ಬೆಂಗಳೂರಲ್ಲಿ ವಿದೇಶಿ ವಿದ್ಯಾರ್ಥಿಗಳ ರಂಪಾಟಕ್ಕೆ ಕೊನೆ ಹೇಗೆ??

0
777

ವಿದೇಶಿಯರ ಜಾತಕ ಪರೀಕ್ಷೆ
ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಕಲಿಯಲು ಬರುವ ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಾಧನೆ ಮಾಡಿದರೆ ತನ್ನ ದೇಶ ಹಾಗೂ ಕಲಿಯುವ ದೇಶಕ್ಕೂ ಕೀರ್ತಿ. ಆದರೆ ಇತ್ತೀಚಿಗೆ ದೇಶದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಬರುವ ಉಗಾಂಡ, ಕೀನ್ಯ ದೇಶದ ವಿದ್ಯಾರ್ಥಿಗಳ ಉಪಟಳ ಅಸಹನೀಯ ಎಂಬಂತಾಗಿದೆ. ತಾವು ಬಂದಿರುವ ಉದ್ದೇಶವನ್ನು ಬಿಟ್ಟು ಕೆಟ್ಟ ಕೆಲಸಕ್ಕೆ ಮುಂದಾಗುತ್ತಿರುವುದು ತೀರ ಕಳವಳಕಾರಿ.
ತಮ್ಮ ಮೂಲ ಉದ್ದೇಶವನ್ನೇ ಮರೆತು ಸ್ವೇಚ್ಛಾಚಾರದ ಬದುಕು ನಡೆಸುವುದು, ಅಂತಹ ಬದುಕಿಗೆ ಹಣ ಹೊಂದಿಸಲು ಎಂತಹ ದಾರಿಯನ್ನಾದರೂ ತುಳಿದೇವು ಎಂಬ ಮನೋಭಾವನೆಯಿಂದ ಹೋಗುತ್ತಿರುವ ಆ ವಿದ್ಯಾರ್ಥಿಗಳ ಉಪಟಳಕ್ಕೆ ಈಗಲೇ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಅನಾಹುತವಾದರೂ ಆಗಬಹುದು.
1975ರ ಸಮಯದಲ್ಲಿ ಬೆಂಗಳೂರಿನಲ್ಲಿ ಇರಾನಿ ವಿದ್ಯಾರ್ಥಿಗಳ ಇಂಥದ್ದೇ ಅಸಹನೀಯ ವರ್ತನೆಗಳು ಮಿತಿ ಮೀರಿತ್ತು. ಈಗಿನಷ್ಟು ಆವಾಗ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿರಲಿಲ್ಲ. ಜನಸಂಖ್ಯೆಯೂ ಬೆಳೆದಿರಲಿಲ್ಲ. ಅವರನ್ನು ಕ್ರಮೇಣ ಹತ್ತಿಕ್ಕುವಲ್ಲಿ ಯಶಸ್ಸು ಕಾಣಲಾಯಿತು.
ಸದ್ಯದ ಪರಿಸ್ಥಿತಿಯಲ್ಲಿ ಉಗಾಂಡ, ಕೀನ್ಯ ಹಾಗೂ ಇನ್ನಿತರ ದೇಶಗಳ ವಿದ್ಯಾರ್ಥಿಗಳ ದಾಂಧಲೆ, ಅಟಾಟೋಪಗಳ ಬಗ್ಗೆ ಸಾರ್ವಜನಿಕರು ರೋಸಿಹೋಗಿದ್ದಾರೆ. ಒಂದೊಂದು ಸಂದರ್ಭದಲ್ಲಿ ಪೊಲೀಸರಿಗೂ ಅವರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. “ಅತಿಥಿ ದೇವೋಭವ’’ ಎಂಬ ಉಕ್ತಿ ಒಂದೆಡೆಯಾದರೆ ಇನ್ನೊಂದೆಡೆ ಜನಾಂಗೀಯ ಆರೋಪ ಎದುರಿಸಬೇಕಾದೀತು ಎಂಬ ಆತಂಕ ಇನ್ನೊಂದೆಡೆ. ವಿದ್ಯಾರ್ಥಿಗಳ ದಾಂಧಲೆ ಉಂಟಾದಾಗ ಇಂಥದ್ದೇ ಕಾರಣದಿಂದ ಪೊಲೀಸರು ಅವರನ್ನು ಸಮಜಾಯಿಷಿ ನೀಡಿ ಕಳುಹಿಸುತ್ತಾರೆ. ಆದರೆ ಅವರು ನಮಗೆ ಯಾರೂ ಏನೂ ಮಾಡಲಾರರು ಎಂದು ಮತ್ತೆ ತಮ್ಮ ಕಾಯಕವನ್ನು ಮುಂದುವರೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಇಂತಹ ವಿದ್ಯಾರ್ಥಿಗಳ ಪ್ರತಿದಿನದ ಗಲಾಟೆ, ಹದ್ದುಮೀರಿದ ವರ್ತನೆಗಳು ಸಹಿಸಲಾಗುವುದಿಲ್ಲ. ದಿನದಿಂದ ದಿನಕ್ಕೆ ಅವರ ಉಪಟಳ ಹೆಚ್ಚಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಗೃಹಮಂತ್ರಿಗಳು ಹೇಳಿದ್ದಾರೆ.

