ಟೇಸ್ಟಿ ಎಗ್ ಬಿರಿಯಾನಿ ತಯಾರಿಸುವ ವಿಧಾನ

1
7040

 

ಬೇಕಾಗುವ ಸಾಮಾಗ್ರಿಗಳು: 4-5 ಬೇಯಿಸಿದ ಮೊಟ್ಟೆ,  2 ಈರುಳ್ಳಿ,  1 ಟೊಮೆಟೊ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದೀನಾ ಎಲೆ, 2 ಚಮಚ ತುಪ್ಪ,  ಒಂದೂವರೆ ಚಮಚ ಎಣ್ಣೆ,  ಮುಕ್ಕಾಲು ಕಪ್ ಮೊಸರು ,  5 ಹಸಿಮೆಣಸಿನ ಕಾಯಿ (ಚಿಕ್ಕದಾಗಿ ಕತ್ತರಿಸಿದ್ದು),  ಅರ್ಧ ಚಮಚ ಶುಂಠಿ ಪೇಸ್ಟ್, ಕಾಲು ಚಮಚ ಕೆಂಪು ಮೆಣಸಿನ ಪುಡಿ, ಕಾಲು ಚಮಚ ಕೊತ್ತಂಬರಿ ಪುಡಿ,  2 ಚಮಚ ನಿಂಬೆರಸ,  ರುಚಿಗೆ ತಕ್ಕ ಉಪ್ಪು,  ಒಂದು ಚಮಚ ಬಿಸಿ ಹಾಲಿನಲ್ಲಿ ಚಿಟಿಕೆಯಷ್ಟು ಹಾಕಿದ ಕೇಸರಿ ಬಿರಿಯಾನಿಗೆ ಮಸಾಲೆ, 4 ಲವಂಗ,  ಅರ್ಧ ಇಂಚಿನಷ್ಟು ದೊಡ್ಡದಿರುವ ಚಕ್ಕೆ,  1 ನಕ್ಷತ್ರ ಮೊಗ್ಗು,  5 ಕರಿಮೆಣಸಿನ ಕಾಳು ಇವುಗಳನ್ನು ಪುಡಿ ಮಾಡಿಡಬೇಕು.

ಬಿರಿಯಾನಿ ಅನ್ನ ಮಾಡಲು ಬೇಕಾಗುವ ಸಾಮಾಗ್ರಿಗಳು: ಎರಡೂವರೆ ಕಪ್ ಬಾಸುಮತಿ ಅಕ್ಕಿ 3 ಬೆಳ್ಳುಳ್ಳಿ ಎಸಳು 3 ಲವಂಗ ಅರ್ಧ ಇಂಚಿನಷ್ಟು ದೊಡ್ಡದಿರುವ ಚಕ್ಕೆ 2 ಪಲಾವ್ ಎಲೆ 5-6 ಪುದೀನಾ ಎಲೆ ಒಂದು ಚಮಚ ಎಣ್ಣೆ ನೀರು

 ತಯಾರಿಸುವ ವಿಧಾನ:

* ಬಿರಿಯಾನಿ ಅನ್ನ ಮಾಡಲು ಹೇಳಿರುವ ಸಾಮಾಗ್ರಿಗಳನ್ನು ಹಾಕಿ, ಚಿಟಿಕೆಯಷ್ಟು ಉಪ್ಪು ಹಾಕಿ ಅನ್ನ ಮಾಡಿ ಒಂದು ಪಾತ್ರೆಯಲ್ಲಿ ಆರಲು ಇಡಬೇಕು.

 *ಈಗ ಒಂದೂವರೆ ಚಮಚ ಎಣ್ಣೆ ಮತ್ತು ಒಂದೂವರೆ ಚಮಚ ತುಪ್ಪ ಹಾಕಿ ಅದರಲ್ಲಿ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಬೇಕು. ಅದರಲ್ಲಿ ಹುರಿದ ಈರುಳ್ಳಿಯ ಅರ್ಧದಷ್ಟು ಭಾಗವನ್ನು ತೆಗೆದು ಒಂದು ಪಾತ್ರೆಯಲ್ಲಿ ಹಾಕಿಡಬೇಕು.

* ಉಳಿದ ಅರ್ಧ ಭಾಗ ಈರುಳ್ಳಿಗೆ ಹಸಿ ಮೆಣಸಿನ ಕಾಯಿ, ಟೊಮೆಟೊ, ಪುದೀನಾ, ಕೊತ್ತಂಬರಿ ಸೊಪ್ಪುಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಬಿಸಿ ಮಾಡಬೇಕು. ನಂತರ ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಬಿರಿಯಾನಿ ಮಸಾಲೆ ಪುಡಿ ಮತ್ತು ಟೊಮೆಟೊ, ರುಚಿಗೆ ತಕ್ಕ ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಹುರಿಯಬೇಕು. ನಂತರ ಮೊಸರು ಹಾಕಿ ಚೆನ್ನಾಗಿ ಕುದಿಸಿ, ನಂತರ ಅದರಲ್ಲಿ ಮೊಟ್ಟೆಯನ್ನು ಹಾಕಬೇಕು.

*ಈಗ ಸ್ವಲ್ಪ ಅಗಲವಿರುವ ಪಾತ್ರೆ ತೆಗೆದುಕೊಂಡು ತಳಭಾಗದಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾದಾಗ ಎಗ್ ಮಸಾಲ ನಂತರ ಬಿರಿಯಾನಿ ಅನ್ನ , ನಂತರ ಎಗ್ ಮಸಾಲ  ಅದರ ಮೇಲೆ ಬಿರಿಯಾನಿ ಅನ್ನ ಹಾಕಿ ಈಗ ಒಂದು ಚಮಚ ತುಪ್ಪ ಹಾಕಿ ನಂತರ ಹುರಿದಿಟ್ಟ ಈರುಳ್ಳಿ ಹಾಕಿ ಒಮ್ಮೆ ಮಿಶ್ರಣ ಮಾಡಿ, ಹಾಲಿನಲ್ಲಿ ಹಾಕಿಟ್ಟ ಕೇಸರಿಯನ್ನು ಹಾಕಿ ಪಾತ್ರೆಯ ತಟ್ಟೆ ಮುಚ್ಚಿ, ಅದರ ಮೇಲೆ ಸ್ವಲ್ಪ ಭಾರವಾದ ವಸ್ತುವನ್ನು ಇಟ್ಟು ಕಡಿಮೆ ಉರಿಯಲ್ಲಿ 5 ನಿಮಿಷ ಬಿಸಿ ಮಾಡಿದರೆ ತುಂಬಾ ರುಚಿಯಾದ ಎಗ್ ಬಿರಿಯಾನಿ ರೆಡಿ.