2019ರ ಜಾಗತಿಕ ಹಸಿವಿನ ಸೂಚ್ಯಂಕ ಪ್ರಕಟ; ಪಾಕಿಸ್ತಾನಕ್ಕಿಂತ ಕೆಳಗಿಳಿದ ಭಾರತ ಅತಿಹೆಚ್ಚು ಹಸಿವಿನಿಂದ ಬಳಲುತ್ತಿರುವ 45 ದೇಶಗಳ ಪೈಕಿ ಭಾರತವೂ ಒಂದು.!

0
355

ಜಾಗತಿಕ ಹಸಿವಿನ ಸೂಚ್ಯಂಕ ಪಟ್ಟಿ ಬಿಡುಗಡೆಯಾಗಿದ್ದು ಭಾರತ 117 ದೇಶಗಳ ಪೈಕಿ 102ನೇ ಸ್ಥಾನಕ್ಕೆ ಕುಸಿದಿದೆ, ಅತಿಹೆಚ್ಚು ಹಸಿವಿನಿಂದ ಬಳಲುತ್ತಿರುವ 45 ದೇಶಗಳ ಪೈಕಿ ಭಾರತವೂ ಒಂದು ಎಂದು ಸಮೀಕ್ಷೆಯ ವರದಿ ತಿಳಿಸಿದೆ. ಜರ್ಮನಿಯ ಸ್ವಯಂಸೇವಾ ಸಂಸ್ಥೆ “ವೆಲ್‌ ತ್ಹಂಗರ್ ಲೈಫ್’ ಮತ್ತು ಐರ್ಲೆಂಡ್‌ನ‌ “ಕನ್ಸರ್ನ್ ವರ್ಲ್ಡ್ ವೈಡ್‌ ಜಂಟಿಯಾಗಿ ಸಮೀಕ್ಷೆಯನ್ನು ನಡೆಸಿದ್ದು, ಒಟ್ಟು 117 ರಾಷ್ಟ್ರಗಳನ್ನು ಸಮೀಕ್ಷೆಗೆ ಒಳಪಡಿಸಿದೆ. ಇದರಲ್ಲಿ ಪಾಕಿಸ್ತಾನಕ್ಕಿಂತ ಭಾರತವು ಕೆಳಗಿರುವುದು ಕೇಂದ್ರಕ್ಕೆ ಮುಜುಗರ ಉಂಟಾಗಿದೆ.

ಪಾಕಿಸ್ತಾನಕ್ಕಿಂತ ಕೆಳಗಿಳಿದ ಭಾರತ?

ಹೌದು ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಭಾರತವು ಕೆಳಗಿರುವುದು ಬೇಸರವನುಂಟು ಮಾಡಿದೆ. ಭಾರತ 117 ದೇಶಗಳ ಪೈಕಿ 102ನೇ ಸ್ಥಾನಕ್ಕೆ ಕುಸಿದಿದೆ. ಇದು ದಕ್ಷಿಣ ಏಷ್ಯಾ ಮತ್ತು ಬ್ರಿಕ್ಸ್ ದೇಶಗಳ ಪೈಕಿ ಕನಿಷ್ಠ ಸೂಚ್ಯಂಕವಾಗಿದೆ. ದಕ್ಷಿಣ ಏಷ್ಯಾ ದೇಶಗಳು 66ರಿಂದ 94ನೇ ಸ್ಥಾನದಲ್ಲಿದ್ದರೆ ಬ್ರಿಕ್ಸ್ ದೇಶಗಳ ಪೈಕಿ ಭಾರತ ಹೊರತುಪಡಿಸಿದರೆ ಕನಿಷ್ಠ ಸ್ಥಾನ ಪಡೆದಿರುವ ಪಾಕಿಸ್ತಾನ ಕೂಡ ಭಾರತಕ್ಕಿಂತ ಮುಂದಿದ್ದು 94ನೇ ಸ್ಥಾನದಲ್ಲಿದೆ.

2018 ರಲ್ಲಿ 95 ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ ಪಟ್ಟಿಯಲ್ಲಿ ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತ ಹಿಂದುಳಿದಿದೆ. ಬೆಲಾರಸ್, ಉಕ್ರೇನ್, ಟರ್ಕಿ, ಕ್ಯೂಬಾ ಮತ್ತು ಕುವೈತ್ ಸೇರಿದಂತೆ ಹದಿನೇಳು ದೇಶಗಳು ಐದಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ದು ಅಗ್ರ ಸ್ಥಾನದಲ್ಲಿದೆ ಎಂದು ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಹಸಿವು ಸೂಚ್ಯಂಕದ ವೆಬ್‌ಸೈಟ್ ಹೇಳಿದೆ. 2014ರಿಂದ 2018ರ ಅವಧಿಯ ಅಪೌಷ್ಠಿಕ ಮಕ್ಕಳ ಪ್ರಮಾಣ, ಎತ್ತರಕ್ಕೆ ಹೋಲಿಸಿದರೆ ಸಮಪರ್ಕ ತೂಕ ಹೊಂದಿಲ್ಲದ ಐದು ವರ್ಷದೊಳಗಿನ ಮಕ್ಕಳ ಪ್ರಮಾಣ ಮತ್ತು ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣದ ಅಂಕಿ ಅಂಶಗಳನ್ನು ಕ್ರೋಢೀಕರಿಸಿ ಸೂಚ್ಯಂಕ ಬಿಡುಗಡೆ ಮಾಡಿದೆ.

