ಜಾಗತೀಕರಣದ ನಾನಾ ಮುಖಗಳು

0
856

ಹಿರಿಯ ಮಗನದು ಇನ್ಫೋಸಿಸ್ಸು, ಸೊಸೆ ಡಾಯಿಷ್ ಬ್ಯಾಂಕು. ಇಬ್ಬರದೂ ಬೆಂಗಳೂರು. ಕಿರಿಮಗ ಊರಲ್ಲೇ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ, ಆತನ ಹೆಂಡತಿ ಶಾಲೆಯೊಂದರಲ್ಲಿ ಟೀಚರ್.
ಹೆತ್ತವರು ತಮ್ಮ ಮಕ್ಕಳ ಬಗ್ಗೆ ಹೆಮ್ಮೆಯಿಂದಲೇ ಹೇಳಿಕೊಳ್ಳಬಹುದಾದ ಸಾಧನೆಯಿದು. ಬಡತನದಿಂದ ಸುಧಾರಿಸಿಕೊಂಡ ಹಳ್ಳಿಯ ಕುಟುಂಬ. ಮಕ್ಕಳಿಗೆ ಕಷ್ಟ ಪಟ್ಟು ಓದಿಸಿ, ಅವರು ನಗರ ಮಹಾನಗರಗಳಲ್ಲಿ ಉದ್ಯೋಗ ಪಡೆಯುವುದೇ ಇಂದಿನ ತಂದೆ ತಾಯಂದಿರ ಕನಸು. ಆದರೆ ಕಾರ್ಕಳ ಕಡಾರಿಯ “ರೇಣುಕಾ” ಹೊಟೇಲಿನ ಮಾಲಕ ಮಂಜುನಾಥ ಪ್ರಭು ಅವರ ಆಸೆಯೇ ಬೇರೆ. ಅವರ ಆದರ್ಶ ಕುಟುಂಬದ ಕಲ್ಪನೆಯು ಭಾರತೀಯ ಕುಟುಂಬ ವ್ಯವಸ್ಥೆಯ ಅದ್ಭುತ ಲೋಕಕ್ಕೊಂದು ಕನ್ನಡಿಯಂತಿದೆ. ಅದು ಈಗಲೂ ಸಾಧ್ಯವಾಗುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಇನ್ಫೋಸಿಸ್ಸು, ಡಾಯಿಷ್ಷು, ಖಾಸಗಿ ಸಂಸ್ಥೆ, ಶಾಲೆಯ ಟೀಚರ್ ಎಂದು ಮೇಲೆ ಹೇಳಿದ್ದೆನಲ್ಲ. ಅದು ಅವರ ಮಕ್ಕಳು, ಸೊಸೆಯಂದಿರು ಓದಿ ಪಡೆದುಕೊಂಡಿದ್ದ ಉದ್ಯೋಗ. ಪವಾಡವೆಂದರೆ ಈಗ ಅವರೆಲ್ಲರೂ ಆ ಕೆಲಸಗಳನ್ನು ಬಿಟ್ಟು ಬಂದಿದ್ದಾರೆ. ತಂದೆ ತಾಯಿಯೊಂದಿಗೆ ಗ್ರಾಮೀಣ ಜೀವನದ, ಅವಿಭಕ್ತ ಕುಟುಂಬದ ಖುಷಿಯನ್ನು ಅನುಭವಿಸುತ್ತಿದ್ದಾರೆ.
