ಫೇಸ್ ಬುಕ್ ಲೈವ್ ನಲ್ಲಿ ಆತ್ಮಹತ್ಯೆ ಹೇಗೆ ಮಾಡಿಕೊಳ್ಳಬೇಕು ಎಂದು ಹೇಳಿ ತಾನು ಆತ್ಮಹತ್ಯೆ ಮಾಡಿಕೊಂಡ ಯುವಕ…!

0
851

ಮುಂಬೈ, ಏಪ್ರಿಲ್ 4: ಬೆಂಗಳೂರು ಮೂಲದ 2೦ ವರ್ಷದ ಯುವಕನೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಲೈವ್ ವಿಡಿಯೋವನ್ನು ಫೇಸ್ ಬುಕ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ ಘಟನೆ ಮುಂಬೈನಲ್ಲಿ ನಡೆದಿದೆ.

ಏಪ್ರಿಲ್ 3 ಸೋಮವಾರದಂದು ಮುಂಬೈನ ಬಾಂಧ್ರಾ ಬಳಿಯ ತಾಜ್ ಲ್ಯಾಂಡ್ಸ್ ಎಂಡ್ ಹೊಟೇಲ್ ನಲ್ಲಿ ತಂಗಿದ್ದ ಬೆಂಗಳೂರು ಮೂಲದ ಅರ್ಜುನ್ ಭಾರದ್ವಾಜ್ ಸಂಜೆ 6:30 ರ ಸುಮಾರಿಗೆ 19 ನೇ ಮಹಡಿಯಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅರ್ಜುನ್ ತಂದೆ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಘಟನೆಗೆ ಸಂಬಂಧಿಸಿ ಆಕಸ್ಮಿಕ ಸಾವು ವರದಿ (ಎಡಿಆರ್) ದಾಖಲಿಸಲಾಗಿದೆ ಎಂದು ಬಾಂದ್ರಾ ಪೊಲೀಸರು ತಿಳಿಸಿದ್ದಾರೆ. ಯುವಕ ಪೋಸ್ಟ್ ಮಾಡಿದ್ದಾನೆ ಎನ್ನಲಾದ ವಿಡಿಯೊವನ್ನು ವೈರಲ್ ಆಗುತ್ತಿರುವಂತೆಯೇ ಬ್ಲಾಕ್ ಮಾಡಲಾಗಿದೆ ಎಂದು ಪೊಲೀಸ್ ಜಂಟಿ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ದೆವೆನ್ ಭಾರತಿ ತಿಳಿಸಿದ್ದಾರೆ.

ಇದನ್ನು ಫೇಸ್ ಬುಕ್ ಲೈವ್ ನಲ್ಲಿ ಶೇರ್ ಮಾಡಿರುವ ಅರ್ಜುನ್, ಇದು ಆತ್ಮಹತ್ಯೆ ಹೇಗೆ ಮಾಡಿಕೊಳ್ಳಬೇಕು ಎಂಬುದಕ್ಕೆ ಟ್ಯುಟೋರಿಯಲ್ ಎಂದಿದ್ದಾನೆ!

ಅರ್ಜುನ್, ನರ್ಸೀ ಮಾಂಜಿ ವಾಣಿಜ್ಯ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು, ೨೦೧೩ರಿಂದ ಮುಂಬೈನಲ್ಲಿ ವಾಸವಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಈತ ಮದ್ಯಪಾನ ಮತ್ತು ಧೂಮಪಾನ ಮಾಡಿದ್ದ ಎನ್ನಲಾಗಿದೆ. ಈತ 9 ಚಿಕ್ಕ ಚೀಟಿಗಳಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾನೆ.

ಮಾದಕ ವ್ಯಸನಿಯಾಗಿದ್ದ ಈತ, ಈ ಚಟದಿಂದ ಹೊರಬರಲಾರದೆ ಖಿನ್ನತೆಯಿಂದ ಒದ್ದಾಡುತ್ತಿದ್ದ. ಆತನ ಸಾವಿಗೆ ಮಾದಕ ವ್ಯಸನ ಮತ್ತು ಖಿನ್ನತೆಯೇ ಕಾರಣ ಎನ್ನಲಾಗಿದೆ. ಅರ್ಜುನ್ ಸಹ ಡೆತ್ ನೋಟಿನಲ್ಲಿ ಅದನ್ನು ಉಲ್ಲೇಖಿಸಿದ್ದಾನೆ.

ಕುರ್ಚಿಯಿಂದ ಕಿಟಕಿಯ ಗಾಜನ್ನು ಕೊರೆದು, ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೊಟೇಲಿನ ಆಡಳಿತ ಮಂಡಳಿ ತಿಳಿಸಿದೆ. ತಕ್ಷಣವೇ ಹತ್ತಿರದ ಲೀಲಾವತಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಆಗಲೇ ಆತ ಸತ್ತಿದ್ದಾನೆಂದು ವೈದ್ಯರು ಘೋಷಿಸಿದ್ದರು.

‘ನಗರದಲ್ಲಿ ಯುವಕ ಆತ್ಮಹತ್ಯೆ ಮಾಡಿರುವುದು ಬೇಸರತಂದಿದೆ. ಯುವಕರು ಹತಾಶೆಗೊಂಡ ಸಂದರ್ಭದಲ್ಲಿ ನಮ್ಮನ್ನು ಸಂಪರ್ಕಿಸಬಹುದು’ ಎಂದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ.