ಹೋರಾಟಗಾರರ ಹೋರಾಟದ ನೆನಪುಗಳು…

0
738

ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರುಮಾಜಿ ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪ. ಅವರಿಗೆ ದಾವಣಗೆರೆಯ ಎ.ವಿ. ಶಾಲೆಯಲ್ಲಿ ಕಲಿಯುತ್ತಿದ್ದಾಗ ಗುಡಿ ರುದ್ರಪ್ಪ ಮೇಷ್ಟ್ರು ಕನ್ನಡದ ಬಗ್ಗೆ ಅಭಿರುಚಿ ಹುಟ್ಟಿಸಿದರು. ಕನ್ನಡಕ್ಕೆ ಸಂಬಂಧಿಸಿದಂತೆ ಕೆಲವು ಪದ್ಯಗಳನ್ನು ಹೇಳಿಕೊಡುತ್ತಿದ್ದರು. ಅವೆಲ್ಲ ಅವರ ಮೇಲೆ ಪರಿಣಾಮ ಬೀರಿದವು. ಚಿತ್ರದುರ್ಗದ ಹೈಸ್ಕೂಲಿನಲ್ಲಿ ಹನುಮಂತರಾಯರು ಕನ್ನಡದ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡಿದರು. ಈ ಎಲ್ಲ ಪರಿಣಾಮವಾಗಿ ಅವರಿಗೆ ಕನ್ನಡದ ಮೇಲೆ ಅಘಾದ ಪ್ರೀತಿ ಬೆಳೆಯತೊಡಗಿತು. ಕರ್ನಾಟಕ ಹರಿದು ಹಂಚಿಹೋಗಿರುವ ವಿಷಯ ಅವರಿಗೆ ಬಹಳ ನೋವು ತರುತ್ತಿತ್ತು. ಆಲೂರು ವೆಂಕಟರಾಯರು ಏಕೀಕರಣದ ಬಗ್ಗೆ ಯತ್ನಿಸುವ ವಿಷಯ ಅವರಿಗೆ ತಿಳಿಯಿತು. ನಿಜಲಿಂಗಪ್ಪನವರ ಪ್ರವಾಸ ಹೆಚ್ಚಾಯಿತು. ಅಂತೆಯೇ ಜನರ ಸಂಪರ್ಕ ಬೆಳೆಯಿತು. ಆಗಿನ ಸಂದರ್ಭದಲ್ಲಿ ನೆಹರೂ ಮತ್ತು ಪಟೇಲರಿಗೆ ಅವರ ಮೇಲೆ ಅಸಮಾಧಾನವಿತ್ತು. ನಂತರ ಈ ಹೋರಾಟ ನಿಲ್ಲುವುದಿಲ್ಲ ಎಂದು ನಿಜಲಿಂಗಪ್ಪ ಅವರು ಖಡಾಖಂಡಿತವಾಗಿ ಹೇಳಿದ ಮೇಲೆ ಪಟೇಲರು ನಿಜಲಿಂಗಪ್ಪನವರ ವಾದವನ್ನು ಒಪ್ಪಿದರು.

 

ನಿಟ್ಟೂರು ಶ್ರೀನಿವಾಸರಾವ್….