ಒಬ್ಬ ಮಗ ಹೊಟೇಲನ್ನು ನೋಡಿಕೊಂಡರೆ, ಮತ್ತೊಬ್ಬರದ್ದು “ರೇಣುಕಾ” ಬಟ್ಟೆಯಂಗಡಿ. ಸೊಸೆಯಂದಿರು ಪ್ರತೀ ದಿನ ಬೆಳ್ಳಂಬೆಳಗ್ಗೆ ಎದ್ದು ಒಂದು ಸಾವಿರ ನೀರುದೋಸೆ ಹುಯ್ಯುತ್ತಾರೆ. ಅತ್ತೆ ಮಾವನೊಂದಿಗೆ ಹೊಟೇಲಿನ ಕೆಲಸಗಳೆಲ್ಲವನ್ನೂ ಮಾಡುತ್ತಾರೆ. ದಿನ ನಿತ್ಯ ನೂರಕ್ಕೂ ಹೆಚ್ಚು ಖಾದ್ಯಗಳನ್ನು ತಯಾರಿಸಿ ಹೊಟೇಲು ಮಾತ್ರವಲ್ಲದೆ ವಿವಿಧ ಸಮಾರಂಭಗಳ ಬೇಡಿಕೆಯನ್ನು ಪೂರೈಸುವ ಕೆಲಸದಲ್ಲಿ ಬಹಳ ಪ್ರೀತಿಯಿಂದಲೇ ತೊಡಗಿಸಿಕೊಂಡಿದ್ದಾರೆ. ರೇಣುಕಾ ಹೊಟೇಲಿನ ರುಚಿ ಕಾರ್ಕಳದ ಜನತೆಗೆ ಗೊತ್ತಿದೆಯೋ ಸಂಶಯ. ಆದರೆ ಬಜ್ಪೆ ವಿಮಾನ ನಿಲ್ದಾಣದಲ್ಲಿಳಿಯುವ ಪ್ರತಿಯೊಬ್ಬ ಪ್ರವಾಸಿಗರಿಗೂ ಕಡಾರಿಯ ಈ ರೇಣುಕಾ ಹೊಟೇಲಿನ ಪತ್ರಡ್ಡೆ, ಪತ್ತೋಳಿ, ಬೆಣ್ಣೆ ಇಡ್ಲಿ, ಒತ್ತು ಸೇಮಿಗೆಯ ಪರಿಮಳ ತಾಗಿಯೇ ತಾಗಿರುತ್ತೆ. ವಿದೇಶಿಗರಿಗೆ ನೀಡಲಾಗುವ ಪ್ರವಾಸೀ ಗೈಡ್ ನಲ್ಲಿ ಈ ಹೊಟೇಲಿನ ಬಗ್ಗೆ, ಅಲ್ಲಿರುವ ರುಚಿ ರುಚಿ ಖಾದ್ಯಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಮನೆಯ ಎಲ್ಲರೂ ಕೂಡಿಕೊಂಡು “ರೇಣುಕಾ” ಹೊಟೇಲಿನ ವ್ಯವಹಾರ ಸಾಗುತ್ತಿದೆ. ಮನೆಯ ಪ್ರತಿಯೊಬ್ಬರಿಗೂ ಸಂಬಳವಿದೆ. ಪ್ರತೀ ದಿನ ಪ್ರತಿಯೊಬ್ಬರ ಹೆಸರಿನಲ್ಲೂ ನಿರ್ದಿಷ್ಟ ಮೊತ್ತವನ್ನು ಪಿಗ್ಮಿಗೆ ಕಟ್ಟಲಾಗುತ್ತದೆ. ಬಾಟಲಿಗಳನ್ನೆಲ್ಲಾ ಬೀಳಿಸಿ, ಸಾಮಾನುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡುವ ಪುಟಾಣಿ ಮೊಮ್ಮಗಳಿಗೆ ಅವಳ ಈ ತಂಟ ಕೆಲಸಗಳಿಗೂ ತಿಂಗಳ ಸಂಭಾವನೆ ಇದೆ.
