ಕ್ರಿಕೆಟ್​ ಸಾಮ್ರಾಜ್ಯವನ್ನೇ ಆಳಲು ಮುಂದಾದ ಸೌರವ್ ಗಂಗೂಲಿ; ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ, ಅಮಿತ್ ಶಾ ಪುತ್ರನಿಗೆ ಕಾರ್ಯದರ್ಶಿ ಪಟ್ಟ??

0
248

ಕ್ರಿಕೆಟ್ ಇತಿಹಾಸ ಸೃಷ್ಟಿಸಿದ ಬಂಗಾಳದ ಹುಲಿ ಖ್ಯಾತಿಯ ಸೌರವ್​ ಗಂಗೂಲಿ ಭಾರತದ ಕ್ರಿಕೆಟ್ ನಿಂಯತ್ರಣ ಮಂಡಳಿಯನ್ನೇ ಆಳಲು ಮುಂದಾಗಿದ್ದು, ಗಂಗೂಲಿ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ಆಟಗಾರರೊಬ್ಬರು ಇದೇ ಮೊದಲ ಬಾರಿಗೆ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುವ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ. ಭಾನುವಾರ ರಾತ್ರಿ ಕ್ರಿಕೆಟ್ ಬೋರ್ಡ್ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ಸೌರವ್ ಗಂಗೂಲಿ ಅವರಿಗೆ ಬಿಸಿಸಿಐ ಅಧ್ಯಕ್ಷ ಸ್ಥಾನ ನೀಡಲು ಉಳಿದ ಸದಸ್ಯರು ಒಪ್ಪಿಗೆ ನೀಡಿದ್ದಾರೆ.

ಈಗ ಬಿಸಿಸಿಐ ಗಂಗೂಲಿ ಕ್ಯಾಪ್ಟನ್?

ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಬ್ರಿಜೇಶ್ ಪಾಟೀಲ್ ಮತ್ತು ಸೌರವ್ ಗಂಗೂಲಿ ಮಧ್ಯೆ ಸ್ಪರ್ಧೆ ಇತ್ತು. ಈ ಮಧ್ಯೆ ಭಾನುವಾರ ನಾಟಕೀಯ ಬೆಳವಣಿಗೆ ನಡೆದಿದ್ದು ಅವಿರೋಧವಾಗಿ ಆಯ್ಕೆ ಮಾಡಲು ಸದಸ್ಯರು ಒಲವು ತೋರಿಸಿದ್ದಾರೆ. ಮೊದಲಿಗೆ ಕ್ರಿಕೆಟಿಗ ಹಾಗೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಬ್ರಿಜೇಟ್ ಪಟೇಲ್ ಈ ಬಾರಿಯ ಬಿಸಿಸಿಐ ಅಧ್ಯಕ್ಷರಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ನಾಟಕೀಯ ಬೆಳವಣಿಗೆಯ ನಂತರ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ) ಅಧ್ಯಕ್ಷರಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಅವಿರೋಧವಾಗಿ ಇಂದು ‘ದಾದಾ’ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗುತ್ತಿದೆ. 47 ವರ್ಷದ ಗಂಗೂಲಿ ಸದ್ಯಕ್ಕೆ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ. 2020ರಲ್ಲಿ ಅವರ ಅಧಿಕಾರಾವಧಿ ಅಂತ್ಯವಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರನ್ನು ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಅಮಿತ್ ಶಾ ಪುತ್ರನಿಗೆ ಕಾರ್ಯದರ್ಶಿ ಹುದ್ದೆ?

ಗೃಹ ಸಚಿವ ಅಮಿತ್ ಶಾ ಪುತ್ರ ಜೇ ಶಾ ಕಾರ್ಯದರ್ಶಿಯಾಗಿಯೂ, ಕೇಂದ್ರ ಕಾರ್ಪೋರೇಟ್ ಮತ್ತು ವ್ಯವಹಾರಗಳ ಖಾತೆಯ ರಾಜ್ಯ ಸಚಿವ, ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಧುಮಲ್ ಖಜಾಂಜಿಯಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐ ಆಡಳಿತ ಮಂಡಳಿಯನ್ನು 2017ರಲ್ಲಿ ವಜಾಗೊಳಿಸಿತ್ತು. ಬಳಿಕ ಸುಪ್ರೀಂ ಆಡಳಿತಾತ್ಮಕ ಸಮಿತಿಯನ್ನು ನೇಮಿಸಿತ್ತು. ಅಕ್ಟೋಬರ್ 23ರಂದು ಬಿಸಿಸಿಐ ಪದಾಧಿಕಾರಿಗಳಿಗೆ ಆಡಳಿತಾತ್ಮಕ ಸಮಿತಿ ಅಧಿಕಾರ ಹಸ್ತಾಂತರ ಮಾಡಲಿದೆ. ಹೀಗಾಗಿ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಿರುವುದಕ್ಕೆ ಟ್ವಿಟ್ಟರ್​ನಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಸೌರವ್ ಗಂಗೂಲಿ ಹೆಸರು ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದು, ಮೆಚ್ಚಿನ ದಾದಾಗೆ ಈ ಗೌರವ ಸಿಗುತ್ತಿರುವುದಕ್ಕೆ ಗಂಗೂಲಿ ಅಭಿಮಾನಿಗಳು ಸಂಭ್ರಮಾಚರಿಸುತ್ತಿದ್ದಾರೆ.