ದಾಸ ಸಾಹಿತ್ಯದ ದಿಗ್ಗಜರು ಶ್ರೀ ಗೋಪಾಲದಾಸರು!!

0
1666

ಶ್ರೀ ಗೋಪಾಲದಾಸರು

ಹರಿದಾಸ ಸಾಹಿತ್ಯಕ್ಕೆ ತಮ್ಮ ಅಪೂರ್ವ ಕಾಣಿಕೆಯಿತ್ತು ಅದು ನಿರಂತರ ತೊರೆಯಾಗಿ ಹರಿಯುವಂತೆ ಶ್ರಮಿಸಿದವರು ಭಾಗಣ್ಣ ದಾಸರು. 1717ರಲ್ಲಿ ಭಾಗಣ್ಣ ದಾಸರ ಜನನ ದೇವದುರ್ಗ ತಾಲ್ಲೂಕಿನ ಮೊಸರುಕಲ್ಲು ಎಂಬ ಗ್ರಾಮದಲ್ಲಾಯಿತು. ಮುರಾರಿರಾಯ-ವೆಂಕಮ್ಮ ಇವರ ತಂದೆ-ತಾಯಿಗಳು. ಭಾಗಣ್ಣನಿಗೆ ಮೂರು ಜನ ಕಿರಿಯ ಸಹೋದರರು. ಬೆಂಬಿಡದ ಬಡತನದ ಜೊತೆಗೆ ತಂದೆ ಮುರಾರಿ ರಾಯನ ಅಕಾಲಿಕ ಮರಣದಿಂದ ತಾಯಿ ವೆಂಕಮ್ಮ ಕಂಗೆಟ್ಟಳು. ದಾಯಾದಿಗಳ ಉಪಟಳ ತಾಳಲಾರದೆ ಮೊಸರುಕಲ್ಲು ಗ್ರಾಮ ತೊರೆದರು. ಸಮೀಪದ ಸಂಕಾಪುರದ ಪ್ರಾಣದೇವರ ದೇವಸ್ಥಾನದ ಪೌಳಿಯೇ ತಾಯಿ-ಮಕ್ಕಳ ವಾಸಸ್ಥಾನವಾಯಿತು.

Image result for gopala dasaru

ಕೆಲ ಕಾಲದ ನಂತರ ಭಾಗಣ್ಣ ಉತ್ತನೂರಿಗೆ ತಾಯಿ ತಮ್ಮಂದಿರೊಂದಿಗೆ ಬಂದು ನೆಲೆಸಿದ. ಅಲ್ಲಿನ ಶ್ರೀಲಕ್ಷ್ಮೀ ವೆಂಕಟೇಶನ ದೇವಸ್ಥಾನ ಆತನ ನೆಲೆಯಾಯಿತು. ಭವಿಷ್ಯ ಕೇಳಲು ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿ ಭಾಗಣ್ಣನ ಬದುಕು ಸಂಪದ್ಭರಿತವಾಯಿತು. ಬೇಡವೆಂದರೂ ಸಂಚಯವಾಗುತ್ತಿದ್ದ ಧನ-ಧಾನ್ಯ ರಾಶಿಯನ್ನು ಭಾಗಣ್ಣ ದಾನ ಮಾಡಿಬಿಡುತ್ತಿದ್ದ. ಹಸಿದವರಿಗೆ ಊಟ ಕೊಡಿ, ಬಡವರಿಗೆ ದಾನ ಮಾಡಿ, ಶ್ರೀನಿವಾಸನ ಭಜನೆ ಮಾಡಿ ಎಂಬುದೇ ಭಾಗಣ್ಣನ ಉಪದೇಶವಾಯಿತು. ಹರಿದಾಸ ಪಂಥದ ಹರಿಕಾರನಾಗಬೇಕಿರುವ ಭಾಗಣ್ಣನಲ್ಲಿ ವಿಶೇಷತೆಯನ್ನು ಕಂಡವರು ಚಿಪ್ಪಗಿರಿಯ ವಿಜಯದಾಸರು. ಜ್ಞಾನ ಭಕ್ತಿ ವೈರಾಗ್ಯಗಳ ಸಂಗಮಮೂರ್ತಿಯಾಗಿದ್ದ ಭಾಗಣ್ಣನಿಗೆ ಆದ್ವಾನಿಯಲ್ಲಿರುವ ಶ್ರೀ ವ್ಯಾಸರಾಜ ಪ್ರತಿಷ್ಠಿತ ಶ್ರೀ ಮಂಗರಾಯನ ಸನ್ನಿಧಾನದಲ್ಲಿ ಶ್ರೀ ಗೋಪಾಲ ವಿಠ್ಠಲ ಎಂಬ ಅಂಕಿತ ಪ್ರದಾನ ಮಾಡಿ ಹರಿದಾಸ ದೀಕ್ಷೆಯಿತ್ತರು. ಮಾರ್ಗಶಿರ ತ್ರಯೋದಶಿ ಶುಕ್ರವಾರ 14-11-1746ರಂದು ಭಾಗಣ್ಣದಾಸರಿಗೆ ಗೋಪಾಲದಾಸರೆಂಬ ಹೆಸರು ಪ್ರಾಪ್ತವಾಗಿ ಮುಂದುವರೆಯಿತು.

