ಸ್ವಂತ ಮನೆಯ ಕನಸು ಕಾಣುವ ಮಧ್ಯಮ ಮತ್ತು ಕೆಳ ವರ್ಗದ ಜನರಿಗೆ ಸಿಹಿ ಸುದ್ದಿ ನೀಡಿದ ನಿರ್ಮಲಾ ಸೀತಾರಾಮನ್.!

0
642

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವಂತ ಮನೆಯ ಕನಸು ಕಾಣುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ಖುಷಿ ಸುದ್ದಿ ನೀಡಿದ್ದು, ದೇಶದಲ್ಲಿ ಸ್ಥಗಿತವಾಗಿರುವ ವಸತಿ ಯೋಜನೆಗಳನ್ನು ಪುನಾರಂಭಿಸಿ ಪೂರ್ಣಗೊಳಿಸಲು 25 ಸಾವಿರ ಕೋಟಿ ರೂ.ಗಳ ನಿಧಿಯನ್ನು ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ.ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ.

ಹೌದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದೆ. ಹಣಕಾಸು ಕೊರತೆಯಿಂದ ಸ್ಥಗಿತಗೊಂಡಿರುವ ಅಗ್ಗದ ಬೆಲೆಯ ವಸತಿ ಯೋಜನೆಗಳ ಮರುಚಾಲನೆಗೆ ವಿಶೇಷ ಹಣಕಾಸು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 25,000 ಕೋಟಿ ರೂ ಮೊತ್ತದಷ್ಟು ಪರ್ಯಾಯ ನಿಧಿ ಮೀಸಲಿರಿಸಿದ್ದಾರೆ. ಈ ಪರ್ಯಾಯ ಹೂಡಿಕೆ ನಿಧಿಯಲ್ಲಿ (ಎಐಎಫ್) ಸರ್ಕಾರ 10,000 ಕೋಟಿ ರೂ., ಎಸ್‌ಬಿಐ ಮತ್ತು ಎಲ್‌ಐಸಿ 15,000 ಕೋಟಿ ರೂ. ನೀಡಲಿದೆ. ಇದು ದೇಶಾದ್ಯಂತ 4.58 ಲಕ್ಷ ವಸತಿ ಘಟಕಗಳನ್ನು ಒಳಗೊಂಡ 1,600 ಸ್ಥಗಿತಗೊಂಡ ವಸತಿ ಯೋಜನೆಗಳಿಗೆ ಹಣಕಾಸು ಒದಗಿಸುತ್ತದೆ

ಈ ಉಪಕ್ರಮದಿಂದ ಉದ್ಯೋಗ ಸೃಷ್ಟಿಯಾಗುವುದು. ಜೊತೆಗೆ ಸಿಮೆಂಟ್, ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳ ಬೇಡಿಕೆಯನ್ನು ಪುನರುಜ್ಜೀವನ ಆಗಲಿದೆ.ಇದು ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಲ್ಲಿನ ಒತ್ತಡವನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಯೋಜನೆಯು ಸಾರ್ವಭೌಮ ಮತ್ತು ಪಿಂಚಣಿ ನಿಧಿ ಭಾಗವಹಿಸುವ ನಿರೀಕ್ಷೆಯಿರುವುದರಿಂದ ನಿಧಿಯ ಗಾತ್ರ ಹೆಚ್ಚಾಗುತ್ತದೆ. ಸರ್ಕಾರ ಪ್ರಾಯೋಜಕರಾಗಿ ಕಾರ್ಯನಿರ್ವಹಿಸುತ್ತದೆ ಮತ್ತು 10,000 ಕೋಟಿ ರೂ. ನಿಧಿಯನ್ನು ಪರಿಹಾರವಾಗಿ ನೀಡುತ್ತದೆ. ಇದು ವಸತಿ ಕಟ್ಟಡ ಅಭಿವೃದ್ಧಿದಾರರಿಗೆ (ಡೆವಲಪರ್‌ಗಳಿಗೆ ) ಅನುಕೂಲ ಕಲ್ಪಿಸಲಿದ್ದು ಮನೆ ಖರೀದಿದಾರರಿಗೆ ಮನೆಗಳ ವಿತರಣೆಯನ್ನು ಖಚಿತಪಡಿಸುತ್ತದೆ.

