ದೇವಾನುದೇವತೆಗಳ ಕುಟುಂಬವರ್ಗದ ಮ್ಯೂಸಿಯಂ

0
1360

ಒಂದೇ ಸೂರು ೪೬೪ ದೇವರು!!!

ಸ್ಥಳಪುರಾಣವನ್ನಾಧರಿಸಿ ಬೇರೆ ಬೇರೆ ಪುಣ್ಯಕ್ಷೇತ್ರಗಳಲ್ಲಿ ಸ್ಥಾಪಿತವಾಗಿರುವ ಪ್ರಸಿದ್ಧ ದೇವರುಗಳನ್ನು ನೋಡಲು ತೀರ್ಥಯಾತ್ರೆ ಕೈಗೊಳ್ಳುವುದು ಸಾಮಾನ್ಯದ ಸಂಗತಿ.ಅಲ್ಲಿರುವ ಒಂದೊ ಎರಡೊ ಹೆಚ್ಚೆಂದರೆ ೩ ದೇವರನ್ನು ನೋಡಿ ಪುನೀತರಾಗುತ್ತೇವೆ, ಆದರೆ ಒಂದೇ ಸೂರಿನಡಿ ೪೬೪ ದೇವದೇವತೆಗಳನ್ನ ನೋಡಲು ಸಾಧ್ಯವಾದರೆ? ಎಷ್ಟು ಚೆನ್ನಾಗಿರುತ್ತದೆಯಲ್ಲವೆ? ಹೌದು ಅಂಥದ್ದೊಂದು ಕ್ಷೇತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ ಪರಮನಹಳ್ಳಿಯಲ್ಲಿದೆ ಹೊಸಕೋಟೆಯಿಂದ ಮಾಲೂರು ರಸ್ತೆಯಲ್ಲಿ ಸಾಗಿ ನಂದಿಗುಡಿ ಕ್ರಾಸಿನಲ್ಲಿ ಬಲಕ್ಕೆ ೧೦ ಕಿಮೀ ಸಾಗಿದರೆ ಸಿಗುವುದೆ ಪರಮನಹಳ್ಳಿ. ಇದು ಒಂದು ಪುಟ್ಟ ಹಳ್ಳಿ. ಹಚ್ಚ ಹಸುರಿನಿಂದ ಕಂಗೊಳಿಸುವ ಹೊಲ ಗದ್ದೆಗಳು ಕಣ್ಣಿಗೆ ತಂಪನ್ನೀಯುತ್ತದೆ. ಪರಮನಹಳ್ಳಿ ಬಿಟ್ಟು ಸ್ವಲ್ಪ ದೂರ ಬಂದರೆ ಸಿಗುವುದೆ ಈ ಪುಣ್ಯಕ್ಷೇತ್ರ ಇದನ್ನು ಶ್ರೀ ಶ್ರಿ ಶ್ರೀ ಓಂ ಶಕ್ತಿ ಮಹಾತಾಯಿ ಪುಣ್ಯಕ್ಷೇತ್ರವೆಂದು ಕರೆಯುತ್ತಾರೆ.ಇಲ್ಲಿ ಆದಿಶಕ್ತಿ, ಪರಾಶಕ್ತಿ ಮತ್ತು ಓಂ ಶಕ್ತಿಗಳು ನೆಲೆ ನಿಂತಿದ್ದಾರೆ.ಇದು ಸರ್ವಜನ ಸ್ವಹಸ್ತ ಪೂಜಾ ಪುಣ್ಯಕ್ಷೇತ್ರ. ಒಂದೇ ಸೂರಿನಡಿ ೪೬೪ ದೇವಾನುದೇವತೆಗಳ ಅರ್ಧ ಅಡಿಯಿಂದ ಹಿಡಿದು ಆಳೆತ್ತರದವರೆಗಿನ ಸುಂದರ ಶಿಲ್ಪಗಳು ಕಣ್ಮನ ಸೆಳೆಯುತ್ತವೆ. ನೀವು ದೇವಸ್ಥಾನದ ಮುಂದೆ ನಿಂತರೆ ಸಾಕು “ರಾಂದೇವ್” ಎಂಬ ಕರೆಯೊಂದಿಗೆ ಬೊಚ್ಚು ಬಾಯಿಯ ೮೩ ವರ್ಷದ ಈ ಕ್ಷೇತ್ರ ಸೇವಕರಾದ ವೃದ್ಧ ವ್ಯಕ್ತಿಯೊಬ್ಬರು ನಿಮ್ಮನ್ನು ಸ್ವಾಗತಿಸುತ್ತಾರೆ.

