ದುಷ್ಟರನ್ನು ಸದೆಬಡಿಯಲು ಪಾರ್ವತಿಯು ದುರ್ಗೆಯಾದ ದಿನ ದುರ್ಗಾಷ್ಟಮಿ ಹಬ್ಬದ ಪೌರಾಣಿಕ ಹಿನ್ನಲೆ ಮತ್ತು ಪೂಜೆ ವಿಧಾನ:

0
1227

ನವರಾತ್ರಿ ಪಾರ್ವತಿಯು ದುರ್ಗೆಯಾಗಿ,ಚಾಮುಂಡಿಯಾಗಿ ಮಹಿಷಾಸುರ ಮತ್ತು ಅವನ ಸಹಚರರ ಅಧರ್ಮಗಳನ್ನು ತೊಡೆದು ದಾನವರನ್ನು ಸಂಹಾರ ಮಾಡಿದ ಪ್ರತೀಕವಾಗಿದೆ . ಕರ್ನಾಟಕದಲ್ಲಂತೂ ಕ್ರಿ.ಶ ೧೬೧೦ ಇಸವಿ ವಿಜಯನಗರ ಅರಸರ ಕಾಲದಿಂದಲೂ ನಾಡಹಬ್ಬವನ್ನಾಗಿ ನವರಾತ್ರಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತ ಬಂದಿದ್ದೇವೆ.ದುಷ್ಟ ಸಂಹಾರಕ್ಕಾಗಿ ಶಿಷ್ಟ ರಕ್ಷಣೆಗಾಗಿ ಮಾತೆಯು ತ್ರಿಮೂರ್ತಿ ಸ್ವರೂಪಿಣಿಯಾಗಿ ಚಾಮುಂಡೇಶ್ವರಿಯಾಗಿ ಭೂಮಿಗೆ ಬಂದ ಈ ದಿವಸಗಳಲ್ಲಿ ಭೂಮಿಯ ಮೇಲೆ ದೈವಶಕ್ತಿಯ ಪ್ರಭಾವ ಅತ್ಯಧಿಕವಾಗಿರುತ್ತದೆ ಎಂಬುದು ನಮ್ಮ ಹಿರಿಯರ ಅಂಬೋಣ.

ನವರಾತ್ರಿಯ ಎಂಟನೇ ದಿನದಂದು ಜಗನ್ಮಾತೆಯು ದುರ್ಗೆಯ ರೂಪ ತಾಳಿ ಚಂಡ, ಮುಂಡ ಮತ್ತು ರಕ್ತ ಬೀಜಾಸುರರನ್ನು ಸಂಹರಿಸಿದ ದಿನವಾಗಿದ್ದರಿಂದ ದುರ್ಗಾಷ್ಟಮಿಯಾಗಿ ಆಚರಿಸಲ್ಪಡುತ್ತದೆ. ಈ ದಿನದಂದು ಮಾತೆಯನ್ನು ೬೪ ಯೋಗಿನಿಗಳ ರೂಪದಲ್ಲಿ, ದುರ್ಗೆಯ ಸಹಚರರಾದ ಅಷ್ಟ ಮಾತೃಕೆಯರ ಪೂಜೆ ಮಾಡಲಾಗುತ್ತದೆ. ಬ್ರಹ್ಮಾಣೀ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ನರಸಿಂಗಿ, ಇಂದ್ರಾಣಿ ಮತ್ತು ಚಾಮುಂಡಾ ರೂಪದಲ್ಲಿ ಅಷ್ಟನಾಯಿಕೆಯರ ಪೂಜೆಗೈಯಲಾಗುತ್ತದೆ.

ಆ ದಿನ ಪ್ರಾತಃ ಕಾಲದಲ್ಲಿ ಎದ್ದು ಎಣ್ಣೆ ನೀರು ಹಾಕಿಕೊಂಡು ದುರ್ಗೆಯ ಪೂಜೆ ಮಾಡಬೇಕು. ನಂತರ ದುರ್ಗಾಸಪ್ತಶತಿ, ಲಲಿತಾಸಹಸ್ರನಾಮ, ತ್ರಿಶತಿ ಗಳನ್ನೂ ಪಠಿಸಿ ಹೈಗ್ರೀವ ಅಂಬೊಡೆಗಳನ್ನು ನೈವೇದ್ಯ ಮಾಡ್ಬೇಕು.ನಂತರ ೧/೩/೯ ಚಿಕ್ಕ ಹೆಣ್ಣುಮಕ್ಕಳನ್ನು ಕರೆದು ಕಾಲು ತೊಳೆದು ಅರಿಶಿನ,ಕುಂಕುಮ, ಹಣ್ಣು, ಬಟ್ಟೆ,ಬಳೆ,ಸರ, ಪಾನಕ,ಕೋಸಂಬ್ರಿಗಳನ್ನು ಕೊಟ್ಟು ನಮಸ್ಕರಿಸಬೇಕು. ಹೀಗೆ ಮಾಡಿದ್ದಲ್ಲಿ ದುರ್ಗೆಯ ಪ್ರೀತಿಗೆ ಪಾತ್ರರಾಗುವಲ್ಲಿ ಸಂಶಯವೇ ಇಲ್ಲ..

ಲೋಕಾ ಸಮಸ್ತ ಸುಖಿನೋ ಭವಂತು||