ಜನ ಸ್ನೇಹಿ “ಜಿ ಎಸ್ ಟಿ”…

0
3115

‘ಜಿ ಎಸ್ ಟಿ’ ಕಳೆದ 1 ತಿಂಗಳಿನಿಂದ ಸಾಕಷ್ಟು ಚರ್ಚೆಯಾಗುತ್ತಿರುವ ವಿಷಯ… ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಸರಕು ಮತ್ತು ಸೇವಾ ತೆರಿಗೆ ವಿಧಾನವನ್ನು ನೀವು ಎಲ್ಲರ ಬಾಯಲ್ಲೂ ಕೇಳಿರುತ್ತೀರಿ. ರಾಜ್ಯಸಭೆಯಲ್ಲಿ ಸತತ 7 ಗಂಟೆಗಳ ಚರ್ಚೆ ನಂತರ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಎಸ್ ಟಿ ಮಸೂದೆ ಅಂಗೀಕಾರಗೊಂಡಿದೆ. ಆದರೆ ಎಷ್ಟೋ ಜನಕ್ಕೆ ‘ಜಿ ಎಸ್ ಟಿ’ ಬಗ್ಗೆ ಅರಿವೇ ಇಲ್ಲ, ಅಂತರರಾಷ್ಟ್ರೀಯ ಮಟ್ಟದ ವಾಣಿಜ್ಯ– ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಗೆ ಹೆಚ್ಚು ಪೂರಕವಾದ ತೆರಿಗೆ ಸರಳೀಕರಣದ ವ್ಯವಸ್ಥೆಯಾಗಿರುವ ಸರಕು ಮತ್ತು ಸೇವಾ ತೆರಿಗೆ ಆಕರಣೆಗೆ ದೇಶದಲ್ಲಿ ಸರಿ ಸುಮಾರು ಒಂದೂವರೆ ದಶಕದಿಂದ ಚರ್ಚೆಯಾಗುತ್ತಲೇ ಇತ್ತು, ಈಗ ಅದು ಕೊನೆಗೂ ಕಾರ್ಯರೂಪಕ್ಕೆ ಬರುತ್ತಿರುವುದು ಮಹತ್ವದ ವಿದ್ಯಮಾನವಾಗಿದೆ.

ಜಿಎಸ್ ಟಿ ಬಗ್ಗೆ…

ಉತ್ಪಾದನೆ, ಮಾರಾಟ, ಬಳಕೆ ವಸ್ತುಗಳು ಮತ್ತು ಸೇವೆಗಳ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಹೇರಲಾಗುವ ಸಮಗ್ರ ತೆರಿಗೆಗೆ ಸರಕು ಮತ್ತು ಸೇವಾ ತೆರಿಗೆ ಎಂದು ಕರೆಯಲಾಗುತ್ತದೆ. ಇದು ಭಾರತದ ಅತಿ ದೊಡ್ಡ ಸೇವಾ ತೆರಿಗೆಗಳಲ್ಲೊಂದು ಎಂದು ಹೇಳಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆದುಕೊಳ್ಳುವಾಗ ಪ್ರತಿ ಹಂತದಲ್ಲಿಯೂ ವಿಧಿಸುವ ತೆರಿಗೆಯಾಗಿದೆ.

gst_1600

ಭಾರತಕ್ಕೂ ಅನುಕೂಲ :

ಜಿಡಿಪಿ ಮತ್ತು ಒಟ್ಟು ಆದಾಯ ಸಂಗ್ರಹಣೆಗೆ ಜಿ ಎಸ್ ಟಿ ಸಹಕಾರಿಯಾಗಿದೆ, ವಿದೇಶಗಳಿಗೆ ರಫ್ತು ಹೆಚ್ಚಾಗಲಿದ್ದು , ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತದೆ ಕೂಡ… ಉದ್ಯೋಗ ಉತ್ತೇಜಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪ್ರಸ್ತುತ ಭಾರತದಲ್ಲಿರುವ ತೆರಿಗೆ ಪದ್ದತಿ ತುಂಬಾ ಸಂಕೀರ್ಣವಾಗಿದೆ. ಯಾವುದೇ ವ್ಯಾಪಾರ-ವಹಿವಾಟು ನಡೆಸಲು ಕಾನೂನು ಕಟ್ಟಳೆಗಳನ್ನು ಈಡೇರಿಸಬೇಕಾಗುತ್ತದೆ. ಜಿಎಸ್ ಟಿ ತೆರಿಗೆ ವಿಧಾನಗಳನ್ನು ಸರಳಗೊಳಿಸಿ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಂತಿಮವಾಗಿ ಗ್ರಾಹಕರಿಗೆ ಅನುಕೂಲವಾಗುತ್ತದೆ. ಅಲ್ಲದೆ ಭಾರತದ ಜಿಡಿಪಿ ( ಸಮಗ್ರ ದೇಶೀಯ ಉತ್ಪನ್ನ ) ಮತ್ತು ಆದಾಯ ಹೆಚ್ಚಾಗಲಿದ್ದು, ಗ್ರಾಹಕರಿಗೆ ಈ ತೆರಿಗೆಯಿಂದ ಪರೋಕ್ಷ ಲಾಭ ಹೆಚ್ಚಿದೆ.

