ಅಂದವಾದ ಕೂದಲಿನ ಒಡತಿಯರಾಗಿ

0
743

ಕೂದಲು ಬಹಳ ತೆಳ್ಳಗಾಗುತಿದೆಯೆಂದು, ಬಿರುಕಾಗುತ್ತಿದೆಯೆಂದು, ತನ್ನ ಸಹಜತೆ ಕಳೆದುಕೊಳ್ಳುತ್ತಿದೆಯೆಂದು ಬಾಧೆ ಪಡುವವರು ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕೆಳಕಂಡ ಕೆಲವು ಅಂಶಗಳನ್ನು ಪಾಲಿಸಿದರೆ ಅಂದವಾದ, ಆರೋಗ್ಯಕರವಾದ ಕೇಶರಾಶಿಯು ನಿಮ್ಮದಾಗುತ್ತದೆ.

ಮರ್ದನ ಮಾಡಬೇಕು: ಮಸಾಜ್ ಎಂಬುದು ಕೇಶರಾಶಿಗೆ ಟಾನಿಕ್ ನಂತೆ ಕೆಲಸ ಮಾಡುತ್ತದೆ. ತಲೆಗೆ ಸ್ನಾನ ಮಾಡುವ ಮೊದಲು ನಿಮಗೆ ಇಷ್ಟವಾದ ಎಣ್ಣೆಯನ್ನು ಉಗುರು ಬೆಚ್ಚಗೆ ಬಿಸಿ ಮಾಡಿ ಮುಂಬೆರಳಿನಿಂದ ಸ್ವಲ್ಪಮೆಲ್ಲಗೆ ಒತ್ತುತ್ತಾ ಕೂದಲಿನ ಮೇಲೆ ದುಂಡಾಗಿ ಸುತ್ತುತ್ತಾ ಮಸಾಜ್ ಮಾಡಿಕೊಳ್ಳಬೇಕು. ಆಯಿಲ್ ಮಸಾಜ್ ಅನ್ನು ವಾರಕ್ಕೆರಡು ಸಲ ಮಾಡಿಕೊಂಡರೆ ಒಳ್ಳೆಯದು. ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ, ಹರಳೆಣ್ಣೆ ಸಮಪ್ರಮಾಣದಲ್ಲಿ ಬೆರೆಸಿ ತಲೆಗೆ ಹಚ್ಚಿ ಐದರಿಂದ 10 ನಿಮಿಷಗಳ ಕಾಲ ಮರ್ದನ ಮಾಡಿಕೊಂಡರೆ ರಕ್ತ ಪ್ರಸಾರ ಚೆನ್ನಾಗಿ ಆಗಿ ಕೂದಲು ಆರೋಗ್ಯವಾಗಿರುತ್ತದೆ.

ಹಬೆಯನ್ನು ನೀಡಿರಿ: ಮಸಾಜ್ ಮಾಡಿದ ನಂತರ ಟರ್ಕಿಟವಲ್’ಅನ್ನು ಬಿಸಿ ನೀರಿನಲ್ಲಿ ಅದ್ದಿ ಗಟ್ಟಿಯಾಗಿ ನೀರು ಹೋಗುವಂತೆ ಹಿಂಡಬೇಕು. ಆ ಟವಲನ್ನು ಕೂದಲು ಪೂರ್ತಿ ಮುಚ್ಚುವ ಹಾಗೆ ತಲೆಗೆ ಸುತ್ತಿಕೊಳ್ಳಬೇಕು. ಬಿಸಿ , ಅರಿದ ನಂತರ ಇದೇ ವಿಧಾನವನ್ನು ಅನುಸರಿಸಬೇಕು. ಇದರಿಂದ ಮೂರು ನಾಲ್ಕು ಸಲಮಾಡಿ ತೆಗೆಯಬೇಕು. ಆವಿಯಿಂದ ತೈಲವು ಕೂದಲಿನೋಳಗೆ ಹೋಗಿ ಕೂದಲಿನ ಬುಡವು ಶಕ್ತಿಯುತವಾಗುತ್ತದೆ. ಆದರೆ ಹೀಗೆ ಪ್ರತಿದಿನವೂ ಮಾಡುವ ಅಗತ್ಯವಿಲ್ಲ. ಹದಿನೈದು ದಿನಗಳಿಗೊಮ್ಮೆ ತಿಂಗಳಿಗೊಂದು ಸಲ ಮಾಡಿದರೆ ಸಾಕು.

ಕೂದಲನ್ನು ಹೀಗೆ ಬಾಚಿ: ಮಸಾಜ್ ಮಾಡಿದ ನಂತರ 20 ನಿಮಿಷಗಳ ಕಾಲ ಬಿಟ್ಟು ಬಿಡಬೇಕು. ನಂತರ ಅಗಲವಾದ ಹಲ್ಲಿನ ಬಾಚಣಿಕೆಯಿಂದ ಕೂದಲಿನಲ್ಲಿ ಸಿಕ್ಕು ಇರದಂತೆ ಬಾಚಬೇಕು. ಕನಿಷ್ಠ ಮೂರರಿಂದ ನಾಲ್ಕು ನಿಮಿಷಗಳ ಕಾಲ ನಿಧಾನವಾಗಿ ಬಾಚಿರಿ.

