ಗಾಯದ ಮೇಲೆ ಬರೆ ಎಳೆದ ಸುಪ್ರೀಂಕೋರ್ಟ್: ನಿತ್ಯ 6,000 ಕ್ಯುಸೆಕ್ಸ್ ನೀರು ಬಿಡಲು ಆದೇಶ

0
749

 

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ರಾಜ್ಯಕ್ಕೆ ಮತ್ತೆ ಸುಪ್ರೀಂಕೋರ್ಟ್ ಆಘಾತ ನೀಡಿದೆ.ಎಳು ದಿನಗಳ ಕಾಲ ತಲಾ ಆರು ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿದ್ದು, ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕಾವೇರಿ ನದಿ ನೀರು ಹಂಚಿಕೆ ವಿವಾದ ಪ್ರಕರಣದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲು ನಡೆಯಿತು.ರಾಜ್ಯದ ಪರ ವಕೀಲ ಫಾಲಿ ಎಸ್.ಮ ನಾರಿಮನ್ ಪ್ರಭಲ ವಾದ ಮಂಡಿಸಿದರು. ಯಾವುದೇ ಕಾರಣಕ್ಕೂ ಇನ್ನು ಮುಂದೆ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ನೀರು ಹರಿಸಿಯಾಗಿದೆ. ತಿಂಗಳುವಾರು ಇಷ್ಟೇ ನೀರು ಬಿಡಬೇಕು ಎಂದು ನ್ಯಾಯಾಧಿಕರಣ ಆದೇಶದಲ್ಲಿ ತಿಳಿಸಿಲ್ಲ ಎಂದರು.

ಅಪರೂಪಕ್ಕೊಮ್ಮೆ ವಾಡಿಕೆಯಂತೆ ಮಳೆಯಾಗುತ್ತದೆ. ಈ ಬಾರಿ ಸಂಕಷ್ಟದ ಜಲವರ್ಷ ಎಂದು ಮೇಲುಸ್ತುವಾರಿ ಸಮಿತಿಯೇ ಹೇಳಿದೆ, ನೀರು ಹರಿಸುವ ಸ್ಥಿತಿಯಲ್ಲಿ ಕರ್ನಾಟಕವಿಲ್ಲ, ಸಂಕಷ್ಟ ಸೂತ್ರವನ್ನು ಪಾಲಿಸಲೂ ಸಾಧ್ಯವಿಲ್ಲ. ಹೀಗಾಗಿ ಯಾವುದೇ ಮಧ್ಯಾಂತರ ಆದೇಶ ನೀಡಬೇಡಿ, ಪ್ರಕರಣವನ್ನು ಕಾವೇರಿ ಮೇಲುಸ್ತುವಾರಿ ಸಮಿತಿಗೆ ವರ್ಗಾಯಿಸಿ, ತಜ್ಞರ ವರದಿ ಪಡೆದುಕೊಂಡು ತೀರ್ಮಾನ ಕೈಗೊಳ್ಳಲಿ, ನಾವು ಮೇಲುಸ್ತುವಾರಿ ಸಮಿತಿಯಲ್ಲೇ ಮೇಲ್ಮನವಿ ಸಲ್ಲಿಕೆ ಮಾಡುತ್ತೇವೆ ಎಂದರು.

ಕಾವೇರಿ ನದಿ ನೀರು ಅವಲಂಬಿತವಾಗಿರುವ ರಾಜ್ಯದ ಜನರ ಸಂಕಷ್ಟವನ್ನು ಸುಪ್ರೀಂ ಕೋರ್ಟ್ ಮುಂದೆ ನಾರಿಮನ್ ಎಳೆ ಎಳೆಯಾಗಿ ಬಿಡಿಸಿಟ್ಟರು. ರಾಜ್ಯದ ಜನ ನೀರಿನ ಕೊರತೆಯಿಂದ ಪರಿತಪಿಸುತ್ತಿರುವುದನ್ನು ವಿವರಿಸಿದರು.