dsc01552 dsc01554 dsc01557

 

ಎಲ್ಲಾ ದೇವಸ್ಥಾನಗಳಲ್ಲಿರುವಂತೆ ಇಲ್ಲಿ ಗುಡಿ ಗೋಪುರವಾಗಲಿ!ಗರ್ಭಗುಡಿಯಾಗಲಿ!ಈ ದೇವಸ್ಥಾನಕ್ಕಿಲ್ಲ, ಇರುವುದೊಂದೇ ದೊಡ್ಡ ಸೂರು ಅಲ್ಲೇ ೪೬೪ ದೇವರುಗಳು ವಾಸ್ತವ್ಯ ಹೂಡಿದ್ದಾರೆ. ಈ ಪರಮನಹಳ್ಳಿಯಲ್ಲಿ ಸಿದ್ಧ ಪುರುಷರು ಋಷಿಮುನಿಗಳು ತಪಸ್ಸು ಮಾಡಿದ್ದರೆಂದು ಪ್ರತೀತಿ ಇದೆ. ಈ ದೇವಸ್ಥಾನವನ್ನು ಪ್ರವೇಷಿಸಿದರೆ ಮುಖ್ಯ ದ್ವಾರದಲ್ಲೇ ಆಳೆತ್ತರದ ಕಾಲಭೈರವನ ಮೂರ್ತಿ ನಿಮ್ಮನ್ನು ಸ್ವಾಗತಿಸುತ್ತದೆ, ಎಡಬದಿಯಲ್ಲಿ ಶ್ರೀಶಕ್ತಿ ಮಹಾತಾಯಿ ಕುಳಿತ್ತಿದ್ದಾಳೆ. ಈ ದೇವಸ್ಥಾನದ ರೂವಾರಿ ತೋಟಿ ನಂಜಪ್ಪನವರು. ಸ್ವತಂತ್ರ ಹೋರಾಟಗಾರರಾಗಿದ್ದ ಇವರು ಮೈಕೊನಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಬಾಲ್ಯದಿಂದಲೂ ದೇವರಲ್ಲಿ ಆದಮ್ಯ ಭಕ್ತಿ ನಂಬಿಕೆಯನ್ನು ಹೊಂದಿದ್ದವರು, ಆ ನಂಬಿಕೆ ಭಕ್ತಿಯೆ ಇವರಿಗೆ ಇಂತಹದ್ದೊಂದು ಕೆಲಸ ಮಾಡಲು ಪ್ರೇರಣೆಯಾಗಿದೆ ಎಂದರೆ ತಪ್ಪೇನಿಲ್ಲ!. ಇವರಿಗೆ ಕೆಲ ವರ್ಷಗಳ ಹಿಂದೆ ತಮ್ಮ ಊರು ಪರಮನಹಳ್ಳಿಯಲ್ಲಿದ್ದ ಚಾಲುಕ್ಯರ ಕಾಲದ ಸಪ್ತಮಾತೆಯರ ಉಬ್ಬು ಶಿಲ್ಪದ ಸಾಲು ವಿಗ್ರಹದ ಕಲ್ಲೊಂದು ಮನ ಸೆಳೆದಿತ್ತು. ಅದರಲ್ಲಿ ಚಾಮುಂಡಿ, ಮಹೇಶ್ವರಿ, ಇಂದ್ರಾಣಿ, ವರಾಹದೇವಿ, ವನದೇವಿ, ಗಿರಿಜಕುಮಾರಿ ಹಾಗೂ ಬ್ರಾಹ್ಮಿ ದೇವತೆಯರ ಶಿಲ್ಪಗಳು ಇದ್ದವು. ಆದರೆ ಚಾಮುಂಡಿ ಹಾಗೂ ವರಾಹದೇವಿಯ ಮುಖವನ್ನು ಊರಿನ ಮತಿಗೆಟ್ಟ ಯುವಕನೊಬ್ಬ ವಿರೂಪಗೊಳಿಸಿದ್ದನು. ಅದನ್ನು ಶಿಲ್ಪಿಗಳಿಂದ ಸರಿಪಡಿಸಲು ಮುಂದಾದ ನಂಜಪ್ಪನವರಿಗೆ ನಿರಾಸೆ ಕಾದಿತ್ತು. ಶಿಲ್ಪಿಗಳು ಆ ಕಲ್ಲು ಬಹಳ ಮೃದುವಾದದ್ದೆಂದು ಸರಿ ಪಡಿಸಲು ಸಾಧ್ಯವಿಲ್ಲವೆಂದು ಹೇಳಿದ್ದರು. ಮುಂದೆ ದಿಕ್ಕು ತೋಚದೆ ಹೊಸ ಮೂರ್ತಿಯನ್ನು ನಿರ್ಮಿಸಲು ನಂಜಪ್ಪ ಮುಂದಾದರು ಇದಕ್ಕೆ ಮುಂಚೆಯೇ ನಂಜಪ್ಪನವರು ತಮ್ಮ ನಿವೃತ್ತಿಯಿಂದ ಬಂದ ಹಣದಿಂದ ಊರಿನಲ್ಲಿ ಶ್ರೀ ರಾಮಚಂದ್ರರ ದೇವಸ್ಥಾನವನ್ನು ಕಟ್ಟಿಸಿದ್ದರು, ಆರ್ಥಿಕ ತೊಂದರೆ ಇದ್ದರು ಹಿಂದು ಮುಂದು ನೊಡದೆ ಸಪ್ತಮಾತೆಯರ ಹೊಸ ಮೂರ್ತಿಯನ್ನು ಪ್ರತಿಷ್ಟಾಪಿಸಲು ಮುನ್ನುಗ್ಗಿಯೇ ಬಿಟ್ಟರು.ಅದೇನು ದೈವ ಪ್ರೇರಣೆಯೊ ಏನೋ ಕೈಗೆತ್ತಿಕೊಂಡ ಕೆಲಸ ಹೂವೆತ್ತಿದಂತೆ ಆಯಿತು ಎನ್ನುತ್ತಾರೆ ನಂಜಪ್ಪನವರು.

