ಎಂಥ ಕಷ್ಟ ಬಂದರೂ ಒಳ್ಳೆ ಆಲೋಚನೆಯಿದ್ದರೆ ಅದನ್ನು ಎದುರಿಸಬಹುದು!!!

0
3675

Kannada News | Health tips in kannada

ಆಲೋಚನೆ ಎಂದರೇನು?
ಆಲೋಚನೆ ಎಂದರೇನು? ಅದು ಎಲ್ಲಿಂದ ಬರುತ್ತದೆ? ಆಲೋಚನಾ ಮಾದರಿಯನ್ನು ಸುಧಾರಿಸಲು ನಾವೇನನ್ನಾದರೂ ಮಾಡಬಹುದೆ? ಸೃಜನಶೀಲತೆಯು ಇಂದು ಜಗದಾದ್ಯಂತದಲ್ಲಿ ಬಹಳ ಬೇಡಿಕೆಯನ್ನು ಹೊಂದಿರುವಂತಹ ವಿಷಯ. ಜನರನ್ನು ಸೃಜನಶೀಲರನ್ನಾಗಿ ಮಾಡಬೇಕು. ಆದರೆ ಸೃಜನಶೀಲರಾಗಿ ಮಾಡುವ ಬಗೆಯೇನು?

ಎಲ್ಲಾ ಮಾನವರೂ ಒಂದೇ ರೀತಿಯ ದೇಹ ರಚನೆಯನ್ನು ಹೊಂದಿರುವಾಗ, ಕೇವಲ ರಕ್ತದ ಗುಂಪು ಮಾತ್ರ ಬೇರೆಯಾಗಿರುವಾಗ, ಅತೀ ಕಡಿಮೆ ದೇಹರಚನೆಯ ವ್ಯತ್ಯಾಸವನ್ನು ಹೊಂದಿರುವಾಗ ಆಲೋಚನಾ ಮಾದರಿಯನ್ನು ಸುಧಾರಿಸುವ ದಾರಿಯನ್ನು ಕಾಣಬಲ್ಲೆವೆ? ಕೆಲವರಿಗೆ ಹಿಂಸಾತ್ಮಕ ಆಲೋಚನೆ ಬಂದರೆ, ಇತರರಿಗೆ ಸೃಜನಶೀಲ ಆಲೋಚನೆ ಏಕೆ ಬರುತ್ತದೆ? ಕೆಲವರೇಕೆ ಅತೀ ಬುದ್ಧಿವಂತರಾಗಿರುತ್ತಾರೆ? ಕೆಲವರೇಕೆ ದಡ್ಡರಾಗಿರುತ್ತಾರೆ? ಇದೆಲ್ಲವೂ ಯಾವುದರ ಮೇಲೆ ಅವಲಂಬಿಸಿದೆ?

ಆಹಾರ ಅಥವಾ ವ್ಯಾಯಾಮದಿಂದಾಗಿದೆಯೆ?
ಮಹಾನ್ ಬರಹಗಾರರು ಮತ್ತು ಚಿಂತಕರು “ರೈಟರ್ಸ್ ಬ್ಲಾಕ್” ಅನ್ನು ಅನುಭವಿಸಿದ್ದಾರೆ. ಒಂದು ಕಾಗದ ಮತ್ತು ಲೇಖನಿಯನ್ನು ಹಿಡಿದು ಒಂದು ಸುಂದರವಾದ ಸ್ಥಳದಲ್ಲಿ ಕುಳಿತು ಏನಾದರೊಂದು ಹೊರಬರುತ್ತದೆಂದು ಕಾಯುತ್ತಲೇ ಇರುತ್ತಾರೆ, ಆದರೆ ಏನೂ ಹೊರಬರುವುದಿಲ್ಲ! ಸೃಜನಶೀಲತೆಯ ಮೂಲವೇನು?