24-8_nitturu-srinivasarao

ಶ್ರೇಷ್ಠ ನ್ಯಾಯಮೂರ್ತಿಗಳು ಎಂದೆನಿಸಿಕೊಂಡ ನಿಟ್ಟೂರು ಶ್ರೀನಿವಾಸರಾಯರು, ಕರ್ನಾಟಕ ಏಕೀಕರಣದ ಕುರಿತು ಸಂದರ್ಶಕರ ಮುಂದೆ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ. ಈ ಚಳವಳಿ ಯಾವ ಕಾಲದಲ್ಲಿ ಆರಂಭವಾಯಿತು ಎನ್ನುವದಕ್ಕೆ ಮುಂಚೆ ಇಂಥದ್ದೊಂದು ಕಲ್ಪನೆ ತಳೆದಿದ್ದು ಆಂಧ್ರಪ್ರದೇಶದಲ್ಲಿ. 1922 ರಲ್ಲಿ ನಿಟ್ಟೂರು ಸೆಂಟ್ರಲ್ ಕಾಲೇಜಿನ ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದರು. ಆಗ ಮೈಸೂರಿನಲ್ಲಿ ರಾಜ್ಯಮಟ್ಟದ ಚರ್ಚಾಸ್ಪರ್ಧೆ ಏರ್ಪಡಿಸಿದ್ದರು. ಇಲ್ಲಿಂದ ಅನೇಕರು ಭಾಗವಹಿಸಿದ್ದರು. ಮರುವರ್ಷ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಥದ್ದೇ ಸ್ಪರ್ಧೆ ಏರ್ಪಟ್ಟಾಗ ಉತ್ತರ ಕರ್ನಾಟಕದವರನ್ನು ಕರೆಯಿಸಿದ್ದೆವು. ಅದರಲ್ಲಿ ಹಿರೆಕೆರೂರು ಭಾಗಿ ಎನ್ನುವವರು ಪಾಲ್ಗೊಂಡಿದ್ದರು. ಹೀಗೆ ನಾವು ಆ ಸಂದರ್ಭದಲ್ಲಿಯೇ ಕನ್ನಡಿಗರೆಲ್ಲ ಒಂದು ಎಂಬ ಭಾವನೆ ತಳೆದಿದ್ದೆವು. ಮೈಸೂರಿನಲ್ಲಿ ಏಕೀಕರಣಕ್ಕೆ ವಿರೋಧವಿತ್ತು ಎಂಬುದು ಸುಳ್ಳು. ಭಾರತವೇ ಒಂದು, ಕರ್ನಾಟಕ ಏಕೀಕರಣ ಅದರ ಒಂದು ಭಾಗ. ಏಕೀಕರಣಕ್ಕೆ ವಿರೋಧ ಅಂತಹ ಮುಖ್ಯವಾಗಿದ್ದುದೇನೂ ಆಗಿರಲಿಲ್ಲ. ಈಗೀಗ ಭಾಷಾವಾರು ಸಂಕುಚಿತ ಮನೋಭಾವ ಹೆಚ್ಚಿದೆ. ಕರ್ನಾಟಕ ಏಕೀಕರಣವಾದರೂ ನಾವು ಪೂರ್ತಿಯಾಗಿ ಒಂದಾಗಿಲ್ಲ ಎಂದು ಉತ್ತರ ಕರ್ನಾಟಕದವರ ಎಲ್ಲರ ಅಭಿಪ್ರಾಯವಲ್ಲ. ಅದು ರಾಜಕಾರಣಿಗಳ ಅಭಿಪ್ರಾಯವಾಗಬಹುದು ಅಷ್ಟೆ.

 

ವ್ಯಾಸರಾಯ ಬಲ್ಲಾಳ್…

1-12_vyasaraya-ballal2

ಕನ್ನಡದ ಪ್ರಸಿದ್ಧ ಸಾಹಿತಿ ವ್ಯಾಸರಾಯ ಬಲ್ಲಾಳರು, ಭಾರತಕ್ಕೆ ಸ್ವಾತಂತ್ರ ಬರುವ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಅದಕ್ಕೆ ಸ್ವಾಯತ್ತತೆ ದೊರಕಿ ಕನ್ನಡ ಭಾಷೆಯ ಮೂಲಕ ನಾವು ಸರ್ವಾಂಗೀಣ ಪ್ರಗತಿಯನ್ನು ಸಾಧಿಸಬಹುದು ಎನ್ನುವ ಕನಸು ಬಲ್ಲಳ್ ಅವರದ್ದಾಗಿತ್ತು. ನಮಗೆ ಯಾರ ಅಂಕುಶವೂ ಇರಲಿಲ್ಲ. ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರಕ್ಕೆ ನಮಗೆ ಯಾವ ತೊಂದರೆಯೂ ಇರಲಿಲ್ಲ. ಏಕೀಕರಣವಾದ ನಂತರ ನಿಜವಾಗಿಯೂ ಮುಂಬೈನ ಕನ್ನಡಿಗರು ತಬ್ಬಲಿಗಳಾಗಿದ್ದಾರೆ. ಮುಂಬೈನ 18 ಕಾಲೇಜುಗಳಲ್ಲಿ ಕನ್ನಡವನ್ನು ಕಲಿಸುವ ಸೌಲಭ್ಯವಿತ್ತು. ಈಗ ಅದು ಇಳಿದಿದೆ. ಜನಸಾಮಾನ್ಯರ ಮಟ್ಟದಲ್ಲಿ ಯಾವ ಧಕ್ಕೆಯೂ ಇಲ್ಲ. ರಾಜಕಾರಣಿಗಳ ದೃಷ್ಟಿಯಲ್ಲಿ ಸಾಮರಸ್ಯ ಇಲ್ಲ ಎಂದು ಹೇಳಿದ್ದರು.

