ಕೆ.ಜೆ. ಜಾರ್ಜ್ ಮರಳಿ ಸಂಪುಟಕ್ಕೆ: ನ್ಯಾಯ ಎಲ್ಲಿದೆ???

0
601

ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್‍ಚೀಟ್ ಪಡೆದಿರುವ ಮಾಜಿ ಸಚಿವ ಕೆ.ಜೆ.ಜಾರ್ಜ್ ಮರಳಿ ಸಚಿವ ಸಂಪುಟ ಸೇರುವ ಕಾಲ ಸನ್ನಿಹಿತವಾಗಿದೆ.
ಜಾರ್ಜ್ ಮೇಲಿದ್ದ ಆರೋಪದ ಬಗ್ಗೆ ಮಡಿಕೇರಿ ನ್ಯಾಯಾಲಯಕ್ಕೆ ಸಿಐಡಿ ಬಿ-ರಿಪೋರ್ಟ್ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆರೋಪ ಮುಕ್ತಗೊಂಡ ಜಾರ್ಜ್ ಅವರನ್ನು ಮರಳಿ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ.
ಸಂಪುಟದಲ್ಲಿ ಬಾಕಿ ಉಳಿದಿದ್ದ ಎರಡು ಸ್ಥಾನಗಳ ಪೈಕಿ ವಿಜಯನಗರ ಶಾಸಕ ಎ.ಕೃಷ್ಣಪ್ಪ ಸೇರ್ಪಡೆಯಿಂದ ಒಂದು ಸ್ಥಾನ ಭರ್ತಿ ಮಾಡಿರುವ ಸಿದ್ದರಾಮಯ್ಯ ಖಾಲಿಯಿರುವ ಮತ್ತೊಂದು ಸ್ಥಾನಕ್ಕೆ ಶೀಘ್ರವೇ ಜಾರ್ಜ್ ಅವರನ್ನು ನೇಮಿಸಲಿದ್ದಾರೆ. ಈ ಬಗ್ಗೆ ಅವರು ಹೈಕಮಾಂಡ್ ಒಪ್ಪಿಗೆ ಪಡೆಯುವುದು ಬಾಕಿಯಿದೆ.
ಜಾರ್ಜ್ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು ಇತ್ತೀಚೆಗೆ ಸುಳಿವು ನೀಡಿದ್ದರು. ಅವರು ಆರೋಪ ಮುಕ್ತರಾದ ನಂತರ ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿದ್ದರು.
ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಜುಲೈ 18ರಂದು ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಪ್ರಕರಣ ವಿಧಾನ ಮಂಡಲದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಜಾರ್ಜ್ ಸೇರಿದಂತೆ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಮಡಿಕೇರಿ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದ ನಂತರ ಜಾರ್ಜ್ ರಾಜೀನಾಮೆ ನೀಡುವುದು ಅನಿವಾರ್ಯ ಆಗಿತ್ತು.

ಒಲ್ಲದ ಮನಸ್ಸು

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಣಪತಿ ಅವರು ಮಡಿಕೇರಿಯ ಖಾಸಗಿ ಚಾನಲ್‍ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಾರ್ಜ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್, ಪ್ರಣವ್ ಮೊಹಂತಿ ಅವರ ವಿರುದ್ಧ ಆರೋಪ ಮಾಡಿದ ಸಂಗತಿ ಸಾರ್ವಜನಿಕ ವಲಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿತ್ತು.
ನನಗೆ ಮುಂದೆ ಏನಾದರೂ ಆದರೆ ಅದಕ್ಕೆ ಈ ಮೂವರು ಹೊಣೆ ಎಂದು ಹೇಳಿಕೆ ನೀಡಿದ್ದರು. ಜಾರ್ಜ್ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ರಾಜೀನಾಮೇ ನೀಡಬೇಕು ಎಂದು ಆಗ್ರಹಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ದೊಡ್ಡ ಹೋರಾಟವನ್ನೇ ನಡೆಸಿದ್ದವು.
ಎಫ್‍ಐಆರ್ ದಾಖಲಿಸುವಂತೆ ನ್ಯಾಯಾಲಯದ ಆದೇಶ ಹಾಗೂ ಪ್ರತಿಪಕ್ಷಗಳ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ರಾಜೀನಾಮೆ ಪಡೆದಿದ್ದರು. ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ತನಿಖೆ ನಂತರ ಜಾರ್ಜ್ ಆರೋಪ ಮುಕ್ತರಾದರೆ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಮುಖ್ಯಮಂತ್ರಿಗಳು ಬಹಿರಂಗವಾಗಿ ಹೇಳಿದ್ದರು. ಕಾಂಗ್ರೆಸ್ ಹೈಕಮಾಂಡ್ ಸಹ ಇದೇ ರೀತಿ ಸೂಚನೆ ನೀಡಿತ್ತು.