ಹೀಗೆ ಶಾಂಪೂ ಮಾಡಿರಿ: ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ನೆನೆಸಬೇಕು. ಕೂದಲಿನ ಉದ್ದವನ್ನು ಅನುಸರಿಸಿ ಶಾಂಪೂವನ್ನು ಅಂಗೈಯಲ್ಲಿ ತೆಗೆದುಕೊಂಡು ಎರಡೂ ಕೈಗಳಿಂದ ಉಜ್ಜಿಕೊಂಡು ಕೂದಲಿಗೆ ಅಂಟುವಂತೆ ಮುಂಬೆರಳಿನಿಂದ ತೀಡಿಕೊಳ್ಳಬೇಕು. ಎರಡು ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಕೂದಲಿನ ಕೆಳಗೆ ಮೃದುವಾಗಿ ಉಜ್ಜಬೇಕು. ಉಗುರು ಬೆಚ್ಚಗಿನ ನೀರಿನಿಂದ ಶಾಂಪೂ ಸಂಪೂರ್ಣವಾಗಿ ಹೋಗುವಂತೆ ತೊಳೆಯಬೇಕು. ಆಯಿಲ್ ಮಸಾಜ್ ಮಾಡಿದ ದಿನ ಎರಡು ಸಲ ಶಾಂಪೂ ಮಾಡಬೇಕಾಗುತ್ತದೆ. ಆದರೆ ಎರಡನೆಯ ಸಲ, ಮೊದಲನೆಯ ಸಲಕ್ಕಿಂತ ಕಡಿಮೆ ಪ್ರಮಾಣದ ಶಾಂಪೂ ತೆಗೆದುಕೊಳ್ಳಬೇಕು. ಆದರೆ ಒಂದು ಸಲ ಶಾಂಪೂ ಮಾಡಿದರೆ ಸರಿಹೋಗುತ್ತದೆ.

ಕಂಡೀಷನರ್ ಮಾಡುವ ವಿಧಾನ: ಅಂಗೈಯಲ್ಲಿ ಒಂದು ರೂಪಾಯಿಯ ನಾಣ್ಯದಷ್ಟು ಕಂಡೀಷನರ್ ತೆಗೆದುಕೊಂಡು ಎರಡು ಕೈಗಳಲ್ಲಿಯೂ ಉಜ್ಜಿಕೊಂಡು ಕೂದಲಿಗೆ ತುದಿಯಿಂದ, ಮೇಲಿನವರೆಗೂ ಹಚ್ಚಬೇಕು. ಎರಡು-ಮೂರು ನಿಮಿಷಗಳ ಹಾಗೆ ಬಿಟ್ಟ ನಂತರ ನೀರಿನಿಂದ ಕಂಡೀಷನರ್ ಪೂರ್ಣವಾಗಿ ಹೋಗುವಂತೆ ತೊಳೆಯಿರಿ. ಮಾರುಕಟ್ಟೆಯಲ್ಲಿ ಸಿಗುವುದಷ್ಟೇ ಅಲ್ಲದೆ ಮನೆಯಲ್ಲಿಯೂ ಸಹ ಕಂಡೀಷನರ್ ತಯಾರಿಸಬಹುದು. ಮೊಟ್ಟೆ ಅಥವಾ ಮಂದಾರದ ಎಲೆಯ ತಿರುಳು ಸಹ ಉತ್ತಮ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ.

ಕೂದಲನ್ನು ಹೇಗೆ ಒಣಗಿಸಬೇಕು: ಕೂದಲಿನಲ್ಲಿರುವ ತೇವವೆಲ್ಲವೂ ಹೋಗುವವರೆಗೂ ಟವೆಲ್’ನಿಂದ ಒರೆಸಬೇಕು. ಇಲ್ಲದಿದ್ದರೆ ಕೂದಲು ಒಣಗುವವರೆಗೂ ತಲೆಗೆ ಟವಲ್ಲನ್ನು ಸುತ್ತಿಕೊಳ್ಳೇಕು. ಎಂತಹ ಸಂದರ್ಭದಲ್ಲಿಯೂ ಕೂದಲನ್ನು ಟವೆಲ್ ನಿಂದ ಬಿಡಿಸಬಾರದು ಹಾಗೂ ತೇವವಾಗಿರುವ ಕೂದಲನ್ನು ಬಾಚಿಕೊಳ್ಳಬಾರದು. ಇದರಿಂದ ಕೂದಲು ಉದುರುತ್ತದೆ. ಬೆರಳಿನಿಂದ ಕೂದಲನ್ನು ಬಾಚಿಕೊಳ್ಳುತ್ತಾ ಒಣಗಿಸಿಕೊಳ್ಳಬೇಕು. ಡ್ರೈಯರ್ ಬಳಸುವವರಾದರೆ ಕೂದಲಿಗೆ ಆರು ಇಂಚುಗಳ ದೂರದಲ್ಲಿ ಕೂಲ್ ಸೆಟ್ಟಿಂಗ್ ನಲ್ಲಿಯಾಗಲಿ, ಕಡಿಮೆ ಹೀಟ್ ಸೆಟ್ಟಿಂಗ್ ನಲ್ಲಾಗಲಿ ಡ್ರೈ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಪ್ರಮಾಣದಲ್ಲಿ ಡ್ರೈಯರ್ ಬಳಸಬೇಕು. ಕೂದಲು ಪೂರ್ತಿ ಒಣಗಿದ ನಂತರ ಅಗಲವಾದ ಹಲ್ಲಿರುವ ಬಾಚಣಿಕೆಯಲ್ಲಿ ಬಾಚಿಕೊಳ್ಳಿ. ಸಂಪಾದ ಕೂದಲು ನಿಮ್ಮದಾಗಿಕೊಳ್ಳಿ.