ನಾಶಗೊಂಡು ಮತ್ತೆ ಮತ್ತೆ ಆವಿರ್ಭವಿಸಿವೆ. ಯಾವ ಜೀವಿಯೂ ಭೂಮಿಯನ್ನು ಹಾಳುಗೆಡವಲಿಲ್ಲ. ಇಷ್ಟೆಲ್ಲ ನಡೆಯುತ್ತಿದ್ದಾಗ `ಮನುಷ್ಯ’ ಎಂಬ ಪ್ರಾಣಿಯ ಸುಳಿವೇ ಇರಲಿಲ್ಲ! ಮೊದಲೇ ಭೂಮಿ ಹಾಳಾಗಿದ್ದರೆ ಮನುಷ್ಯ ಎಲ್ಲಿರುತ್ತಿದ್ದ?
ಈಗ ಭೂಮಿಯಲ್ಲಿ ಸುಮಾರು 30 ಲಕ್ಷ ಬಗೆಬಗೆಯ ಪ್ರಾಣಿಗಳಿವೆ! ಸುಮಾರು 6000 ಬಗೆಯ ಸರೀಸೃಪಗಳಿವೆ. 73,000 ಬಗೆಯ ಜೇಡಗಳಿವೆ. 5000 ಬಗೆಯ ಹಾರುವ ಕೀಟಗಳು; 20,000 ಬಗೆಯ ಮಿಡತೆಗಳು, 1,70,000 ಬಗೆಯ ಚಿಟ್ಟೆಗಳು, 1,20,000 ಬಗೆಯ ನೊಣಗಳು, 82,000 ಬಗೆಯ ಹುಳುಗಳು, 3,60,000 ಜಾತಿಯ ದುಂಬಿಗಳು, 1,10,000 ಜಾತಿಗಳ ಜೇನು ಹಾಗೂ ಇರುವೆಗಳು…. ಹೀಗೇ ಪಟ್ಟಿ ಬೆಳೆಯುತ್ತದೆ. ಇದು ಬರೀ ಜಾತಿಗಳ ಸಂಖ್ಯೆ ಅಷ್ಟೇ. ಒಂದೊಂದು ಜಾತಿಯಲ್ಲೂ ಆಯಾ ಜಾತಿಗೆ (ಪ್ರಭೇದಕ್ಕೆ) ಸೇರಿದ ಪ್ರಾಣಿಗಳ, ಕೀಟಗಳ ಸಂಖ್ಯೆ ಎಷ್ಟಿದೆ ಎಂಬುದನ್ನು ಲೆಕ್ಕ ಹಾಕುವುದು ಸಾಧ್ಯವೆ?

4600 ಸಸ್ತನಿ ಪ್ರಭೇದಗಳಿವೆ. 9000 ಹಕ್ಕಿಗಳ ಪ್ರಭೇದಗಳಿವೆ. ದಕ್ಷಿಣ ಆಫ್ರಿಕಾದ ಕೆಂಪು ಕೊಕ್ಕಿನ ಕ್ವೀಲಿ ಹಕ್ಕಿಗಳ ಸಂಖ್ಯೆ ಬಹಳ ಹೆಚ್ಚು. ಸುಮಾರು 150 ಕೋಟಿ ಕೆಂಪು ಕ್ವೀಲಿಗಳಿವೆ ಎಂಬ ಅಂದಾಜಿದೆ. ಮನುಷ್ಯರ ವಿಷಯಕ್ಕೆ ಬಂದರೆ, `ಹೋಮೋ ಸೇಪಿಯನ್ಸ್’ ಪ್ರಭೇದಕ್ಕೆ ಸೇರಿದ ಒಂದೇ ಮಾನವ ಜಾತಿ ಈಗ ಭೂಮಿಯಲ್ಲಿ ನೆಲೆಸಿದೆ. ಈ ಪ್ರಭೇದದ 700 ಕೋಟಿಗೂ ಹೆಚ್ಚು ಮನುಷ್ಯರಿದ್ದಾರೆ. ಆದರೆ ಮನುಷ್ಯರ ಸಂಖ್ಯೆ ಏನೇನೂ ಅಲ್ಲ. ಭೂಮಿಯಲ್ಲಿ ಹೆಚ್ಚಾಗಿ ಇರುವುದು ಕೀಟಗಳು. ಜಗತ್ತಿನಲ್ಲಿರುವ ಕೀಟಗಳನ್ನೆಲ್ಲ ಸಂಗ್ರಹಿಸಿ, ಜಗತ್ತಿನ ಎಲ್ಲ 700 ಕೋಟಿ ಮನುಷ್ಯರಿಗೂ ಸಮವಾಗಿ ಹಂಚಲಾಗುತ್ತದೆ ಎಂದು ಕಲ್ಪಿಸಿಕೊಳ್ಳಿ. ಆಗ ಪ್ರತಿಯೊಬ್ಬ ವ್ಯಕ್ತಿಗೂ ಸುಮಾರು 20 ಕೋಟಿ ಕೀಟಗಳು ಸಿಗುತ್ತವೆ! ಇಷ್ಟೆಲ್ಲ ಅಪಾರ ಜೀವರಾಶಿಗೆ ಬೇಕಾದ ಆಹಾರಗಳೆಲ್ಲ ಭೂಮಿಯಲ್ಲೇ ಸಿಗುತ್ತಿರುವುದು ಭೂಮಿಯ ಇನ್ನೊಂದು ವೈಶಿಷ್ಟ್ಯ!
ಭೂಮಿಗೆ ಮತ್ತು ಜೀವರಾಶಿಗೆ ಇಷ್ಟು ದೀರ್ಘವಾದ ಇತಿಹಾಸವಿದೆ. ಆಧುನಿಕ ಮನುಷ್ಯ ನಿನ್ನೆಯೋ ಮೊನ್ನೆಯೋ ರೂಪುತಳೆದವನು. ಅವನಿಗೆ ಇಂತಹ ಅದ್ಭುತ ಭೂ-ವ್ಯವಸ್ಥೆಯನ್ನೆಲ್ಲ ಕಲಸುಮೇಲೋಗರ ಮಾಡುವ, ನಾಶಪಡಿಸುವ ಹಕ್ಕನ್ನು ಕೊಟ್ಟವರು ಯಾರು?