ಸೃಜನಶೀಲತೆಯು ಶಕ್ತಿ ಮತ್ತು ಬುದ್ಧಿವಂತಿಕೆಯ ಪ್ರಚೋದನೆ. ಮೆದುಳಿನ ಸೆರಿಬ್ರೆಲ್ ಕಾರ್ಟೆಕ್ಸ್‍ನಲ್ಲಿ ಶಕ್ತಿ ಮತ್ತು ಬುದ್ದಿವಂತಿಕೆಯ ಪ್ರಚೋದನೆ ಎದ್ದು ಒಂದು ಆಲೋಚನೆ ಬರಲು, ಅತೀ ವೇಗದಲ್ಲಿ ಪ್ರಚೋದನೆಗಳು ಒಂದೆಡೆ ಸೇರಬೇಕು. ಸೆರಿಬ್ರೆಲ್ ಕಾರ್ಟೆಕ್ಸ್‍ನಲ್ಲಿ ಎಲ್ಲಾ 16 ಪ್ರಚೋದನೆಗಳು ಅತೀ ಕಡಿಮೆ ಸಮಯದಲ್ಲಿ ಒಂದೆಡೆ ಸೇರಿದಾಗ “ಸರಿಯಾದ ಆಲೋಚನೆ” ಉಂಟಾಗುತ್ತದೆ.

ಇದಕ್ಕಾಗಿ ನಮ್ಮ ಮೆದುಳಿಗೆ, ನಮ್ಮ ಮನಸ್ಸಿಗೆ ಪ್ರಶಿಕ್ಷಣವನ್ನು ನೀಡಬೇಕು. ಈ ವಿಷಯವನ್ನು ಓದುತ್ತಿದ್ದಂತೆಯೇ ನಿಮ್ಮ ಮನಸ್ಸು “ಹೌದು!” ಅಥವಾ “ಇಲ್ಲ!” ಎನ್ನುತ್ತಿರುತ್ತದೆ. ನಮ್ಮ ಮನಸ್ಸಿನಲ್ಲಿ ಬರುತ್ತಿರುವ ವಿಷಯಗಳನ್ನು ಸೂಸುತ್ತೇವೆ ಮತ್ತು ನಮ್ಮ ನಂಬಿಕೆಗೆ ಸರಿ ಹೊಂದದಂತಹ ಆಲೋಚನೆಗಳನ್ನು ತಕ್ಷಣವೇ ತಳ್ಳಿ ಹಾಕಿಬಿಡುತ್ತೇವೆ! ತಿಳಿದಿರುವ ವಿಷಯಗಳನ್ನು ಮಾತ್ರ ಹೊರಗೆ ತೆಗೆದುಕೊಂಡು ಬೇಡದಿರುವ ವಿಷಯಗಳನ್ನು ತಿರಸ್ಕರಿಸುವುದರಿಂದ ಸೃಜನಶೀಲತೆಗೆ ಅಡ್ಡಿಯಾಗುತ್ತದೆ.

ಸೃಜನಶೀಲತೆಯ ಎರಡನೆಯ ಅಂಶವೆಂದರೆ ಕಲ್ಪನೆ. ಪ್ರತೀ ಸೃಜನಶೀಲ ವ್ಯಕ್ತಿಯೂ ಕಲ್ಪನೆಯನ್ನು ಹೊಂದಿರುತ್ತಾರೆ ಮತ್ತು ಆ ಕ್ಷಣದಲ್ಲಿ ಅದು ಸತ್ಯವೊ, ಅಲ್ಲವೊ ಎಂದು ಆಲೋಚಿಸಲು ಹೋಗುವುದಿಲ್ಲ. ಯಾವುದು ನಿಜವಾಗಿ ತೋರುವುದಿಲ್ಲವೊ, ಅದರ ಬಗ್ಗೆ ಕಲ್ಪನೆಯನ್ನು ಹೊಂದುವುದರಿಂದ ಸೃಜನಶೀಲತೆಯು ಉಂಟಾಗುತ್ತದೆ. ಆದರೆ ಈ ಕಲ್ಪನೆಯು ವಾಸ್ತವತೆಯಿಂದ ಪೂರ್ಣವಾಗಿ ಬೇರ್ಪಟ್ಟಿದ್ದರೆ, ಆಗ ಅದು ಪರಿವರ್ತನೆಯನ್ನು ಹೊಂದುವುದಿಲ್ಲ, ನಿಜವಲ್ಲದ್ದು ನಿಜವಾಗುವುದಿಲ್ಲ!