`ಕೋತಿ ತಾನು ಕೆಡುವುದಲ್ಲದೇ ಇಡೀ ವನವನ್ನು ಕೆಡೆಸಿತು’ ಎಂಬಂತೆ ಆ ವಿದ್ಯಾರ್ಥಿಗಳು ಸ್ಥಳೀಯ ವಿದ್ಯಾರ್ಥಿಗಳನ್ನು ತಮ್ಮ ದಾರಿಗೆ ಎಳೆದೊಯ್ಯುತ್ತಿದ್ದಾರೆ. ಸ್ಥಳೀಯ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಸ್ವೇಚ್ಛಾಚಾರದ ಬದುಕಿನ ದಾರಿಯನ್ನು ತೋರಿಸಿಕೊಡುತ್ತಿದ್ದಾರೆ.
ತಮ್ಮ ದೇಶದಿಂದ ವಿದ್ಯಾಭ್ಯಾಸಕ್ಕಾಗಿ ಇಲ್ಲಿಗೆ ಬರುವ ಮುನ್ನ `ವೀಸಾ’ ತೆಗೆದುಕೊಂಡು ಬರುತ್ತಾರೆ. ವಿದ್ಯಾರ್ಥಿ ವೀಸಾ ಮುಗಿದರೂ ಅವರು ಕಳ್ಳತನದಿಂದ ನಗರದಲ್ಲಿಯೇ ಇರುತ್ತಾರೆ ವೀಸಾ ಮುಗಿಯಿತು ಅದನ್ನು ನವೀಕರಣ ಮಾಡಿಸಿ ಎಂದು ಹೇಳುವವರೇ ಇಲ್ಲದಂತಾಗಿದೆ. ಇಂದಿಗೂ ಸರಿಯಾಗಿ ಪರಿಶೀಲನೆ ಮಾಡಿದರೆ ಶೇ.50ರಷ್ಟು ಅಂತಹ ವಿದ್ಯಾರ್ಥಿಗಳ ವೀಸಾ ಅವಧಿ ಮುಗಿದಿರುತ್ತದೆ. ಅದಕ್ಕೆ ಕಠಿಣ ಕಾನೂನಾಗಲೀ, ಕ್ರಮವಾಗಲೀ ಇಲ್ಲವೇ ಇಲ್ಲ. ಇದರಿಂದ ಆ ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಗಿದೆ.
ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಕಲಿಯಲು ಹೋಗುವ ವಿದ್ಯಾರ್ಥಿಗಳ ವೀಸಾವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ಅವರ ಚಾರಿತ್ಯ್ರ ಹೇಗಿದೆ? ವಿದ್ಯಾಭ್ಯಾಸದ ಅವಧಿ ಮುಗಿದ ನಂತರ ವೀಸಾ ನವೀಕರಣದ ಬಗ್ಗೆ ಗಮನ ಹರಿಸಬೇಕಾಗಿರುವುದು ತೀರ ಅನಿವಾರ್ಯವಾಗಿದೆ. ಒಟ್ಟಾರೆಯಾಗಿ ವೀಸಾ ಕೊಡುವಾಗ ಅವರ ಜಾತಕವನ್ನು ಪರಿಶೀಲಿಸಿ ಅರ್ಹರಿಗೆ ಅವಕಾಶ ಮಾಡಿಕೊಟ್ಟರೆ ಅದು ಎಲ್ಲರಿಗೂ ಒಳ್ಳೆಯದು.