ಕಣ್ಣಿನ ರಕ್ಷಣೆ ಹೇಗೆ ಮಾಡ್ಕೋಬೇಕು ಅಂತ ಇದನ್ನ ಓದಿ ತಿಳ್ಕೊಳಿ!!

0
1034

ನೇತ್ರ ರಕ್ಷಣೆ ಅವಶ್ಯ

ನೇತ್ರ ರಕ್ಷಣೆ ಅತ್ಯವಶ್ಯವಾಗಿದೆ. ವಯಸ್ಸು ಕಳೆದಂತೆ ಕಣ್ಣಿನ ಕುರಿತು ಎಲ್ಲರೂ ಜಾಗೃತಿ ವಹಿಸುವುದು ಅಗತ್ಯ. ಅರವತ್ತು ದಾಟುತ್ತಲೇ ನಮ್ಮಲ್ಲಿ ಹಲವರ ಕಣ್ಣು ಮಂಜಾಗುತ್ತದೆ. ಓದುವುದು ಕಷ್ಟ, ಚಿಕ್ಕಪುಟ್ಟ ಸಂಗತಿಗಳನ್ನು ಸ್ಪಷ್ಟವಾಗಿ ನೋಡುವುದಕ್ಕೂ ಪ್ರಯಾಸ. ಎದುರಿನ ಜಗತ್ತು ಮಬ್ಬು. ಬೆಳಕಲ್ಲೂ ಎಲ್ಲ ಮಸುಕುಮಸುಕು. ಹತ್ತಿರದಿಂದ ನೋಡಿದರೆ, ಇವರಲ್ಲಿ ಅನೇಕರ ಕಣ್ಣುಗಳ ನಡುಬಿಂದುವಿನಲ್ಲಿ ಬೆಳ್ಳನೆ ಪೊರೆಯ ಪರದೆ ಬಂದಿರುತ್ತದೆ. ಹಾಗೇಬಿಟ್ಟರೆ, ಮುಂದಿನ ಒಂದೆರಡು ವರ್ಷಗಳಲ್ಲಿ ಶಾಶ್ವತ ಅಂಧತ್ವವೂ ಪ್ರಾಪ್ತಿಯಾಗಬಹುದು. ಕಣ್ಣಿನ ಬಗ್ಗೆ ಒಂದಷ್ಟು ತಿಳಿದವರಿಗೆ ಹಾಗೆ ಪೊರೆಕಟ್ಟಿದ್ದು ಕ್ಯಾಟರ್ಯಾಕ್ಟ್ ಎಂದು ತಕ್ಷಣ ಹೊಳೆಯಬಹುದು. ಬೇಗನೆ ಸೂಕ್ತ ಚಿಕಿತ್ಸೆ ಕೊಡಿಸಿದರೆ ಅಂಧತ್ವದ ಅಪಾಯದಿಂದ ಪಾರಾಗಿ, ಹೊಸದೃಷ್ಟಿ ಪಡೆಯಬಹುದು. ಜಗತ್ತನ್ನು ಮತ್ತೆ ಹಿಂದಿನಂತೆ ಸ್ಪಷ್ಟವಾಗಿ ನೋಡುವುದಕ್ಕೆ ಪ್ರಾರಂಭಿಸಬಹುದು.

ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಸದ್ಯಕ್ಕೆ ಮೂರೂಕಾಲು ಕೋಟಿ ಅಂಧರಿದ್ದಾರೆ. ಇವರಲ್ಲಿ 90%ಕ್ಕಿಂತ ಹೆಚ್ಚು ಜನ ಇರುವುದು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ. ಅಮೆರಿಕ, ಇಂಗ್ಲೆಂಡ್, ಜರ್ಮನಿಗಳಂತಹ ಮುಂದುವರೆದ ದೇಶಗಳಲ್ಲಿ ಅಂಧರ ಪ್ರಮಾಣ ಬಹಳ ಕಡಿಮೆ. ಜಗತ್ತಿನಲ್ಲಿರುವ ಕುರುಡರ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಜನ ತಮ್ಮ ಅಮೂಲ್ಯವಾದ ದೃಷ್ಟಿಯನ್ನು ಕಳೆದುಕೊಂಡದ್ದು ಕ್ಯಾಟರ್ಯಾಕ್ಟ್ ಸಮಸ್ಯೆಯಿಂದಾಗಿ. ಸರಿಯಾದ ಸಮಯಕ್ಕೆ ಎಚ್ಚೆತ್ತು, ಒಂದು ಸರಳ ಆಪರೇಶನ್ ಮಾಡಿಸಿಕೊಂಡಿದ್ದರೆ ಇವರ ಕಣ್ಣುಗಳನ್ನು ಕಾಪಾಡಿಕೊಳ್ಳಬಹುದಾಗಿತ್ತು ಎನ್ನುವುದು ಖೇದದ ಸಂಗತಿ.
ಕ್ಯಾಟರ್ಯಾಕ್ಟ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುವುದು ಎಪ್ಪತ್ತು ವರ್ಷ ದಾಟಿದವರಲ್ಲೇ. ಬೇರೆ ದೇಶಗಳ ವಿಷಯ ಬಿಡಿ; ಅಮೆರಿಕದಲ್ಲೇ 80 ವರ್ಷ ದಾಟಿದ ಅರ್ಧಕ್ಕರ್ಧ ಹಿರಿಯ ನಾಗರಿಕರು ಒಂದೋ ಕ್ಯಾಟರ್ಯಾಕ್ಟ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಥವಾ ಈಗಾಗಲೇ ಆಪರೇಶನ್ ಮಾಡಿಸಿಕೊಂಡಿದ್ದಾರೆ. ಈ ದೃಷ್ಟಿದೋಷ ಒಂದು ಸಾರ್ವತ್ರಿಕ ಸಮಸ್ಯೆಯಾಗಿರುವುದರಿಂದ, ಭಾರತದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ನಮ್ಮ ದೇಶದಲ್ಲಿ ಹಾಗೆ ನೋಡಿದರೆ ಆರು ಕೋಟಿಗೂ ಹೆಚ್ಚು ಜನ ಕ್ಯಾಟರ್ಯಾಕ್ಟ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಬಹುದು. ಇವರೆಲ್ಲ ಆಪರೇಶನ್ ಮಾಡಿಸಿಕೊಂಡು ಸಮಸ್ಯೆಯಿಂದ ಪಾರಾಗುವುದಿಲ್ಲ ಯಾಕೆ? ಯಾಕೆಂದರೆ, ಆಪರೇಶನ್ನಿಗೆ ಹೆದರುವವರು ಕೆಲವರು. ಅಂಥದೊಂದು ಪರಿಹಾರ ದೊರಕಿಸಿಕೊಳ್ಳಲು ದುಡ್ಡಿನ ಸಮಸ್ಯೆ ಎದುರಿಸುತ್ತಿರುವವರು ಇನ್ನು ಕೆಲವರು. ಮಕ್ಕಳಿಂದ ಅಥವಾ ಕುಟುಂಬದಿಂದ ಅವಜ್ಞೆಗೆ ಒಳಗಾಗಿ ಹಣಕಾಸಿನ ಬಲ ಇದ್ದರೂ ಆಪರೇಶನ್ ಮಾಡಿಸಿಕೊಳ್ಳಲಾಗದ ಪರಿಸ್ಥಿತಿ ಇರುವವರು ಇನ್ನು ಕೆಲವರು. ಹೀಗೆ ವೃದ್ಧರ ನಾನಾ ಸಮಸ್ಯೆಗಳಿಂದಾಗಿ, ಅವರಿಗೆ