ಜನಸಾಮಾನ್ಯನಿಗೆ ಅನುಕೂಲವಾಗಲಿದೆ, ಅದು ಹೇಗೆ ಎಂಬುದನ್ನು ನೋಡೋಣ :

1. ಸದ್ಯ ಜಾರಿಯಲ್ಲಿ ಇರುವ ಕೇಂದ್ರ, ರಾಜ್ಯ ಮತ್ತು ನಗರಗಳ ಎಲ್ಲ ಪರೋಕ್ಷ ತೆರಿಗೆಗಳು ರದ್ದಾಗಲಿದ್ದು, ಒಂದೇ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ.
2. ಹೊಸ ‘ಜಿಎಸ್‌ಟಿ’ಯು ದೇಶದಾದ್ಯಂತ ಏಕರೂಪದಲ್ಲಿ ಇರಲಿದೆ.
3. ವಹಿವಾಟಿನ ಪ್ರತಿಯೊಂದು ಹಂತದಲ್ಲಿ ವಿಧಿಸಿದ ತೆರಿಗೆಯನ್ನು ಮುಂದಿನ ಹಂತದಲ್ಲಿ ತೆರಿಗೆ ಪಾವತಿಸಲು ಬಳಸಿಕೊಳ್ಳಬಹುದು. ಹೀಗಾಗಿ ಮೌಲ್ಯವರ್ಧಿತ ಭಾಗಕ್ಕೆ ಮಾತ್ರ ತೆರಿಗೆ ಅನ್ವಯವಾಗಲಿದೆ. ಇದರಿಂದ ದುಪ್ಪಟ್ಟು ತೆರಿಗೆ ತಪ್ಪಿಸಬಹುದಾಗಿದೆ.

ಕಡಿಮೆಯಾಗಲಿರುವ ತೆರಿಗೆ ಹೊರೆ :

ಮುಂದಿನ ವರ್ಷದಿಂದ ‘ಜಿ ಎಸ್ ಟಿ’ ಕಾರ್ಯರೂಪಕ್ಕೆ ಬಂದರೆ ಸಾಮಾನ್ಯ ಜನಕ್ಕೆ ಅನುಕವಾಗುವುದಂತೂ ಖಚಿತ… ಸರಕು ಮತ್ತು ಸೇವೆಗಳ ಮೇಲೆ ಮೌಲ್ಯ ಆಧಾರಿತ ತೆರಿಗೆ ವಿಧಿಸುವ ಪದ್ಧತಿಯಿಂದ ಜನಸಾಮಾನ್ಯರ ಮೇಲೆ ತೆರಿಗೆಯ ಹೊರೆ ಕಡಿಮೆಯಾಗಲಿದೆ. ಹೊಸ ತೆರಿಗೆ ಜಾರಿಗೊಳಿಸುವುದರಿಂದ ತೆರಿಗೆದಾತರು, ವಾಣಿಜ್ಯೋದ್ಯಮಿಗಳು ಹಾಗೂ ಜನಸಾಮಾನ್ಯರಿಗೂ ಸಾಕಷ್ಟು ಪ್ರಯೋಜನಗಳು ದೊರೆಯಲಿವೆ.

1

ಸಂವಿಧಾನ ತಿದ್ದುಪಡಿಗೆ ರಾಜ್ಯ ವಿಧಾನಸಭೆಗಳೂ ಅಂಗೀಕಾರ ನೀಡಬೇಕಾಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಾಗಿ ಈ ಯೋಜನೆಯನ್ನು ನೆಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಕೂಡ ಇದೆ.

ಏಕರೂಪದ ದರಗಳಿಂದಾಗಿ ಗ್ರಾಹಕರಲ್ಲಿ ತಿಳಿವಳಿಕೆ ಹೆಚ್ಚಲಿದೆ. ಇದರಿಂದಾಗಿ ಗ್ರಾಹಕರನ್ನು ವಂಚಿಸುವ ಪ್ರಕರಣಗಳು ಕೊನೆಗೊಳ್ಳಲಿವೆ. ಅಭಿವೃದ್ಧಿ ಹೊಂದಿದ ವಿಶ್ವದ 150 ದೇಶಗಳು ಈಗಾಗಲೇ ‘ಜಿಎಸ್‌ಟಿ’ ವ್ಯವಸ್ಥೆ ಅಳವಡಿಸಿಕೊಂಡು ಅದರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿವೆ. ಈಗ ಭಾರತವೂ ಅತ್ಯಂತ ಪ್ರಗತಿಪರ ತೆರಿಗೆ ವ್ಯವಸ್ಥೆ ಅಳವಡಿಸಿಕೊಳ್ಳುವುದರ ಮೂಲಕ ಆರ್ಥಿಕ ಪ್ರಯೋಜನಗಳನ್ನು ಬಾಚಿಕೊಳ್ಳಲು ಮುಂದಾಗಿದೆ. ಏನೇ ಹೇಳಿ ಹೊಸ ತೆರಿಗೆ ಪದ್ದತಿಯನ್ನು ನಮ್ಮ ಜನ ಅರ್ಥಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ ಎನ್ನುವುದು ನೂರಕ್ಕೆ ನೂರರಷ್ಟು ನಿಜ.

-ಗಿರೀಶ್ ಗೌಡ