ಕಾವೇರಿ ನ್ಯಾಯಾಧಿಕರಣದ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ, ಐತೀರ್ಪನ್ನು ಅನುಷ್ಠಾನಕ್ಕೆ ತರಲು ಯೋಗ್ಯವಾಗಿಲ್ಲ, ಮೇಲುಸ್ತುವಾರಿ ಸಮಿತಿ ಆದೇಶವನ್ನು ನಾವು ಪ್ರಶ್ನಿಸಿ ಅರ್ಜಿ ಸಲ್ಲಿಸುತ್ತೇವೆ ಎಂದರು.

ನಂತರ ರಾಜ್ಯದ ಪರ ಇನ್ನೋರ್ವ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದರು. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮೊದಲು ಗಮನಹರಿಸಬೇಕು, ಬೆಳೆಗೆ ನೀರು ಹರಿಸುವ ವಿಚಾರಕ್ಕಿಂತ ಕುಡಿಯುವ ನೀರಿಗೆ ಆಧ್ಯತೆ ನೀಡಿ ಎಂದು ಮನವಿ ಮಾಡಿದರು.

ರಾಜ್ಯದ ಪರ ವಕೀಲರ ವಾದಕ್ಕೆ ಆಕ್ಷೇಪಣೆ ಸಲ್ಲಿಸಿದ ತಮಿಳುನಾಡು ಪರ ವಕೀಲರು ನ್ಯಾಯಾಧಿಕರಣದ ಆದೇಶದಂತೆ ತಿಂಗಳವಾರು ಬಾಕಿ ನೀರನ್ನು ಕೂಡಲೇ ಬಿಡುಗಡೆ ಮಾಡಲು ನಿರ್ದೇಶಿಸುವಂತೆ ಮಬವಿ ಮಾಡಿದರು. ನಮಗೂ ಮೇಲುಸ್ತುವಾರಿ ಸಮಿತಿ ತೀರ್ಪು ನಮಗೂ ಅಸಮಧಾನ ತಂದಿದ್ದು ನಾವೂ ಕೂಡ ಮೇಲ್ಮನವಿ ಸಲ್ಲಿಸಲು ಸಿದ್ದತೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರು.

ಮಧ್ಯಂತರ ಆದೇಶ ಕಾನೂನು ಬಾಹಿರವಾಗಲಿದೆ ಹಾಗಾಗಿ ಮಧ್ಯಂತರ ಆದೇಶ ನೀಡಬಾರದು ಎಂದು ನಾರಿಮನ್ ಸುಪ್ರೀಂಕೋರ್ಟ್ ಗೆ ಮತ್ತೊಮ್ಮೆ ಮನವಿ ಮಾಡಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು ಪರ ವಕೀಲರು, ಕರ್ನಾಟಕ ರಾಜ್ಯ ಸುಪ್ರೀಂ ಕೋರ್ಟ್ ಅನ್ನು ನಿರ್ಬಂಧಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲು ಕಾವೇರಿ ನದಿ ನೀರು ಹಂಚಿಕೆಗೆ ನಿರ್ವಹಣಾ ಮಂಡಳಿ ರಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು. ನಾಲ್ಕು ವಾರದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು. ನಾಲ್ಕು ವಾರದ ಬಳಿಕ ಮಡಳಿ ರಚನೆ ಸಂಬಂಧ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿತು.

ಸೆಪ್ಟಂಬರ್ ೨೧ ರಿಂದ  ೨೭ರವರೆಗೆ ಪ್ರತಿದಿನ ಆರು ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ರಾಜ್ಯಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಸೆಪ್ಟಂಬರ್ ೨೭ಕ್ಕೆ ಮುಂದುಡಿತು.

ಕಾವೇರಿ ಮೇಲುಸ್ತುವಾರಿ ಸಮಿತಿ ಹತ್ತು ದಿನಗಳ ಕಾಲ ತಲಾ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿತ್ತು. ಆದರೆ ಸುಪ್ರೀಂಕೋರ್ಟ್ ಅದಕ್ಕೂ ಹೆಚ್ಚಿನ ಪ್ರಮಾಣದ ನೀರು ಹರಿಸುವಂತೆ ಆದೇಶ ನೀಡಿ ರಾಜ್ಯಕ್ಕೆ ಆಘಾತಕಾರಿ ಆದೇಶ ನೀಡಿದೆ.