 

ಕಯ್ಯಾರ ಕಿಞ್ಞಣ್ಣ ರೈ…

kaynara-kinnanna-rai

ಕಾಸರಗೋಡಿನ ಕಯ್ಯಾರ ಕಿಞ್ಞಣ್ಣ ರೈ ಅವರು ನೀಡಿದ ಸಂದರ್ಶದಲ್ಲಿ, ಇಲ್ಲಿ ಮೊದಲು ನಡೆದಿದ್ದು ತುಳುವಿನ ಸಲುವಾಗಿ ಹೋರಾಟ. ನಂತರ ಅದು ಯಶಸ್ಸು ಕಾಣಲಿಲ್ಲ. ಆಗ ಕರ್ನಾಟಕ ಏಕೀಕರಣಕ್ಕೆ ಮುಂದಾಗಿದ್ದವರು ಈ ಭಾಗದ ಕೆ.ಆರ್. ಕಾರಂತ ಅವರು. ನಂತರ ಬಿ.ಎಸ್. ಕಕ್ಕಿಲಾಯ ನಾನು ಮುಂತಾದವರು ಹೋರಾಟ ಆರಂಭಿಸಿದೆವು. ಕಾಸರಗೋಡಿನಲ್ಲಿ ಸಾಹಿತ್ಯ ಸಮ್ಮೇಳನ ಆದಾಗ ಏಕೀಕರಣದ ವಿಷಯ ಚರ್ಚೆಗೆ ಬಂತು. ಆಗ ದಿವಾಕರರು ಒಂದು ಮಾತು ಹೇಳಿದ್ದರು. ` ಅಡಿಗೆ ಆಯಿತು ಎಲೆ ಹಾಕಿ ಆಯಿತು ಇನ್ನು ಎಲ್ಲವನ್ನೂ ಬಡಿಸಿ ಆಯಿತು, ತುಪ್ಪವನ್ನೂ ಹಾಕಲಾಗಿದೆ ಇನ್ನು ಊಟ ಮಾಡಬೇಡ ಎಂದರೆ ಹೇಗೆ? ಎಂದು ಅವರು ಭಾಷಾವಾರು ಪ್ರಾಂತ್ಯವನ್ನು ಕುರಿತು ಹೇಳಿದ್ದು. ಇದು ಏಕೀಕರಣಕ್ಕೆ ಸ್ಫೂರ್ತಿ ಕೊಟ್ಟಿತು.

 

ಕೋ. ಚನ್ನಬಸ್ಸಪ್ಪ….

 

ಕರ್ನಾಟಕ ಏಕೀಕರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕೋ. ಚನ್ನಬಸ್ಸಪ್ಪನವರು ಏಕೀಕರಣದ ನಂತರ ನೀಡಿದ ಸಂದರ್ಶನದಲ್ಲಿ ಹೇಳಿದ್ದು ಹೀಗೆ. 1916 ರಲ್ಲಿ ಆಂಧ್ರ ವಿಶ್ವವಿದ್ಯಾಲಯವಾದಾಗ ಬಳ್ಳಾರಿಯ ಕಾಲೇಜುಗಳನ್ನು ಅಲ್ಲಿಯೇ ಸೇರಿಸಲಾಗಿತ್ತು. ಅದನ್ನು ಪ್ರತಿಭಟಿಸಿ ಹೋರಾಟ ನಡೆಸಲಾಗಿತ್ತು. ಪೊಟ್ಟಿ ಶ್ರೀರಾಮುಲು ಕಾಲವಾದ ನಂತರ 1944-45 ರಲ್ಲಿ ಬಳ್ಳಾರಿಯಲ್ಲಿ ಆಂಧ್ರಮಹಾಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಅದನ್ನು ಬಳ್ಳಾರಿಯ ಕನ್ನಡಿಗರು ವಿರೋಧಿಸಿದರು.

