ಬಿಜೆಪಿಯ ಚಾಣಕ್ಯ, ವಿತ್ತ ಮಾಂತ್ರಿಕ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿಧಿವಶ..

0
181

ದೇಶದ ಆರ್ಥಿಕತೆಗೆ ಮದ್ದು ನೀಡಿದ ಬಿಜೆಪಿ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ವಿಧಿವಶರಾಗಿದ್ದು, ತೀವ್ರ ಅನಾರೋಗ್ಯ ಸಮಸ್ಯೆಯಿಂದಾಗಿ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊನೆ ಉಸಿರು ಎಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಅರುಣ್ ಜೇಟ್ಲಿ ಮೇ 23ದಂದು ಏಮ್ಸ್ ನಿಂದ ಡಿಸ್ಚಾರ್ಜ್ ಆಗಿದ್ದರು. ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡ ಬಂದ ಹಿನ್ನೆಲೆಯಲ್ಲಿ ಆಗಸ್ಟ್ 9 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕಿಡ್ನಿ ಶಸ್ತ್ರ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಗಲಿದ ಅರುಣ್ ಜೇಟ್ಲಿ;

66 ವರ್ಷದ ಅರುಣ್ ಜೇಟ್ಲಿ ಅವರಿಗೆ ಎಂಡೋಕ್ರಿನೋಲಾಜಿಸ್ಟ್, ನೆಪ್ರೋಲಾಜಿಸ್ಟ್ ಮತ್ತು ಕಾರ್ಡಿಯಾಲಜಿಸ್ಟ್‌ಗಳ ತಂಡವು ಚಿಕಿತ್ಸೆ ನೀಡಿತ್ತು. ಎರಡು ವಾರದಿಂದ ಅವರು ಏಮ್ಸ್‌ನಲ್ಲಿಯೇ ಇದ್ದರು. ತಜ್ಞ ವೈದ್ಯರ ತಂಡ ಅವರ ಆರೋಗ್ಯ ತಪಾಸಣೆ, ಚಿಕಿತ್ಸೆಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಸರ್ಕಾರದ ಪ್ರಮುಖರು, ಆರೆಸ್ಸೆಸ್ ನಾಯಕರು ಹಾಗೂ ಅನೇಕ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ನಿರಂತರ ಮಾಹಿತಿ ಪಡೆದುಕೊಳ್ಳುತ್ತಿದ್ದರು.

ಅರುಣ್ ಜೇಟ್ಲಿಯವರ ಬಾಲ್ಯ ಜೀವನ:

ಅರುಣ್ ಜೇಟ್ಲಿ 1957 ಡಿಸೆಂಬರ್​​​​ 28 ರಂದು ಕಿಶನ್ ಹಾಗೂ ರತನ್ ಪ್ರಭಾ ಜೇಟ್ಲಿ ಎಂಬ ದಂಪತಿಗೆ ದೆಹಲಿಯಲ್ಲಿ ಜನಿಸಿದರು. ಇವರ ತಂದೆ ವಕೀಲರಾಗಿದ್ದರು. ಜೇಟ್ಲಿ 1969-70ನೇ ವರ್ಷದ ಅವಧಿಯಲ್ಲಿ ದೆಹಲಿಯ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಅಭ್ಯಾಸ ಮಾಡಿದರು. ಬಳಿಕ 1973ರಲ್ಲಿ ಇಲ್ಲಿನ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್​​ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. 1977ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ದಿ ಲಾ ಎಂಬಲ್ಲಿ ಕಾನೂನು ಪದವಿ ಪಡೆದರು. ತಮ್ಮ ವಿದ್ಯಾರ್ಥಿ ಜೀವನದಲ್ಲೇ ವಿದ್ಯಾಭ್ಯಾಸದ ಮೂಲಕ ಉತ್ತಮ ಮಟ್ಟದ ಸಾಧನೆ ಮಾಡಿ ಪ್ರಶಸ್ತಿಗಳನ್ನು ಗಳಿಸಿದ್ದರು.

ರಾಜಕೀಯ ಜೀವನದಲ್ಲಿ ಯಶಸ್ವಿಯ ನಾಯಕ:

ವಿದ್ಯಾರ್ಥಿ ಸಂಘದ ನಾಯಕನಾಗಿ ತಮ್ಮ ರಾಜಕೀಯ ವೃತ್ತಿ ಜೀವನದ ಆರಂಭವಾಯ್ತು. ಎಪ್ಪತ್ತರ ದಶಕದಲ್ಲೇ ದೆಹಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಜೇಟ್ಲಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎ‌ಬಿವಿಪಿ) ನಾಯಕನಾಗಿದ್ದರು. ಬಳಿಕ 1974ರಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು. ಇನ್ನು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ 19 ತಿಂಗಳುಗಳ ಕಾಲ ಸೆರೆವಾಸದಲ್ಲಿದ್ದರು. 1973ರಲ್ಲಿ ರಾಜ್ ನರೇನ್ ಹಾಗೂ ಜಯ ಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆರಂಭವಾದ ಭ್ರಷ್ಟಾಚಾರ ವಿರುದ್ಧದ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ನಂತರ ಜಯ ಪ್ರಕಾಶ್ ನಾರಾಯಣ್ ಅವರೇ, ಇವರನ್ನು ವಿದ್ಯಾರ್ಥಿಗಳ ರಾಷ್ಟೀಯ ಸಮಿತಿ ಸಂಯೋಜಕರನ್ನಾಗಿ ನೇಮಕಗೊಳಿಸಿದರು. ಸತೀಶ್ ಝಾ ಹಾಗೂ ಸ್ಮಿತು ಕೋಠಾರಿ ಅವರೊಂದಿಗೆ ಸೇರಿ ನಾಗರೀಕ ಹಕ್ಕು ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪಿಯುಸಿಎಲ್ ಬುಲೆಟಿನ್ ಹೊರತಂದರು. ಜೈಲಿನಿಂದ ಹೊರಬಂದ ಮೇಲೆ ಅವರು ಜನಸಂಘವನ್ನು ಸೇರಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಟ್ವೀಟ್ ಮೂಲಕ ಜೇಟ್ಲಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅದರಂತೆ ನಾಳೆ ಮಧ್ಯಾಹ್ನ 2 ಗಂಟೆಗೆ ದೆಹಲಿಯ ನಿಗಮ ಬೋಧ್ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.