ಸರ್ಕಾರದಿಂದ ಅವೈಜ್ಞಾನಿಕ ಪಠ್ಯಕ್ರಮದಿಂದ ಮಕ್ಕಳಿಗೆ ಏನೆಲ್ಲಾ ತೊಂದರೆ ಆಗುತ್ತಿದೆ ಗೊತ್ತ?

0
693

ಪಠ್ಯಕ್ರಮ ನೀತಿಯೇ ಅಕ್ರಮ

ಹೊಸ ಪಠ್ಯಕ್ರಮ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ವಾದ-ವಿವಾದಕ್ಕೆ ಕಾರಣವಾಗಿದೆ. ಈ ವಾದ-ವಿವಾದ ಏನಿದ್ದರೂ, ಶೈಕ್ಷಣಿಕ ಕ್ಷೇತ್ರದ ಗುಣಮಟ್ಟ, ಮೌಲ್ಯಗಿಂತಲೂ ಅವರವರ ಭಾವ ಭಕುತಿಗೆ ಸಂಬಂಧಿಸಿದ್ದು. ತತ್ವ ಸಿದ್ದಾಂತ ಏನೇ ಇದ್ದರೂ, ಅದು ವ್ಯಕ್ತಿಗತ, ಸಂಘಟನೆ, ಪಕ್ಷಕ್ಕೆ ಸೀಮಿತವಾಗಿರಬೇಕೆ ಹೊರತಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ನುಸುಳಬಾರದು. ಪ್ರಸ್ತುತ ನಡೆಯುತ್ತಿರುವ ಸಂಗತಿಗಳು ರೂಪಿತವಾಗಲಿರುವ ಪಠ್ಯಕ್ರಮದ ಗುಣಾವಗುಣ ಅವಲೋಕನಕ್ಕಿಂತಲೂ ವ್ಯಕ್ತಿ ಕೇಂದ್ರೀತವಾಗಿ ಬಿಂಬಿತಾಗುತ್ತಿವೆ. ಇದು ಈ ದೇಶದ ಶೈಕ್ಷಣಿಕ ಕ್ಷೇತ್ರದ ದೌರ್ಭಾಗ್ಯವೇ ಸರಿ.

ಯಾವುದೇ ಒಂದು ಪಠ್ಯಕ್ರಮ ರೂಪಿಸುವಾಗ ಸರ್ಕಾರವು ವೈಜ್ಞಾನಿಕ ರೀತಿಯಲ್ಲಿ ಆಲೋಚನೆ ನಡೆಸಬೇಕೆ ಹೊರತು ತನಗಿಷ್ಟ ಬಂದವರನ್ನು ನೇಮಿಸಿ, ಸಮಿತಿ ರಚಿಸಿ, ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವುದೆಂದರೇ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ವೈಜ್ಞಾನಿಕ ದೃಷ್ಟಿಕೋನದಲ್ಲಿ ಹೇಳುವುದಾದಲ್ಲಿ ಯಾವುದೇ ಒಂದು ಪಠ್ಯಕ್ರಮ ರೂಪಿತವಾಗಬೇಕಾದಲ್ಲಿ ತರ್ಕಶಾಸ್ತ್ರಜ್ಞರು, ಸಮಾಜ ಶಾಸ್ತ್ರಜ್ಞರು, ಮನಃಶಾಸ್ತ್ರಜ್ಞರು ಹಾಗೂ ವಿಷಯತಜ್ಞರು, ಸಂಬಂಧಿಸಿದ ವಿಷಯದ ಸಾಮಾನ್ಯ ಶಿಕ್ಷಕ ಹೀಗೆ ನಾಲ್ವರ ಸಮಿತಿ ರಚಿತವಾಗಬೇಕು.