dsc01561 dsc01562 dsc01559

ಇವರ ಈ ಮೂರ್ತಿಗಳನ್ನು ಪ್ರತಿಷ್ಟಾಪಿಸುವ ಕೆಲಸ ಇಲ್ಲಿಗೆ ನಿಲ್ಲಲಿಲ್ಲ ಎಲ್ಲಾ ದೇವಾನುದೇವತೆಗಳ ಮೂರ್ತಿಗಳನ್ನು ಒಂದೇ ಸೂರಿನಡಿ ಸ್ಥಾಪಿಸಬೇಕೆಂಬ ಹಂಬಲ ಪ್ರಾರಂಭವಾಯಿತು. ಇವರ ಹಂಬಲಕ್ಕೆ ಇಂಬುಕೊಡುವಂತೆ ೫೪ ದಾನಿಗಳು ಇವರ ಜೊತೆಗೂಡಿದರು ೧ ಲಕ್ಷದ ೬೫ ಸಾವಿರ ರೂಪಾಯಿ ಸಂಗ್ರಹವಯಿತು, ನಂತರ ಒಂದರ ಹಿಂದೆ ಮತ್ತೊಂದು ದೇವರ ಮೂರ್ತಿಗಳು ಸಾಲು ಸಾಲಾಗಿ ಪ್ರತಿಷ್ಟಾಪಿಸಲ್ಪಟ್ಟವು. ಸಪ್ತ ಮಾತೆಯರ ನಂತರ ಇಲ್ಲಿಗೆ ಬಂದದ್ದು ಶಿವನ ಬಳಗ ನಂತರ ಇವರಿಗೆ ಇಲ್ಲಿಗೆ ಶಿವನ ತಂದೆ ತಾಯಿಯನ್ನು ಕರೆತರಬೇಕೆಂದು ಆಸೆಯಾಯಿತು!! ಇದೇನು ಶಿವನ ತಂದೆ ತಾಯಿಯೇ? ಆಶ್ಚರ್ಯವಾಗುತ್ತದೆ ಅಲ್ಲವೇ? ಹೌದು ಶಿವನ ತಂದೆ ಸದಾಶಿವ, ತಾಯಿ ಗಾಯತ್ರಿ ಇವರ ಮೂರ್ತಿಗಳು ಭಾರತದಲ್ಲಿ ಮಹಾಕಾಶಿ, ಶಿವಕಾಶಿ, ಭುವನೇಶ್ವರ ಹಾಗೂ ಮಧುರೈಯಲ್ಲಿ ಇದೆಯೆಂದು ಪ್ರತೀತಿ. ಇದನ್ನು ಬಿಟ್ಟರೆ ಈಗ ಕರ್ನಾಟಕದ ಪರಮನಹಳ್ಳಿಯಲ್ಲಿದೆ ಎಂದು ಈ ದೇವಸ್ಥಾನದ ರೂವಾರಿ ನಂಜಪ್ಪನವರು ಹೇಳುತ್ತಾರೆ. ೮೩ ವರ್ಷದ ಹರೆಯದಲ್ಲಿರುವ ನಂಜಪ್ಪನವರ ಹಲ್ಲಿಲ್ಲದ ಬಾಯಲ್ಲಿ ಇಲ್ಲಿರುವ ೪೬೪ ದೇವಾನುದೇವತೆಗಳ ಹೆಸರುಗಳು ಲೀಲಾಜಾಲವಾಗಿ ಸ್ಫುಟವಾಗಿ ಹೊರಬರುತ್ತದೆ. ಪತ್ನಿ ಸಮೇತರಾದ ನವಗ್ರಹ ಮೂರ್ತಿಗಳು ಅಷ್ಟದಿಕ್ಪಾಲಕರನ್ನು ಎಲ್ಲಾದರೂ ನೋಡಿದ್ದೀರಾ? ಇದು ನಿಮಗೆ ಪರಮಹಳ್ಳಿಯಲ್ಲಿ ನೋಡಲು ಸಾಧ್ಯ!! ಇಲ್ಲಿ ಶ್ರೀ ರಾಮನ ಬಳಗ, ಕೃಷ್ಣನ ಬಳಗ, ಪಾಂಡವರ ಬಳಗ, ಮಹಾ ಋಷಿಮುನಿಗಳ ಬಳಗ, ಮಹಾ ಆಚಾರ್ಯರುಗಳ ಬಳಗ, ಮಹಾ ಪತಿವ್ರತೆಯರ ಬಳಗ ದಾಸಶ್ರೇಷ್ಟರ ಬಳಗ ಅಷ್ಟಲಕ್ಷ್ಮಿಯರು ಇಲ್ಲಿದ್ದಾರೆ.ಇವುಗಳಲ್ಲಿ ಸುಮಾರು ೬ ಅಡಿ ಎತ್ತರದ ೨ ಟನ್ ತೂಕದ ವಿಶ್ವರೂಪ ದರ್ಶನದ ಶಿಲ್ಪ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದರೆ,ಪಂಚಮುಖಿ ಆಂಜನೇಯ ಉಗ್ರನರಸಿಂಹ, ತಿರುಪತಿ ತಿಮ್ಮಪ್ಪ, ಗಣೇಶನ ಮೂರ್ತಿಗಳು ಎಂಥಹವರನ್ನು ಆಕರ್ಷಿಸುತ್ತದೆ. ಇಲ್ಲಿರುವ ೪೬೪ ಶಿಲ್ಪಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ಆಕರ್ಷಣೀಯವಾಗಿದೆ. ಇಲ್ಲಿ ೨೩೭ ಸ್ತ್ರೀದೇವತೆಗಳು ೨೨೭ ಪುರುಷ ದೇವರುಗಳು ನೆಲೆನಿಂತಿದ್ದಾರೆ.

