ಮಹಿಳೆಯರ ಸುರಕ್ಷತೆಗಾಗಿ ಪಿಕಪ್, ಡ್ರಾಪ್ ಸೇವೆ ಪ್ರಾರಂಭಿಸಿದ ಗದಗ್ ಪೊಲೀಸರು; ಈ ನೂತನ ಕೆಲಸಕ್ಕೆ ಭಾರಿ ಮೆಚ್ಚುಗೆ.!

0
243

ದೇಶದಲ್ಲಿ ಸಧ್ಯ ಹೆಣ್ಣು ಮಕ್ಕಳಿಗೆ ಯಾವ ರೀತಿಯ ಸ್ವತಂತ್ರ ಸಿಕ್ಕಿದೆ ಎನ್ನುವುದು ಅನುಮಾನ ಮೂಡಿದೆ. ಏಕೆಂದರೆ ಪ್ರತಿದಿನವೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ಕೊಲೆಯಿಂದ ಹಗಲು ಕೂಡ ಹೊರ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡರು ಪಾಪಿ ಕಾಮುಕರು ಯಾವುದಕ್ಕೂ ಕೇರ್ ಮಾಡದೇ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ಮೇಲೇನೂ ಎರಗುತ್ತಿದ್ದಾರೆ. ಅದಕ್ಕಾಗಿ ಮಹಿಳೆಯರ ಸುರಕ್ಷಿತ ದೃಷ್ಟಿಯಿಂದ ಗದಗ್ ನಲ್ಲಿ ಮಹಿಳೆಯರಿಗೆ ಉಚಿತ ಡ್ರಾಪ್ ಸೇವೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ.

ಹೌದು ಹೈದರಾಬಾದ್ ನ ಅತ್ಯಾಚಾರದ ಆರೋಪ ಕೇಳಿ ಬಂದ ನಂತರ ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅನಿವಾರ್ಯ ಒದಗಿ ಬಂದಿದೆ. ಏಕೆಂದರೆ ಒಂದು ಹೆಣ್ಣು ಮಧ್ಯರಾತ್ರಿ ಸ್ವತಂತ್ರವಾಗಿ ಓಡಾಡುವ ಹಾಗಾದಾಗ ಮಾತ್ರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಹಾಗೆ ಅಂತ ಮಹಾತ್ಮ ಗಾಂಧೀಜಿ ಕನಸು ಕಂಡಿದ್ರು. ಆದರೆ ವಿಪರ್ಯಾಸ ಅಂದ್ರೆ ಹಗಲಿನಲ್ಲಿಯೇ ನಮ್ಮ ಹೆಣ್ಣುಮಕ್ಕಳು ಹೊರಬರೋಕೆ ಭಯ ಪಡುವಂಥಾ‌ ಕೆಟ್ಟ ಪರಿಸ್ಥಿತಿ ಸದ್ಯ ದೇಶದಲ್ಲಿ ನಿರ್ಮಾಣವಾಗಿದೆ. ಹೌದು..ಇದಕ್ಕೆ ಸಾಕ್ಷಿ ಎನ್ನುವಂತೆ ದೆಹಲಿ ನಿರ್ಭಯಾ ಪ್ರಕರಣ ಹಾಗೂ ಹೈದರಾಬಾದ್ ನ ಪಶು ವೈದ್ಯೆ ದಿಶಾ ಪ್ರಕರಣ ನಮ್ಮ ಮುಂದಿದೆ. ಒಂದಿಲ್ಲೊಂದು ರೀತಿಯಲ್ಲಿ ಕಾಮಪಿಶಾಚಿಗಳು ಹೆಣ್ಣಿನ ಮೇಲೆ ತಮ್ಮ ದುಷ್ಕೃತ್ಯವನ್ನು ಮೆರೆಯುತ್ತಿದ್ದಾರೆ.

ಘಟನೆ ನಡೆದ ಮೇಲೆ ಎಚ್ಚರವಾದರೆ ಪ್ರಯೋಜನವಿಲ್ಲ ಅದಕ್ಕಾಗಿ ಮೊದಲೇ ಎಚ್ಚರವಹಿಸುವುದು ಒಳ್ಳೆಯದು ಎಂದು ಸದ್ಯ ಪೊಲೀಸ್ ಇಲಾಖೆ ತನ್ನ ಜವಾಬ್ದಾರಿ ಹೆಚ್ಚಿಸಿಕೊಂಡಿದ್ದು ಹೆಣ್ಣುಮಕ್ಕಳ ರಕ್ಷಣೆಗೆ ಹಲವು ನೂತನ ಕ್ರಮಗಳ ಅನುಷ್ಠಾನಕ್ಕೆ ಮುಂದಾಗಿದೆ. ಗದಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಷಿ ನೇತೃತ್ವದ ತಂಡ ಜಿಲ್ಲೆಯಲ್ಲಿನ ಹೆಣ್ಣುಮಕ್ಕಳು ರಾತ್ರಿ ವೇಳೆ ಯಾವುದೇ ಅಪಾಯವಿಲ್ಲದಂತೆ ಸುರಕ್ಷಿತವಾಗಿ ಮನೆ ಮುಟ್ಟಿಸುವ ಮಹತ್ತರ ಜವಾಬ್ದಾರಿಯ ನಿರ್ಧಾರವನ್ನು ತೆಗೆದುಕೊಂಡಿದ್ದು ಅದನ್ನು ಯಶಸ್ವಿಯಾಗಿ ಜಾರಿ ಮಾಡಲು ಮುಂದಾಗಿದ್ದಾರೆ.

