ಜಿಎಸ್‍ಟಿ – ಮುಗಿಯದ ತರ್ಕ!

0
712

ಪ್ರತ್ಯಕ್ಷ ಅಥವಾ ಪರೋಕ್ಷ ಯಾವುದೇ ತೆರಿಗೆ ಇರಲಿ ಅದರಲ್ಲಿ ಕೊಂಚ ಸುಧಾರಣೆ ಮಾಡಿದರೂ ಸಾಕು, ಕ್ರಾಂತಿಕಾರಕ, ಐತಿಹಾಸಿಕ ಎಂದು ಉದ್ವೇಗದಿಂದ ಬಣ್ಣಿಸುವ ಜಾಯಮಾನ ನಮ್ಮದು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಬಗೆಗೂ ಓತಪ್ರೋತ ವ್ಯಾಖ್ಯಾನಗಳು ತೇಲಿಬರುತ್ತಿವೆ. ಸ್ವಾತಂತ್ರ್ಯಾನಂತರ ಭಾರತ ಕಂಡ ಕ್ರಾಂತಿಕಾರಿ ತೆರಿಗೆ ಸುಧಾರಣಾ ಕ್ರಮ ಎಂದೇ ಹಾಡಿಹೊಗಳಲಾಗುತ್ತಿದೆ. ಆದರೆ ಇದರ ಸಾಧಕಬಾಧಕಗಳ ಬಗ್ಗೆ ತಲಸ್ಪರ್ಶಿ, ವಸ್ತುನಿಷ್ಠ ವಿಮರ್ಶೆ ಬಾರದಿರುವುದರಿಂದ ಇದನ್ನು ಸಂಶಯ ದೃಷ್ಟಿಯಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪರೋಕ್ಷ ತೆರಿಗೆ ಪದ್ಧತಿಯಲ್ಲಿ ತೆರಿಗೆ ಹೊರೆ ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸಲ್ಪಡುತ್ತದೆ. ಜಿಎಸ್‍ಟಿಯಿಂದ ಕಪ್ಪುಹಣ ಸಂಗ್ರಹಣೆ ನಿಲ್ಲುತ್ತದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆಯಾದರೂ ಕೊಳ್ಳುಬಾಕ ಸಂಸ್ಕøತಿ ಹೆಚ್ಚುತ್ತಿರುವುದರಿಂದ ಗ್ರಾಹಕನ ಕಿಸೆಗೆ ದೊಡ್ಡ ಕತ್ತರಿ ಬೀಳುವುದಂತೂ ಖಂಡಿತ. ಪ್ರಸ್ತುತ ಜಿಎಸ್‍ಟಿ ದರದ ಗರಿಷ್ಠ ಮಿತಿ ಶೇ. 18ಕ್ಕೆ ನಿಗದಿಪಡಿಸಬಹುದೆಂದು ಹೇಳಲಾಗುತ್ತಿದೆ. ಜೀವನಾವಶ್ಯಕ ವಸ್ತುಗಳನ್ನು ಇದರ ವ್ಯಾಪ್ತಿಯಿಂದ ಹೊರಗಿಡಲಾಗುವದೆಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಿದ್ದರೂ ಒಂದು ಅಪಾಯ ಇದ್ದೇ ಇದೆ. ಅವಶ್ಯಕ ವಸ್ತುಗಳ ವಿನಾಯಿತಿಯಿಂದ ಆಗುವ ಆದಾಯ ಖೋತಾ ಪ್ರಮಾಣವನ್ನು ಇತರೇ ಐಷಾರಾಮಿ ಸರಕುಗಳಿಗೆ ಅಧಿಕ ತೆರಿಗೆ ವಿಧಿಸಿ ಸರಿದೂಗಿಸಿಕೊಳ್ಳುವ ಸಾಧ್ಯತೆಯೂ ಉಂಟು. ಆಗ ಐಶಾರಾಮಿ ವಸ್ತುಗಳ ವ್ಯಾಪ್ತಿಯನ್ನು ಹಿಗ್ಗಿಸುವ ಸಾಧ್ಯತೆಯಿದೆ. ಇದು ಒಂದರಲ್ಲಿ ಬಿಟ್ಟು ಮತ್ತೊಂದರಲ್ಲಿ ಹಿಡಿಯುವ ಕೆಲಸದಂತೆ ಆಗುತ್ತದೆ. ಗ್ರಾಹಕರು ತೆರಿಗೆ ಹೊರೆ ಆಗುತ್ತದೆ. ಅಂತಿಮವಾಗಿ ಈ ಸರಕುಗಳನ್ನು ಉತ್ಪಾದಿಸುವ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಭರ್ಜರಿ ಲಾಭ ಮಾಡಿಕೊಂಡು ಗೆಲುವಿನ ನಗೆ ಬೀರುವುದರಲ್ಲಿ ಅನುಮಾನವೇ ಇಲ್ಲ.