dsc01553 dsc01556 dsc01555

ಈ ಶ್ರೀ ಓಂಶಕ್ತಿ ಮಹಾತಾಯಿ ಕ್ಷೇತ್ರದಲ್ಲಿ ಸದಾಶಿವ ಗಾಯತ್ರಿಯ ಕಲ್ಯಾಣಮಂಟಪವನ್ನು ಸಹ ನಂಜಪ್ಪನವರು ಕಟ್ಟಿಸಿದ್ದಾರೆ. ಇಲ್ಲಿ ಬಡಬಗ್ಗರು ಉಚಿತವಾಗಿ ವಿವಾಹ ಕಾರ್ಯವನ್ನು ನಡೆಸಿಕೊಂಡು ಹೋಗಬಹುದು ಇಲ್ಲಿ ಇತ್ತೀಚೆಗೆ ನಂಜಪ್ಪನವರು ಆಕರ್ಷಕವಾದ ಆಳೆತ್ತರದ ಪಂಚಮುಖಿ ಗಾಯತ್ರಿದೇವಿಯ ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದಾರೆ. ಈ ದೇವಸ್ಥಾನದ ಇನ್ನೊಂದು ವಿಶೇಷವೇನೆಂದರೆ ಬಾಗಿಲುಗಳಾಗಲಿ ಬೀಗ ಹಾಕುವ ಪ್ರಮೇಯವಾಗಲಿ ಇಲ್ಲ! ೨೪/೭ ಈ ದೇವಸ್ಥಾನ ಭಕ್ತರಿಗೆ ತೆರೆದಿರುತ್ತದೆ. ಬೇರೆ ದೇವಸ್ಥಾನಗಳಲ್ಲಿ ಗರ್ಭಗುಡಿಗೆ ಹೋಗುವುದು ನಿಷಿದ್ಧ, ಆದರೆ ಇಲ್ಲಿ ನಿಮ್ಮ ಕೈಯಾರೆ ನಿಮ್ಮ ಇಷ್ಟ ದೇವರ ಮೂರ್ತಿಯನ್ನು ತೊಳೆದು ಪೂಜೆ ಮಾಡಿ ಅಭಿಷೇಕ ಮಾಡಿ ಮಂಗಳಾರತಿ ಮಾಡುವ ಅವಕಾಶವಿದೆ ಇಲ್ಲಿ ಬಡವ ದೀನ ದಲಿತ ಶ್ರೀಮಂತ ಎಂಬ ಭೇದಭಾವವಿಲ್ಲ ಹಾಗಾಗಿ ಇದು “ಸರ್ವಜನ ಸ್ವಹಸ್ತ ಪೂಜಾ ಪುಣ್ಯಕ್ಷೇತ್ರವೆಂದರೆ” ತಪ್ಪಾಗಲಾರದು, ಮೂಲತಃ ಗೌಡ ಜನಾಂಗಕ್ಕೆ ಸೇರಿದ ನಂಜಪ್ಪನವರು ೧೩೨೩ ಶ್ಲೋಕಗಳಿರುವ ಗಣೇಶನ ಸಹಸ್ರನಾಮ ಪೂಜೆಯನ್ನು ನಿಮ್ಮ ಕೈಯಲ್ಲೆ ಮಾಡಿಸುತ್ತಾರೆಂದರೆ ಆಶ್ಚರ್ಯವಾಗುತ್ತದೆಯಲ್ಲವೆ ? ಆ ಮಂತ್ರಗಳು ಅವರ ಅಮೂಲ್ಯ ಸಂಗ್ರಹವು ಹೌದು! ಯಾವುದೇ ಧನಾಪೇಕ್ಷೆ ಫಲಾಪೇಕ್ಷೆ ಇಲ್ಲದೆ ದೇವತಾ ಕಾರ್ಯ ಮಾಡುತ್ತಿರುವ ಆಸ್ತಿಕ ನಂಜಪ್ಪನವರ ಕಾರ್ಯ ನಿಜಕ್ಕೂ ಮೆಚ್ಚುವಂತಹುದಲ್ಲವೇ? ಈ ಕ್ಷೇತ್ರ ದೇವಾನುದೇವತೆಗಳ ಕುಟುಂಬವರ್ಗದ ಒಂದು ಅಪೂರ್ವ ಮ್ಯೂಸಿಯಂ ಎಂದರೆ ತಪ್ಪಾಗಲಾರದು.

ಪ್ರಕಾಶ್.ಕೆ.ನಾಡಿಗ್
ಶಿವಮೊಗ್ಗ

ಪ್ರಕಾಶ್.ಕೆ.ನಾಡಿಗ್
Manager-Regulatory Affairs
Wexford Laboratories Pvt Ltd
No-18, KIADB Industrial Area,
1st Phase, Anthrasanahalli,
Tumkur-572103
Mobile: 9845529789