ತಿನ್ನೋ ಪದಾರ್ಥಗಳ ಬೆಲೆ ಜಾಸ್ತಿಯಾಗ್ತಿದೆ, ಆದರೆ ಅದರ ಲಾಭ ಮಾತ್ರ ರೈತರಿಗೆ ಸಿಗ್ತಿಲ್ಲ; ಈ ಸಮಸ್ಯೆನಾ ನಿವಾರಿಸೋಕ್ಕೆ ನಡಿತಾ ಇದೆ ಭೂಮಿ ಸಂತೆ!!

0
552

ಬೆಂಗಳೂರು: ಇಲ್ಲಿನ ಭೂಮಿ ನೆಟ್ವರ್ಕ್ ನಿಂದ ಆಯೋಜಿಸಲ್ಪಡುವ ಪ್ರತಿ ತಿಂಗಳ ಮೊದಲ ಶನಿವಾರದಂದು ಸರ್ಜಾಪುರ ಮೈನ್ ರೋಡ್ ನಲ್ಲಿರುವ ಭೂಮಿ ಕಾಲೇಜ್ ಆವರಣದಲ್ಲಿ ಆರಂಭವಾದ “ಭೂಮಿ ಸಂತೆ”ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಿಂದಾಗಿ ಮಾರುಕಟ್ಟೆಗೆ ಹೋಗುವ ಎಲ್ಲ ಗ್ರಾಹಕರು ಅತ್ತ ಮುಖಮಾಡಿದ್ದರು.

ಯಾವುದೇ ದಲ್ಲಾಳಿಗಳ ಹಸ್ತಕ್ಷೇಪವಿಲ್ಲದೇ ತರಕಾರಿ ಮಾರಾಟ ಮಾಡುವ ಉದ್ದೇಶದಿಂದಾಗಿ ಈ ಸಂತೆಯನ್ನು ಆರಂಭಿಸಲಾಗಿದೆ. ರೈತರು ತಮ್ಮ ತೋಟದಲ್ಲಿ ಬೆಳೆದ ತರಕಾರಿ, ಬಾಳೆಹಣ್ಣು ಮತ್ತು ಸೊಪ್ಪು ಮತ್ತಿತರ ಪದಾರ್ಥಗಳನ್ನು ನೇರವಾಗಿ ತಂದು ಮಾರಾಟ ನಡೆಸಿದರು.

ಭೂಮಿ ಸಂತೆ ಭೂಮಿ ನೆಟ್ವರ್ಕ್ ಸಂಸ್ಥಾಪಾಕಿ ಸೀತಾ ಅನಂತಶಿವನ್ ಅವರಿಂದ ಆರಂಭಿಸಲ್ಪಟ್ಟಿದೆ. ಸರ್ಜಾಪುರ ಪ್ರದೇಶದಿಂದ ಮತ್ತು ಕರ್ನಾಟಕದ ಇತರೆ ಭಾಗಗಳಿಂದ ಸಾವಯವ ರೈತರು ಸ್ಥಳೀಯವಾಗಿ ಬೆಳೆದಿರುವ ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರಲು ಹಾಗೂ ಸ್ಪರ್ಧಾತ್ಮಕ ಬೆಲೆ ದೊರಕಿಸಿಕೊಡಲು ಭೂಮಿ ಸಂತೆ ಆರಂಭಿಸಲಾಗಿದೆ. ಇದು ಉತ್ತಮವಾದ ಕೆಲಸ ರೈತರಿಗೆ ಇದರಿಂದ ಅನುಕೂಲವೇ ಹೆಚ್ಚು’ ಎಂಬುವುದು ಸೀತಾ ರವರ ಅಭಿಪ್ರಾಯ.

ಅಷ್ಟೇ ಅಲ್ಲ, ಇವರು ಭೂಮಿ ಕಾಲೇಜ್ ಅನ್ನುವ ಪರಿಸರದ ಬಗ್ಗೆ ಕಾಳಜಿ ತೋರುತ್ತಿರುವ ಬೆಂಗಳೂರಿನ ಸರ್ಜಾಪುರ ಮೈನ್ ರೋಡ್ ನಲ್ಲಿರುವ ಒಂದು ಕಾಲೇಜ್ ಅನ್ನು ಸ್ಥಾಪಿಸಿದ್ಧಾರೆ. 62 ವರ್ಷದ ಸೀತಾ ಅನಂತಶಿವನ್ ಓದಿದ್ದು ಎಂಬಿಎ ಆದರೂ ಅದೇನೋ ಮೊದಲಿನಿಂದಲೂ ಭೂಮಿಯ ಮೇಲೆ ಹೆಚ್ಚು ಆಸಕ್ತಿ.

ಎಂಬಿಎ ಓದಿದ್ದರೂ ತಮ್ಮ ಮನಸ್ಸಿನ ಆಸೆಯಂತೆ ಪರಿಸರದ ಬಗೆಗಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಸೀತಾ 2012ರಲ್ಲಿ ಈ ಭೂಮಿ ಕಾಲೇಜ್ ಅನ್ನು ಶುರು ಮಾಡಿದರಂತೆ. ಈ ಕಾಲೇಜ್ ನಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ, ಉಳಿಸಿ ಬೆಳೆಸುವ ಕೆಲಸ ಮಾಡಲಾಗುತ್ತಿದೆ. ಈ ಕಾಲೇಜಿನ ಕ್ಯಾಂಪಸ್ ನಲ್ಲಿ ಸುಮಾರು 150 ಪ್ರಭೇದಗಳ ಮರಗಳಿದ್ದು, ಆರ್ಗ್ಯಾನಿಕ್ ಗಾರ್ಡನ್ ಕೂಡ ಇದೆ. ಈ ಕಾಲೇಜು ತನ್ನ ಶೇ. 90ರಷ್ಟು ವಿದ್ಯುತ್ ಅವಶ್ಯಕತೆಯನ್ನು ಸೌರಶಕ್ತಿಯಿಂದಲೇ ಪೂರೈಸಿಕೊಳ್ಳುತ್ತಿದೆ.

* * ಭೂಮಿ ಸಂತೆ * *
ಪ್ರತಿ ತಿಂಗಳ ಮೊದಲ ಶನಿವಾರ
ಸ್ಥಳ: ಭೂಮಿ ಕ್ಯಾಂಪಸ್
ಸಮಯ: 10.00 ರಿಂದ 03.00 ಕ್ಕೆ