ಇದಕ್ಕೂ ಪೂರ್ವದಲ್ಲಿ ಸಾಮಾಜಿಕ, ಬೌದ್ಧಿಕ ಮಾನದಂಡ ಅನುಸರಿಸಿದ ಪರಿಸರದ ಸಮೀಕ್ಷೆ ಅನಿವಾರ್ಯ. ಇದನ್ನು ಅನುಸರಿಸಿ ಬೌದ್ಧಿಕ ಗುಣಮಟ್ಟದ ಪರಿಮಿತಿ ಪರಿಗಣನೆಯಲ್ಲಿಟ್ಟುಕೊಂಡು ಹಾಗೆಯೇ ಜಾಗತಿಕ ಶಿಕ್ಷಣ ಕ್ಷೇತ್ರದಲ್ಲಿನ ಬೆಳವಣಿಗೆಗಳು, ಪ್ರಸ್ತುತದ ಅನಿವಾರ್ಯತೆಗಳು, ಭವಿಷ್ಯದ ದೃಷ್ಟಿಕೋನ ಗಮನದಲ್ಲಿಟ್ಟುಕೊಂಡು ಬುದ್ಧಿಮತ್ತೆ ಮತ್ತಷ್ಟು ಚುರುಕುಗೊಳಿಸುವ ವಿಕಸನದ ಹಾದಿಯಲ್ಲಿ ಪಠ್ಯಕ್ರಮ ರಚನೆ ಆಗಬೇಕು.

ಪಠ್ಯಕ್ರಮ ರಚನೆಯ ವಿಷಯ ಪ್ರಾಮಾಣಿಕವಾಗಿದ್ದಷ್ಟೂ, ಹೆಚ್ಚೆಚ್ಚು ವಿಷಯಗಳನ್ನು ಪರ-ವಿರೋಧ ಏನೇ ಇರಲಿ ಸಾರವನ್ನು ವಿದ್ಯಾರ್ಥಿಗೆ ನೀಡಿದಾಗ ಮಾತ್ರವೇ ಅದು ಸಾಕಾರ ಸ್ಥಿತಿಗೆ ಕೊಂಡೊಯ್ಯಬಲ್ಲದು. ಆರಂಭದಲ್ಲೇ ವಿಷಯಗಳು ವಾದ-ವಿವಾದಕ್ಕಿಳಿದು ತಿಕ್ಕಾಟಕ್ಕಿಳಿದರೆ ವಿಕಸನದ ಬದಲಿಗೆ ಸಂಕುಚಿತ ಸ್ಥಿತಿಗೆ ಬರಬೇಕಾಗುತ್ತದೆ. ಈಗ ಆಗುತ್ತಿರುವುದು ಇದೇ. ಬಹುಶಃ ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಅವಲಕ್ಷಣ ಎಂಬುವುದಕ್ಕಿಂತಲೂ ದುರಂತ ಎನ್ನುವುದೇ ಸೂಕ್ತ.