ಇದು ಕೇವಲ ಒಂದು ಮನೆಯ ಕಥೆಯಲ್ಲ. ಮಂಜುನಾಥ ಪ್ರಭು ಒಟ್ಟು ಐದು ಜನ ಸಹೋದರರು. ಕಡಾರಿಯ ಆಸು ಪಾಸಿನಲ್ಲೇ ಅವರ ಐದು ಮನೆಗಳು. ತೆಂಗು ಕಂಗುಗಳ ತೋಟದ ಮನೆ. ಸದ್ಯಕ್ಕೆ ಹಿರಿಯ ಅಣ್ಣ ಮಾತ್ರ ಮೂಡಬಿದ್ರೆಯಲ್ಲಿ ವಾಸ. ಉಳಿದವರೆಲ್ಲರೂ ಕಡಾರಿಯಲ್ಲಿದ್ದಾರೆ. ಹೊಟೇಲಿನ ಪಕ್ಕವೇ ರೇಣುಕಾ ಹಾರ್ಡ್ ವೇರ್, ರೇಣುಕಾ ಜನರಲ್ ಸ್ಟೋರ್ ಇಟ್ಟುಕೊಂಡು ತಮ್ಮ ತಮ್ಮಲ್ಲೇ ಕೆಲಸವನ್ನು ಹಂಚಿಕೊಂಡು ಆದರ್ಶ ಕೂಡು ಕುಟುಂಬವೊಂದಕ್ಕೆ ಸುಂದರ ಉದಾಹರಣೆಯಾಗಿದ್ದಾರೆ.
ಆ ಐವರ ಐದು ಮನೆಗಳ ಹೆಸರೂ “ರೇಣುಕಾ”. ಎಲ್ಲರಲ್ಲೂ ಒಂದೇ ರೀತಿಯ ಕಾನೂನು. ಒಬ್ಬರ ಮಗ ಮಾತ್ರ ಸದ್ಯಕ್ಕೆ ಬೆಂಗಳೂರಲ್ಲಿ ಎಚ್.ಪಿ ಕಂಪನಿಯಲ್ಲಿದ್ದಾನೆ. ಸ್ವಲ್ಪ ದಿನಗಳಲ್ಲಿ ಆತನೂ ಕಡಾರಿಯಲ್ಲೇ ನೆಲೆಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾನೆ.
ಇಷ್ಟಕ್ಕೇ ಮುಗಿಯುವುದಿಲ್ಲ ಆ ಕುಟುಂಬದ ಕಥೆ. ತಮ್ಮದೇ ಆದ ವಿಶೇಷ ಅರ್ಥವ್ಯವಸ್ಥೆಯನ್ನು ಅವರು ಕಂಡುಕೊಂಡಿದ್ದಾರೆ. ಕಳೆದ 22 ವರುಷಗಳಿಂದ ವಾರಕ್ಕೊಂದು ದಿನ (ಮಂಗಳವಾರ), ರಾತ್ರಿ ಹೊತ್ತು ಒಬ್ಬರ ಮನೆಯಲ್ಲಿ ಸೇರುತ್ತಾರೆ ಒಟ್ಟಿಗೇ ಊಟ. ಮಾತುಕತೆಗಳು. ಅದೆಲ್ಲವೂ ಮುಗಿದ ಮೇಲೆ ಮನೆಯ ಹೆಣ್ಮಕ್ಕಳು ಲೆಕ್ಕ ಪುಸ್ತಕವೊಂದನ್ನು ಹೊರತೆಗೆಯುತ್ತಾರೆ. ಆ ಸಹೋದರರೆಲ್ಲರೂ ನಿರ್ದಿಷ್ಟ ಮೊತ್ತವನ್ನು ಹುಂಡಿಯೊಳಗೆ ಹಾಕುತ್ತಾರೆ. ಕಳೆದ ಇಪ್ಪತ್ತೆರಡು ವರುಷಗಳಿಂದಲೂ ಈ ಸಂಪ್ರದಾಯ ನಡೆಯುತ್ತಾ ಬಂದಿದೆ.
