ಮಹಿಳೆಯರೇ ಹುಷಾರ್ ಗೋಲ್ಡ್ ಖಜಾನೆಗೆ ಬೀಳ್ತಿದೆ ಲಿಮಿಟ್

0
1005

ವಿವಾಹಿತ ಮಹಿಳೆಯರು 500 ಗ್ರಾಂ, ಅವಿವಾಹಿತ ಯುವತಿಯರು 250 ಗ್ರಾಂ ಚಿನ್ನ ಮತ್ತು ಪುರುಷ 100 ಗ್ರಾಂ ಚಿನ್ನ ಹೊಂದಿರುವುದಕ್ಕೆ ತೆರಿಗೆಯಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.

ನೋಟು ನಿಷೇಧದ ಭೂತ ಮಾಯವಾಗುವ ಮುಂಚೆ ಕಪ್ಪು ಹಣ ಹೊಂದಿದವರು ಚಿನ್ನ ಖರೀದಿಸದಂತೆ ತಡೆಯೊಡ್ಡಲು ಇಲಾಖೆ ಹರಸಾಹಸ ಪಡುತ್ತಿದೆ.

ಕೆಲ ತಿಂಗಳುಗಳ ಹಿಂದೆ ಚಿನ್ನ ಖರೀದಿಗೆ ಯಾವುದೇ ತೆರಿಗೆಯಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಕೇಂದ್ರ ಹಣಕಾಸು ಸಚಿವಾಲಯ, ಇದೀಗ ಚಿನ್ನ ಖರೀದಿಗೆ ಕಡಿವಾಣ ಹಾಕಲು ನಿರ್ಧರಿಸಿದೆ. ವಿವಾಹಿತ ಮಹಿಳೆಯರು 500 ಗ್ರಾಂ, ಅವಿವಾಹಿತ ಮಹಿಳೆಯರು 250 ಗ್ರಾಂ ಹಾಗೂ ಪುರುಷರು 100 ಗ್ರಾಂ ಚಿನ್ನವನ್ನು ಮಾತ್ರ ಇಟ್ಟುಕೊಳ್ಳುವ ಅವಕಾಶ ನೀಡಿದೆ.

ಪೋಷಕರು ಉಡುಗೊರೆಯಾಗಿ ನೀಡಿದ ಚಿನ್ನದ ಉಡುಗೊರೆಗೆ ಯಾವುದೇ ತೆರಿಗೆಯಿಲ್ಲ ಎಂದು ಸ್ಪಷ್ಟಪಡಿಸಿದ ಸರಕಾರ ಮಿತಿಗಿಂತಲು ಹೆಚ್ಚಿನ ಚಿನ್ನಕ್ಕೆ ತೆರಿಗೆ ಪಾವತಿಸುವಂತೆ ತಾಕೀತು ಮಾಡಿದೆ.

ನೋಟು ನಿಷೇಧದಿಂದಾಗಿ ಕಪ್ಪು ಹಣ ಹೊಂದಿದವರು ಚಿನ್ನವನ್ನು ಖರೀದಿಸಲು ಮುಗಿಬಿದ್ದಿದ್ದಾರೆ ಎನ್ನುವ ವರದಿಗಳು ಬಹಿರಂಗವಾಗುತ್ತಿದ್ದಂತೆ, ಎಚ್ಚೆತ್ತ ಕೇಂದ್ರ ಸರಕಾರ ಕಪ್ಪು ಹಣ ಹೊಂದಿದವರಿಗೆ ಬಿಸಿ ಮುಟ್ಟಿಸಲು ಆರಂಭಿಸಿದೆ. ಆದರೆ, ಈ ಸ್ಪಷ್ಟನೆಯಲ್ಲೇ ಕೆಲ ಗೊಂದಲಗಳಿದ್ದು, ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ನೋಟು ನಿಷೇಧದ ಬಳಿಕ ಹಳೆಯ ನೋಟುಗಳನ್ನು ಪರಿವರ್ತಿಸಿಕೊಳ್ಳಲು ಪರದಾಡುತ್ತಿರುವ ಕಾಳಧನಿಕರಿಗೆ ಅವಕಾಶ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲು ಸಂಸತ್ತಿನಲ್ಲಿ ಮಸೂದೆ ಮಂಡಿಸಿದೆ. ವಾರದ ಆರಂಭದಲ್ಲಿ ಲೋಕಸಭೆಯ ಒಪ್ಪಿಗೆ ಪಡೆದಿರುವ “ತೆರಿಗೆ ಕಾನೂನುಗಳು (2ನೇ ತಿದ್ದುಪಡಿ) ಮಸೂದೆ’, ತೆರಿಗೆ ಅಧಿಕಾರಿಗಳಿಗೆ ಸಿಕ್ಕಿಬೀಳುವ ಕಪ್ಪು ಕುಳಗಳಿಗೆ ಶೇ.85ರವರೆಗೂ ದಂಡ ವಿಧಿಸುವ ಅಂಶ ಹೊಂದಿದೆ. ಸ್ವಯಂ ಘೋಷಣೆ ಮಾಡಿಕೊಳ್ಳುವವರಿಗೆ ಶೇ.50 ತೆರಿಗೆ ವಿಧಿಸುವ, ಉಳಿದ ಮೊತ್ತದಲ್ಲಿ ಶೇ.25 ಮೊತ್ತಕ್ಕೆ 4 ವರ್ಷ ಲಾಕ್- ಇನ್ ವಿಧಿಸುವ ಪ್ರಸ್ತಾಪ ಒಳಗೊಂಡಿದೆ.

ರಾಜ್ಯಸಭೆಯ ಪರಿಶೀಲನೆಯಲ್ಲಿರುವ ಈ ಮಸೂದೆಯಡಿ ಚಿನ್ನಾಭರಣಗಳೂ ಬರುತ್ತವೆಯೇ ಎಂಬ ಕುರಿತು ಗೊಂದಲಗಳಿವೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ), ಆಭರಣಗಳಿಗೆ ತೆರಿಗೆ ಹೇರುವ ಪ್ರಸ್ತಾವ ತಿದ್ದುಪಡಿ ಮಸೂದೆಯಲ್ಲಿ ಇಲ್ಲ ಎಂದು ತಿಳಿಸಿದೆ.

ಘೋಷಿತ ಆದಾಯ ಅಥವಾ ಕೃಷಿ ವರಮಾನದಂತಹ ವಿನಾಯಿತಿ ಪಡೆದಿರುವ ಆದಾಯಗಳು ಅಥವಾ ಗೃಹಬಳಕೆಯ ಉಳಿತಾಯ ಅಥವಾ ಕಾನೂನುಬದ್ಧವಾಗಿ ಹಿರಿಯರಿಂದ ಬಳುವಳಿಯಾಗಿ ಪಡೆದ ಚಿನ್ನ/ಆಭರಣಕ್ಕೆ ಸದ್ಯ ತೆರಿಗೆ ಇಲ್ಲ. ಉದ್ದೇಶಿತ ಕಾಯ್ದೆಯಲ್ಲೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.