ಉತ್ತರ ಭಾರತದ ಕಿಡಿಕೆಡಿಗಳಿಂದ ನಮ್ಮ ಹೆಮ್ಮೆಯ ಹಂಪಿಯ ಐತಿಹಾಸಿಕ ಸ್ಮಾರಕಗಳ ಕೆಡವಿದ ವಿಡಿಯೋ ವೈರಲ್ ಆದರೂ ಇನ್ನೂ ಕ್ರಮ ಜರುಗಿಸದ ಅಧಿಕಾರಿಗಳು!!

0
629

ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಐತಿಹಾಸಿಕ ತಾಣವಾಗಿರುವ ಹಂಪಿ ಏಷ್ಯದ ಅಗ್ರ 5 ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, 2019ರ ಏಷ್ಯ ಮಟ್ಟದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪಾರಂಪರಿಕ ತಾಣವೆಂಬ ಹೆಗ್ಗಳಿಕೆ ಹಂಪಿ ಪಾತ್ರವಾಗಿದೆ. ಇನ್ನೊಂದಡೆ ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ವಿಶ್ವದ 52 ಪ್ರೇಕ್ಷಣಿಯ ಸ್ಥಳದಲ್ಲಿ ಹಂಪಿಗೆ ಎರಡನೇ ಸ್ಥಾನ ಸಿಕ್ಕಿದೆ. ಆದರೆ ವಿಶ್ವ ಮಟ್ಟದಲ್ಲಿ ಗಮನಸೆಳೆಯುತ್ತಿರುವ ಹಂಪಿಗೆ ಯಾವ ಮಟ್ಟದಲ್ಲಿ ರಕ್ಷಣೆ ಇದೆ ಎನ್ನುವುದು ಬೆಳಕಿಗೆ ಬಂದಿದೆ.

ಹೌದು ಕಿಡಿಗೇಡಿಗಳು ಹಾಡುಹಗಲೇ ಹಂಪಿ ಸ್ಮಾರಕಕ್ಕೆ ದಕ್ಕೆ ಮಾಡಿದ್ದಲ್ಲದೇ ಸ್ಮಾರಕಗಳ ಸಾಲು ಕಂಬಗಳನ್ನು ಕೆಡವುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಹಂಪಿ ಪ್ರವಾಸಕ್ಕೆ ಬಂದಿದ್ದ ಉತ್ತರ ಭಾರತ ಮೂಲದ ಮೂವರು ಯುವಕರು ಹಂಪಿಯ ವಿಷ್ಣು ದೇವಾಲಯದ ಹಿಂದಿರುವ ಗಜ ಶಾಲೆಯ ಆನೆ ಸಾಲು, ಒಂಟೆ ಸಾಲುಗಳ ಬಳಿಯ ಸಾಲು ಕಂಬಗಳನ್ನ ಕೆಡವಿ ಸ್ಮಾರಕಗಳಿಗೆ ದಕ್ಕೆ ಮಾಡಿದ್ದಾರೆ. ಇದನ್ನು ಸೆರೆಹಿಡಿದ ಬೆಂಗಳೂರಿನಲ್ಲಿ ವಾಸವಾಗಿರುವ ಮಧ್ಯಪ್ರದೇಶ ಮೂಲದ ಆಯುಷ್ಯ ಸಾಹು ಎಂಬವರು ತಮ್ಮ ಇನ್ ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ದೃಶ್ಯ ಎಲ್ಲೆಡೆ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವವನ್ನು ಹೊಂದಿರುವ ಹಂಪಿಯಲ್ಲಿ ಸ್ಮಾರಕಗಳು ಮುಂದಿನ ಪೀಳಿಗೆಗೆ ಉಳಿಯಬೇಕೆಂಬ ಉದ್ದೇಶದಿಂದ ವಿವಿಧ ಇಲಾಖೆಗಳಿಂದ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದೆ. ಹಂಪಿಯ ಸ್ಮಾರಕಗಳ ಸಂರಕ್ಷಣೆಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಪುರಾತತ್ವ ಮತ್ತು ಸಂಗ್ರಹಾಲಯಗಳ ಸಂರಕ್ಷಣಾ ಇಲಾಖೆ ಕೆಲಸ ಮಾಡುತ್ತಿದ್ದರೂ ಇಂಥ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸವಾಗಿದೆ. ಈ ಕುರಿತು ವಿಡಿಯೋ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದ್ದರು ಸಹ ಪ್ರಾಚ್ಯ ವಸ್ತು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ. ಅಲ್ಲದೇ ಈ ಬಗ್ಗೆ ಇದೂವರೆಗೂ ಯಾವುದೇ ದೂರು ಸಹ ದಾಖಲು ಮಾಡದಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ.

ಅಲ್ಲದೆ ಈ ಹಿಂದೆ ಅಚ್ಚುತ ಬಜಾರ್ ಕಲ್ಲುಕಂಭಗಳನ್ನು ಹಾಗೂ ಮಾಲ್ಯವಂತ ರಘುನಾಥ ಸ್ವಾಮಿ ದೇವಸ್ಥಾನದ ಮುಂಭಾಗದ ಗಾಳಿ ಗೋಪುರವನ್ನು ದುಷ್ಕರ್ಮಿಗಳು ನಾಶ ಮಾಡಿರುವ ಘಟನೆಗಳು ಕಣ್ಮುಂದೆ ಇರುವಾಗ ಸ್ಮಾರಕಗಳು ಪದೇ ಪದೇ, ಹಾನಿಗೊಳಾಗುತ್ತಿರುವುದು ಇಲಾಖೆಗಳ ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ. ಇದನ್ನು ಅಲ್ಲೆಗೆಳೆದಿರುವ ಅಧಿಕಾರಿಗಳು ಈ ವಿಡಿಯೋದಲ್ಲಿನ ಕೃತ್ಯ ಹಂಪಿಯದಲ್ಲ ಎಂದು ಹೇಳುವ ಮೂಲಕ ನುಣಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

@New Indian Express

ಹೆಸರಿಗೆ ಇರುವ ಹಂಪಿ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ ಹಲವು ಇಲಾಖೆಗಳು ಇದ್ದರೂ, ಇಂತಹ ಕೃತ್ಯಗಳನ್ನು ತಡೆಯುವಲ್ಲಿ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ. ಈ ಕೃತ್ಯ ಎಸಗುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಫೆ. 4 (ಸೋಮವಾರ) ಪ್ರತಿಭಟನೆ ನಡೆಸಲಾಗುವುದು ಹಾಗೂ ಎಎಸ್‌ಐ ಕಚೇರಿ ಮತ್ತು ಪೊಲೀಸ್ ಉಪ ವಿಭಾಗದ ಕಚೇರಿಗೆ ಮನವಿ ಸಲ್ಲಿಸಲಾಗುವುದು ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯ ಸಂಚಾಲಕ ಕಮಲಾಪುರದ ಡಾ. ವಿಶ್ವನಾಥ ಮಾಳಿಗೆ ತಿಳಿಸಿದ್ದಾರೆ.

Also read: ನೀವು ಈ 10 ಹೂಡಿಕೆಗಳಿಗೆ ಮತ್ತು ಆದಾಯಗಳಿಗೆ ತೆರಿಗೆ ಕಟ್ಟಬೇಕಾಗಿಲ್ಲ; ಕಾನೂನಾತ್ಮಕವಾಗಿ ಇವುಗಳು ತೆರಿಗೆ ಮುಕ್ತವಾಗಿವೆ..