ಈ ವಿಚಾರವಾಗಿ ಕೇಂದ್ರ ಸಂಪುಟದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸ್ಥಗಿತಗೊಂಡಿರುವ 1,600 ವಸತಿ ಯೋಜನೆಗಳಿಗೆ ಮರುಜೀವ ಬರುತ್ತದೆ. 4.58 ಲಕ್ಷ ಮನೆಗಳ ನಿರ್ಮಾಣಕ್ಕೆ ಹಾದಿ ಸುಗಮವಾಗುತ್ತದೆ ಎಂದು ಹೇಳಿದ್ದಾರೆ. ಈ ಮನೆಗಳನ್ನ ಖರೀದಿಸುವವರನ್ನು ತಲುಪಲು ಸೂಕ್ತ ಮಾರ್ಗದ ಬಗ್ಗೆ ಆರ್​ಬಿಐ ಜೊತೆ ಸರ್ಕಾರ ಮಾತುಕತೆ ನಡೆಸುತ್ತಿದೆ. ರಿಯಲ್ ಎಸ್ಟೇಟ್ ವಲಯದಲ್ಲಿರುವ ಸಮಸ್ಯೆಗಳು ಬೇರೆ ಇತರ ಹಲವು ಕ್ಷೇತ್ರಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ, ರಿಯಲ್ ಎಸ್ಟೇಟ್​ ಉದ್ಯಮದ ಸಮಸ್ಯೆಗಳನ್ನ ಪರಿಹರಿಸಲು ಸರ್ಕಾರ ಹೆಚ್ಚು ಮುತುವರ್ಜಿ ತರುತ್ತಿದೆ. ಆರ್​ಬಿಐ ಜೊತೆಯೂ ಈ ಬಗ್ಗೆ ಸಮಾಲೋಚನೆ ನಡೆಸುತ್ತಿದೆ.

ಏಕೆಂದರೆ ಕಳೆದ ವರ್ಷದಂದು ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ಯ ಫೈನಾನ್ಷಿಯಲ್ ಸರ್ವಿಸಸ್ (IS & FS) ಕಂಪನಿಯು ಬ್ಯಾಂಕ್ ಸಾಲ ಪಡೆದು ಸುಸ್ತಿದಾರ ಪಟ್ಟಿಗೆ ಸೇರ್ಪಡೆಯಾದ ಬಳಿಕ ಆರ್ಥಿಕತೆಯಲ್ಲಿ ನಗದು ಚಲನೆ ಬಿಕ್ಕಟ್ಟು ಸೃಷ್ಟಿಯಾಗಿದೆ. ರಿಯಲ್ ಎಸ್ಟೇಟ್ ಡೆವಲಪರ್ಸ್​ಗೆ ಬಂಡವಾಳ ಸೇರಿಸುವುದೇ ಪ್ರಯಾಸದ ಕೆಲಸವಾಗಿದೆ. ಇದರ ಜೊತೆಗೆ ಆರ್ಥಿಕ ಮುಗ್ಗಟ್ಟು ಹೆಚ್ಚಾಗಿ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಹೈರಾಣಾಗಿಸಿದೆ. ಬ್ಯಾಂಕುಗಳಿಂದ ಸಾಲ ಸಿಗದೇ ಹಲವು ವಸತಿ ಯೋಜನೆಗಳು ಹಳ್ಳ ಹಿಡಿದಿವೆ. ಈ ಎಲ್ಲ ಆರ್ಥಿಕ ಸಮಸ್ಯೆಯನ್ನು ನಿವಾರಿಸಲು ಇದರಿಂದ ಸಹಾಯವಾಗಲಿದೆ. ಜತೆಗೆ ಆರ್ಥಿಕತೆಯಲ್ಲಿ ಉತ್ಪಾದಕ ಬಳಕೆಗಾಗುವ ದೊಡ್ಡ ಪ್ರಮಾಣದ ಹಣವನ್ನು ಸಹ ಬಿಡುಗಡೆಯಾಗಲಿದೆ” ಎಂದು ಮಾಹಿತಿ ನೀಡಿದ್ದಾರೆ.