ಹುಂಡಿಯಲ್ಲಿರೋ ಆ ಹಣ ಯಾರಿಗೆ ಗೊತ್ತೆ? ಅದು ಬಡವರ ನಿಧಿ. ಯಾರೇ ಆಗಲಿ, ಕಷ್ಟದಲ್ಲಿರುವವರ ಮದುವೆಗೆ ಅಕ್ಕಿಯ ರೂಪದಲ್ಲಿ ಆ ಹಣ ಹೋಗುತ್ತದೆ. ಆಸ್ಪತ್ರೆಯ ಖರ್ಚನ್ನು ನಿಭಾಯಿಸಲಾಗದ ಬಡ ರೋಗಿಯ ಹೆಸರಲ್ಲದು ಜಮಾ ಆಗುತ್ತದೆ. ಸಾರ್ವಜನಿಕ ಗಣೇಶೋತ್ಸವ, ಊರ ಜಾತ್ರೆ, ಮಹೋತ್ಸವಗಳಿಗೆ ಮತ್ತಿತರ ಸಾರ್ವಜನಿಕ ಕಾರ್ಯಗಳಿಗೆ ವಿನಿಯೋಗವಾಗುತ್ತದೆ. ಹಣ ಹೂಡುವ ಸಹೋದರರೂ, ಮನೆಯ ಮಕ್ಕಳೂ ಅಗತ್ಯ ಬಿದ್ದಾಗ ಆ ಹಣವನ್ನು ತೆಗೆದುಕೊಳ್ಳಬಹುದು. ಆದರೆ ಅದು ಸಾಲವಾಗಿ. ಆ ಹಣಕ್ಕೆ ಅವರಿಗೆ ಬಡ್ಡಿ ಇದೆ. ಇಂತಿಷ್ಟು ದಿನಗಳಲ್ಲಿ ಹಿಂತಿರುಗಿಸಬೇಕೆಂಬ ವಾಯಿದೆಯೂ ಇದೆ
ಈಗ ಒಟ್ಟು 30 ಜನರಿರುವ ಆ ಕುಟುಂಬದ ಹಿರಿಯ ಜೀವ ಮೀರಾ ಪ್ರಭು. 82 ವರುಷ. ಈ ಐವರ ತಾಯಿ. ನಿಜಕ್ಕೂ ಅವರೆಷ್ಟು ಅದೃಷ್ಟವಂತರಲ್ಲವೇ. ಮನೆ ಐದು ಇದ್ದರೂ ಪ್ರತಿಯೊಬ್ಬರೂ ಪ್ರತೀ ದಿನ ತಾಯಿ ಇರೋ ಮನೆಗೆ ಹೋಗಿ ಬರುತ್ತಾರೆ. ಮನೆಯ ಪಟಾಣಿಗಳನ್ನು ಒಂದಷ್ಟು ಹೊತ್ತು ಅಜ್ಜಿಯ ಮಡಿಲಲ್ಲಿ ಬಿಟ್ಟು ಬರುತ್ತಾರೆ. ಮಕ್ಕಳ ಸಂಪಾದನೆಯಲ್ಲಿ ತಾಯಿಗೂ ಒಂದು ಪಾಲು ಇದೆ. ಆಕೆಯ ಹೆಸರಿನಲ್ಲಿ ಪ್ರತೀ ದಿನ ಹಣ ಉಳಿತಾಯವಾಗುತ್ತದೆ. ಆಕೆ ಕೇಳುವ ಮುಂಚೆಯೇ ಎಲ್ಲವೂ ಆಕೆಯ ಮುಂದಿರುತ್ತದೆ.
ಮೇಲೆ ಹೇಳಿರುವ ಮಾತುಗಳಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆ ಇಲ್ಲ. ಬಜಗೋಳಿಯಿಂದ ಕುದುರೇಮುಖಕ್ಕೆ ಹೋಗೋ ರಸ್ತೆಯಲ್ಲಿ, ಕಡಾರಿ ಸೇತುವೆಗೂ ಮುನ್ನ, ಬಲಕ್ಕೆ ಇವರ ಹೊಟೇಲು, ಅಂಗಡಿಗಳಿವೆ. ಅಲ್ಲಿಗೊಮ್ಮೆ ಹೋಗಿ ಬನ್ನಿ. ಆ ಕುಟುಂಬದ ಸದಸ್ಯರನ್ನೆಲ್ಲಾ ಮಾತಾಡಿಸಿ ಬನ್ನಿ. ಅವರ ಅತಿಥ್ಯವನ್ನು ಸವಿದು ಬನ್ನಿ. ಆದರ್ಶ ಕುಟುಂಬದ ಕನಸೊಂದನ್ನು ನೀವೂ ಅಲ್ಲಿ ಕಟ್ಟಿಕೊಂಡೇ ಮರಳುತ್ತೀರಿ.
