ವಿಜಯನಗರ ಗತವೈಭವವನ್ನು ಸಾರುವ ‘ಹಂಪಿ ಉತ್ಸವ’ ನವೆಂಬರ್ 3ರಿಂದ ಮೂರು ದಿನಗಳ ಕಾಲ ನಡೆಯಲಿದೆ..!!

0
764

 

“ಹಂಪಿ ಉತ್ಸವ” ಕ್ಕೆ ದಿನಗಣನೆ ಆರಂಭವಾಗಿದ್ದು ಭರದ ಸಿದ್ಸತೆಗಳು ನಡಿಯುತ್ತಿವೆ. ನವೆಂಬರ್ 3 ರಿಂದ ಮೂರು ದಿನಗಳ ಕಾಲ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಹಂಪಿ ಉತ್ಸವ ನಡೆಯಲಿದೆ. ಭಾರತೀಯ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ತನ್ನದೇ ಆದ ಮಹತ್ವವಿದೆ. ಈ ಸಾಮ್ರಾಜ್ಯದ ಕಾಲಾವಧಿಯನ್ನು ಸುವರ್ಣಯುಗ ಎಂದೇ ಇತಿಹಾಸಕಾರರು ಗುರುತಿಸುತ್ತಾರೆ. ಕೇವಲ ಆಡಳಿತ ದೃಷ್ಟಿಯಿಂದ ಮಾತ್ರವಲ್ಲದೆ, ಕಲೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ಧಾರ್ಮಿಕ, ಸಂಸ್ಕೃತಿಯ ದೃಷ್ಟಿಯಿಂದಲೂ ವಿಜಯನಗರ ಆಳರಸರ ಆಡಳಿತ ಮಹತ್ವದ್ದಾಗಿದೆ. ಅವರ ರಾಜಧಾನಿಯಾಗಿದ್ದ ಹಂಪೆ ಇಂದಿಗೂ ಆ ಐತಿಹಾಸಿಕ ಮಹತ್ವವನ್ನು ಕಾಪಾಡಿಕೊಂಡು ಬಂದಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬೆಂಗಳೂರು-ಬಳ್ಳಾರಿ ಜಿಲ್ಲಾಡಳಿತಗಳ ಸಂಯುಕ್ತಾಶ್ರಯದಲ್ಲಿ ನ.3 ರಿಂದ 5 ರವರೆಗೆ ‘ಹಂಪಿ ಉತ್ಸವ-2017’ನ್ನು ಆಯೋಜಿಸಲಾಗಿದೆ. ಗತಕಾಲದ ವೈಭವವನ್ನು ಮರುಕಳಿಸುವಂತೆ ಮಾಡಿ ಇಂದಿನ ಪೀಳಿಗೆಗೆ ವಿಜಯನಗರ ಅರಸದ ವೈಭವವನ್ನು ಪ್ರದರ್ಶಿಸುವುದು ಹಂಪಿ ಉತ್ಸವ ಉದ್ದೇಶವಾಗಿದೆ.

ಈ ಬಾರಿಯ ಉತ್ಸವಕ್ಕೆ ಜನಸಾಗರ ಹರಿದುಬರುವ ನಿರೀಕ್ಷೆಗಳಿರುವ ಹಿನ್ನಲೆಯಲ್ಲಿ ದಿನದ ೨೪/7 ಗಂಟೆಗಳ ಕಾಲ ಪ್ರವಾಸಿಗರನ್ನು ಸೆಳೆಯಲು ಹಂಪಿಯ ಸ್ಮಾರಕಗಳನ್ನು ವಿದ್ಯುದೀಪಾಲಂಕಾರದಿಂದ ಶೃಂಗರಿಸಲಾಗಿದೆ. ಈ ಬಾರಿ ಹಂಪಿ ಶಿಲ್ಪಕಲಾ ಸ್ಮಾರಕಗಳ ಸೌಂದರ್ಯದ ಸೊಬಗನ್ನು ಹೆಚ್ಚಿಸಲು ಅಂದಾಜು ರೂ.12 ಕೋಟಿ ವೆಚ್ಚದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಯುಕ್ತ ‘ಹಂಪಿ ಬೈ ನೈಟ್‌’ ಯೋಜನೆಯನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರ ಅನುಷ್ಠಾನಗೊಳಿಸುತ್ತಿದೆ. ರಾತ್ರಿ ಹೊತ್ತಿನಲ್ಲೂ ಪ್ರವಾಸಿಗರನ್ನು ಹಂಪಿಯ ಸ್ಮಾರಕಗಳತ್ತ ಸೆಳೆಯುವುದು ‘ಹಂಪಿ ಬೈ ನೈಟ್’ ಯೋಜನೆಯ ಉದ್ದೇಶವಾಗಿದೆ.