ರಾತ್ರಿ 10 ಗಂಟೆಯಿಂದ ಬೆಳಗಿನ 6 ಗಂಟೆಯ ನಡುವೆ ರಾತ್ರಿ ಮನೆಗೆ ಹೋಗುವ ಮಹಿಳೆಯರು ಇನ್ಮುಂದೆ ಚಿಂತೆ ಪಡಬೇಕಾಗಿಲ್ಲ. ಅಷ್ಟೊತ್ತಿನಲ್ಲಿ ಒಬ್ಬೊಂಟಿ ಮಹಿಳೆಯರು ವಾಹನಗಳ ಹುಡುಕಾಡುವ ಅವಶ್ಯವಿಲ್ಲ. ಯಾಕೆಂದರೆ ಒಂದು ಕರೆ ಮಾಡಿದರೆ ಸಾಕು, ಸ್ವತಃ ಪೊಲೀಸ್ ಸಿಬ್ಬಂದಿಯೇ ಅವರಿದ್ದಲ್ಲಿಗೆ ವಾಹನ ತೆಗೆದುಕೊಂಡು ಹೋಗಿ, ಆಟೋ ವ್ಯವಸ್ಯೆ ಮಾಡಿ ಮನೆಗೆ ಕಳಿಸುತ್ತಾರೆ. ಒಂದು ವೇಳೆ, ಮಧ್ಯರಾತ್ರಿ ಆಟೋ ಸಿಗದಿದ್ದರೆ ಪೊಲೀಸ್​ ವಾಹನದ ಮೂಲಕ ಅವರ ಮನೆಗೆ ಬಿಟ್ಟು ಬರುತ್ತಾರೆ.

ಏಕಾಂಗಿಯಾಗಿರುವ ಯಾವುದೇ ಮಹಿಳೆಯರು, ವೃದ್ಧರು, ಮಕ್ಕಳು ಪೊಲೀಸ್ ಸಹಾಯವಾಣಿ ಸಂಖ್ಯೆ 9480804400 ಅಥವಾ 100 ಅಥವಾ 112 ಗೆ ಕರೆ ಮಾಡಿ ಸಹಾಯಕ್ಕಾಗಿ ವಿನಂತಿಸಿದರೆ ಸಾಕು, ಹೆಣ್ಣು ಮಕ್ಕಳ ರಕ್ಷಣೆಗೆಂದೇ 24×7 ಕೆಲಸ ಮಾಡುವ ಪೊಲೀಸರು ಅವರನ್ನು ಅವರ‌ ಮನೆಗೆ ತಲುಪಿಸುತ್ತಾರೆ. ಈ ವೇಳೆ ಕಂಟ್ರೋಲ್ ರೂಮ್ ನ ನೈಟ್ ಡ್ಯೂಟಿ ಅಧಿಕಾರಿಗಳೇ ಹೆಣ್ಣುಮಕ್ಕಳ ಜೊತೆಗೆ ಸಂವಹನ ಮಾಡಿ ವಾಹನದ ವ್ಯವಸ್ಥೆ ಮಾಡ್ತಾರೆ. ಈ ಮೂಲಕ ರಾತ್ರಿ ವೇಳೆ ಹೆಣ್ಣುಮಕ್ಕಳಿಗೆ ಯಾವುದೇ ರೀತಿ ತೊಂದರೆ ಆಗದ ಹಾಗೆ ಪ್ಲ್ಯಾನ್ ಮಾಡಿದ್ದಾರೆ ಜಿಲ್ಲೆಯ ಎಸ್ಪಿ. ಸದ್ಯ ಈ‌ ನಿರ್ಧಾರ ಹೆಣ್ಣು ಹೆತ್ತ ತಂದೆ ತಾಯಂದಿರು ನೆಮ್ಮದಿಯಿಂದ ನಿದ್ರೆ ಮಾಡುವಂತೆ ಮಾಡಿದ್ದು ಜಿಲ್ಲೆಯ ಮಹಿಳಾ‌ ಸಮೂಹ‌ ಪೊಲೀಸ್ ಇಲಾಖೆಯ ನೂತನ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದೆ. ಇದೇ ವ್ಯವಸ್ಥೆಯನ್ನು ದೇಶದೆಲ್ಲಡೆ ತಂದರೆ ಮಹಿಳೆಯರಿಗೆ ಸುರಕ್ಷತೆ ಸಿಕ್ಕಂತೆ ಆಗುತ್ತೆ.

Also read: ಪೊಲೀಸರು ಮಹಿಳೆಯರನ್ನು ಬಂಧಿಸುವ ಸಯಮದಲ್ಲಿ ಮಹಿಳೆಯರಿಗೆ ಇರುವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬ ಮಹಿಳೆ ತಿಳಿದಿರಬೇಕು.!