ಪರಿಹಾರ ಮರೀಚಿಕೆಯಾಗಿದೆ. ದೃಷ್ಟಿಯೆಂಬ ಅಮೂಲ್ಯ ಸಂಪತ್ತನ್ನು ಅವರು ಕೈಯಾರೆ ತಾವೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ತೊಂದರೆಯನ್ನು ನಿವಾರಿಸುವ ಸರಳ ಉಪಾಯಗಳೇನಾದರೂ ಇವೆಯೇ ಎನ್ನುವ ಬಗ್ಗೆ ಸ್ಯಾನ್‍ಡಿಯಾಗೋ ದಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ಒಂದಷ್ಟು ತಲೆಕೆಡಿಸಿಕೊಂಡಿದ್ದರು. ಅಷ್ಟರಲ್ಲಿ ಅವರಿಗೆ ಚೀನಾದ ಅವಳಿಗಳಿಬ್ಬರ ಸುದ್ದಿ ಸಿಕ್ಕಿತು. ಈ ಅವಳಿಗಳಿಗೆ ಒಂದೇ ಪ್ರಾಯದಲ್ಲಿ ಕಣ್ಣಿನ ಪೊರೆ ಬೆಳೆದಿತ್ತು. ಆದರೆ, ತಂದೆ ತಾಯಿಯರಿಗೇನೂ ಅಂತಹ ಸಮಸ್ಯೆ ಇರಲಿಲ್ಲ. ಒಡಹುಟ್ಟಿದ ಇಬ್ಬರಿಗೆ ಒಂದೇ ವಯಸ್ಸಿನಲ್ಲಿ ಇಂಥ ಸಮಸ್ಯೆ ಉದ್ಭವಿಸಬೇಕಾದರೆ, ಅವರ ವಂಶವಾಹಿಗಳಲ್ಲೇ ಈ ಸಮಸ್ಯೆಯ ಮೂಲಬೇರು ಅಡಗಿರಬೇಕು ಎಂದು ಸಂಶಯಿಸಿದ ವಿಜ್ಞಾನಿಗಳು ಅವಳಿಗಳ ದೇಹಪ್ರಕೃತಿಯನ್ನು ಬಹಳ ಸೂಕ್ಷ್ಮವಾಗಿ ಪರೀಕ್ಷಿಸುವ ಕೆಲಸಕ್ಕೆ ಕೂತರು. ಆಗ ಅವರಿಗೆ ಒಂದು ಕುತೂಹಲಕರ ಅಂಶ ತಿಳಿಯಿತು. ಅದೇನೆಂದರೆ, ಕಣ್ಣಿನ ಪೊರೆ ಬೆಳೆಯುವುದಕ್ಕೆ ಕೆಲವು ತಿಂಗಳ ಮೊದಲು ಅವಳಿಗಳಿಬ್ಬರ ಶರೀರಗಳಲ್ಲೂ ಲ್ಯಾನೊಸ್ಟೆರಾಲ್ ಎಂಬ ಸ್ಟಿರಾಯ್ಡ್‍ನ ಉತ್ಪತ್ತಿ ನಿಂತುಹೋಗಿತ್ತು. ಅಂತಹ ಸಮಸ್ಯೆ ಅವರ ಹೆತ್ತವರಿಗೆ ಇದ್ದಿರಲಿಲ್ಲ. ಈ ಸ್ಟಿರಾಯ್ಡ್‍ಗೂ ಕಣ್ಣಿನ ಸಮಸ್ಯೆಗೂ ಏನಾದರೂ ಸಂಬಂಧ ಇದೆಯೇ ಎಂಬ ಪ್ರಶ್ನೆಯ ಹಿಂದೆ ಬಿದ್ದರು ವಿಜ್ಞಾನಿಗಳು. ಕ್ಯಾಟರ್ಯಾಕ್ಟ್ ಆಗಿದ್ದ ಮೊಲಗಳಿಗೆ ಲ್ಯಾನೊಸ್ಟೆರಾಲ್ ಇರುವ ದ್ರಾವಣಗಳನ್ನು ಕಣ್ಣಿಗೆ ಹಾಕಿದರು. ಆಶ್ಚರ್ಯವೆನ್ನುವಂತೆ, 13ರಲ್ಲಿ 11 ಮೊಲಗಳ ಕಣ್ಣಿನ ಸಮಸ್ಯೆ ಸಂಪೂರ್ಣವಾಗಿ ಗುಣವಾಗಿಬಿಟ್ಟಿತು! ಮುಂದೆ ನಾಯಿಗಳ ಮೇಲೆ ಈ ಪ್ರಯೋಗ ಮಾಡಿನೋಡಿದಾಗಲೂ ಅದೇ ಅದ್ಭುತ ಫಲಿತಾಂಶ ಸಿಕ್ಕಿತು! ಕ್ಯಾಟರ್ಯಾಕ್ಟ್ ಆಗಿರುವ ಕಣ್ಣಿನ ಮೇಲೆ ಲ್ಯಾನೊಸ್ಟೆರಾಲ್ ಅಂಶವಿರುವ ಒಂದೆರಡು ಹನಿಯನ್ನು ಹಾಕಿದರೂ ಸಾಕು, ಅದು ಅತ್ಯದ್ಭುತ ಕೆಲಸ ಮಾಡುತ್ತದೆ; ಕಳೆದುಹೋಗಲಿದ್ದ ದೃಷ್ಟಿಯನ್ನು ಮತ್ತೆ ದಕ್ಕಿಸಿಕೊಡುತ್ತದೆ ಎನ್ನುವುದು ವಿಜ್ಞಾನಿಗಳಿಗೆ ತಿಳಿಯಿತು. ಇದೇ ಸುಲಭ ಚಿಕಿತ್ಸೆಯನ್ನು ಮನುಷ್ಯರ ಮೇಲೂ ಪ್ರಯೋಗಿಸಬಹುದೆ? ಪ್ರಯೋಗಗಳು ಇದೀಗ ಅಂತಿಮ ಹಂತದಲ್ಲಿವೆಯಂತೆ.