ಒಂದು ಹೇಳೋದನ್ನು ಮರೆತೆ. ಬೆಂಗಳೂರಿನಲ್ಲಿ ಡಾಯಿಷ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದ ಹಿರಿಯ ಸೊಸೆ ತಾನು ಕಲಿತ ವಿದ್ಯೆಯನ್ನು ಹಳ್ಳಿಯಲ್ಲಿದ್ದೂ ಸದುಪಯೋಗಪಡಿಸಿಕೊಳ್ಳುತ್ತಿದ್ದಾಳೆ. ಕಡಾರಿಗೆ ಸಮೀಪದ ಕನ್ನಡ ಮಾಧ್ಯಮ ಶಾಲೆಗೆ ವಾರಕ್ಕೊಂದು ದಿನ ಹೋಗಿ, ಅಲ್ಲಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲೀಷ್ ಕಲಿಸಿ ಬರುತ್ತಾರೆ. ಒಟ್ಟಿನಲ್ಲಿ ರೇಣುಕಾ ಹೊಟೇಲಿನಲ್ಲಿ ಕೂತು ತೆಂಗಿನ ಎಣ್ಣೆ ಹಾಕಿದ ಬಿಸಿ ಬಿಸಿ ಒತ್ತು ಶ್ಯಾವಿಗೆಯನ್ನು ಉಪ್ಪಿನ ಕಾಯಿ, ಚಟ್ನಿ, ದಾಳಿತೋವೆಯ ಜೊತೆಗೆ ತಿನ್ನುತ್ತಾ ಹೊಟ್ಟೆ ತುಂಬಿದಂತೆಯೇ ಕೂಡು ಕುಟುಂಬದ ಕತೆಯನ್ನು ಕೇಳಿ ಮನಸು ತುಂಬಿ ಬಂತು.
ಜಾಗತೀಕರಣದ ಹೊಡೆತಕ್ಕೆ ಸಿಲುಕಿ ಕೌಟುಂಬಿಕ ವ್ಯವಸ್ಥೆಯ ಮೂಲ ಸಂಸ್ಕೃತಿಯನ್ನು ಯುವಕರು ಮರೆಯುತ್ತಿದ್ದಾರೆ. ಹಿರಿಯರಿಂದ ಬಳುವಳಿಯಾಗಿ ಬಂದ ವೃತ್ತಿಯಿಂದ ಅವರು ದೂರ ಸರಿಯುತ್ತಿದ್ದಾರೆ. ಇಂತಹ ವಿದ್ಯಮಾನಕ್ಕೆ ಅಪವಾದವಾಗಿರೋ ಕುಟುಂಬ ಕಡಾರಿಯದು. ಬೆಂಗಳೂರಿನಲ್ಲಿ ಕೈತುಂಬಾ ಸಂಬಳವಿದ್ದರೂ, ವೃತ್ತಿ ಜೀವನದಲ್ಲಿ ಬಹು ಎತ್ತರಕ್ಕೆ ಏರಬಲ್ಲ ಅವಕಾಶ ಕೈಯಲ್ಲೇ ಇದ್ದರೂ ಕೌಟಿಂಬಿಕ ಪ್ರೀತಿಯ ಸೆಳೆತಕ್ಕೆ ಒಳಗಾಗಿ ಕುಟುಂಬ ವ್ಯವಸ್ಥೆಗೆ ಚೆನ್ನಾಗಿ ಒಗ್ಗಿಕೊಳ್ಳುತ್ತಿರುವ ಈ ಕೂಡುಕುಟುಂಬದ ಯುವ ಕಣ್ಮಣಿಗಳು ನಮಗೆ ಆದರ್ಶಪ್ರಾಯರಲ್ಲವೇ.

 

——-whatsapp ನಿಂದ ಎತ್ತಿಕೊಂಡದ್ದು