ಆಯಾ ಸರ್ಕಾರಗಳು ತಮ್ಮ ಬಾಲಬುಡುಕರನ್ನೇ ಸಮಿತಿಯಲ್ಲಿ ಸೇರಿಸುವುದು. ಸಮಿತಿ ರಚನೆಗೆ ಜಾತಿ ಮಾನದಂಡ. ಮೌಲ್ಯ ಸಿದ್ದಾಂತಗಳ ಹಣೆಪಟ್ಟಿ ಕಟ್ಟುವುದರಿಂದ ಪಠ್ಯಕ್ರಮ ರಚನೆಯ ವಿಷಯವು ಸರಿದಾರಿಗಿಂತಲೂ ಅಡ್ಡದಾರಿ ಹಿಡಿಯುತ್ತದೆ. ಹೀಗಾಗಿ ಇಂತಹ ಪ್ರಸಂಗಗಳಲ್ಲಾದಾರೂ, ರಾಜಕಾರಣಿಗಳು ಪಕ್ಷಭೇದ ಮರೆತು ತಜ್ಞರಿಗೆ ಅದನ್ನು ಒಪ್ಪಿಸಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರೆ ಅದಕ್ಕೊಂದು ಸಾರ್ಥಕತೆ ಬರಬಹುದು. ಸದ್ಯದ ಸಮಸ್ಯೆ ಪ್ರಸ್ತುತ ಕರ್ನಾಟಕವೂ ಸೇರಿ ದೇಶದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಗಣಿತ, ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳಲ್ಲಿ ಅದಕ್ಕಿಂತಲೂ ಮೂಲಸಮಸ್ಯೆ ಬರವಣಿಗೆ. ಶೇ.55ರಷ್ಟು ವಿದ್ಯಾರ್ಥಿಗಳಲ್ಲಿ ಈಗಲೂ ಬರವಣಿಗೆ ಬಗ್ಗೆ ಸ್ಪಷ್ಟ ಜ್ಞಾನವಿಲ್ಲ. ಜ್ಞಾನವಿಲ್ಲ ಎಂದರೆ ಆಸಕ್ತಿಯ ಕೊರತೆ ಇದಕ್ಕೆ ಕಾರಣ. ಆಸಕ್ತಿಯ ಕೊರತೆಗೆ ಶಿಕ್ಷಕರು ಕಾರಣ.
ಶಿಕ್ಷಕರಿಗೆ ಅನಾಸಕ್ತಿಗಿಂತಲೂ ಪಠ್ಯಕ್ರಮ, ಗುಣಮಟ್ಟವಿಲ್ಲದ ವಿಷಯ, ಪುನರಾವರ್ತಿತ ವಿಷಯಗಳು ಕಾರಣ. ಹೀಗೆ ಇದು ಒಂದಕ್ಕೊಂದು ಸರಪಳಿಯಂತಹ ಕೊನೆಯಿಲ್ಲದ ವಿಷಯ.
ಶಿಕ್ಷಣ ಕ್ಷೇತ್ರದಲ್ಲಿನ ಮತ್ತೊಂದು ಸಮಸ್ಯೆ ಅಸಮಾನ ಕಲಿಕೆ. ಒಂದೇ ತರಗತಿ, ಪರಿಸರ, ಪಠ್ಯಕ್ರಮ ಎಲ್ಲವೂ ಒಂದೇ ತೆರನಾಗಿದ್ದರೂ, ವಿದ್ಯಾರ್ಥಿಗಳಲ್ಲಿ ಜ್ಞಾನ ಹಂಚಿಕೆಯ ಪ್ರಮಾಣ ಸಮಾನವಾಗಿರದೆಯೇ ಅಸಮಾನ ಹಂಚಿಕೆ ಆಗಿರುವುದು ಬಹುದೊಡ್ಡ ಸಮಸ್ಯೆ. ಇದಕ್ಕೆ ಸಂವಹನ ಮತ್ತು ಶಿಕ್ಷಕರಲ್ಲಿನ ಕೌಶಲ್ಯದ ಕೊರತೆ ಕಾರಣ. ಕಲಿಕೆಯ ಪರಿಸರದ ವಾಸ್ತವ ಸಂಗತಿಗಳಿಂದ ಹೊರತಾದ ಒತ್ತಡಪೂರ್ವಕ ವಿಷಯಗಳನ್ನು ತುಂಬುವುದರ ವ್ಯತಿರಿಕ್ತ ಪರಿಣಾಮವೇ ಅಸಮಾನ ಕಲಿಕೆ.

ಇಂತಹ ಕಲಿಕೆಯು ವಿದ್ಯಾರ್ಥಿಗಳಲ್ಲಿ ತಾರತಮ್ಯತೆಗೆ ಕಾರಣವಾಗುವುದಲ್ಲದೇ, ಮಾನಸಿಕ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಇದರ ಪರಿಣಾಮ ಪರೀಕ್ಷೆಗಳಲ್ಲಿ ಗೋಚರವಾಗಿ ಅದು ಗಂಭೀರ ಸ್ಥಿತಿಗೂ ತಿರುಗಬಲ್ಲದು. ಪರೀಕ್ಷೆ ಬರೆದು ಅಂಕ ಸಿಕ್ಕದೇ ಹತಾಶೆಗೊಂಡು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವುದರ ಮೂಲ ಕಾರಣ ಇದಾಗಿದೆ. ಮನಶಾಸ್ತ್ರಜ್ಞರು ಇದನ್ನು ದುರ್ಬಲ ಮನಸ್ಸು ಎಂದು ವ್ಯಾಖ್ಯಾನಿಸಿದರೆ, ಸಮಾಜಶಾಸ್ತ್ರಜ್ಞರು ಪೋಷಕರ ಒತ್ತಡ ಎಂದು ಜರೆಯುತ್ತಾರೆ. ಆದರೆ, ಇವೆಲ್ಲದರಿಂದ ಹೊರತಾದ ಅಸಮಾನ ಜ್ಞಾನ ಹಂಚಿಕೆಯ ಲೋಪದ ಬಗ್ಗೆ ಯಾರೊಬ್ಬರು ಮಾತನಾಡುವುದಿಲ್ಲ.
ಶಿಕ್ಷಕರ ಗುಣಮಟ್ಟ