ಸರಕಾರ ಜಿಎಸ್‍ಟಿ ದರವನ್ನು ಕಾಲಕಾಲಕ್ಕೆ ಪರಿಷ್ಕರಿಸುವ ಹಟಕ್ಕೆ ಬಿದ್ದರೆ ಆದಾಯ ತೆರಿಗೆ ಮಿತಿಯನ್ನು ಕೂಡ ಏರಿಸಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತದೆ. ಆಗ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ದರಗಳಲ್ಲಿ ತೀವ್ರ ಹೊಯ್ದಾಟ ಕಂಡುಬಂದರೂ ಆಶ್ಚರ್ಯಪಡಬೇಕಿಲ್ಲ. ತೆರಿಗೆ ವ್ಯವಸ್ಥೆ ಮತ್ತಷ್ಟು ಗೋಜಲಾಗುವುದನ್ನು ತಪ್ಪಿಸಲು ಜಿಎಸ್‍ಟಿ ದರ, ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ಗೊಂದಲ, ಸಂಶಯಕ್ಕೆ ಆಸ್ಪದ ನೀಡದೆ ಸ್ಪಷ್ಟವಾದ ನಿಲುವು ತಾಳಬೇಕಾಗುತ್ತದೆ. ಜಿಎಸ್‍ಟಿ ಗ್ರಾಹಕರ ಶೋಷಣೆ ಅಸ್ತ್ರವಾಗಿ ಮಾರ್ಪಡದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರ್ಕಾರದ ಮೇಲಿದೆ.

ಸೇವಾ ತೆರಿಗೆ ವಿಷಯಕ್ಕೆ ಬಂದರೆ ಇದು ಜಿಎಸ್‍ಟಿ ಅಡಿಯಲ್ಲಿ ಈಗಿರುವ ಶೇ. 14ರ ಪ್ರಮಾಣಕ್ಕಿಂತ ಜಾಸ್ತಿಯಾಗುವ ಸಂಭವ ಇಲ್ಲದಿಲ್ಲ. ಸೇವಾ ವಲಯದ ಕಂಪನಿಗಳಂತೂ ಅಧಿಕ ಲಾಭದಿಂದ ಹಬ್ಬ ಆಚರಿಸುವ ಸಾಧ್ಯತೆಯೇ ಹೆಚ್ಚು. ಈ ಸಂದರ್ಭದಲ್ಲಿಯೇ ಗ್ರಾಹಕರ ಶೋಷಣೆ ಹೆಚ್ಚಾಗುವ ಅಪಾಯ ಇಲ್ಲದಿಲ್ಲ.

ಪ್ರಸ್ತುತ ಇರುವ ಪರೋಕ್ಷ ತೆರಿಗೆ ಪದ್ಧತಿಯಲ್ಲಿ ಅಬಕಾರಿ ತೆರಿಗೆ, ಮೌಲ್ಯವರ್ಧಿತ ತೆರಿಗೆ ಇತ್ಯಾದಿ ತೆರಿಗೆ ದರಗಳು ಸರಕುಗಳ ಬೆಲೆಯಲ್ಲಿ ಶೇ. 25ರಿಂದ ಶೇ.40ರಷ್ಟು ಪಾಲು ಹೊಂದಿವೆ. 2017, ಎಪ್ರಿಲ್ 1ರಿಂದ ಜಿಎಸ್‍ಟಿ ಜಾರಿಗೆ ಬಂದರೆ ಹಲವು ಸರಕುಗಳ ಮೇಲಿನ ತೆರಿಗೆ ಭಾರ ಇಳಿಮುಖವಾಗುತ್ತದೆ. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ಸರಕುಗಳು ಉತ್ಪಾದನೆಯಾಗಿ ಮಾರುಕಟ್ಟೆಗೆ ಪೂರೈಕೆ ಹೆಚ್ಚುತ್ತದೆ ಎಂಬ ವಾದವೂ ಇದೆ. ಏನೇ ಇದ್ದರೂ ಅಂತಿಮವಾಗಿ ಕಂಪನಿಗಳು ಹೆಚ್ಚಿನ ಲಾಭ ಮಾಡಿಕೊಳ್ಳಲು ರಹದಾರಿ ನಿರ್ಮಿಸಲಾಗಿದೆ ಎಂಬುದಂತೂ ಸ್ಪಷ್ಟ.