ಥಾಮಸ್ ಎಡಿಸನ್‍ಗೆ ಬೆಳಕನ್ನು ಹರಿಬಿಡುವ ಕನಸಿತ್ತು! ಅದು ಪೂರ್ಣ ಕಲ್ಪನೆ! ವಿಮಾನ, ದೂರವಾಣಿಯ ಆವಿಷ್ಕಾರವಾದದ್ದು ಕಲ್ಪನೆಯಿಂದ ಮತ್ತು ಈ ಕಲ್ಪನೆಯು ವಾಸ್ತವತೆಯೊಡನೆ ಸಂಬಂಧ ಹೊಂದಿದ್ದರಿಂದ ಅದು ನಿಜವಾಯಿತು. ಕೇವಲ ವಾಸ್ತವತೆಯನ್ನು ಮಾತ್ರ ಪರಿಗಣಿಸುತ್ತಿದ್ದರೆ ಅಥವಾ ಕಲ್ಪನೆಯಲ್ಲೇ ತೇಲಿ ಹೋದರೂ ಸೃಜನಶೀಲತೆ ಉಕ್ಕುವುದಿಲ್ಲ. ಒಂದು ಸಮತೋಲನ ಅವಶ್ಯಕ.  ಜೀವನದಲ್ಲೂ ನಮ್ಮ ಬುದ್ಧಿವಂತಿಕೆ, ಹೃದಯದ ಭಾವನೆ ಮತ್ತು ಅಂತಃಸ್ಫುರಣೆಯ ನಡುವೆ ಸಮತೋಲನವನ್ನು ಹೊಂದಬೇಕು. ನಮ್ಮಲ್ಲಿ ಅಂತಃಸ್ಫುರಣೆಯನ್ನು ಬೆಳೆಸಿಕೊಳ್ಳಬೇಕು.

ಬರಹಗಾರರ ಅಡ್ಡಿಯು ಎದುರಾದಾಗ ನಮ್ಮ ಅಸ್ತಿತ್ವದ ಏಳು ಹಂತಗಳ ಬಗ್ಗೆ ತಿಳಿದುಕೊಂಡು ಅದರಿಂದ ಹೊರಬರಬೇಕು: ದೇಹ, ಉಸಿರು, ಮನಸ್ಸು, ಬುದ್ಧಿ, ಸ್ಮೃತಿ, ಅಹಂಕಾರ ಮತ್ತು ಆತ್ಮ. ನಾವು ಉಸಿರಾಡುತ್ತಿದ್ದೇವೆ ಎಂಬ ಅರಿವೂ ಅನೇಕರಿಗಿರುವುದಿಲ್ಲ! ನಮ್ಮ ದೇಹವನ್ನು ಜೀವಂತವಾಗಿ ಇಡುವ ಉಸಿರಿನ ಬಗ್ಗೆ, ದೇಹದ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳಬೇಕು. ನಮ್ಮ ಉಸಿರಿನಲ್ಲಿ ಅನೇಕ ರಹಸ್ಯಗಳು ಅಡಗಿವೆ!

Watch:

ಮನಸ್ಸು ಎಂದರೆ ಗ್ರಹಣೆ, ಗಮನ ಮತ್ತು ಅಭಿವ್ಯಕ್ತಿ! ಬುದ್ಧಿಯಲ್ಲಿ ತೀರ್ಪುಗಳು, ವಾದವಿವಾದಗಳು, ಒಪ್ಪಿಗೆ, ತಿರಸ್ಕಾರ ನಡೆಯುತ್ತಲೇ ಇರುತ್ತದೆ. ಸ್ಮೃತಿಯನ್ನು ಗಮನಿಸಿದರೆ, ಸದಾ ಅಹಿತಕರವಾದ ಘಟನೆಗಳನ್ನೇ ಹಿಡಿದಿಟ್ಟು ಕೊಂಡು, ಹಿತಕರವಾದ ಘಟನೆಗಳನ್ನು ಬಿಟ್ಟುಬಿಡುತ್ತದೆ! ನಮಗೆ ಸಿಗುವ ಅಭಿನಂದನೆ ಗಳನ್ನು ಬಿಟ್ಟು, ನಮಗೆ ನೀಡಲಾಗುವ ಅಪಮಾನಗಳನ್ನೇ, ದೂಷಣೆಗಳನ್ನೇ ಹಿಡಿದಿಟ್ಟುಕೊಳ್ಳುತ್ತೇವೆ! ಇದು ನಮ್ಮ ಸ್ಮೃತಿಯ ಸ್ವಭಾವ.

Parents helping their children with their schoolwork

ನಂತರ ಅಹಂಕಾರ. ಒಬ್ಬರು ಹೆಚ್ಚಾಗಿ ಓದಿದಷ್ಟೂ ಹೆಚ್ಚು ಬಿಗಿಯಾಗಿರುತ್ತಾರೆ. ಮುಗುಳ್ನಗೆ, ಮುಗ್ಧತೆ, ಸ್ನೇಹಶೀಲತೆ ಮಾಯವಾಗಿಬಿಡುತ್ತದೆ. ಇದರಿಂದ ಜೀವನದ ಸುಂದರವಾದ ವಿಷಯಗಳು ಹಾರಿ ಹೋಗಿ, ವ್ಯಕ್ತಿತ್ವವು ಕುಂಠಿತವಾಗುತ್ತದೆ. ಸಹಜತೆಯನ್ನು, ಎಲ್ಲರೊಂದಿಗೂ ಸ್ವಕೀಯ ಭಾವನೆಯನ್ನು ಹೊಂದಬೇಕು. ಮಾಹಿತಿಗಳು ಪುಸ್ತಕಗಳಲ್ಲಿ ದೊರೆತರೂ, ಸ್ನೇಹಶೀಲ ಮತ್ತು ಬೆಚ್ಚನೆಯ ಕಂಪನಗಳನ್ನು ಒಂದು ವ್ಯಕ್ತಿಯು ಹೊರಸೂಸುವಂತೆ ಪುಸ್ತಕಗಳು ಮಾಡಲು ಸಾಧ್ಯವಿಲ್ಲ.  ನಮ್ಮ ಜೀವನದಲ್ಲಿ ಬದಲಿಸುವ ಎಲ್ಲದರ ಆಧಾರ ಬಿಂದುವೇ ನಮ್ಮ ಆತ್ಮ. ಆತ್ಮವು ಎಂದಿಗೂ ಬದಲಿಸದಿರುವುದರಿಂದ ಎಲ್ಲಾ ಬದಲಾವಣೆಗಳನ್ನೂ ನಾವು ತಿಳಿಯಬಹುದಾಗಿದೆ. ಈ ಜ್ಞಾನವನ್ನು, ಅರಿವನ್ನು ತಂದುಕೊಂಡಾಗ ಜೀವನದಲ್ಲಿ ಹುರುಪು ಉಂಟಾಗಿ ಸೃಜನಶೀಲತೆಯು ಹೊರಹೊಮ್ಮುತ್ತದೆ. ಇಲ್ಲವಾದರೆ ಬಹಳ ಮಂಕಾಗಿರುತ್ತೀರಿ!

ಸ್ವಪ್ರತಿಷ್ಠೆಯನ್ನು ನಮ್ಮ ಹಳ್ಳಿಯ ಹುಡುಗ, ಹುಡುಗಿಯರಲ್ಲಿ ನಾಶಮಾಡಿ, ಪಾಶ್ಚಿಮಾತ್ಯ ದೇಶದವರಂತೆ ಉಡುಗೆಗಳನ್ನು ತೊಡದಿದ್ದರೆ ಅವರು ವ್ಯರ್ಥ ಎಂಬಂತೆ ಮಾಡಿಬಿಟ್ಟಿದ್ದೇವೆ. ಹಳ್ಳಿಯ ಯುವಕರಲ್ಲಿ ಸ್ವಪ್ರತಿಷ್ಠೆ ಹೆಚ್ಚಿಸಿದಾಗ ಸೃಜನಶೀಲತೆ ಹೊರಹೊಮ್ಮುತ್ತದೆ. ಇದರಿಂದ ಸ್ವ-ಉದ್ದಿಮೆದಾರರಾಗುವ ಧೈರ್ಯ ಬರುತ್ತದೆ. ಆಗ ನಿರುದ್ಯೋಗದ ಸಮಸ್ಯೆಯು ನಿವಾರಣೆಯಾಗುತ್ತದೆ. ಸ್ವ-ಪ್ರತಿಷ್ಠೆಯು ಕುಂದಿರುವುದರಿಂದ ಸೃಜನಶೀಲತೆಯು ನಾಶವಾಗಿ, ಕನಸುಗಳನ್ನು ನನಸು ಮಾಡುವ ಧೈರ್ಯವು ಯುವಕರಲ್ಲಿ ಹೊರಟುಹೋಗಿದೆ.

Also Read: ಸದೃಢ ಆರೋಗ್ಯದ ಅಮೂಲ್ಯ ಉಪಾಯಗಳು!!