ಭಾರತದಲ್ಲಿ ಆರರಿಂದ 23 ತಿಂಗಳರೆಗಿನ ಶೇ.9.6ರಷ್ಟು ಮಕ್ಕಳಿಗೆ ಕನಿಷ್ಠ ಸ್ವೀಕಾರಾರ್ಹ ಆಹಾರಕ್ಕಿಂತ ಕಡಿಮೆ ಆಹಾರ ನೀಡಲಾಗುತ್ತಿದೆ ಎಂದು ಸೂಚ್ಯಂಕ ವರದಿ ಹೇಳಿದೆ. ನೆರೆ ದೇಶವಾದ ಬಾಂಗ್ಲಾದೇಶ ಈ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಯನ್ನು ವರದಿ ಶ್ಲಾಘಿಸಿದೆ. ಆಕರ್ಷಕ ಆರ್ಥಿಕ ಪ್ರಗತಿ ಹಾಗೂ ಪೌಷ್ಟಿಕತೆ ಒತ್ತು ನೀಡಲಾಗಿದ್ದು, ಶಿಕ್ಷಣ ನೈರ್ಮಲ್ಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಗಮನ ಹರಿಸಿರುವುದು ಶ್ಲಾಘನೀಯ ಎಂದು ಹೇಳಿದೆ.

ಹಸಿವು ಮುಕ್ತ ವಿಶ್ವವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಇನ್ನೂ ಬಲು ದೂರ ಕ್ರಮಿಸಬೇಕಿದೆ ಎಂದು ವರದಿ ಹೇಳಿದೆ.ಶೂನ್ಯದಿಂದ 100ವರೆಗಿನ ಅಂಕಪದ್ಧತಿಯಲ್ಲಿ ಶೂನ್ಯ ಅಂಕ ಗಳಿಸಿದ ದೇಶ ಕನಿಷ್ಠ ಹಸಿವು ಹೊಂದಿದೆ ಎಂಬ ಅರ್ಥ. 100 ಅಂಕ ಗಳಿಸಿದ ದೇಶ ಗರಿಷ್ಠ ಹಸಿವು ಹೊಂದಿದೆ ಎಂಬ ಅರ್ಥ ಭಾರತ 30.3 ಅಂಕ ಗಳಿಸಿದ್ದು, ಗಂಭೀರ ಹಸಿವಿನ ವರ್ಗದಲ್ಲಿ ಸೇರಿದೆ. 2000 ರಲ್ಲಿ, ಭಾರತವು 113 ದೇಶಗಳಲ್ಲಿ 83 ನೇ ಸ್ಥಾನದಲ್ಲಿತ್ತು. ಈಗ, 117 ದೇಶಗಳು ಕಣದಲ್ಲಿದ್ದು,ಭಾರತ 102 ನೇ ಸ್ಥಾನಕ್ಕೆ ಇಳಿದಿದೆ. ಇದರ ಜಿಹೆಚ್‌ಐ ಸ್ಕೋರ್ ಕೂಡ ಕುಸಿದಿದೆ – 2005 ರಲ್ಲಿ 38.9 ಇದ್ದ ಅಂಕ 2010 ರಲ್ಲಿ 32 ಮತ್ತು ನಂತರ 2010 ಮತ್ತು 2019 ರ ನಡುವೆ 32 ರಿಂದ 30.3ಗೆ ತಲುಪಿದೆ.
ಭಾರತದ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ವ್ಯರ್ಥತೆ ಪ್ರಮಾಣ 2008-2012ರ ಅವಧಿಯಲ್ಲಿ ಶೇ 16.5 ರಿಂದ 2014-2018ರಲ್ಲಿ ಶೇ 20.8 ಕ್ಕೆ ಏರಿದೆ. 6 ರಿಂದ 23 ತಿಂಗಳ ವಯಸ್ಸಿನ ಎಲ್ಲ ಮಕ್ಕಳಲ್ಲಿ ಕೇವಲ 9.6 ಪ್ರತಿಶತದಷ್ಟು ಮಕ್ಕಳಿಗೆ ಮಾತ್ರ “ಕನಿಷ್ಠ ಸ್ವೀಕಾರಾರ್ಹ ಆಹಾರ” ಸಿಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.