ಅಪರೋಕ್ಷ ಜ್ಞಾನಿಗಳಾದ ಗೋಪಾಲದಾಸರು ತಮ್ಮ ಮೂವರು ತಮ್ಮಂದಿರಿಗೆ ಹರಿದಾಸ ದೀಕ್ಷೆ ಕೊಟ್ಟು ಅಂಕಿತ ಪ್ರದಾನ ಮಾಡಿದರು. ಭಕ್ತ ಶಿರೋಮಣಿ ಹೆಳವನಕಟ್ಟೆ ಗಿರಿಯಮ್ಮ ವೇಣಿಸೋಮಾಪುರದ ವ್ಯಾಸ ತತ್ವಜ್ಞರು ಗೋಪಾಲದಾಸರ ಪ್ರಮುಖ ಶಿಷ್ಯರು. ಚಿತ್ರ ಬಿಡಿಸುವುದರಲ್ಲಿ ಗೋಪಾಲದಾಸರು ಸಿದ್ಧಹಸ್ತರು. ಅವರು ಚಿತ್ರಿಸಿದ ದೇವತಾ ಮೂರ್ತಿಗಳ ಪಟಗಳಿಗೆ ಆವಾಹನಾದಿ ಶೋಡಶೋಪಚಾರಗಳಿಂದ ಪೂಜಿಸಿದಾಗ ವಿಶೇಷ ಶಕ್ತಿ-ಸನ್ನಿಧಾನ ಪ್ರಾಪ್ತವಾಗುತ್ತಿತ್ತು. ಸಂಕಷ್ಟಕ್ಕೆ ಸಿಲುಕಿದ ಅನೇಕ ಜನರು ಈ ಪಟಗಳನ್ನು ಪೂಜಿಸಿ ತಾಪತ್ರಯ ಪರಿಹರಿಸಿಕೊಳ್ಳುತ್ತಿದ್ದರು. ಗೋಪಾಲದಾಸರ ಮಂತ್ರೋಪಾನಶಕ್ತಿಗೆ ಭಗವಂತನ ಕೃಪಾಕಟಾಕ್ಷ ಪರಿಪೂರ್ಣವಾಗಿತ್ತು. ಪಂಗನಾಮದ ತಿಮ್ಮಣ್ಣ ದಾಸರ ಅಪಮೃತ್ಯು ಪರಿಹರಿಸಿದ ಮಹಾನುಭಾವರಿವರು. ಅಂತೆಯೇ ಸಂಸ್ಕøತದಲ್ಲಿ ಅಗಾಧ ಪಾಂಡಿತ್ಯ ಸಾಧಿಸಿದ ಶ್ರೀ ಶ್ರೀನಿವಾಸಾಚಾರ್ಯರು ಅತ್ಯಂತ ದೀನಾವಸ್ಥೆಯಲ್ಲಿ ಇವರ ಬಳಿ ಬಂದಾಗ ಧನ್ವಂತರಿ ದೇವರ ಸ್ತೋತ್ರ ಮಾಡಿ ತಮ್ಮ ಆಯುಷ್ಯದ ನಲ್ವತ್ತು ವರ್ಷಗಳನ್ನು ಧಾರೆಯೆರೆದ ಪೂತಾತ್ಮರು. ಪಾಂಡುರಂಗನ ಕುರಿತಾಗಿ `ನೀಲಕುದುರೆಯನೇರಿ ಶಾಲು ಟೊಂಕಕೆ ಸುತ್ತಿ’ ಎಂಬ ಶೃಂಗಾರ ಪೂರಿತ ಸುಳಾದಿ ರಚಿಸಿ ಪಂಢರಿನಾಥನಿಗೆ ಅರ್ಪಿಸಿದ್ದಾರೆ.