ಪಿಎಂ ನರೇಂದ್ರ ಮೋದಿ’ ಬಯೋಪಿಕ್​ ಸಿನಮಾ ಬ್ಯಾನ್​; ಚುನಾವಣೆ ಮುಗಿಯುವವರೆಗೂ ಮೋದಿ ಚಿತ್ರ ಬಿಡುಗಡೆ ಭಾಗ್ಯ ಇಲ್ಲ..

0
406

ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ ದೇಶದೆಲ್ಲೆಡೆ ಬಾರಿ ವೈರಲ್ ಆಗಿದೆ. ಅದರಲ್ಲಿ ಈ ಸಿನಿಮಾ ಲೋಕಸಭಾ ಚುನಾವಣೆಯ ಮುಂಚಿತವಾಗಿ ತೆರೆಯಮೇಲೆ ಬರುತ್ತದೆ ಎನ್ನುವ ಸುದ್ದಿ ಹರಡಿ ಮತಷ್ಟು ಸುದ್ದಿಯಲ್ಲಿತ್ತು. ಆದರೆ ಇದಕ್ಕೆ ಚುನಾವಣಾ ಆಯೋಗ ಬುಧವಾರ ತಡೆಯಾಜ್ಞೆ ಹೇರಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೂ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಆದೇಶಿಸಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ವ್ಯಕ್ತಿಗಳ ಯಾವುದೇ ಜೀವನಾಧಾರಿತ ಚಿತ್ರ ಬಿಡುಗಡೆಗೆ ಅವಕಾಶ ಇಲ್ಲ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

ಹೌದು ‘ಪಿಎಂ ನರೇಂದ್ರ ಮೋದಿ’ ಏ.5ರಂದು ಚಿತ್ರ ದೇಶಾದ್ಯಂತ ತೆರೆಗೆ ಬರಬೇಕಿತ್ತು. ಬಿಡುಗಡೆ ಆಗುತ್ತಿರುವುದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಚಿತ್ರ ರಿಲೀಸ್​ ಆದರೆ, ನೀತಿ ಸಂಹಿತೆ ಉಲ್ಲಂಘನೆ ಆದಂತಾಗುತ್ತದೆ ಎಂದು ವಿಪಕ್ಷಗಳು ವಾದಿಸಿದ್ದವು. ಈ ಪ್ರಕರಣ ಚುನಾವಣಾ ಆಯೋಗದ ಅಂಗಳದಲ್ಲಿತ್ತು. ಆದರೆ, ಕೊನೇ ಕ್ಷಣದಲ್ಲಿ ಚುನಾವಣಾ ಆಯೋಗ ಸಿನಿಮಾ ಬಿಡುಗಡೆಗೆ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಏ.12ರಂದು ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವ ಯೋಚನೆ ಚಿತ್ರತಂಡದ್ದಾಗಿತ್ತು. ಆದರೆ, ಚುನಾವಣೆ ಸಮಯದಲ್ಲಿ ಯಾವುದೇ ಬಯೋಪಿಕ್​ ರಿಲೀಸ್​ ಆಗಬಾರದು ಎಂದು ಆಯೋಗ ಹೇಳಿರುವುದರಿಂದ ಈ ಚಿತ್ರಕ್ಕೆ ಹಿನ್ನಡೆ ಆಗಿದೆ.

ಚಿತ್ರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ ಏನು?

ಪಿಎಂ ನರೇಂದ್ರ ಮೋದಿ ಸಿನಿಮಾವನ್ನು ಮೊದಲ ಹಂತದ ಮತದಾನ ನಡೆಯಲಿರುವ ಏಪ್ರಿಲ್ 11ರಂದು ಚಿತ್ರ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಪ್ರಕಟಿಸಿದ್ದರು. ಈ ಸಿನಿಮಾ ಮತದಾರರ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತ ಅಮಾನ್ ಪನ್ವರ್ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ, ಸಿನಿಮಾ ಬಿಡುಗಡೆಗೆ ತಡೆ ನೀಡಲು ಮಂಗಳವಾರ ನಿರಾಕರಿಸಿತ್ತು. ಇದೊಂದು ವಿವಾದದ ವಿಷಯವೇ ಅಲ್ಲ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠವು, ಕೇವಲ ಎರಡು ಪ್ರೋಮೊ ನೋಡಿ ಇಡೀ ಚಿತ್ರದ ಬಗ್ಗೆ ಅಭಿಪ್ರಾಯಕ್ಕೆ ಬರಲಾಗದು. ಅರ್ಜಿದಾರರು ಬೇಕಿದ್ದರೆ ಚುನಾವಣಾ ಆಯೋಗದ ಮೊರೆ ಹೋಗಬಹುದು ಎಂದು ತಿಳಿಸಿದ್ದರು.

ಸಿನಿಮಾದಲ್ಲಿ ಅಂತಹದು ಏನಿದೆ?

ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ವಿವೇಕ್ ಒಬೇರಾಯ್ ಕಾಣಿಸಿಕೊಂಡಿದ್ದು, `ಮೇರಿ ಕೋಮ್’, ಸರಬ್ಜಿತ್ ಸಿಂಗ್ ಜೀವನಾಧಾರಿತ ಸಿನಿಮಾಗಳನ್ನು ಯಶಸ್ವಿಯಾಗಿ ನಿರ್ದೇಶನ ಮಾಡಿದ್ದ ಒಮಂಗ್ ಕುಮಾರ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪೋಸ್ಟರ್ ಒಂದನ್ನೇ 27 ಭಾಷೆಗಳಲ್ಲಿ ಚಿತ್ರತಂಡ ಬಿಡುಗಡೆ ಮಾಡಿತ್ತು. ಅದರಂತೆ ಮೋದಿ ಅವರ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳೊಂದಿಗೆ ಗುಜರಾತ್ ಸಿಎಂ ಆದ ಬಳಿಕ ಮಾಡಿದ ಸಾಧನೆಗಳಿಂದ ಪ್ರಧಾನಿಯಾಗುವ ಅವಧಿಯ ಜೀವನವನ್ನು ಆಧಾರಿಸಿದೆ.