ಇಂದಿನದು ಸಂವಹನ ಯುಗ. ಸಂವಹನ ಯುಗದಲ್ಲಿ ಸುದ್ದಿಗಳು ಬಹುಬೇಗ ಹರಡುತ್ತವೆ. ಸುದ್ದಿಗಳೇ ಈಗಿನ ಜ್ಞಾನ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬದಲಾಗಿ ಬಿಟ್ಟಿದೆ. ಹೀಗಾಗಿ ಶಿಕ್ಷಕ ಅವರೆಲ್ಲರಗಿಂತಲೂ ಮುಂದಿರಬೇಕಾದ ಕಾಲ ಇದು. ಆತ ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೊಂದಿರದಿದ್ದರೂ, ಆಯಾ ವಿಷಯದಲ್ಲಿ ಪ್ರಾವೀಣ್ಯತೆ ಸಾಧಿಸಿರಬೇಕು. ಪ್ರಾವೀಣ್ಯತೆಯ ಜೊತೆಗೆ ಆಸಕ್ತಿಯೂ ಇರಬೇಕು. ಈ ದಿಸೆಯಲ್ಲಿ ಸೇವಾಭಾವನೆ, ತಾಳ್ಮೆ, ಉಪನ್ಯಾಸ ಬಗೆಗಿನ ಆಸಕ್ತಿ, ಹೊಸಹೊಸ ವಿಷಯ ಅರಿತು ವಿದ್ಯಾರ್ಥಿಗಳಿಗೆ ಅರಹುವ ಅವಕಾಶ ಶಿಕ್ಷಕನಿಗೆ ಇರಬೇಕಾಗುತ್ತದೆ. ಆದರೆ, ಈ ಎಲ್ಲ ಸಂಗತಿಗಳಿಗೂ ಕಡಿವಾಣ ಹಾಕಿ ಆತನನ್ನು ಕಟ್ಟಿ ಹಾಕಿರುತ್ತದೆ. ಶಿಕ್ಷಕನಿಗೆ ಸ್ವಾತಂತ್ರ್ಯವೇ ಇಲ್ಲದ ಪಠ್ಯಕ್ರಮ, ಶಿಕ್ಷಣ ನೀತಿ ಇದು.

ಕಬ್ಬಿಣದ ಕಡಲೆ

ಭಾರತೀಯರಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗಣಿತ, ಇಂಗ್ಲಿಷ್ ಮತ್ತು ವಿಜ್ಞಾನ ಕಬ್ಬಿಣದ ಕಡಲೆ. ಶಿಕ್ಷಕ ವರ್ಗವೂ ಇದರಿಂದ ಹೊರತಾಗಿಲ್ಲ. ಸರ್ಕಾರಕ್ಕೆ ಆಸಕ್ತಿ, ಕಾಳಜಿ ಭವ್ಯ ಭವಿಷ್ಯದ ಭಾರತದ ಬಗ್ಗೆ ಕಾಳಜಿ ಇದ್ದಲ್ಲಿ ಮೊದಲು ಈ ವಿಷಯಗಳತ್ತ ಗಮನ ಹರಿಸಬೇಕಿದೆ. ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳಲ್ಲಿನ ಕರ್ನಾಟಕ ಶಿಕ್ಷಕರ ಜ್ಞಾನವು 12ನೇ ಸ್ಥಾನದಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ಸುಲಲಿತವಾಗಿ ಈ ವಿಷಯಗಳನ್ನು ಅರಿಯಲು ಸಾಕಷ್ಟು ಮಾರ್ಗಗಳಿವೆ. ಹೀಗಾಗಿ ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯ ರಚಿಸಲು ತಜ್ಞರ ಕೈಗೆ ಒಪ್ಪಿಸಬೇಕು. ತದನಂತರ ಈ ಕುರಿತು ಶಿಕ್ಷಕರಿಗೂ ತರಬೇತಿ ನೀಡಬೇಕು. ಹಾಗಾದಾಗ ಮಾತ್ರವೇ ಗುರಿ ಮುಟ್ಟಲು ಸಾಧ್ಯ, ಗುರುವಿಗೆ ಜ್ಞಾನ ಕೊರತೆ ಇದ್ದಾಗ ಶಿಷ್ಯನ ಜ್ಞಾನ ಭಂಡಾರ ತುಂಬಿತೇ?