1945 ರಲ್ಲಿ ನಾನು ಬೆಳಗಾವಿಯಲ್ಲಿ ಓದುತ್ತಿದ್ದಾಗ ಅದಕ್ಕಿಂತ ಮೊದಲು ಅನಂತಪುರದಲ್ಲಿ ಕಲಿಯುತ್ತಿದ್ದಾಗ ಇತಿಹಾಸದ ಪ್ರಾಧ್ಯಾಪಕ ದಾಮರ್ಲ ವೆಂಕಟರಾವ್ ಅವರು ವಿಜಯನಗರ ಸ್ಥಾಪನೆ ಆಂಧ್ರದವರಿಂದ ಆಯಿತು ಎಂದು ಹೇಳುತ್ತಿದ್ದರು. ನಾನು ಅದನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದೆ. ನಂತರ ಕಾಲೇಜಿನ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಅನೇಕ ಉಪಾಧ್ಯಾಯರು ಪಾಲ್ಗೊಳ್ಳುತ್ತಿದ್ದರು. ಬಳ್ಳಾರಿ ಸಮಸ್ಯೆಗಳ ಬಗ್ಗೆ ನಾನೂ ಅಲ್ಲಿ ಚರ್ಚೆ ಮಾಢುತ್ತಿದ್ದೆ. ಅದು ನನಗೆ ಏಕೀಕರಣ ಹೋರಾಟದಲ್ಲಿ ಪಾಲ್ಗೊಳ್ಳಲು ಪ್ರೇರಣೆಯಾಯಿತು. ಮುಂದೆ ನಾನು ಸಕ್ರಿಯವಾಗಿ ಹೋರಾಟದಲ್ಲಿ ಪಾಲ್ಗೊಂಡ ನಂತರ ಅನೇಕ ಹಿರಿಯರು ನಮಗೆ ಬೆಂಬಲ ನೀಡಿದರು. ಸಭೆ, ಸಮಾರಂಭಗಳಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿ ಜನರನ್ನು ಹುರಿದುಂಬಿಸುತ್ತಿದ್ದೆವು. ಬಳ್ಳಾರಿಯನ್ನು ಕರ್ನಾಟಕದಲ್ಲಿ ಸೇರಿಸಬೇಕಾದರೆ ನಡೆದ ಹೋರಾಟ ಅವಿಸ್ಮರಣೀಯ.

ಇದಲ್ಲದೇ ಹುಬ್ಬಳ್ಳಿಯ ಪಾಟೀಲ ಪುಟ್ಟಪ್ಪ, ಅದರಗುಂಚಿ ಶಂಕರಗೌಡ ಪಾಟೀಲ, ಎ.ಜೆ. ಮುಧೋಳ, ಕಲಬುರ್ಗಿಯ ಸರ್ದಾರ್ ಶರಣಗೌಡ ಇನಾಮ್‍ದಾರ್, ಪ್ರೊ. ವಸಂತ ಕುಷ್ಟಗಿ, ವಾಮದೇವ ದಿಕ್ಷಿತ್, ಎಂ.ಎಂ. ಭಟ್, ಅಡಿವೆಪ್ಪ, ದಾಮೋದರ ದೇಶಮುಖ್, ವೀರಣ್ಣ ತಿಮ್ಮಾಜಿ, ಧಾರವಾಡದ ಪ್ರೊ. ಎಂ. ರಾಜಶೇಖರಯ್ಯ, ಕಾಸರಗೋಡಿನ ಡಾ.ಎಸ್.ಎನ್ ಭಟ್, ಡಾ. ಲಲಿತಾ ಭಟ್, ಪೆರ್ಲದ ಕೃಷ್ಣಭಟ್, ಬೆಂಗಳೂರಿನ ಎನ್.ಕೆ. ಉಪಾಧ್ಯಾಯ, ಗೋವಿಂದಮೂರ್ತಿ ದೇಸಾಯಿ, ಕೊಪ್ಪಳದ  ಶಿವಮೂರ್ತಿ ಸ್ವಾಮಿ ಅಳವಂಡಿ ಅವರು ಏಕೀಕರಣದ ನಂತರ ಅನುಭವಗಳನ್ನು ಸಂದರ್ಶನದಲ್ಲಿ ವಿವರವಾಗಿ ಹಂಚಿಕೊಂಡಿದ್ದರು.